ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ವರ್ಗಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ.

ಬೆಂಗಳೂರು (ಜು.17): ಕಾಂಗ್ರೆಸ್ ಪಕ್ಷಕ್ಕೆ ಪರಿಶಿಷ್ಟ ವರ್ಗಗಳ ಬಗ್ಗೆ ಕಿಂಚಿತ್ತಾದರೂ ಕಾಳಜಿ ಇದ್ದರೆ ಮಲ್ಲಿಕಾರ್ಜುನ ಖರ್ಗೆ ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲು ಹಾಕಿದ್ದಾರೆ. ಬುಧವಾರ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಇವರ ಯೋಗ್ಯತೆಗೆ ಅದು ಸಾಧ್ಯವಿಲ್ಲ. ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಇದನ್ನು ಒಪ್ಪಲು ಅಸಾಧ್ಯ ಎಂದರು.

ಕಾಂಗ್ರೆಸ್ ಪಕ್ಷಕ್ಕೆ ಈ ದೇಶದ ಹಿಂದುಳಿದ ವರ್ಗಗಳ ಬಗ್ಗೆ, ಪರಿಶಿಷ್ಟ ಜಾತಿ, ಪಂಗಡಗಳ ಬಗ್ಗೆ, ಅಲ್ಪಸಂಖ್ಯಾತರ ಕುರಿತು ಪ್ರಾಮಾಣಿಕ ಕಾಳಜಿ ಇದೆಯೇ. ಸಿದ್ದರಾಮಯ್ಯ ಅವರು ತಮ್ಮನ್ನು ತಾವು ಹಿಂದುಳಿದ ವರ್ಗಗಳ ಚಾಂಪಿಯನ್ ಎಂದು ಕರೆದುಕೊಳ್ಳುತ್ತಾರೆ. ಇತ್ತೀಚೆಗೆ ಕಾಂತರಾಜು ವರದಿಯನ್ನು ಕ್ಯಾಬಿನೆಟ್ ಸಭೆಯಲ್ಲಿ ಮಂಡಿಸುವುದಾಗಿ ಬೊಗಳೆ ಹೊಡೆಯತ್ತಿದ್ದೀರಲ್ಲವೇ? ದೆಹಲಿಯಿಂದ ದೂರವಾಣಿ ಕರೆ ಬಂದ ನಂತರ, ರಾಹುಲ್ ಗಾಂಧಿಯವರು ಆದೇಶ ಮಾಡಿದ್ದಾರೆಂದು 165 ಕೋಟಿ ಖರ್ಚು ಮಾಡಿ ಸಿದ್ಧಪಡಿಸಿದ್ದ ಕಾಂತರಾಜು ವರದಿಯನ್ನು ಕಸದ ಬುಟ್ಟಿಗೆ ಹಾಕಿದ್ದೀರಲ್ಲವೇ? ಆಗ ನಿಮ್ಮ ಹಿಂದುಳಿದವರ ಕಾಳಜಿ ಎಲ್ಲಿ ಹೋಗಿತ್ತು ಎಂದರು.

ಮಂಡಲ್ ವರದಿಯನ್ನು ಕಾಂಗ್ರೆಸ್ ಪಕ್ಷ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಅನುಷ್ಠಾನ ಮಾಡಿದೆಯೇ? ಕಾಂಗ್ರೆಸ್ ಪಕ್ಷ ಅದಕ್ಕೆ ಬೆಂಬಲ ಕೊಟ್ಟಿತ್ತೇ? 1956ರಲ್ಲಿ ಕಾಕಾ ಕಾಲೇಕರ್ ವರದಿಯನ್ನು ಅಂದಿನ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಕಸದ ಬುಟ್ಟಿಗೆ ಹಾಕಿದರಲ್ಲವೇ? ಈ ಮಾಹಿತಿ ಸಿದ್ದರಾಮಯ್ಯನವರಿಗೆ ಇಲ್ಲವೇ ಎಂದು ವಿಜಯೇಂದ್ರ ಅವರು ಸರಣಿ ಪ್ರಶ್ನೆಗಳನ್ನು ಮುಂದಿಟ್ಟರು.

ಬಿಹಾರ ಚುನಾವಣೆಗಾಗಿ ಮೊಸಳೆ ಕಣ್ಣೀರು: ಬಿಹಾರ ರಾಜ್ಯದ ಚುನಾವಣೆ ಸಮೀಪಿಸುತ್ತಿರುವ ಕಾರಣ ಎಐಸಿಸಿಯ ಒಬಿಸಿ ಸಮಿತಿಯು ಸಿದ್ದರಾಮಯ್ಯ ಅವರ ಮೂಲಕ ಹಿಂದುಳಿದ ವರ್ಗಗಳ ಕುರಿತು ಮೊಸಳೆ ಕಣ್ಣೀರು ಹಾಕುತ್ತಿದೆ ಎಂದು ಇದೇ ವೇಳೆ ವಿಜಯೇಂದ್ರ ಲೇವಡಿ ಮಾಡಿದರು.