ಹುಚ್ಚಾಸ್ಪತ್ರೆಗೆ ಕಳಿಸೋಣ: ಸತೀಶ್ ಜಾರಕಿಹೊಳಿಗೆ ಡಿ.ಕೆ.ಶಿವಕುಮಾರ್ ಟಾಂಗ್?
ಕಾಂಗ್ರೆಸ್ ಸೋಲಿಗೆ ನಿರ್ದೇಶಕರು, ನಿರ್ಮಾಪಕರು ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ಹೇಳಿಕೆ ನೀಡಿದವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿಕೊಡೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ.
ಬೆಂಗಳೂರು (ಜೂ.08): ಕಾಂಗ್ರೆಸ್ ಸೋಲಿಗೆ ನಿರ್ದೇಶಕರು, ನಿರ್ಮಾಪಕರು ಸರಿಯಾಗಿ ಕೆಲಸ ಮಾಡಲಿಲ್ಲ ಎಂಬ ಹೇಳಿಕೆ ನೀಡಿದವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿಕೊಡೋಣ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬೆಳಗಾವಿಯಲ್ಲಿ ಕಾಂಗ್ರೆಸ್ ಸೋಲಿಗೆ ನಿರ್ದೇಶಕರು, ನಿರ್ಮಾಪಕರು ಸರಿಯಾಗಿ ಕೆಲಸ ಮಾಡದಿರುವುದೇ ಕಾರಣ ಎಂದು ಸತೀಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಕೆ. ಶಿವಕುಮಾರ್, ಆ ರೀತಿ ಹೇಳಿದವರನ್ನು ಹುಚ್ಚಾಸ್ಪತ್ರೆಗೆ ಕಳುಹಿಸಿಕೊಡೋಣ ಎಂದಷ್ಟೇ ಹೇಳಿ ಸುಮ್ಮನಾದರು. ಲೋಕಸಭಾ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಪ್ರತಿಕ್ರಿಯಿಸಿದ್ದ ಸಚಿವ ಸತೀಶ್ ಜಾರಕಿಹೊಳಿ, ಡೈರೆಕ್ಟರ್ ಹಾಗೂ ಪ್ರೊಡ್ಯೂಸರ್ ಫೇಲಾದರೆ ಇಂತಹ ಫಲಿತಾಂಶ ನಿರೀಕ್ಷಿತ ಎಂದು ಹೇಳಿದ್ದರು.
ಬಿಜೆಪಿಯಿಂದಲೂ ನಿಗಮ ಹಣ ಅಕ್ರಮ ವರ್ಗ: ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ನಿಗಮಗಳ ಹಣವನ್ನು ಬೇರೆ ಬ್ಯಾಂಕ್‌ಗಳಿಗೆ ಅಕ್ರಮವಾಗಿ ವರ್ಗಾಯಿಸಿರುವ ಕುರಿತು ಮಾಹಿತಿ ಮತ್ತು ದಾಖಲೆಗಳು ದೊರೆತಿದ್ದು, ಅದರ ಬಗ್ಗೆ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು. ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಹರ್ಷಿ ವಾಲ್ಮೀಕಿ ಪರಿಶಿಷ್ಟ ಪಂಗಡಗಳ ಅಭಿವೃದ್ಧಿ ನಿಗಮದ ಹಣ ಅಕ್ರಮ ವರ್ಗಾವಣೆಯಲ್ಲಿ ಸಚಿವ ಬಿ. ನಾಗೇಂದ್ರ ಅವರು ತಮ್ಮ ಪಾತ್ರವಿಲ್ಲ ಎಂಬುದನ್ನು ತಿಳಿಸಿದ್ದಾರೆ.
ಆದರೂ, ಪಕ್ಷಕ್ಕೆ ಮುಜುಗರವಾಗಬಾರದು ಎಂದು ರಾಜೀನಾಮೆ ನೀಡಿದ್ದಾರೆ. ಯಾವ ಸಚಿವರೂ ನಿಗಮಗಳ ಅಷ್ಟು ದೊಡ್ಡ ಪ್ರಮಾಣದ ಹಣವನ್ನು ದುರುಪಯೋಗ ಮಾಡಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಆದರೂ, ತನಿಖೆಗೆ ತಮ್ಮಿಂದ ತೊಂದರೆಯಾಗಬಾರದು ಹಾಗೂ ಪಕ್ಷಕ್ಕೆ ಯಾವುದೇ ಸಮಸ್ಯೆಯಾಗಬಾರದು ಎಂದು ನಾಗೇಂದ್ರ ರಾಜೀನಾಮೆ ನೀಡಿದ್ದಾರೆ ಎಂದರು.
ಎಚ್‌ಡಿಕೆ ಸಚಿವ ಸ್ಥಾನದ ಬೇಡಿಕೆ ಇಟ್ಟಿಲ್ಲ: ನಿಖಿಲ್ ಕುಮಾರಸ್ವಾಮಿ
ಬಿಜೆಪಿ ಅವಧಿಯ ಅಕ್ರಮ ಪತ್ತೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಈ ರೀತಿ ನಿಗಮಗಳ ಹಣವನ್ನು ಅಕ್ರಮವಾಗಿ ಬೇರೆ ಬ್ಯಾಂಕ್‌ಗಳಿಗೆ ವರ್ಗಾವಣೆ ಮಾಡಿರುವ ದಾಖಲೆಗಳು ಸಿಕ್ಕಿವೆ. ಅವುಗಳ ಕುರಿತು ಲೋಕಾಯುಕ್ತ ಸೇರಿದಂತೆ ಇನ್ನಿತರ ತನಿಖೆಗಳು ನಡೆದಿವೆ. ಆನಂತರ ಬ್ಯಾಂಕ್‌ಗಳಿಂದ ಹಣ ವಾಪಸು ಪಡೆಯಲಾಗಿದೆ. ಮಾಜಿ ಸಚಿವ ಗೂಳಿಹಟ್ಟಿ ಶೇಖರ್ ಕೂಡ ಈ ಬಗ್ಗೆ ಮಾತನಾಡಿದ್ದಾರೆ. ಅದನ್ನೂ ಪರಿಶೀಲಿಸುತ್ತೇವೆ. ಅದರ ಸತ್ಯಾಸತ್ಯ ತಿಳಿದುಕೊಳ್ಳುತ್ತೇವೆ. ಬಿಜೆಪಿಯ ಹಲವು ನಾಯಕರು ಈ ರೀತಿ ಮಾಡಿದ್ದಾರೆ ಎಂಬ ಮಾಹಿತಿಯಿದೆ. ಎಲ್ಲವನ್ನೂ ತನಿಖೆ ನಡೆಸುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.