ಮಲ್ಲಿಕಾರ್ಜುನ ಖರ್ಗೆ ನಿವಾಸದಲ್ಲಿ ಸಚಿವರು, ಶಾಸಕರೊಂದಿಗೆ ಡಿಕೆಶಿ ಸಭೆ: ಕಾರಣವೇನು?
ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ದೆಹಲಿಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ಸಭೆ ನಡೆಸಿದರು.
ನವದೆಹಲಿ (ಫೆ.08): ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಲು ದೆಹಲಿಗೆ ಆಗಮಿಸಿದ್ದ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ದೆಹಲಿಯ ನಿವಾಸದಲ್ಲಿ ಸಚಿವರು ಹಾಗೂ ಕಾಂಗ್ರೆಸ್ ಶಾಸಕರ ಸಭೆ ನಡೆಸಿದರು. ಹಲವು ಕ್ಷೇತ್ರಗಳ ಶಾಸಕರ ಜೊತೆ ಡಿಕೆಶಿ ಸಭೆ ನಡೆಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಗೆಲುವಿಗೆ ಅನುಸರಿಸಬೇಕಾದ ಕಾರ್ಯತಂತ್ರ ಹಾಗೂ ಟಿಕೆಟ್ ಹಂಚಿಕೆ ಕುರಿತು ಚರ್ಚೆ ನಡೆಸಿದರು ಎಂದು ಮೂಲಗಳು ತಿಳಿಸಿವೆ. ಧಾರವಾಡ, ಉತ್ತರ ಕನ್ನಡ, ಹಾವೇರಿ ಕ್ಷೇತ್ರದ ಶಾಸಕರ ಜೊತೆಗೆ ಅವರು ಸಭೆ ನಡೆಸಿದರು.
ಖರ್ಗೆ ನಿವಾಸದಲ್ಲಿ ಭರ್ಜರಿ ಭೋಜನ: ಈ ಮಧ್ಯೆ, ದೆಹಲಿಗೆ ಆಗಮಿಸಿರುವ ಕಾಂಗ್ರೆಸ್ ನಾಯಕರಿಗೆ ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ಭರ್ಜರಿ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಸಸ್ಯಾಹಾರದ ಜೊತೆಗೆ ಮಾಂಸಹಾರ ಊಟವನ್ನು ಕೂಡ ವ್ಯವಸ್ಥೆ ಮಾಡಲಾಗಿತ್ತು. ಈ ವೇಳೆ, ಮಲ್ಲಿಕಾರ್ಜುನ ಖರ್ಗೆಯವರು ಕಾಂಗ್ರೆಸ್ ನಾಯಕರ ಜೊತೆ ಲೋಕಾಭಿರಾಮವಾಗಿ ಮಾತನಾಡಿದರು. ಊಟದ ಮಧ್ಯೆ, ಸಚಿವ ಎಚ್.ಕೆ.ಪಾಟೀಲ್ ಅವರಿಗೆ ‘ನೀವು ತಿನ್ನಿ, ಸರ್’ ಎಂದು ಒತ್ತಾಯ ಮಾಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಎಚ್.ಕೆ. ಪಾಟೀಲ್, ‘ನೀವು ತಿಂದ್ರೆ ಬಹಳಷ್ಟು ಒಳ್ಳೆಯದಾಗುತ್ತೆ, ನಮಗೂ ಶಕ್ತಿ ಬರುತ್ತೆ’ ಎಂದು ಖರ್ಗೆಯನ್ನು ಕಿಚಾಯಿಸಿದರು. ಈ ವೇಳೆ, ಮಧ್ಯ ಪ್ರವೇಶಿಸಿದ ಸಚಿವ ಕೆ.ಜೆ. ಜಾರ್ಜ್, ‘ಈಗಲೇ ಎಲ್ಲ ವಸ್ತುಗಳ ಬೆಲೆ ಜಾಸ್ತಿ ಇದೆ, ಇನ್ನು ಅವರು ಶುರುಮಾಡಿದ್ರೆ ಮತ್ತಷ್ಟು ಬೆಲೆ ಏರಿಕೆಯಾಗುತ್ತೆ’ ಎಂದು ಹಾಸ್ಯ ಚಟಾಕಿ ಹಾರಿಸಿದರು.
ತೆರಿಗೆ ನ್ಯಾಯಕ್ಕಾಗಿ ಚಲೋ ದಿಲ್ಲಿ: ಸಿದ್ದು ನೇತೃತ್ವದಲ್ಲಿ #ನನ್ನತೆರಿಗೆನನ್ನಹಕ್ಕು ಹ್ಯಾಶ್‌ಟ್ಯಾಗ್ ಅಡಿ ಹೋರಾಟ
ಸಚಿವ ಮಹದೇವಪ್ಪಗೆ ಲೋಕಸಭೆ ಟಿಕೆಟ್ ನೀಡದಂತೆ ಮನವಿ: ಸಮಾಜ ಕಲ್ಯಾಣ ಸಚಿವ ಡಾ. ಎಚ್.ಸಿ. ಮಹದೇವಪ್ಪ ಅವರಿಗೆ ಲೋಕಸಭೆ ಚುನಾವಣೆಗೆ ಕಾಂಗ್ರೆಸ್ ಹೈಕಮಾಂಡ್ ಟಿಕೆಟ್ ನೀಡಬಾರದು. ಅವರನ್ನು ರಾಜ್ಯದಲ್ಲಿ ಸಚಿವರನ್ನಾಗಿ ಮುಂದುವರಿಸಿ ದಲಿತರು, ಅಲ್ಪಸಂಖ್ಯಾತರು ಹಾಗೂ ಹಿಂದುಳಿದ ವರ್ಗದವರ ಹಿತ ಕಾಪಾಡಲು ಅವಕಾಶ ಮಾಡಿಕೊಡಬೇಕು ಎಂದು ಡಾ. ಬಿ.ಆರ್. ಅಂಬೇಡ್ಕರ್ ಸಂಘದ ಅಧ್ಯಕ್ಷ ಟಿ. ವಾಸುದೇವ್ ಹಾಗೂ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸೋಮಶೇಖರ್ ಬಣ್ಣದಮನೆ ಒತ್ತಾಯಿಸಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಈ ವಿಷಯ ಪ್ರಸ್ತಾಪಿಸಿದ ಅವರು, ಡಾ. ಎಚ್.ಸಿ. ಮಹದೇವಪ್ಪ ಅವರು ದಲಿತ, ಹಿಂದುಳಿದ ವರ್ಗಗಳನ್ನು ಒಗ್ಗೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹೊತ್ತಿನಲ್ಲಿ ಕಾಂಗ್ರೆಸ್ ರಾಜ್ಯ ಹಾಗೂ ಕೇಂದ್ರ ಸಮಿತಿಗಳು ಅವರನ್ನು ಲೋಕಸಭೆ ಚುನಾವಣೆಗೆ ಕಣಕ್ಕಿಳಿಸಿ ಸಂಸತ್‌ಗೆ ಕಳುಹಿಸುವ ಕೆಲಸ ಮಾಡಬಾರದು. ಅವರು ರಾಜ್ಯದಲ್ಲೇ ಉಳಿಯಬೇಕು. ರಾಜ್ಯದ ದಲಿತ, ಹಿಂದುಳಿದ ವರ್ಗಗಳ ಕಲ್ಯಾಣ ಮಾಡಬೇಕು ಎಂದು ಆಗ್ರಹಿಸಿದರು.
ತಪ್ಪು ಮುಚ್ಚಲು ಕೇಂದ್ರದ ಮೇಲೆ ಸಿದ್ದರಾಮಯ್ಯ ಆರೋಪ: ಮಾಜಿ ಸಿಎಂ ಬೊಮ್ಮಾಯಿ
ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿಸಲು ಲೋಕಸಭೆಗೆ ಕಳುಹಿಸಲಾಯಿತು ಎಂಬ ಆಪಾದನೆ ಇದೆ. ಡಾ. ಜಿ. ಪರಮೇಶ್ವರ ಅವರನ್ನು 2013ರಲ್ಲಿ ವ್ಯೂಹ ರಚಿಸಿ ಸೋಲಿಸಲಾಯಿತು ಎಂಬ ಆಪಾದನೆಯೂ ಇದೆ. ಈಗ ಮಹದೇವಪ್ಪ ಅವರನ್ನು ಲೋಕಸಭೆಗೆ ಕಳುಹಿಸುವ ಷಡ್ಯಂತ್ರ ನಡೆಯುತ್ತಿದೆ. ಇಂತಹ ಷಡ್ಯಂತ್ರದಿಂದ ಅವರನ್ನು ಪಕ್ಷದ ಹೈಕಮಾಂಡ್ ಪಾರು ಮಾಡಬೇಕು. ಮಹದೇವಪ್ಪ ಅವರ ಬದಲಿಗೆ ಅವರ ಪುತ್ರನಿಗೆ ಟಿಕೆಟ್ ನೀಡಬೇಕು. ಒಂದು ವೇಳೆ ಮಹದೇವಪ್ಪ ಅವರಿಗೆ ಟಿಕೆಟ್ ನೀಡಿ ಕಣಕ್ಕಿಳಿಸಿದರೆ, ರಾಜ್ಯದ 28 ಲೋಕಸಭೆ ಕ್ಷೇತ್ರಗಳಲ್ಲಿ ದಲಿತ ಮತಗಳು ಚದುರಲಿವೆ. ಪಕ್ಷಕ್ಕೆ ದೊಡ್ಡ ಮಟ್ಟದ ಹೊಡೆತ ಬೀಳಲಿದೆ. ದಲಿತ ಸಂಘಟನೆಗಳು ಬೀದಿಗಿಳಿದು ಹೋರಾಟ ಕೂಡ ನಡೆಸಲಿವೆ ಎಂದರು.