ಸಿಎಂ ಸಿದ್ದು ವಿರುದ್ಧ ಅಸಮಾಧಾನ: ‘ಅತೃಪ್ತ’ ಹರಿಪ್ರಸಾದ್ ಜೊತೆ ಡಿಕೆಶಿ ಚರ್ಚೆ
ನೂತನ ಸರ್ಕಾರ ರಚನೆಯಾಗಿ ಸಚಿವ ಸ್ಥಾನ ಕೈ ತಪ್ಪಿದ ದಿನದಿಂದ ಬಹಿರಂಗವಾಗಿ ಕಾಣಿಸಿಕೊಳ್ಳದ ಬಿ.ಕೆ. ಹರಿಪ್ರಸಾದ್ ಇತ್ತೀಚೆಗೆ ನಡೆದ ಈಡಿಗ ಸಮುದಾಯದ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು.

ಬೆಂಗಳೂರು(ಸೆ.29): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಗ್ಗೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿ ಪಕ್ಷದ ನಾಯಕರೊಂದಿಗೆ ತುಸು ಅಂತರ ಕಾಪಾಡಿಕೊಂಡಿದ್ದ ವಿಧಾನಪರಿಷತ್ ಸದಸ್ಯ ಬಿ.ಕೆ.ಹರಿಪ್ರಸಾದ್ ಗುರುವಾರ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ.
ನೂತನ ಸರ್ಕಾರ ರಚನೆಯಾಗಿ ಸಚಿವ ಸ್ಥಾನ ಕೈ ತಪ್ಪಿದ ದಿನದಿಂದ ಬಹಿರಂಗವಾಗಿ ಕಾಣಿಸಿಕೊಳ್ಳದ ಬಿ.ಕೆ. ಹರಿಪ್ರಸಾದ್ ಇತ್ತೀಚೆಗೆ ನಡೆದ ಈಡಿಗ ಸಮುದಾಯದ ಕಾರ್ಯಕ್ರಮಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದರು. ಈ ಬಗ್ಗೆ ಸಚಿವರು ಸೇರಿ ಹಲವರು ಶಾಸಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರಿಂದ ಕಾಂಗ್ರೆಸ್ ವಲಯದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿತ್ತು. ಬಳಿಕ ಕೆಲ ದಿನಗಳಿಂದ ಮೌನಕ್ಕೆ ಶರಣಾಗಿರುವ ಬಿ.ಕೆ. ಹರಿಪ್ರಸಾದ್ ಅವರು ಗುರುವಾರ ಬೆಳಗ್ಗೆ ಸದಾಶಿವನಗರದ ಡಿ.ಕೆ. ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿ ಚರ್ಚಿಸಿದ್ದಾರೆ. ಇದೇ ವೇಳೆ ಸಚಿವ ಕೆ.ಎಚ್. ಮುನಿಯಪ್ಪ ಅವರು ಸಾಥ್ ನೀಡಿದರು.
ಬಿಲ್ಲವ ಹಾಸ್ಟೆಲ್ ಲೋಕಾರ್ಪಣೆ: ಹರಿಪ್ರಸಾದ್ ಜೊತೆ ಕಾಣಿಸಿಕೊಳ್ಳಬಾರದೆಂದು ಗೈರಾದ್ರ ಸಿಎಂ..?
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಶಿವಕುಮಾರ್, ಸಿದ್ದು-ಹರಿಪ್ರಸಾದ್ ಬಿಕ್ಕಟ್ಟಿನ ಬಗ್ಗೆ ಮಾತುಕತೆ ನಡೆಯಿತೆ ಎಂಬ ಬಗ್ಗೆ ಯಾವುದೇ ಮಾಹಿತಿ ನೀಡಲಿಲ್ಲ. ‘ಲೋಕಸಭೆ ಚುನಾವಣೆಗೆ ಮೊದಲು ಕೆಲ ನೇಮಕಗಳು ಮಾಡಬೇಕು. ಕಾರ್ಯಕಾರಿ ಸಮಿತಿ ಸದಸ್ಯರನ್ನು ನೇಮಕ ಮಾಡಲಾಗಿಲ್ಲ. ಜತೆಗೆ ನಿಗಮ-ಮಂಡಳಿಗಳ ನೇಮಕ ಆಗಿಲ್ಲ. ಹೀಗಾಗಿ ಇವುಗಳ ನೇಮಕ ಹಾಗೂ ಅಭ್ಯರ್ಥಿಗಳ ಆಯ್ಕೆ ವಿಚಾರದಲ್ಲಿ ಹಿರಿಯ ನಾಯಕರ ಅಭಿಪ್ರಾಯ ಪಡೆಯುತ್ತಿದ್ದೇನೆ. ಹೀಗಾಗಿ ಹರಿಪ್ರಸಾದ್ ಭೇಟಿ ಮಾಡಿದ್ದರು’ ಎಂದು ಹೇಳಿದರು.
ಇನ್ನು ಸಚಿವ ಕೆ.ಎಚ್. ಮುನಿಯಪ್ಪ ಅವರು ನಿಗಮ-ಮಂಡಳಿ ನೇಮಕವನ್ನು ಬೇಗ ಮಾಡುವಂತೆ ಸಲಹೆ ನೀಡಿದ್ದಾರೆ. ಎಲ್ಲವನ್ನೂ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಜೆಡಿಎಸ್-ಬಿಜೆಪಿ ಮೈತ್ರಿಯಿಂದ ಅಸಮಾಧಾನಗೊಂಡು ಹಲವರು ಕಾಂಗ್ರೆಸ್ ಕದ ತಟ್ಟುತ್ತಿದ್ದಾರೆ. ಈ ವಿಚಾರವಾಗಿಯೂ ಮೊದಲು ನಾನು ನನ್ನ ಪಕ್ಷದ ನಾಯಕರ ಜೊತೆ ಮಾತಾಡುತ್ತಿದ್ದೇನೆ. ಪದವೀಧರ, ಶಿಕ್ಷಕರ ಕ್ಷೇತ್ರದ ವಿಧಾನಪರಿಷತ್ ಚುನಾವಣೆಯ ಬಗ್ಗೆಯೂ ಮಾತನಾಡುತ್ತಿದ್ದೇನೆ ಎಂದರು.
ಸಿದ್ದರಾಮಯ್ಯ ವಿರುದ್ಧ ಸಿಡಿದೆದ್ದ ಹರಿಪ್ರಸಾದ್: ಕಾಂಗ್ರೆಸ್ಸಿಗರಿಂದ ಮನವೊಲಿಕೆ ಯತ್ನ
ವಿಪಕ್ಷ ನಾಯಕರ ಸೇರ್ಪಡೆ ಬಗ್ಗೆ ಸಿಎಂ ಜತೆ ಚರ್ಚೆ: ಡಿಕೆಶಿ
ಬಿಜೆಪಿ-ಜೆಡಿಎಸ್‌ನಿಂದ ಸಾಕಷ್ಟು ಮಂದಿ ನನ್ನ ಜತೆ ಪಕ್ಷ ಸೇರ್ಪಡೆಗೆ ಚರ್ಚಿಸಿದ್ದಾರೆ. ಮೈತ್ರಿ ಬಗ್ಗೆ ತುಂಬಾ ಜನರಿಗೆ ಆಕ್ರೋಶವಿದೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಆದಷ್ಟು ಬೇಗ ನಿರ್ಧಾರ ಮಾಡುತ್ತೇವೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದರು.
ಪಕ್ಷಕ್ಕೆ ಬರುವವರು ನಮಗೆ ಯಾವುದೇ ಷರತ್ತು ಹಾಕಿಲ್ಲ. ಜಗದೀಶ್ ಶೆಟ್ಟರ್ ಅವರು ಇತ್ತೀಚೆಗೆ ಇಬ್ಬರು ಮಾಜಿ ಶಾಸಕರನ್ನು ಕರೆದುಕೊಂಡು ಬಂದಿದ್ದರು. ಈ ರೀತಿ ಹಲವರು ನಮ್ಮ ಕದ ತಟ್ಟುತ್ತಿದ್ದಾರೆ. ಎಲ್ಲರ ಬಗ್ಗೆಯೂ ಹಿರಿಯ ನಾಯಕರೊಂದಿಗೆ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು.