ಕೇರಳದಲ್ಲಿ ವಿಧಾನಸಭಾ ಚುನಾವಣೆಯ ಅಬ್ಬರ ಬಿರುಸಾಗಿದ್ದು, ರಾಜಕೀಯ ಪಕ್ಷಗಳು ಗೆಲುವಿಗಾಗಿ ಇನ್ನಿಲ್ಲದ ಕಸರತ್ತು ನಡೆಸಿವೆ. ಇದರ ಮಧ್ಯೆ  ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾತಾ ಅಮೃತಾನಂದಮಯಿ ಅವರ ಆಶೀರ್ವಾದ ಪಡೆದಿದ್ದಾರೆ. 

ಕೊಲ್ಲಂ, (ಮಾ.17): ಕೇರಳ ಬಿಜೆಪಿ ಸಹ ಪ್ರಭಾರಿಯೂ ಆಗಿರುವ ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಅವರು ಬುಧವಾರದಂದು ಅಮೃತಪುರಿಗೆ ತೆರಳಿ ಮಾತಾ ಅಮೃತಾನಂದಮಯಿ ಅವರ ಆಶೀರ್ವಾದ ಪಡೆದರು.

ಕೊಲ್ಲಂ ಸಮೀಪವಿರುವ ಆಶ್ರಮಕ್ಕೆ ಭೇಟಿ ನೀಡಿದ ಡಿಸಿಎಂ, ಅಮ್ಮ ಅವರ ಅನುಗ್ರಹ ಪಡೆದ ನಂತರ ಪ್ರಚಲಿತ ಸಮಸ್ಯೆಗಳು, ಕರ್ನಾಟಕದಲ್ಲಿ ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡಿರುವ ಸುಧಾರಣೆಗಳ ಬಗ್ಗೆ ಅಮ್ಮನವರ ಜತೆ ಮಾಹಿತಿ ವಿನಿಮಯ ಮಾಡಿಕೊಂಡರು. ಜತೆಗೆ, ಯುವಜನರ ಸಮಸ್ಯೆಗಳು, ಪ್ರಚಲಿತ ಸಾಮಾಜಿಕ ಸಮಸ್ಯೆಗಳ ಬಗ್ಗೆ ಅವರ ಜತೆ ಚರ್ಚೆ ನಡೆಸಿದರು.

ಮತ್ತೆ ಪಂಚ ರಾಜ್ಯ ಚುನಾವಣೆ ಸಂಬಂಧಿ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಬಳಿಕ ಮಾಧ್ಯಮಗಳ ಜತೆ ಮಾತನಾಡಿದ ಡಿಸಿಎಂ ಅವರು; "ಮಾತಾ ಅಮೃತಾನಂದಮಯಿ ಅವರ ಆಶ್ರಮಕ್ಕೆ ಬರಬೇಕು ಎಂಬುದು ನನ್ನ ಬಹದಿನಗಳ ಕನಸಾಗಿತ್ತು. ಆ ಕನಸು ಇಂದು ನನಸಾಗಿದೆ. ಇಂದು ಆಶ್ರಮಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದೆ. ಅಮ್ಮನವರು ಬೆಂಗಳೂರಿಗೆ ಬಂದಾಗಲೆಲ್ಲ ನಾನು ಭೇಟಿಯಾಗಿ ಆಶೀರ್ವಾದ ಪಡೆಯುತ್ತಿದ್ದೆ. ಶಿಕ್ಷಣ, ಸಾಮಾಜಿಕ, ಆಹಾರ, ವಸತಿ, ಆರೋಗ್ಯ ಜೀವನೋಪಾಯ, ಪರಿಸರ ಇತ್ಯಾದಿ ಕ್ಷೇತ್ರಗಳಲ್ಲಿ ಅವರು ಅಮೋಘ ಸೇವೆ ಮಾಡುತ್ತಾ ಸಮಾಜಕ್ಕೆ ಒಳ್ಳೆಯದು ಮಾಡುತ್ತಿದ್ದಾರೆ. ಜತೆಗೆ, ಪ್ರಕೃತಿ ವಿಕೋಪದಂಥ ಕ್ಲಿಷ್ಟ ಸಂದರ್ಭಗಳಲ್ಲೂ ಅಮ್ಮನವರು ಮೊದಲು ನೆರವಿಗೆ ಧಾವಿಸುತ್ತಾರೆ ಎಂದರು.

ಜನರಿಗೆ ಧರ್ಮಮಾರ್ಗವನ್ನು ತೋರುವುದು ಮಾತ್ರವಲ್ಲದೆ, ಜನರ ಬದುಕನ್ನು ಸಬಲೀಕರಣ ಮಾಡುವಲ್ಲಿಯೂ ಅಮ್ಮ ಮಹತ್ವದ ಕೆಲಸ ಮಾಡುತ್ತಿದ್ದಾರೆ. ಕೇರಳ ಮಾತ್ರವಲ್ಲದೆ, ದೇಶಾದ್ಯಂತ ಮತ್ತು ಜಗತ್ತಿ ಉದ್ದಗಲಕ್ಕೂ ಅವರು ಸೇವೆ ಮಾಡುತ್ತಿದ್ದಾರೆ ಎಂದರು ಡಿಸಿಎಂ.