ರಾಯಚೂರು ನಗರ-ಗ್ರಾಮೀಣ ಪ್ರದೇಶದಲ್ಲಿ ಎರಡೂವರೆ ದಿನ ನಡೆದ ಯಾತ್ರೆ, ಜನ ಸೇರಿದ್ದರ ಕುರಿತು ಕಾಂಗ್ರೆಸ್‌,ಬಿಜೆಪಿ, ಜೆಡಿಎಸ್‌ನಿಂದ ಪರ -ವಿರೋಧಿ ಚರ್ಚೆ

ರಾಮಕೃಷ್ಣ ದಾಸರಿ

ರಾಯಚೂರು(ಅ.28): ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್‌ ಜೋಡೋ ಪಾದಯಾತ್ರೆ ರಾಯಚೂರು ಜಿಲ್ಲೆ ಮುಖಾಂತರ ಸಾಗಿ ಪಡೆದಿರುವ ಯಶಸ್ಸಿನ ಕುರಿತು ಎಲ್ಲೆಡೆ ಭಾರಿ ಪ್ರಮಾಣದಲ್ಲಿ ಪರ-ವಿರೋಧ ಚರ್ಚೆಗಳು ಸದ್ದು ಮಾಡುತ್ತಿವೆ. ಜೋಡೋ ಯಾತ್ರೆ ಬಂದು ಹೋದ ಮೇಲೆ ಕಾಂಗ್ರೆಸ್‌ ಮುಖಂಡರಲ್ಲಿ ಅದರಲ್ಲಿಯೂ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್‌ ಮೇಲೆ ಕಣ್ಣಿಟ್ಟಿರುವವರಲ್ಲಿ ಹೊಸ ಹುಮ್ಮಸ್ಸು ತಂದುಕೊಟ್ಟಿದ್ದು ಇದೇ ಟಾಪಿಕ್‌ ಬಗ್ಗೆ ಎಲ್ಲೆಡೆ ಚರ್ಚೆ ನಡೆಯುತ್ತಿದೆ.

ಕಳೆದ ಅ.21ರಂದು ರಾಯಚೂರು ಜಿಲ್ಲೆ ಪ್ರವೇಶಿಸಿದ ಐಕ್ಯತಾ ಯಾತ್ರೆಯನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಸಾವಿರಾರು ಜನರು ರಾಹುಲ್‌ ಗಾಂಧಿ ಜೊತೆಗೆ ಹೆಜ್ಜೆ ಹಾಕಿದರು. ಮರುದಿನ ಸಂಜೆ ರಾಯಚೂರು ನಗರಕ್ಕೆ ಆಗಮಿಸಿದ ಯಾತ್ರೆಗೆ ಮತ್ತಷ್ಟು ಅಭೂತಪೂರ್ವ ಸ್ವಾಗತ ಕೋರಲಾಯಿತು. ಲಕ್ಷಾಂತರ ಜನ ಯಾತ್ರೆಯಲ್ಲಿ ಭಾಗವಹಿಸಿ ಎಲ್ಲರು ಅಚ್ಚರಿಪಡುವಂತೆ ಮಾಡಿದರು. ಹೀಗೆ ಎರಡೂವರೆ ದಿನ ರಾಯಚೂರು ಗ್ರಾಮೀಣ ಮತ್ತು ನಗರ ವಿಧಾನಸಭಾ ಕ್ಷೇತ್ರಗಳಲ್ಲಿ ಸಾಗಿದ ಯಾತ್ರೆಯಲ್ಲಿ ಭಾಗವಹಿಸಿದ್ದ ಜನಸ್ತೋಮ ಕಾಂಗ್ರೆಸ್ಸಿಗರಲ್ಲಿ ಹೊಸ ಹುರುಪನ್ನು ಸೃಷ್ಟಿಸಿದ್ದು,ಬಿಜೆಪಿ ಹಾಗೂ ಜೆಡಿಎಸ್‌ ಮುಖಂಡರು ತಮ್ಮದೇ ಆದ ಧಾಟಿಯಲ್ಲಿ ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

ಕರ್ನಾಟಕದಲ್ಲಿ ಕಾಂಗ್ರೆಸ್‌ ಗೆದ್ದರೆ 60 ಸಾವಿರ ಹುದ್ದೆ ಭರ್ತಿ: ರಾಹುಲ್‌ ಗಾಂಧಿ

ಪರ-ವಿರೋಧದ ಚರ್ಚೆಗಳು:

ಸತತ 22 ದಿನಗಳ ಕಾಲ ಕರ್ನಾಟಕ ರಾಜ್ಯದಲ್ಲಿ ಸಾಗಿದ ಜೋಡೊ ಯಾತ್ರೆಯಲ್ಲಿ ಬಳ್ಳಾರಿ ಬಿಟ್ಟರೆ ಅತಿ ಹೆಚ್ಚು ಜನರು ಸೇರಿದ್ದು ರಾಯಚೂರಿನಲ್ಲಿ ಎಂದು ಕಾಂಗ್ರೆಸ್ಸಿಗರು ಹೇಳುತ್ತಿದ್ದಾರೆ. ಪಕ್ಷದ ಹಿರಿಯ ಮುಖಂಡರಾದ ಜಯರಾಮ್‌ ರಮೇಶ್‌, ವೇಣುಗೋಪಾಲ್‌ ಅವರು ಜಿಲ್ಲೆಯಲ್ಲಿ ಜೋಡೊ ಯಾತ್ರೆಯಲ್ಲಿ ಹೆಜ್ಜೆ ಹಾಕಿದ ಜನರ ಕುರಿತು ಶ್ಲಾಘಿಸುವುದರ ಜೊತೆಗೆ ನವದೆಹಲಿಯಲ್ಲಿ ನಡೆದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪದಗ್ರಹಣ ಕಾರ್ಯಕ್ರಮದಲ್ಲಿ ಸಹ ಪ್ರಸ್ತಾಪ ಮಾಡಿದ್ದಾರೆ. ಇತ್ತ ಬಿಜೆಪಿ ಹಾಗೂ ಜೆಡಿಎಸ್‌ನವರು ರಾಹುಲ್‌ ಗಾಂಧಿ ಪಾದಯಾತ್ರೆಯಲ್ಲಿ ಸೇರಿದ್ದ ಜನರು ಹೆಚ್ಚಾಗಿ ಹೊರಗಿನವರು. ಬೀದರ್‌, ಕಲಬುರಗಿ, ಯಾದಗಿರಿ, ಬಾಗಲಗೋಟೆ, ವಿಜಯಪುರ ಈ ಭಾಗದಲ್ಲಿ ಯಾತ್ರೆ ಹೋಗದ ಕಾರಣ ಅಲ್ಲಿಯ ಕಾರ್ಯಕರ್ತರು ರಾಯಚೂರಿಗೆ ಬಂದಿದ್ದರಿಂದ ಅಷ್ಟೊಂದು ಜನ ಸೇರಲು ಸಾಧ್ಯವಾಗಿದೆ. ಸ್ಥಳೀಯರು ಸಾವಿರಾರು ಪ್ರಮಾಣದಲ್ಲಿ ಅಷ್ಟೇ ಸೇರಿದ್ದರು. ಉಳಿದವರೆಲ್ಲ ಬೇರೆ ಊರಿನವರಾಗಿದ್ದಾರೆ. ರಾಹುಲ್‌ ಗಾಂಧಿ ಅವರು ಪಾದಯಾತ್ರೆಯೊಂದಿಗೆ ಪೂರ್ವಯೋಜಿತ ಕಾರ್ಯಕ್ರಮಗಳನ್ನು ಮಾತ್ರ ನಡೆಸಿದ್ದು ಇದರಲ್ಲೇನು ವಿಶೇಷವಿಲ್ಲ ಎಂದು ಟೀಕಿಸಲು ಆರಂಭಿಸಿದ್ದಾರೆ. 

ರಾಯಚೂರಿನಲ್ಲಿ ಸಾಗಿದ ರಾಹುಲ್‌ ಗಾಂಧಿ ನೇತೃತ್ವದ ಭಾರತ ಜೋಡೊ ಪಾದಯಾತ್ರೆ ಬಂದ ಪುಟ್ಟಹೋದ ಪುಟ್ಟಎನ್ನುವಂತಿದೆ. ಸ್ಥಳೀಯರಿಗಿಂದ ಅನ್ಯಜಿಲ್ಲೆಯವರೇ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು, ಯಾತ್ರೆಯಿಂದ ಯಾವುದೇ ರೀತಿಯ ಪರಿಣಾಮ ಉಂಟಾಗಿಲ್ಲ ಅಂತ ಜಿಲ್ಲೆಯ ಬಿಜೆಪಿ-ಜೆಡಿಎಸ್‌ ಮುಖಂಡರು ತಿಳಿಸಿದ್ದಾರೆ.