ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ: ಡಿ.ಕೆ.ಶಿವಕುಮಾರ್
ಯೋಗೇಶ್ವರ್ ಮೊದಲು ನಮ್ಮ ಪಕ್ಷದಲ್ಲೇ ಇದ್ದು ಕಾಂಗ್ರೆಸ್‌ನಿಂದ 2 ಬಾರಿ ಶಾಸಕರಾಗಿದ್ದವರು. ಕಾರಣಾಂತರ ಗಳಿಂದ ಪಕ್ಷ ಬಿಟ್ಟಿದ್ದರು. ಇದೀಗ ಮರಳಿ ಬೇಷರತ್ ಆಗಿ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಂಗಳೂರು(ಅ.24): ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಅವರಲ್ಲಿ ಕಾಂಗ್ರೆಸ್ ರಕ್ತ ಹರಿಯುತ್ತಿದೆ. ಈ ಕಾರಣಕ್ಕೆ ಯಾವುದೇ ಷರತ್ತುಗಳನ್ನು ವಿಧಿಸದೆ ಮತ್ತೊಮ್ಮೆ ಮರಳಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗುತ್ತಿದ್ದಾರೆ. ಇಂದು(ಗುರುವಾರ) ಬೆಳಗ್ಗೆ 11 ಗಂಟೆಗೆ ಕಾಂಗ್ರೆಸ್‌ನಿಂದ ಚನ್ನಪಟ್ಟಣ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಯೋಗೇಶ್ವರ್ ಮೊದಲು ನಮ್ಮ ಪಕ್ಷದಲ್ಲೇ ಇದ್ದು ಕಾಂಗ್ರೆಸ್‌ನಿಂದ 2 ಬಾರಿ ಶಾಸಕರಾಗಿದ್ದವರು. ಕಾರಣಾಂತರ ಗಳಿಂದ ಪಕ್ಷ ಬಿಟ್ಟಿದ್ದರು. ಇದೀಗ ಮರಳಿ ಬೇಷರತ್ ಆಗಿ ಕಾಂಗ್ರೆಸ್ ಸೇರ್ಪಡೆ ಯಾಗಿದ್ದಾರೆ ಎಂದರು.
ಚನ್ನಪಟ್ಟಣದ ಅಭ್ಯರ್ಥಿ ಆಯ್ಕೆ ಮಾಡುವ ವಿಚಾರವನ್ನು ಡಿ.ಕೆ.ಸುರೇಶ್‌ಗೆ ವಹಿಸಲಾಗಿತ್ತು. ಅವರು ಈಗಾಗಲೇ ಮಲ್ಲಿ ಕಾರ್ಜುನ ಖರ್ಗೆ ಬಳಿ ಮಾತನಾಡಿದ್ದಾರೆ. ಯೋಗೇಶ್ವರ್ ಪರಿಷತ್ ಸದಸ್ಯ ಸ್ಥಾನ, ಬಿಜೆಪಿಗೆ ರಾಜೀನಾಮೆ ನೀಡಿದ ಬಳಿಕವಷ್ಟೇ ನಾವು ಮಾತನಾಡಿದೆವು. ಇದೀಗ ಅಂತಿಮ ವಾಗಿ ನಮ್ಮ ಪಕ್ಷದ ಅಭ್ಯರ್ಥಿ ಆಗುತ್ತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಅಭ್ಯರ್ಥಿ ಕೊರತೆಯಿಂದ ಯೋಗೇಶ್ವರ್ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲಾಯಿತೇ ಎಂದಾಗ, 'ಕಾಂಗ್ರೆಸ್ ಪಕ್ಷಕ್ಕೆ ಎಂದಿಗೂ ಅಭ್ಯರ್ಥಿಗಳ ಕೊರತೆ ಕಾಣುವುದಿಲ್ಲ. ನಾನು ಇಲ್ಲದಿದ್ದರೂ ಪಕ್ಷ ನಡೆಯುತ್ತದೆ' ಎಂದು ಹೇಳಿದರು. ಡಿ.ಕೆ.ಸುರೇಶ್ ಅವರನ್ನು ಸೋಲಿಸಿದವರು ಎಂದು ಗೊತ್ತಿದ್ದೂ ಸೇರಿಸಿಕೊಂಡಿದ್ದೀರಿ ಎಂಬ ಪಶ್ನೆಗೆ, 'ಇದರ ಬಗ್ಗೆ ನಮ್ಮ ಕಾರ್ಯಕರ್ತರ ಬಳಿ ಚರ್ಚೆ ನಡೆಸಿದ್ದೇವೆ. ಇದು ಎಲ್ಲ ಪಕ್ಷದಲ್ಲಿಯೂ ಇದ್ದಿದ್ದೇ. ಇದೊಂದು ರಾಜಕೀಯ ವಿದ್ಯಮಾನವಷ್ಟೇ' ಎಂದು ಸಮರ್ಥಿಸಿಕೊಂಡರು.
ಪಕ್ಷ ಕಟ್ಟಿದ ಕಾರ್ಯಕರ್ತರ ಜೊತೆ ನಾವಿದ್ದೇವೆ:
ಲೋಕಸಭೆ ಚುನಾವಣೆ ಬಳಿಕ 15ಕ್ಕೂ ಹೆಚ್ಚು ಬಾರಿ ನಾನು ಚನ್ನಪಟ್ಟಣಕ್ಕೆ ಭೇಟಿ ನೀಡಿದ್ದೇನೆ. ನಮ್ಮ ಕಾರ್ಯಕರ್ತರು ಕ್ಷೇತ್ರದಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿ ಮಾಡಲು ಶ್ರಮವಹಿಸಿದ್ದರು. ಪಕ್ಷದ ನಿಷ್ಠಾವಂತ ಕಾರ್ಯಕರ್ತರುಮುಜುಗರಕ್ಕೆ ಒಳಗಾಗುವ ಪ್ರಮೇಯವನ್ನು ನಾವು ಉಂಟುಮಾಡಲ್ಲ ಎಂದರು.
ಎಚ್‌ಡಿಕೆಗೆ ಸೋಲಿನ ಭಯ:
ಸೋಲಿನ ಭೀತಿಯಿಂದ ತಮ್ಮ ಸ್ವಂತ ಕ್ಷೇತ್ರವನ್ನೇ ಬಿಜೆಪಿಗೆ ಬಿಟ್ಟುಕೊಡಲು ಕುಮಾರಸ್ವಾಮಿ ಸಿದ್ದರಾಗಿದ್ದರು. ಎರಡು ಬಾರಿ ಸಿಎಂ, ಈಗ ಕೇಂದ್ರ ಸಚಿವರಾಗಿರುವ ಅವರು ಎಷ್ಟು ದುರ್ಬಲರಾಗಿದ್ದಾರೆ ಎಂಬುದು ಇದರಿಂದ ತಿಳಿಯುತ್ತದೆ ಎಂದರು.