ಹಿಟ್ ಅಂಡ್ ರನ್ ಬೇಡ, ಅಸೆಂಬ್ಲೀಲಿ ಚರ್ಚಿಸೋಣ: ಎಚ್‌ಡಿಕೆಗೆ ಡಿಕೆಶಿ ತಿರುಗೇಟು
ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂಬ ಬಗ್ಗೆ ಗಾಳಿಯಲ್ಲಿ ಗುಂಡು ಹೊಡೆಯುವುದು ಹಾಗೂ ಹಿಟ್ ಅಂಡ್ ರನ್ ಮಾಡುವುದು ಬೇಡ. ಕುಮಾರಸ್ವಾಮಿ ಅವರ ಬಹಿರಂಗ ಚರ್ಚೆಯ ಪ್ರತಿ ಸವಾಲನ್ನು ಸ್ವೀಕರಿಸಿದ್ದೇನೆ.
ಬೆಂಗಳೂರು (ಅ.27): ‘ನಾನು ಏನು ಮಾಡಿದ್ದೇನೆ, ಕುಮಾರಸ್ವಾಮಿ ಏನು ಮಾಡಿದ್ದಾರೆ ಎಂಬ ಬಗ್ಗೆ ಗಾಳಿಯಲ್ಲಿ ಗುಂಡು ಹೊಡೆಯುವುದು ಹಾಗೂ ಹಿಟ್ ಅಂಡ್ ರನ್ ಮಾಡುವುದು ಬೇಡ. ಕುಮಾರಸ್ವಾಮಿ ಅವರ ಬಹಿರಂಗ ಚರ್ಚೆಯ ಪ್ರತಿ ಸವಾಲನ್ನು ಸ್ವೀಕರಿಸಿದ್ದೇನೆ. ಅಧಿವೇಶನದಲ್ಲಿ ದಾಖಲೆ ಸಮೇತ ಚರ್ಚಿಸಿ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಸದಾಶಿವನಗರದ ನಿವಾಸ ಹಾಗೂ ಮುಖ್ಯಮಂತ್ರಿ ಗೃಹಕಚೇರಿ ಕೃಷ್ಣಾ ಬಳಿ ಸುದ್ದಿಗಾರರೊಂದಿಗೆ ಮಾತನಾಡಿ, ಕುಮಾರಸ್ವಾಮಿ ಅವರು ತಮ್ಮ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು.
‘ಕುಮಾರಸ್ವಾಮಿ ನನ್ನ ಸವಾಲು ಸ್ವೀಕಾರ ಮಾಡಿರುವುದು ಬಹಳ ಸಂತೋಷ. ಅವರ ಪ್ರತಿ ಸವಾಲನ್ನು ನಾನು ಸ್ವೀಕರಿಸಿದ್ದೇನೆ. ನಮ್ಮ ಚರ್ಚೆ ಯಾವೊದೋ ಒಂದು ಸುದ್ದಿ ವಾಹಿನಿಯಲ್ಲಿ ಆಗುವುದು ಬೇಡ. ಎಲ್ಲಾ ಸುದ್ದಿ ವಾಹಿನಿಗಳಿಗೂ ಸಿಗುವಂತೆ ಅಧಿವೇಶನದಲ್ಲೇ ಚರ್ಚೆ ಮಾಡೋಣ. ಯಾರು ಏನೇನು ಮಾಡಿದ್ದಾರೆ ಎಂದು ಎಲ್ಲವನ್ನೂ ಅಧಿವೇಶನದಲ್ಲಿ ಬಿಚ್ಚಿಡುತ್ತೇನೆ. ಅವರ ಬಳಿ ಇರುವ ಸರಕುಗಳನ್ನು ತಂದು ಅವರು ಮಾತನಾಡಲಿ. ನನ್ನ ಬಳಿ ಇರುವ ದಾಖಲೆಗಳನ್ನು ಮುಂದಿಟ್ಟು ನಾನು ಮಾತನಾಡುತ್ತೇನೆ’ ಎಂದು ಹೇಳಿದರು.
ನನಗೆ 61 ಮುಂದೆ 100 ಆದರು ನನ್ನ ಅಮ್ಮನೇ ನನ್ನ ದೇವರು: ಹುಲಿ ಉಗುರು ಸಂಕಟ ಬಿಚ್ಚಿಟ್ಟ ನಟ ಜಗ್ಗೇಶ್!
ಈ ಹಿಂದೆಯೂ ನಾನು ಇಂತಹ ಬಹಿರಂಗ ಚರ್ಚೆ ಸವಾಲು ಸ್ವೀಕರಿಸಿ ಉತ್ತರ ಕೊಟ್ಟಿದ್ದೇನೆ. ನಂತರ ನನ್ನ ಬಳಿ ಬಂದು ಕ್ಷಮೆ ಕೇಳಿದ್ದನ್ನು ನೋಡಿದ್ದೇವೆ. ನಾನು ಎಲ್ಲಾ ಚರ್ಚೆಗಳಿಗೂ ಸಿದ್ದನಿದ್ದೇನೆ ಎಂದು ಹೇಳಿದರು. ಇದಕ್ಕೂ ಮೊದಲು ಸದಾಶಿವನಗರ ನಿವಾಸದ ಬಳಿ ಮಾತನಾಡಿ, ನ.1ರ ಬಳಿಕ ಯಾವ ದಿನವಾದರೂ ಸರಿ ಬಹಿರಂಗ ಚರ್ಚೆಗೆ ಸಮಯ ನಿಗದಿ ಮಾಡಿ. ಯಾವುದೇ ಸುದ್ದಿವಾಹಿನಿಯಲ್ಲಿ ಚರ್ಚೆ ನಿಗದಿ ಮಾಡಿದರೂ ನಾನು ಸಿದ್ಧನಿದ್ದೇನೆ ಎಂದು ಹೇಳಿದ್ದರು. ಬಳಿಕ ಸೀಮಿತ ಸುದ್ದಿವಾಹಿನಿಯಲ್ಲಿ ಬೇಡ ಅಧಿವೇಶನದಲ್ಲಿ ಚರ್ಚೆಯಾಗಲಿ ಎಂದು ಸ್ಪಷ್ಟಪಡಿಸಿದರು.
ರೈತರ ಭೂಮಿಗೆ ಸರಿಯಾದ ಹಣ ನಿಗದಿ ಮಾಡಿಲ್ಲ. ಶಿವಕುಮಾರ್ ಪಟಾಲಂ ರೈತರ ಹಣ ಲಪಟಾಯಿಸಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ‘ನೋಡಿ ಕುಮಾರಸ್ವಾಮಿ ಅವರು ಗಾಳಿಯಲ್ಲಿ ಗುಂಡು ಹಾರಿಸುವುದು ಬೇಡ. ಹಿಟ್ ರನ್ ಮಾಡುವುದು ಅವರಿಗೆ ಬಹಳ ವಾಡಿಕೆ. ದಾಖಲೆ ಸಮೇತ ವಿಧಾನಸಭೆಯಲ್ಲಿ ಚರ್ಚೆಗೆ ಬರಲಿ. ನಾನೂ ಎಲ್ಲವನ್ನೂ ಬಿಚ್ಚಿಡುತ್ತೇನೆ’ ಎಂದರು.
ಸರ್ಕಾರಿ ಶಾಲಾ ಕೊಠಡಿಗಳೇ ಇಲ್ಲ ವಿದ್ಯಾ ಕ್ಷೇತ್ರಕ್ಕೆ ದಾನ ಮಾಡಿದ್ದಾರಂತೆ ಎಂಬ ಟೀಕೆಗೆ, ‘ನೋಡ್ರಿ ನಾನು ಏನು ಮಾಡಿದ್ದೇನೆ. ಅವನು ಏನು ಮಾಡಿದ್ದಾನೆ ಎನ್ನುವುದನ್ನು ಚರ್ಚೆ ಮಾಡೋಣ ಎಂದಿದ್ದೇನೆ. ಅಲ್ಲಿ ಬಂದು ಎಲ್ಲವನ್ನೂ ಮಾತನಾಡುತ್ತೇನೆ’ ಎಂದು ಏಕವಚನದಲ್ಲೇ ಹರಿಹಾಯ್ದರು. ಆಸ್ತಿ ಖರೀದಿ ಆರೋಪಕ್ಕೆ, ನಾವು ಬಿಕಾರಿಗಳಾಗಿ ಬದುಕಬೇಕಾ? ಹೌದು ನಾವು ಆಸ್ತಿ ಮಾಡಿದ್ದೇವೆ. ನಾನು ಸರ್ಕಾರಕ್ಕೆ, ಜನರಿಗೆ ಧೋಖಾ ಹಾಕಿ ಮಾಡಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಯವರಿಗೆ ಸಾಮಾನ್ಯ ಪರಿಜ್ಞಾನ ಇಲ್ಲ: ಬಿಜೆಪಿಯವರಿಗೆ ಸಾಮಾನ್ಯ ಪರಿಜ್ಞಾನ ಇಲ್ಲ. ವಿಧಾನಸೌಧದಲ್ಲಿ ನವೀಕರಣ ಮಾಡುತ್ತಿರುವುದು ನನ್ನ ಕಚೇರಿ. ನಾನು ಅಲ್ಲಿ ಅನೇಕ ಜನರು, ದೇಶ-ವಿದೇಶದ ಗಣ್ಯರನ್ನು ಭೇಟಿ ಮಾಡಬೇಕಾಗುತ್ತದೆ. ಅವರ ಮುಂದೆ ಬೆಂಗಳೂರು ಹಾಗೂ ಭಾರತವನ್ನು ಉತ್ತಮವಾಗಿ ಬಿಂಬಿಸಬೇಕು ಎಂದು ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದರು.
ಶೋಭಾ, ಯತ್ನಾಳ್ ನೇಮಕಕ್ಕೆ ಬಿಎಸ್‌ವೈ ವಿರೋಧವಿಲ್ಲ: ಶಾಸಕ ವಿಜಯೇಂದ್ರ
ಕಚೇರಿ ನವೀಕರಣದ ಬಗ್ಗೆ ಬಿಜೆಪಿ ಮಾಡಿರುವ ಟೀಕೆಗೆ ಪ್ರತಿಕ್ರಿಯಿಸಿದ ಅವರು, ‘ಗಣ್ಯರು ಭೇಟಿಗೆ ಬಂದಾಗ ಅವರಿಗೆ ಗೌರವ ನೀಡಲು ಅಚ್ಚುಕಟ್ಟಾದ ಕೊಠಡಿ, ಸೂಕ್ತ ಸ್ಥಳಾವಕಾಶ ಇರಬೇಕು. ನೆದರ್ ಲ್ಯಾಂಡ್ ನಿಯೋಗ ಬಂದಾಗ ಎಂ.ಬಿ. ಪಾಟೀಲರ ಕೊಠಡಿಗೆ ಕರೆದುಕೊಂಡು ಹೋಗಬೇಕಾಯಿತು. ನಾವು ನಮ್ಮ ಮಣ್ಣಿನ ಸಂಸ್ಕೃತಿ ಪಾಲಿಸಬೇಕು. ನಾವು ಬೆಂಗಳೂರು ಹಾಗೂ ಇಂಡಿಯಾವನ್ನು ಉತ್ತಮವಾಗಿ ಬಿಂಬಿಸಬೇಕು. ಅದಕ್ಕಾಗಿ ಮಾಡುತ್ತಿದ್ದೇವೆ’ ಎಂದು ಸಮರ್ಥಿಸಿಕೊಂಡರು.