ನವದೆಹಲಿ ( ಜ.  31) ಕಾಂಗ್ರೆಸ್ ಸಾರಥ್ಯವನ್ನು  ಯಾರೂ  ಮುನ್ನಡೆಸಬೇಕು ಎಂಬುದಕ್ಕೆ ಉತ್ತರ ಸಿಕ್ಕಿದ್ದು ರಾಹುಲ್ ಗಾಂಧಿ ಅವರೇ ಮತ್ತೆ ಅಧ್ಯಕ್ಷರಾಗಲಿದ್ದಾರೆಯೇ?  ಹೌದು..  ರಾಹುಲ್ ಗಾಂಧಿ ಕಾಂಗ್ರೆಸ್ ಅಧ್ಯಕ್ಷರಾಗಿ ಕೂಡಲೇ ಅಧಿಕಾರ ವಹಿಸಿಕೊಳ್ಳಬೇಕು ಎಂದು ದೆಹಲಿ ಕಾಂಗ್ರೆಸ್ ಹೇಳಿದ್ದು ರೆಸಲ್ಯೂಶನ್ ಪಾಸ್ ಮಾಡಿದೆ.

ರಾಹುಲ್ ಗಾಂಧಿ ಅವರಿಂದ ಮಾತ್ರ ಕಾರ್ಯಕರ್ತರಿಗೆ ಸ್ಫೂರ್ತಿ ತುಂಬಲು ಸಾಧ್ಯ. ಜಿಎಸ್‌ಟಿ ಮತ್ತು ರೈತ ಹೋರಾಟದ ಸಮಯದಲ್ಲಿ ಅವರು ಎತ್ತಿದ ಪ್ರತಿ ವಿಚಾರಕ್ಕೂ ದೇಶವೇ ತಲೆದೂಗಿದೆ. ಅವರೇ ಕಾಂಗ್ರೆಸ್‌ ಗೆ ಮತ್ತೆ ಅಧ್ಯಕ್ಷರಾಗಬೇಕು ಎಂದು ದೆಹಲಿ ಕಾಂಗ್ರೆಸ್ ಅಧ್ಯಕ್ಷ ಅನಿಲ್ ಚೌಧರಿ ಹೇಳಿದ್ದಾರೆ.

ರೈತರೊಂದಿಗೆ ನೆಲದ ಮೇಲೆ ಕುಳಿತು ರಾಹುಲ್ ಊಟ

2019 ರ ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ರಾಹುಲ್ ಅಧ್ಯಕ್ಷ ಪಟ್ಟ ತ್ಯಜಿಸಿದ್ದರು.   ಗಾಂಧಿ ಕುಟುಂಬದವರು ಕಾಂಗ್ರೆಸ್ ಮುನ್ನಡೆಸಬಾರದು ಎಂದು  ಕಾಂಗ್ರೆಸ್ ನ  23  ಹಿರಿಯ ನಾಯಕರು ಇದಾದ ನಂತರದಲ್ಲಿ ಪತ್ರ ಬರೆದಿದ್ದರು. ರಾಹುಲ್ ನಂತರ ಯಾರು ಎಂಬ ಚರ್ಚೆ ನಡೆದು ಅಂತಿಮವಾಗಿ ಸೋನಿಯಾ ಗಾಂಧಿ ಅವರೇ ಸಾರಥ್ಯ ವಹಿಸಿಕೊಂಡಿದ್ದರು.

ಕಾಂಗ್ರೆಸ್ ನಾಯಕತ್ವ ಬದಲಾವಣೆಗೆ ಸಂಬಂಧಿಸಿ ಪಕ್ಷದಲ್ಲಿಯೇ ಚರ್ಚೆ ನಡೆದಿತ್ತು. ಕರ್ನಾಟಕ ಕಾಂಗ್ರೆಸ್ ನಾಯಕರು ಗಾಂಧಿ ಕುಟುಂಬದ ಪರವಾಗಿಯೇ ಬ್ಯಾಟ್ ಬೀಸಿದ್ದರು. ರಾಹುಲ್ ಕೇರಳದ ವಯನಾಡ್ ಕ್ಷೇತ್ರ ಪ್ರತಿನಿಧಿಸುತ್ತಿದ್ದು ದೆಹಲಿ ಕಾಂಗ್ರೆಸ್ ನ ಈ ತೀರ್ಮಾನದ ನಂತರ ಯಾವ ಬದಲಾವಣೆ ಉಂಟಾಗಬಹುದು ಎಂಬುದನ್ನು ಕಾದು ನೋಡಬೇಕಿದೆ.