ಅವಕಾಶ ಇದ್ದಾಗ ಕೊಟ್ಟಿಲ್ಲ, ಈಗ ಹೇಗೆ ನಂಬೋದು?: ಬಿಜೆಪಿ ವಿರುದ್ಧ ಹರಿಹಾಯ್ದ ಡಿ.ಕೆ.ಶಿವಕುಮಾರ್
ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇರುವಾಗ ಪ್ರಣಾಳಿಕೆಗೆ ಅಷ್ಟೊಂದು ಶಕ್ತಿ ಬರುವುದಿಲ್ಲ. ಜನರಿಗೆ ಏನು ಒತ್ತು ಕೊಡಬೇಕು ಎಂಬುದನ್ನು ಅವಕಾಶ ಇದ್ದಾಗ ಕೊಟ್ಟಿಲ್ಲ. ಅಧಿಕಾರ ಇದ್ದಾಗ ಜನರ ಬದುಕಿನ ಬಗ್ಗೆ ಯೋಚನೆ ಮಾಡಲಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ ಎಂದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಬೆಳಗಾವಿ(ಏ.16): ಕಪ್ಪುಹಣ ತರುತ್ತೇವೆ, ಜನರಿಗೆ ಹಂಚುತ್ತೇನೆ ಎಂದಿದ್ದರು. ಎಷ್ಟು ಕಪ್ಪುಹಣ ಬಂತು? ಎಷ್ಟು ಜನರಿಗೆ ಹಂಚಿದ್ದೀರಿ ಎಂಬುದನ್ನು ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಮತ್ತು ಪ್ರಧಾನಿ ನರೇಂದ್ರ ಮೋದಿ ಉತ್ತರ ನೀಡಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗ್ರಹಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಕೇಂದ್ರದಲ್ಲಿ ಅವರದ್ದೇ ಸರ್ಕಾರ ಇರುವಾಗ ಪ್ರಣಾಳಿಕೆಗೆ ಅಷ್ಟೊಂದು ಶಕ್ತಿ ಬರುವುದಿಲ್ಲ. ಜನರಿಗೆ ಏನು ಒತ್ತು ಕೊಡಬೇಕು ಎಂಬುದನ್ನು ಅವಕಾಶ ಇದ್ದಾಗ ಕೊಟ್ಟಿಲ್ಲ. ಅಧಿಕಾರ ಇದ್ದಾಗ ಜನರ ಬದುಕಿನ ಬಗ್ಗೆ ಯೋಚನೆ ಮಾಡಲಿಲ್ಲ. ಬಿಜೆಪಿ ಬಿಡುಗಡೆ ಮಾಡಿರುವ ಪ್ರಣಾಳಿಕೆ ಅನುಷ್ಠಾನಕ್ಕೆ ಬರಲು ಸಾಧ್ಯವಿಲ್ಲ ಎಂದು ದೂರಿದರು.
ಹತ್ತು ಕೆಜಿ ಅಕ್ಕಿ ಬೇಕಾ, ಬೇಡಾವಾ: ಸಿದ್ದರಾಮಯ್ಯ ಸ್ಟೈಲ್‌ನಲ್ಲಿ ಮಿಮಿಕ್ರಿ ಮಾಡಿದ ಕೇಂದ್ರ ಸಚಿವ ಜೋಶಿ
ಕಪ್ಪುಹಣ ತಂದು ಎಲ್ಲರ ಅಕೌಂಟ್‌ಗೆ ₹15 ಲಕ್ಷ ಹಾಕುತ್ತೇನೆ ಎಂದು ಕಳೆದ ಬಾರಿ ಭರವಸೆ ನೀಡಿದ್ದರು. ಎಷ್ಟು ಮಂದಿ ಅಕೌಂಟ್‌ಗೆ ಹಣ ಹಾಕಿದ್ದೀರಿ? ರೈತರ ಆದಾಯವನ್ನು ಡಬಲ್ ಮಾಡುತ್ತೇವೆ ಎಂದು ಹೇಳಿದ್ದೀರಿ. ಯಾವ ರೈತರ ಆದಾಯ ಡಬಲ್ ಮಾಡಿದ್ದೀರಿ? ಹಳೇ ಪ್ರಣಾಳಿಕೆಯನ್ನು ಜಾರಿಗೆ ತರಲು ಆಗಿಲ್ಲ. ಈಗ ಪ್ರಣಾಳಿಕೆ ಘೋಷಿಸಿ ಏನು ಮಾಡುತ್ತೀರಿ ಎಂದು ಬಿಜೆಪಿ ನಾಯಕರನ್ನು ಪ್ರಶ್ನಿಸಿದರು
ಮೂರು ನಾಲ್ಕು ಕೃಷಿ ಕಾಯ್ದೆ ತಂದು, ಇತಿಹಾಸದಲ್ಲೇ ರೈತರು ಕೇಂದ್ರದ ವಿರುದ್ಧ ದೊಡ್ಡ ಹೋರಾಟ ಮಾಡಿದರು. 700 ರೈತರು ಪ್ರಾಣತ್ಯಾಗದ ಪರಿಣಾಮ ಕಾಯ್ದೆ ವಾಪಸ್ ಪಡೆದಿದ್ದೀರಿ. 2 ಕೋಟಿ ಉದ್ಯೋಗ ಕೊಡುತ್ತೇನೆ ಎಂದು ಹೇಳಿದ್ದೀರಿ. ಅದರ ಪಟ್ಟಿ ಬಿಡುಗಡೆ ಮಾಡಬೇಕು. ಹಳೇ ಮಾತೇ ನಡೆಸಿಕೊಟ್ಟಿಲ್ಲ. ಈಗ ಹೊಸ ಭರವಸೆ ಹೇಗೆ ನಡೆಸಿಕೊಡುತ್ತೀರಿ ಎಂದು ಮಾತಿನಲ್ಲೇ ತಿವಿದರು.
ಕೋವಿಡ್ ವೇಳೆ ₹20 ಲಕ್ಷ ಕೋಟಿ ಕೊಟ್ಟಿದ್ದೇವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದರು. ನಿಮ್ಮ ಹತ್ತಿರ ಹಣ ಇದೆ ಜಾಹೀರಾತು ಮೂಲಕ ಎಲ್ಲವನ್ನೂ ಬಹಿರಂಗಪಡಿಸಬೇಕು. ಕೋವಿಡ್ ಸಮಯದಲ್ಲಿ ಯಾರ್‍ಯಾರಿಗೆ ಸಹಾಯ ಮಾಡಿದ್ದೀರಿ ಎಂದು ಹೇಳಿ. ಕೋವಿಡ್ ವೇಳೆ ದೆಹಲಿಯಲ್ಲಿ ಕೋವಿಡ್‌ಗೆ ಬಲಿಯಾದ ಕೇಂದ್ರ ಸಚಿವ ಸುರೇಶ ಅಂಗಡಿ ಅವರ ಮೃತದೇಹವನ್ನು ಬೆಳಗಾವಿಗೆ ಕೊಡಲಿಲ್ಲ. ಜನರಿಗೆ ಅಂತಿಮ ದರ್ಶನಕ್ಕೆ ಅವಕಾಶ ಮಾಡಿಕೊಡಲಿಲ್ಲ. ಸುರೇಶ ಅಂಗಡಿ ಅವರ ಮೃತದೇಹ ನೀಡುವಂತೆ ಅವರ ಬೀಗರಾದ ಜಗದೀಶ ಶೆಟ್ಟರ್ ಬಾಯಿಬಿಡಲಿಲ್ಲ. ರಾಜ್ಯದ ಬಿಜೆಪಿ ಸಂಸದರೂ ಕೇಳಲಿಲ್ಲ. ಕೇಂದ್ರ ಸರ್ಕಾರಕ್ಕೆ ಮಾನವೀಯತೆ ಇಲ್ಲ. ಬದುಕಿನ ಅರಿವಿಲ್ಲ ಎಂದು ಟೀಕಾ ಪ್ರಹಾರ ನಡೆಸಿದರು.
10 ವರ್ಷ ಅಧಿಕಾರ ನಡೆಸಿದವರು ಎಷ್ಟು ಮನೆ ನಿರ್ಮಿಸಿದ್ದಾರೆ ಹೇಳಲಿ. ಈಗ ಮತ್ತೆ ಭರವಸೆ ನೀಡುತ್ತಿದ್ದಾರೆ. ಬೆಂಗಳೂರಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಿದ್ದೇವೆ. 700 ಬೋರ್‌ವೆಲ್ ಬತ್ತಿಹೋಗಿದ್ದವು, ನಾವು ಸಮಸ್ಯೆ ಬಗೆಹರಿಸಿದ್ದೇವೆ. ನೀವೇನು ಮಾಡಿದ್ದೀರಿ ಎಂದ ಅವರು, ಚುನಾವಣೆ ಸಮೀಕ್ಷೆಗಳೆಲ್ಲವೂ ಸುಳ್ಳು. ಈ ಸಲ ಕೇಂದ್ರದಲ್ಲಿ ಬಿಜೆಪಿ ಅಧಿಕಾರ ಕಳೆದುಕೊಳ್ಳುತ್ತದೆ. ಹಾಲಿ ಸಂಸದರಿಗೆ ಟಿಕೆಟ್ ತಪ್ಪಿಸಿ ಬಿಜೆಪಿ 14 ಕ್ಷೇತ್ರಗಳಲ್ಲಿ ಹೊಸಬರನ್ನು ಕಣಕ್ಕಿಳಿಸಿದೆ. ಹಾಲಿ ಸಂಸದರು ಗೆಲ್ಲುವುದಿಲ್ಲ ಎಂಬ ಕಾರಣಕ್ಕೆ ಅಭ್ಯರ್ಥಿಗಳನ್ನು ಬದಲಿಸಿದ್ದಾರೆ ಎಂದು ಆರೋಪಿಸಿದರು.