ಬೆಂಗಳೂರು(ಜ.27): ಕಂಪ್ಲಿ ಶಾಸಕ ಗಣೇಶ್​​ರಿಂದ ಹಲ್ಲೆಗೊಳಗಾಗಿದ್ದ ಶಾಸಕ ಆನಂದ್​​ ಸಿಂಗ್​​ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. 

ಶೇಷಾದ್ರಿಪುರಂನಲ್ಲಿರುವ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಒಬ್ಬರಿಂದ ಒಬ್ಬರು ನಾಯಕರು ಆನಂದ್ ಸಿಂಗ್ ಆರೋಗ್ಯ ವಿಚಾರಿಸಲು ಆಸ್ಪತ್ರೆಗೆ ಬಂದು ಆತ್ಮಸ್ಥೈರ್ಯ ತುಂಬುತ್ತಿದ್ದಾರೆ. 

ಆಸ್ಪತ್ರೆಗೆ ಕುಮಾರಸ್ವಾಮಿ ಭೇಟಿ, 25 ನಿಮಿಷ ಆನಂದ್ ಸಿಂಗ್ ಜತೆ ಮಾತು

ನಿನ್ನೆ [ಶನಿವಾರ] ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರು ಆನಂದ್ ಸಿಂಗ್ ಅವರನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದರು. ಇಂದು [ಭಾನುವಾರ] ಡಿಸಿಎಂ ಡಾ. ಜಿ.ಪರಮೇಶ್ವರ ಹಾಗೂ ಸಚಿವ ಕೃಷ್ಣ ಬೈರೇಗೌಡ ಆಸ್ಪತ್ರೆಗೆ ಭೇಟಿ ನೀಡಿ ಆನಂದ್ ಸಿಂಗ್ ಅವರ ಆರೋಗ್ಯ ವಿಚಾರಿಸಿದರು. 

ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಪರಮೇಶ್ವರ,  ಆನಂದ್ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ. ಕಣ್ಣಿನ ದೃಷ್ಟಿ ಇದೀಗ ಸ್ಪಷ್ಟವಾಗಿ ಕಾಣಿಸುತ್ತಿದೆ. ಏಟು ಬಿದ್ದದ್ದರಿಂದ ಮೈ ಕೈ ನೋವು ಇನ್ನು ಇದ್ದು, ಇನ್ನಷ್ಟು ದಿನ ಆನಂದ್ ಸಿಂಗ್ ಚಿಕಿತ್ಸೆಯ ಅಗತ್ಯತೆ ಇದೇ ಎಂದರು.

ಮೊದಲು ಹೊಡೆದದ್ದೇ ಆನಂದ್ ಸಿಂಗ್!: ಹಲ್ಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ನಾವು ಈಗ ಯಾವುದೇ ತನಿಖಾ ಸಮಿತಿ ಸದಸ್ಯರಾಗಿ ಬಂದಿಲ್ಲ. ಈಗಿನ ಪರಿಸ್ಥಿತಿಯಲ್ಲಿ ವಿಚಾರಣೆ ರೀತಿ ಮಾಡುವುದು ಸರಿಯಲ್ಲ. ಜಾರ್ಜ್ ಕೂಡ ಬರಬೇಕು ಅವರು ಸಮಿಯಲ್ಲಿಯಲ್ಲಿದ್ದಾರೆ. ಆನಂದ್ ಸಿಂಗ್ ಗುಣ ಮುಖವಾದ ಬಳಿಕ ವಿಚಾರಣೆ ಮಾಡುತ್ತೇವೆ ಎಂದು ಸ್ಪಷ್ಟಪಡಿಸಿದರು.

ಜ.19ರಂದು ಈಗಲ್ಟನ್ ರೆಸಾರ್ಟ್​ನಲ್ಲಿ ನಡೆದ ಘಟನೆ ಸಂಬಂಧಿಸಿದಂತೆ ಗಣೇಶ್​​ ವಿರುದ್ಧ ದಾಖಲಿಸಿಕೊಂಡು ರಾಮನಗರ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದಾರೆ. 

ಈಗಾಗಲೇ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್ ಅವರಿಂದ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಹೇಳಿಕೆ ಪಡೆದಿದ್ದಾರೆ. 

ಈ ಹೇಳಿಕೆ ಅನ್ವಯ ಗಣೇಶ್​​ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಜತೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ರಮೇಶ್‌ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಲಾಗಿದ್ದು ಕಾರ್ಯಾಚರಣೆ ನಡೆಯುತ್ತಿದೆ.