ಬೆಂಗಳೂರು[ಜ.30]: ಉಪಚುನಾವಣೆಯಲ್ಲಿ ಸೋಲನುಭವಿಸಿದವರಿಗೆ ಸಚಿವ ಸ್ಥಾನ ನೀಡುವುದಿಲ್ಲ ಎಂಬ ಬಿಜೆಪಿಗರ ಹೇಳಿಕೆಯಿಂದಾಗಿ ಮಾಜಿ ಶಾಸಕ ಎಂ.ಟಿ.ಬಿ.ನಾಗರಾಜ್‌ ಬೇಸರಗೊಂಡಿದ್ದು, ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು 17 ಮಂದಿ ಶಾಸಕ ಸ್ಥಾನ ತ್ಯಾಗ ಮಾಡಿದ್ದೇವೆ. ಈ ಹಿನ್ನೆಲೆಯಲ್ಲಿ ಕೊಟ್ಟಭರವಸೆಯನ್ನು ಮೊದಲು ಈಡೇರಿಸಬೇಕು ಎಂದು ಒತ್ತಾಯಿಸಿದ್ದಾರೆ.

"

ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಜೆಡಿಎಸ್‌-ಕಾಂಗ್ರೆಸ್‌ನ 17 ಮಂದಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರ ಫಲವಾಗಿ ಬಿ.ಎಸ್‌.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾರೆ. ಬಿಜೆಪಿಯ ಶಾಸಕರು ಸಚಿವರಾಗಿದ್ದಾರೆ. ರಾಜೀನಾಮೆ ನೀಡದಿದ್ದರೆ ಬಿಜೆಪಿ ಸರ್ಕಾರ ರಚನೆಯಾಗುತ್ತಿತ್ತಾ? ಹೀಗಾಗಿ ನಮ್ಮನ್ನು ಬಿಜೆಪಿಯಲ್ಲಿ ಗೌರವದಿಂದ ಕಾಣಬೇಕು. ಚುನಾವಣೆಯಲ್ಲಿ ಸೋತವರು, ಗೆದ್ದವರು ಎಂಬ ಪ್ರಶ್ನೆ ಮುಖ್ಯವಲ್ಲ. ನಾವು 17 ಮಂದಿ ತ್ಯಾಗ ಮಾಡಿ ಬಂದಿದ್ದೇವೆ ಎಂದು ಹೇಳಿದರು.

ಶಾಸಕ ಮತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲು ಕಾರಣವಾಗಿದ್ದೇವೆ. ಅದರಲ್ಲೂ ಶಾಸಕ ಮತ್ತು ಸಚಿವ ಸ್ಥಾನ ಎರಡಕ್ಕೂ ರಾಜೀನಾಮೆ ಕೊಟ್ಟು ಬಂದವನು ನಾನೊಬ್ಬನೇ. ಈ ಕಾರಣಕ್ಕಾಗಿ ಕೊಟ್ಟಿರುವ ಭರವಸೆ ಈಡೇರಿಸಬೇಕು. ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದ ಕಾರಣಕ್ಕಾಗಿ ಬಿಜೆಪಿಗೆ ಸೇರಿದ್ದೇನೆ. ಸಂಸದ ಬಚ್ಚೇಗೌಡ ಮತ್ತು ಅವರ ಪುತ್ರ ಶರತ್‌ ಬಚ್ಚೇಗೌಡ ಬೆಂಬಲಿಸಬಹುದು ಎಂದು ಬಿಜೆಪಿ ಜತೆ ಕೈಜೋಡಿಸಿದೆ. ಯಡಿಯೂರಪ್ಪ ಅವರು ಕೊಟ್ಟಮಾತಿನಂತೆ ನಡೆದುಕೊಳ್ಳುವ ನಾಯಕರಾಗಿದ್ದಾರೆ. ಅವರ ಮೇಲೆ ನಂಬಿಕೆ ಇದ್ದು, ಸಚಿವ ಸ್ಥಾನ ನೀಡಲಿದ್ದಾರೆ ಎಂಬ ಭಾವನೆ ಹೊಂದಿದ್ದೇನೆ ಎಂದರು.