Asianet Suvarna News Asianet Suvarna News

Delhi MCD Poll Results: ಎಎಪಿಗೆ ಸಿಗಲಿದೆ ಸ್ಪಷ್ಟ ಬಹುಮತ, ಬಿಜೆಪಿಯಿಂದ ಪ್ರಬಲ ಪೈಪೋಟಿ..!

ದೆಹಲಿ ಪಾಲಿಕೆಯ ಮೊದಲ ಗೆಲುವಿನ ಫಲಿತಾಂಶಗಳು ಸಹ ಈಗ ಹೊರಹೊಮ್ಮುತ್ತಿದ್ದು, ಈವರೆಗೆ ಬಿಜೆಪಿ 3 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಎಪಿ - 2 ಕ್ಷೇತ್ರಗಳನ್ನು ತನ್ನ ವಶಕ್ಕೆ ಪಡೆದುಕೊಂಡಿದೆ.

delhi mcd election result 2022 first wins for bjp and aap neck and neck fight continues ash
Author
First Published Dec 7, 2022, 10:36 AM IST

ದೆಹಲಿಯ ಮಹಾನಗರ ಪಾಲಿಕೆ ಚುನಾವಣೆಯ ಫಲಿತಾಂಶಗಳು ಬೆಳಗ್ಗೆಯಿಂದ ಹೊರಹೊಮ್ಮುತ್ತಿದ್ದು, ದೆಹಲಿ ಸರ್ಕಾರ ಆಡಳಿತಾರೂಢ ಎಎಪಿ ಹಾಗೂ 15 ವರ್ಷಗಳಿಂದ ಪಾಲಿಕೆ ಆಡಳಿತ ನಡೆಸುತ್ತಿರುವ ಬಿಜೆಪಿ ನಡುವೆ ಹಾವು - ಏಣಿ ಆಟ ನಡೆಯುತ್ತಿದೆ. ರಾಷ್ಟ್ರ ರಾಜಧಾನಿಯ 250 ವಾರ್ಡ್‌ಗಳಲ್ಲಿ ಮತದಾನ ನಡೆದಿದ್ದು, ಬಿಜೆಪಿ ಹಾಗೂ ಎಎಪಿ ಎರಡೂ ಪಕ್ಷಗಳಲ್ಲಿ ಯಾರಿಗೆ ಸ್ಪಷ್ಟ ಬಹುಮತ ಹೊರಹೊಮ್ಮಲಿದೆ ಎಂಬುದು ಕುತೂಹಲ ಕೆರಳಿಸುತ್ತಿದೆ. ಇನ್ನು, ದೆಹಲಿ ಪಾಲಿಕೆಯ ಮೊದಲ ಗೆಲುವಿನ ಫಲಿತಾಂಶಗಳು ಸಹ ಈಗ ಹೊರಹೊಮ್ಮುತ್ತಿದ್ದು, ಈವರೆಗೆ ಬಿಜೆಪಿ 10 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರೆ, ಎಎಪಿ 6 ಕ್ಷೇತ್ರಗಳನ್ನು ತನ್ನ ತೆಕ್ಕೆಗೆ ಪಡೆದುಕೊಂಡಿದೆ. ಇನ್ನೊಂದೆಡೆ, ಎಎಪಿ 130 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದರೆ, ಬಿಜೆಪಿ ಈವರೆಗೆ 110 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದು, ಫಲಿತಾಂಶ ಬೆಳಗ್ಗಿನಿಂದಲೂ ಕ್ಷಣ ಕ್ಷಣಕ್ಕೆ ಬದಲಾವಣೆಯಾಗುತ್ತಿದೆ. 

ದೆಹಲಿ ಮಹಾನಗರ ಪಾಲಿಕೆಯಲ್ಲಿ ಎಎಪಿ - ಬಿಜೆಪಿ ನಡುವೆ ಪ್ರಬಲ ಪೈಪೋಟಿ ನಡೆಯುತ್ತಿದ್ದರೂ, ಆಪ್‌ ಸ್ಪಷ್ಟ ಬಹುಮತದತ್ತ ಮುನ್ನುಗ್ಗುತ್ತಿದೆ. ಬಿಜೆಪಿ ಈವರೆಗೆ ಮೋಹನ್‌ ಗಾರ್ಡನ್‌, ರೋಹಿಣಿ - ಎಫ್‌ ಹಾಗೂ ಲಕ್ಷ್ಮೀನಗರ ವಾರ್ಡ್‌ನ ಸೇರಿ 10 ವಾರ್ಡ್‌ಗಳಲ್ಲಿ ಕಮಲ ಅರಳಿಸಿದೆ. ಇನ್ನು, ಆಪ್‌ ದಾರ್ಯಾಗಂಜ್‌ ಹಾಗೂ ಕಪಾಶೇರಾ ವಾರ್ಡ್‌ ಸೇರಿ 6 ರಲ್ಲಿ ಗೆಲುವು ಸಾಧಿಸಿದೆ. 

ಇದನ್ನು ಓದಿ: ದೆಹಲಿ ನಗರಸಭೆ ಮತ ಎಣಿಕೆ: ಈ ಕ್ಷಣದ ಅಪ್‌ಡೇಟ್ ಇಲ್ಲಿದೆ

ದೆಹಲಿ ಮಹಾನಗರ ಪಾಲಿಕೆಯಲ್ಲಿ ಎಎಪಿ ಸ್ಪಷ್ಟ ಬಹುಮತ ಪಡೆಯಲಿದೆ. 150 - 160 ಸ್ಥಾನಗಳನ್ನು ಪಡೆಯಲಿದೆ. ಇನ್ನು, ಬಿಜೆಪಿ ಸುಮಾರು 90 ಸ್ಥಾನಗಳನ್ನು ಪಡೆಯಲಿದೆ ಎಂದು ಮತದಾನೋತ್ತರ ಸಮೀಕ್ಷೆಗಳು ಭವಿಷ್ಯ ನುಡಿದಿದ್ದವು. ಸದ್ಯ, ಆಪ್‌ ಮುನ್ನಡೆ ಕಾಯ್ದುಕೊಂಡಿದ್ದರೂ, ಬಿಜೆಪಿ ತೀರಾ ಹಿಂದುಳಿದಿಲ್ಲ. ಆದರೆ, ಕಾಂಗ್ರೆಸ್‌ ಕೇವಲ 9 ಸ್ಥಾನಗಳಲ್ಲಿ ಮುನ್ನಡೆ ಕಾಯ್ದುಕೊಂಡಿದ್ದು, ಇತರೆ 1 ಸ್ಥಾನದಲ್ಲಿ ಮಾತ್ರ ಮುನ್ನಡೆ ಸಾಧಿಸಿದ್ದಾರೆ. 

ಡಿಸೆಂಬರ್ 7, 2022 ರಂದು ಅಂದರೆ ಇಂದು ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ಆರಂಭವಾಗಿದ್ದು, ಬೆಳಗ್ಗಿನಿಂದ ಎಎಪಿ ಹಾಗೂ ಬಿಜೆಪಿ ನಡುವೆ ಪ್ರಬಲ ಪೈಪೋಟಿ ಮುಂದುವರಿದಿದೆ. ಕಳೆದ 15 ವರ್ಷಗಳಿಂದ ಬಿಜೆಪಿ ದೆಹಲಿ ಮಹಾನಗರ ಪಾಲಿಕೆಯ ಅಧಿಕಾರ ಹಿಡಿದಿತ್ತು. ಇನ್ನು, 2017 ರಿಂದ ಎಎಪಿ ದೆಹಲಿ ಸರ್ಕಾರದ ಅಧಿಕಾರ ಹಿಡಿದಿದೆ. ಇದೇ ರೀತಿ, ದೆಹಲಿ ಪಾಲಿಕೆಯಲ್ಲೂ ಇನ್ಮುಂದೆ ಪೊರಕೆ ಚುನಾವಣಾ ಚಿಹ್ನೆಯ ಎಎಪಿ ಅಧಿಕಾರ ಹಿಡಿಯುವ ಸಾಧ್ಯತೆ ಹೆಚ್ಚಾಗಿದೆ. 

ಇದನ್ನೂ ಓದಿ: ಸಮೀಕ್ಷಾ ವರದಿ: ಗುಜರಾತ್‌ನಲ್ಲಿ ಕಮಲ, ಅತಂತ್ರದಲ್ಲಿ ಹಿಮಾಚಲ, ದೆಹಲಿಯಲ್ಲಿ ಆಪ್ ಕಿಲ ಕಿಲ!

ದೆಹಲಿಯ ಎಲ್ಲಾ ವಾರ್ಡ್‌ಗಳು ಸೇರಿ ಒಟ್ಟು 1349 ಅಭ್ಯರ್ಥಿಗಳು ಚುನಾವಣಾ ಕಣಕ್ಕಿಳಿದಿದ್ದು, 1.45 ಕೋಟಿ ಅರ್ಹ ಮತದಾರರು ಇದ್ದರು. ಇವರಲ್ಲಿ ಶೇ.50 ಜನರು ಮಾತ್ರ ಮತ ಚಲಾಯಿಸಿದ್ದಾರೆ. ಅಧಿಕಾರಿಗಳು ದೆಹಲಿಯಾದ್ಯಂತ 13,638 ಮತಗಟ್ಟೆಗಳನ್ನು ಸ್ಥಾಪಿಸಿದ್ದರು. ಚುನಾವಣೆಯಲ್ಲಿ 100 ವರ್ಷ ಹಾಗೂ ಅದಕ್ಕೂ ಮೀರಿದ 229 ಮತದಾರರು ಮತಚಲಾಯಿಸಿದ್ದಾರೆ. 80 ರಿಂದ 100 ವರ್ಷದೊಳಗಿನ 2,04,301 ಜನರು ಮತ ಚಲಾಯಿಸಿದ್ದಾರೆ ಎಂದು ಅಧಿಕೃತ ಅಂಕಿಅಂಶಗಳು ತಿಳಿದಿವೆ.

Follow Us:
Download App:
  • android
  • ios