ಬೆಂಗಳೂರು, (ಡಿ.15): ವಿಧಾನ ಪರಿಷತ್‌ನಲ್ಲಿ ಪ್ರತಿಪಕ್ಷ ವರ್ತಿಸಿದ ರೀತಿ ಇಡೀ ಭಾರತೀಯ ಸಂಸದೀಯ ವ್ಯವಸ್ಥೆಯನ್ನು ಹಾಳು ಮಾಡುವ ರೀತಿಯಲ್ಲಿದೆ. ಕಾಂಗ್ರೆಸ್‌ ಕಲ್ಲರ್‌ (ಬಣ್ಣ) ಏನೆಂಬುದು ಇಡೀ ಜಗತ್ತಿಗೆ ಜಗಜ್ಜಾಹೀರಾಯಿತು ಎಂದು ಉಪ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಕಟುವಾಗಿ ಟೀಕಿಸಿದ್ದಾರೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಉಪ ಮುಖ್ಯಮಂತ್ರಿಗಳು; ಚಿಂತಕರ ಚಾವಡಿ, ದೊಡ್ಡವರ ಮನೆಯ ಘನತೆಯನ್ನು ಕಾಂಗ್ರೆಸ್‌ ಹಾಳು ಮಾಡಿದೆ. ಇದು ಅತ್ಯಂತ ಹೇಯ ಹಾಗೂ ನಾಚಿಕೆಗೇಡಿನ ಸಂಗತಿ ಎಂದು ಹರಿಹಾಯ್ದರು.

ಭಾರತ ಸ್ವಾತಂತ್ರ್ಯ ಬಂದ ನಂತರ ದೇಶದಲ್ಲಿ ಮೊದಲ ಸರಕಾರ ರಚಿಸಿದ ಪಕ್ಷ, ರಾಜ್ಯದಲ್ಲೂ ಮೊದಲ ಸರಕಾರ ರಚಿಸಿದ ಪಕ್ಷ, ವಯಸ್ಸಿನಲ್ಲಿ ಶತಮಾನ ದಾಟಿದ ಪಕ್ಷವಾದ ಕಾಂಗ್ರೆಸ್‌ ಇವತ್ತು ಅದೇ ಪ್ರಜಾಪ್ರಭುತ್ವದ ಸಾಕ್ಷಿಯಾಗಿ ಪ್ರಜಾಪ್ರಭುತ್ವ ಹಾಗೂ ಸಂಸದೀಯ ಮೌಲ್ಯಗಳನ್ನು ಸಮಾಧಿ ಮಾಡಿದೆ. ಇದು ಅತ್ಯಂತ ನೋವಿನ ಸಂಗತಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

'ಗಲಾಟೆಗೆ ಕಾಂಗ್ರೆಸ್ಸಿಗರು ಸಿದ್ಧರಾಗಿ ಬಂದಿದ್ದರು, ಇತಿಹಾಸದಲ್ಲಿ ನಡೆಯಬಾರದ ಘಟನೆಗೆ ಕಾರಣರಾದ್ರು'

ಕಾಂಗ್ರೆಸ್‌ ಪ್ರಜಾಪ್ರಭುತ್ವಪರ ಎಂದು ಕೊಚ್ಚಿಕೊಳ್ಳುತ್ತದೆ. ಸಿದ್ದರಾಮಯ್ಯ ಅವರು ಉಪ ಮುಖ್ಯಮಂತ್ರಿ, ಮುಖ್ಯಮಂತ್ರಿ ಆಗಿದ್ದವರು. ಹಾಗಿದ್ದರೂ ಅವರು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಬೆಲೆ ನೀಡಲಿಲ್ಲ. ಸಭಾಪತಿ ಅವರ ವಿರುದ್ಧ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಯಾಗದಂತೆಯೇ ಅವರು ಕುಮ್ಮಕ್ಕು ನೀಡಿದರು. ಇದು ಖಂಡಿತಾ ಸರಿಯಲ್ಲ ಎಂದು ಹೇಳಿದರು.

ಕಾಂಗ್ರೆಸ್‌ ಹೇಳಿಕೇಳಿ ಗೂಂಡಾ ಸಂಸ್ಕೃತಿಗೆ ಹೆಸರಾದ ಪಕ್ಷ. ಅನೇಕ ವರ್ಷಗಳಿಂದ ಇದನ್ನೇ ಮಾಡಿಕೊಂಡು ಬಂದಿದೆ. ವಿಧಾನ ಪರಿಷತ್ತಿನಲ್ಲೂ ಅದನ್ನೇ ಮಾಡಿದೆ. ಈಗಾಗಲೇ ಆ ಪಕ್ಷಕ್ಕೆ ಜನರು ತಕ್ಕಶಾಸ್ತಿ ಮಾಡಿದ್ದಾರೆ. ಅದರ ಪರಿಣಾಮವೇ ಭಾರತವು ಕಾಂಗ್ರೆಸ್‌ ಮುಕ್ತ ದೇಶವಾಗುತ್ತಿದೆ. ಇದೀಗ ಕಾಂಗ್ರೆಸ್‌ ತನ್ನ ಭಂಡತನದಿಂದ ಆ ಕೆಲಸ ಇನ್ನಷ್ಟು ಬೇಗ ಆಗುವಂತೆ ತಾನೇ ನೋಡಿಕೊಳ್ಳುತ್ತಿದೆ ಎಂದು ಕಟುವಾಗಿ ಟೀಕಿಸಿದ್ದಾರೆ.

ಸಂಸದೀಯ ನಡವಳಿಕೆಯಲ್ಲಿ ಅತ್ಯಂತ ಕೆಟ್ಟ ಸಂಪ್ರದಾಯಗಳಿಗೆ ನಾಂದಿ ಹಾಡಿರುವ ಕಾಂಗ್ರೆಸ್‌ ಮುಂದೆ ಅದರ ಪರಿಣಾಮವನ್ನು ಎದುರಿಸಲಿದೆ ಎಂದಿರುವ ಡಾ.ಅಶ್ವತ್ಥನಾರಾಯಣ; ಈ ಬಗ್ಗೆ ಸರಣಿ ಟ್ವೀಟ್‌ಗಳನ್ನು ಮಾಡಿದ್ದಾರೆ.