Asianet Suvarna News Asianet Suvarna News

ಕಾಂಗ್ರೆಸ್‌ ಸರ್ಕಾರದಿಂದ ಬಯಲುಸೀಮೆಗೆ ವಂಚನೆ: ಮಾಜಿ ಸಚಿವ ಡಾ.ಕೆ.ಸುಧಾಕರ್‌

ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅತ್ಯಂತ ನೀರಸವಾಗಿದ್ದು, ಬಯಲುಸೀಮೆ ಜಿಲ್ಲೆಗಳಿಗೆ ವಂಚಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಇದು ತೀವ್ರ ನಿರಾಸೆ ಮೂಡಿಸಿದೆ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Deception by Congress government to Bayaluseeme Says Dr K Sudhakar gvd
Author
First Published Feb 17, 2024, 9:43 PM IST

ಚಿಕ್ಕಬಳ್ಳಾಪುರ (ಫೆ.17): ಮುಖ್ಯಮಂತ್ರಿ ಸಿದ್ದರಾಮಯ್ಯನವರು ಮಂಡಿಸಿದ ಬಜೆಟ್ ಅತ್ಯಂತ ನೀರಸವಾಗಿದ್ದು, ಬಯಲುಸೀಮೆ ಜಿಲ್ಲೆಗಳಿಗೆ ವಂಚಿಸಲಾಗಿದೆ. ಚಿಕ್ಕಬಳ್ಳಾಪುರ, ಕೋಲಾರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಜನತೆಗೆ ಇದು ತೀವ್ರ ನಿರಾಸೆ ಮೂಡಿಸಿದೆ ಎಂದು ಮಾಜಿ ಸಚಿವ ಡಾ.ಕೆ. ಸುಧಾಕರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ಬಜೆಟ್‌ ಕುರಿತು ಪ್ರತಿಕ್ರಿಯಿಸಿರುವ ಅವರು, ಬೆಂಗಳೂರಿನ ತಲಾ ಆದಾಯ 5.41 ಲಕ್ಷ ರು. ಇದೆ. ಅದೇ ಚಿಕ್ಕಬಳ್ಳಾಪುರದಲ್ಲಿ 1.32 ಲಕ್ಷ ರು. ಹಾಗೂ ಕೋಲಾರದಲ್ಲಿ 1.42 ಲಕ್ಷ ರು. ಇದೆ. ಸಮೀಪದಲ್ಲೇ ಇರುವ ಬೆಂಗಳೂರಿಗೆ ಹೋಲಿಸಿದರೆ ಇವೆರಡೂ ಜಿಲ್ಲೆಗಳ ತಲಾ ಆದಾಯ ತೀರಾ ಕಡಿಮೆಯಾಗಿದೆ. ಆದರೆ ಈ ಜಿಲ್ಲೆಯ ಅಭಿವೃದ್ಧಿಗೆ ಸರ್ಕಾರ ಯಾವುದೇ ಯೋಜನೆ ನೀಡಿಲ್ಲ ಎಂದರು.

ಬಿಯಾಂಡ್‌ ಬೆಂಗಳೂರು ನಾಪತ್ತೆ: ಹಿಂದಿನ ಬಿಜೆಪಿ ಸರ್ಕಾರ ಬೆಂಗಳೂರಿಗೆ ಪರ್ಯಾಯವಾಗಿ ಸುತ್ತಮುತ್ತಲಿನ ನಗರಗಳನ್ನು ಬೆಳೆಸುವ ಹಾಗೂ ಬೇರೆ ಜಿಲ್ಲೆಗಳಲ್ಲಿ ಹೊಸ ಕೈಗಾರಿಕೆ ಸ್ಥಾಪಿಸಲು ʼಬಿಯಾಂಡ್‌ ಬೆಂಗಳೂರುʼ ಎಂಬ ಕಲ್ಪನೆಯೊಂದಿಗೆ ಈ ಜಿಲ್ಲೆಗಳಲ್ಲಿ ತಲಾ ಆದಾಯ ಹೆಚ್ಚಿಸಲು ಒತ್ತು ನೀಡಿತ್ತು. ಆದರೆ ಇಂದಿನ ಬಜೆಟ್‌ನಲ್ಲಿ ಬಯಲುಸೀಮೆ ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿಗೆ, ಉದ್ಯೋಗ ಸೃಷ್ಟಿಗೆ ಯಾವುದೇ ಯೋಜನೆ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಈ ಭಾಗದಲ್ಲಿ ಶಾಶ್ವತ ನೀರಾವರಿಗಾಗಿ ಎತ್ತಿನಹೊಳೆ ಯೋಜನೆಯನ್ನು ಎರಡೇ ವರ್ಷಗಳಲ್ಲಿ ಪೂರ್ಣಗೊಳಿಸುವುದಾಗಿ ಕಾಂಗ್ರೆಸ್‌ ತನ್ನ ಪ್ರಣಾಳಿಕೆಯಲ್ಲಿ ಭರವಸೆ ನೀಡಿತ್ತು. ಆದರೆ ಬಜೆಟ್‌ನಲ್ಲಿ ಯಾವುದೇ ಖಾತರಿ ನೀಡಿಲ್ಲ. ಎಚ್‌.ಎನ್‌. ವ್ಯಾಲಿ ಹಾಗೂ ಕೆ.ಸಿ. ವ್ಯಾಲಿ ತೃತೀಯ ಹಂತದ ಸಂಸ್ಕರಣೆ ಕುರಿತು ಪ್ರಸ್ತಾಪಿಸಿಲ್ಲ ಎಂದು ಟೀಕಿಸಿದರು.

ಸಿದ್ದರಾಮಯ್ಯರಿಂದ 1 ಟ್ರಿಲಿಯನ್ ಆರ್ಥಿಕ ರಾಜ್ಯ ಮಾಡುವ ಪ್ರಯತ್ನ: ಸಚಿವ ಈಶ್ವರ ಖಂಡ್ರೆ

ಶೀಥಲ ಘಟಕ ಪ್ರಸ್ತಾಪ ಇಲ್ಲ: ಮಾವು, ಟೊಮೆಟೋ ಸಂಸ್ಕರಣಾ ಘಟಕ ಹಾಗೂ ಶೀತಲ ಘಟಕವನ್ನು ನಿರ್ಮಿಸಲು ಯೋಜನೆ ರೂಪಿಸಿಲ್ಲ. ಚಿಕ್ಕಬಳ್ಳಾಪುರದಲ್ಲಿ ಅಂತಾರಾಷ್ಟ್ರೀಯ ಹೂ ಮಾರುಕಟ್ಟೆ ನಿರ್ಮಿಸುವ ಯೋಜನೆಗೆ ಸರ್ಕಾರದ ಆದ್ಯತೆ ನೀಡಬೇಕಿತ್ತು. ಅಲ್ಲದೆ ರೇಷ್ಮೆ ಸ್ಥಿರತೆ ನಿಧಿಗೆ 2 ಸಾವಿರ ಕೋಟಿ ರು.ಗಳು ಹಾಗೂ ರೀಲರ್‌ಗಳಿಗೆ 3 ಲಕ್ಷ ರು.ಗಳವರೆಗೆ ಬಡ್ಡಿ ರಹಿತ ಸಾಲದ ಕಾರ್ಯಕ್ರಮವನ್ನೂ ಜಾರಿ ಮಾಡಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗಡಿ ಭಾಗಗಳ ಅಭಿವೃದ್ಧಿ ಶೂನ್ಯ: ಗಡಿ ಭಾಗಗಳ ಅಭಿವೃದ್ಧಿಗೆ, ಗಡಿ ಕೈಗಾರಿಕಾ ಅಭಿವೃದ್ಧಿ ನಿಗಮ ಆರಂಭಿಸಿ, 5 ಸಾವಿರ ಕೋಟಿ ರು. ನೀಡುವ ಬಗ್ಗೆ ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪ್ರಸ್ತಾಪವಿದ್ದರೂ, ಬಾಗೇಪಲ್ಲಿ, ಕೆಜಿಎಫ್ ಸೇರಿದಂತೆ ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಯಾವುದೇ ತಾಲೂಕುಗಳಲ್ಲಿ ಅದನ್ನು ಅನುಷ್ಠಾನ ಮಾಡುವ ಬಗ್ಗೆ ಘೋಷಣೆ ಮಾಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದ್ದಾರೆ.

ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ ಬಿಡುವ ಪ್ರಶ್ನೆಯೇ ಇಲ್ಲ: ಶೋಭಾ ಕರಂದ್ಲಾಜೆ

ಈ ಬಾರಿ ಗ್ಯಾರಂಟಿಗಳ ಜೊತೆಗೆ ಹಲವಷ್ಟು ಭರವಸೆಗಳನ್ನು ನೀಡಿ ಕಾಂಗ್ರೆಸ್‌ ಆಡಳಿತದ ಚುಕ್ಕಾಣಿ ಹಿಡಿದಿದೆ. ಜನರಿಗೆ ಕೊಟ್ಟ ಮಾತಿನಂತೆಯೇ ಅದನ್ನು ಕಟ್ಟುನಿಟ್ಟಾಗಿ ಪಾಲಿಸುವ ಪ್ರಾಮಾಣಿಕತೆಯನ್ನು ಪ್ರದರ್ಶನ ಮಾಡುವಲ್ಲಿ ಕಾಂಗ್ರೆಸ್ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಕಾಂಗ್ರೆಸ್‌ ಮೇಲೆ ವಿಶ್ವಾಸವಿಟ್ಟು, ಮತ ನೀಡಿ ಅಧಿಕಾರ ಕೊಟ್ಟ ಬಯಲುಸೀಮೆ ಜಿಲ್ಲೆಗಳ ಮತದಾರರ ನಂಬಿಕೆಗೆ ಇಂದಿನ ಬಜೆಟ್ ತೀವ್ರ ಘಾಸಿ ಉಂಟುಮಾಡಿದೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

Follow Us:
Download App:
  • android
  • ios