ತಮಿಳುನಾಡಿಗೆ ಕಾವೇರಿ ನೀರು ಬಿಡದಿರಲು ನಿರ್ಧಾರ: ಸರ್ವ ಪಕ್ಷ ಸಭೆಯಲ್ಲಿ ಸಿದ್ದರಾಮಯ್ಯ ಹೇಳಿದಿಷ್ಟು?
ತೀವ್ರ ಮಳೆ ಕೊರತೆಯಿಂದ ನೀರು ಸಂಗ್ರಹ ಇಲ್ಲದ ಕಾರಣ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನದಿ ನೀರು ನಿರ್ವಹಣಾ ಸಮಿತಿ ನೀಡಿದ ಆದೇಶವನ್ನು ಪಾಲನೆ ಮಾಡದಂತೆ ಬುಧವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ ಒಕ್ಕೊರಲ ಆಗ್ರಹ ಕೇಳಿಬಂದಿದ್ದು, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ತಿಳಿಸಿದರು.

ಬೆಂಗಳೂರು (ಸೆ.14): ತೀವ್ರ ಮಳೆ ಕೊರತೆಯಿಂದ ನೀರು ಸಂಗ್ರಹ ಇಲ್ಲದ ಕಾರಣ ತಮಿಳುನಾಡಿಗೆ ನಿತ್ಯ 5 ಸಾವಿರ ಕ್ಯೂಸೆಕ್ ನೀರು ಬಿಡುವಂತೆ ನದಿ ನೀರು ನಿರ್ವಹಣಾ ಸಮಿತಿ ನೀಡಿದ ಆದೇಶವನ್ನು ಪಾಲನೆ ಮಾಡದಂತೆ ಬುಧವಾರ ನಡೆದ ಸರ್ವ ಪಕ್ಷ ಸಭೆಯಲ್ಲಿ ಒಕ್ಕೊರಲ ಆಗ್ರಹ ಕೇಳಿಬಂದಿದ್ದು, ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆದು ಸೂಕ್ತ ತೀರ್ಮಾನ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಭೆಗೆ ತಿಳಿಸಿದರು.
ಆದರೆ, ಈ ಬೆಳವಣಿಗೆ ಬೆನ್ನಲ್ಲೇ ಕೇಂದ್ರ ಜಲಶಕ್ತಿ ಸಚಿವ ಗಜೇಂದ್ರ ಸಿಂಗ್ ಶೆಖಾವತ್ ಅವರಿಗೆ ಪತ್ರ ಬರೆದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀರಿನ ಸಂಗ್ರಹ ಹಾಗೂ ಮಳೆ ಕೊರತೆ ಬಗೆಗಿನ ರಾಜ್ಯದ ವಾಸ್ತವ ಸ್ಥಿತಿಯನ್ನು ಸಾದ್ಯಂತವಾಗಿ ವಿವರಿಸಿ ಕಾವೇರಿ ನೀರು ನಿರ್ವಹಣಾ ಸಮಿತಿಯ ಆದೇಶವನ್ನು ಪಾಲನೆ ಮಾಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಜತೆಗೆ, ಸಮಿತಿಯ ಆದೇಶದಿಂದ ವಿನಾಯ್ತಿ ದೊರಕಿಸಿಕೊಡಲು ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ತಮಿಳುನಾಡಿಗೆ ನೀರು ಹರಿಸಿದರೆ ರೈತರಿಗೆ ಅನ್ಯಾಯ ಮಾಡಿದಂತೆ: ಬೊಮ್ಮಾಯಿ ಕಿಡಿ
ಸರ್ವಪಕ್ಷ ಸಭೆಯಲ್ಲಿ ತಮಿಳುನಾಡಿಗೆ ಏಕೆ ನೀರು ಬಿಡುಗಡೆ ಮಾಡಲಾಗದು ಎಂಬ ಬಗ್ಗೆ ಕಾವೇರಿ ನೀರು ನಿರ್ವಹಣಾ ಸಮಿತಿಗೆ ಪತ್ರ ಬರೆಯಲು ಮತ್ತು ಈ ಬಗ್ಗೆ ಸುಪ್ರೀಂಕೋರ್ಟ್ ಮೊರೆ ಹೋಗಲು ನಿರ್ಧರಿಸಲಾಯಿತು. ಮಳೆ ಕೊರತೆಯಿಂದ ತೀವ್ರ ಸಂಕಷ್ಟದಲ್ಲಿರುವ ರಾಜ್ಯಕ್ಕೆ ನೆರವಾಗಲು ಈ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸರ್ವ ಪಕ್ಷ ನಿಯೋಗ ಒಯ್ಯಲೂ ಸಭೆ ನಿರ್ಧರಿಸಿದ್ದು, ಭೇಟಿಗೆ ಸಮಯ ಕೋರಿ ಪ್ರಧಾನಮಂತ್ರಿಗಳ ಕಚೇರಿಗೆ ಪತ್ರ ಬರೆಯಲು ತೀರ್ಮಾನಿಸಲಾಯಿತು. ಕಾವೇರಿ ನದಿ ವಿಚಾರವಾಗಿ ರಾಜಕೀಯ ಮಾಡದೆ ಎಲ್ಲರೂ ಒಗ್ಗಟ್ಟು ಪ್ರದರ್ಶನ ಮಾಡಬೇಕು ಎಂದು ಸರ್ವ ಪಕ್ಷ ಸಭೆಯಲ್ಲಿ ಒಕ್ಕೊರಲ ತೀರ್ಮಾನ ಕೈಗೊಳ್ಳಲಾಯಿತು.
ನಮಗೇ ನೀರಿಲ್ಲ- ಸಿದ್ದು: ಸರ್ವ ಪಕ್ಷ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, ಮಳೆ ಉತ್ತಮವಾಗಿ ಕಾವೇರಿ ಕೊಳ್ಳದ ನಾಲ್ಕು ಜಲಾಶಯಗಳಲ್ಲಿ ನೀರಿದ್ದರೆ ನಾವು ಯಾವುದೇ ಆಕ್ಷೇಪಣೆ ವ್ಯಕ್ತಪಡಿಸುತ್ತಿರಲಿಲ್ಲ. ಆದರೆ, ನಮಗೇ ಈಗ ನೀರಿಲ್ಲ. ಹೀಗಾಗಿ ನೀರು ಹರಿಸುವುದು ಅಸಾಧ್ಯ. ಕಾವೇರಿ ನೀರಿನ ಕುರಿತಾಗಿ ಯಾವುದೇ ಸಂಕಷ್ಟ ಸೂತ್ರ ಇಲ್ಲದಿರುವ ಕಾರಣ ರಾಜ್ಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವಂತಾಗುತ್ತಿದೆ ಎಂದರು.
ಸುಪ್ರೀಂಕೋರ್ಟ್ ಆದೇಶದಂತೆ ನಾವು ಸೆ. 11ರವರೆಗೆ 99 ಟಿಎಂಸಿ ಅಡಿಗಳಷ್ಟು ನೀರು ಬಿಡಬೇಕಿತ್ತು. ಆದರೆ, 37.7 ಟಿಎಂಸಿ ಅಡಿ ನೀರನ್ನು ಮಾತ್ರ ಬಿಡುಗಡೆ ಮಾಡಿದ್ದೇವೆ. ಅಲ್ಲದೆ ಮುಂದಿನ ಜುಲೈವರೆಗೆ ರಾಜ್ಯಕ್ಕೆ 70 ಟಿಎಂಸಿ ಅಡಿ ನೀರು ಕೃಷಿ ಚಟುವಟಿಕೆಗೆ, 33 ಟಿಎಂಸಿ ಕುಡಿಯುವ ನೀರಿಗೆ, 3 ಟಿಎಂಸಿ ಅಡಿ ನೀರು ಕೈಗಾರಿಕೆಗಳಿಗೆ ನೀರು ಬೇಕಿದೆ. ಒಟ್ಟಾರೆ ನಮಗೇ 106 ಟಿಎಂಸಿ ಅಡಿಗಳಷ್ಟು ನೀರು ಬೇಕಿದೆ. ಆದರೆ, ಕೆಆರ್‌ಎಸ್, ಕಬಿನಿ, ಹೇಮಾವತಿ, ಹಾರಂಗಿ ಜಲಾಶಯಗಳಲ್ಲಿ ಸದ್ಯ 53 ಟಿಎಂಸಿ ಅಡಿಗಳಷ್ಟು ನೀರಿದೆ. ನಮ್ಮ ರಾಜ್ಯಕ್ಕೆ ಅಗತ್ಯವಿರುವ ನೀರು ಶೇಖರಣೆಯಿಲ್ಲ, ಹೀಗಿರುವಾಗ ತಮಿಳುನಾಡಿಗೆ ನೀರು ಬಿಡುವ ಪರಿಸ್ಥಿತಿಯಲ್ಲಿ ನಾವಿಲ್ಲ ಎಂದು ಹೇಳಿದರು.
ಕಾವೇರಿ ನೀರಿನ ವಿಚಾರವಾಗಿ ತಮಿಳುನಾಡಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಕಾವೇರಿ ನೀರು ನಿರ್ವಹಣಾ ಸಮಿತಿ, ಕಾವೇರಿ ನೀರು ನಿಯಂತ್ರಣ ಪ್ರಾಧಿಕಾರಗಳಿಗೆ ಅರ್ಜಿ ಸಲ್ಲಿಸುವುದರ ಜತೆಗೆ ಸುಪ್ರೀಂಕೋರ್ಟ್‌ನ ಮೊರೆ ಹೋಗಬೇಕಿದೆ. ಎಲ್ಲ ಪಕ್ಷದ ಜನಪ್ರತಿನಿಧಿಗಳು ಈ ಬಗ್ಗೆ ಅಭಿಪ್ರಾಯ ವ್ಯಕ್ತಪಡಿಸಬೇಕು. ರಾಜ್ಯದ ಸಂಸದರು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕು. ನಮ್ಮ ರಾಜಕೀಯ ನಿಲುವು, ಒಲವನ್ನು ಬದಿಗಿಟ್ಟು ರಾಜ್ಯದ ಹಿತಾಸಕ್ತಿ ಕಾಪಾಡಲು ಒಟ್ಟಿಗೆ ಕೆಲಸ ಮಾಡೋಣ ಎಂದರು.
ಸಹಕಾರ ನೀಡ್ತೇವೆ- ಬಿಜೆಪಿ ಸಂಸದರು: ಸಭೆಯಲ್ಲಿ ಹಾಜರಿದ್ದ ಬಿಜೆಪಿ ಸಂಸದರು, ರಾಜ್ಯದ ಹಿತಕಾಪಾಡಲು ರಾಜ್ಯ ಸರ್ಕಾರ ತೆಗೆದುಕೊಳ್ಳುವ ಕ್ರಮಗಳಿಗೆ ಬೆಂಬಲ ನೀಡಲಾಗುವುದು. ಕಾವೇರಿ ವಿಚಾರವಾಗಿ ಎಲ್ಲರೂ ಒಗ್ಗಟ್ಟು ಪ್ರದರ್ಶಿಸಬೇಕು. ಅಲ್ಲದೆ, ಕಳೆದ ತಿಂಗಳು ನಡೆದ ಸರ್ವ ಪಕ್ಷ ಸಭೆಯಲ್ಲಿ ನಿರ್ಣಯಿಸಿದಂತೆ ಕಾವೇರಿ ನದಿ ನೀರಿಗೆ ಸಂಕಷ್ಟ ಸೂತ್ರ ಕಂಡುಕೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಸರ್ವ ಪಕ್ಷ ನಿಯೋಗ ಕೊಂಡೊಯ್ಯಬೇಕು ಎಂದು ಸಲಹೆ ನೀಡಿದರು. ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ಕೋರಲಾಗುವುದು. ಈ ಬಗ್ಗೆ ಅಧಿಕಾರಿಗಳಿಗೆ ಸೂಚನೆ ನೀಡುತ್ತೇನೆ ಎಂದು ಹೇಳಿದರು.
ಮಾಜಿ ಸಿಎಂ ವೀರಪ್ಪ ಮೊಯ್ಲಿ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರಾದ ಡಾ. ಜಿ.ಪರಮೇಶ್ವರ್, ಕೃಷ್ಣ ಬೈರೇಗೌಡ, ಎಚ್.ಕೆ. ಪಾಟೀಲ್, ಕೆ.ಎಚ್. ಮುನಿಯಪ್ಪ, ಕೆ.ಎನ್. ರಾಜಣ್ಣ, ಚೆಲುವರಾಯಸ್ವಾಮಿ, ಎನ್.ಎಸ್. ಬೋಸರಾಜು, ಜಮೀರ್ ಅಹಮದ್‌ಖಾನ್, ಸಂಸದರಾದ ಪ್ರತಾಪ್ ಸಿಂಹ, ಸುಮಲತಾ ಅಂಬರೀಶ್, ಜಿ.ಸಿ. ಚಂದ್ರಶೇಖರ್, ಎಲ್. ಹನುಮಂತಯ್ಯ, ಶಾಸಕರಾದ ದರ್ಶನ್ ಪುಟ್ಟಣ್ಣಯ್ಯ, ಜನಾರ್ದನ ರೆಡ್ಡಿ, ಪೊನ್ನಣ್ಣ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಜಲಸಂಪನ್ಮೂಲ ಇಲಾಖೆ ಅಪರ ಮುಖ್ಯಕಾರ್ಯದರ್ಶಿ ರಾಕೇಶ್ ಸಿಂಗ್, ಅಡ್ವೀಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಇತರರಿದ್ದರು.
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಮಾಜಿ ಸಿಎಂಗಳು, ಜೆಡಿಎಸ್ ಗೈರು: ಸರ್ವ ಪಕ್ಷ ಸಭೆಯಲ್ಲಿ ವೀರಪ್ಪ ಮೊಯ್ಲಿ ಹೊರತುಪಡಿಸಿ ಬೇರೆ ಮಾಜಿ ಸಿಎಂಗಳೆಲ್ಲರೂ ಗೈರಾಗಿದ್ದರು. ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಎಚ್.ಡಿ. ಕುಮಾರಸ್ವಾಮಿ, ಸದಾನಂದಗೌಡ ಪಾಲ್ಗೊಂಡಿರಲಿಲ್ಲ. ಅಲ್ಲದೆ, ಜೆಡಿಎಸ್‌ನ ಶಾಸಕರೂ ಸಭೆಯಲ್ಲಿ ಪಾಲ್ಗೊಳ್ಳಲಿಲ್ಲ.
ದೆಹಲಿಗೆ ತೆರಳಿದ ಡಿಕೆಶಿ: ಕಾವೇರಿ ನದಿ ನೀರಿನ ವಿಚಾರವಾಗಿ ಚರ್ಚಿಸಿ, ಪರಿಹಾರ ಸೂತ್ರ ಘೋಷಿಸುವಂತೆ ಉಪಮುಖ್ಯಮಂತ್ರಿ ಮತ್ತು ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಅವರು ಕೇಂದ್ರ ಜಲಶಕ್ತಿ ಸಚಿವರನ್ನು ಭೇಟಿಯಾಗಲು ಬುಧವಾರವೇ ದೆಹಲಿಗೆ ತೆರಳಿದರು. ಇದೇ ವೇಳೆ ಕಾವೇರಿ ನದಿ ನೀರಿನ ವಿಚಾರವಾಗಿ ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಪರ ವಾದ ಮಂಡಿಸುತ್ತಿರುವ ವಕೀಲರ ತಂಡ ಸೇರಿದಂತೆ ಕಾನೂನು ತಜ್ಞರೊಂದಿಗೆ ಡಿ.ಕೆ. ಶಿವಕುಮಾರ್ ಚರ್ಚೆ ನಡೆಸಲಿದ್ದಾರೆ. ಜತೆಗೆ ಕಾವೇರಿ ನದಿ ನೀರು ನಿರ್ವಹಣಾ ಸಮಿತಿ ಹಾಗು ಕಾವೇರಿ ನದಿ ನೀರು ನಿಯಂತ್ರಣ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುವ ಬಗ್ಗೆಯೂ ಕಾನೂನು ತಂಡದೊಂದಿಗೆ ಮಾತುಕತೆ ನಡೆಸಲಿದ್ದಾರೆ.