ದಾವಣಗೆರೆ ದಕ್ಷಿಣ ಕ್ಷೇತ್ರದ ಚುನಾವಣಾ ಕಣದಿಂದ ಸಾದಿಕ್ ಪೈಲ್ವಾನರು ಹಿಂದೆ ಸರಿದರೂ, ನಾವು 10ಕ್ಕೂ ಹೆಚ್ಚು ಜನ ಇನ್ನೂ ಸ್ಪರ್ಧೆಯಲ್ಲಿದ್ದೇವೆ ಎಂದು ಮುಸ್ಲಿಂ ಮುಖಂಡ ಯು.ಎಂ. ಮನ್ಸೂರ್ ಅಲಿ ಹೇಳಿದ್ದಾರೆ. ಸಾದಿಕ್ ಅವರ ಈ ನಡೆಯಿಂದ ಸಮಾಜಕ್ಕೆ ಬೇಸರ. ಕಾಂಗ್ರೆಸ್‌ಗೆ ಮತ ಹಾಕದಿರಲು ನಿರ್ಧರಿಸಲಾಗಿದೆ .
ದಾವಣಗೆರೆ (ಮಾ.28): ದಾವಣಗೆರೆ ದಕ್ಷಿಣ ಕ್ಷೇತ್ರದ ಕಣದಿಂದ ಸಾದಿಕ್ ಪೈಲ್ವಾನರು ಹಿಂದೆ ಸರಿದರೂ, ನಾವು 10ಕ್ಕೂ ಹೆಚ್ಚು ಜನ ಇನ್ನೂ ಕಣದಲ್ಲಿದ್ದೇವೆ ಎಂದು ಮುಸ್ಲಿಂ ಸಮುದಾಯದ ಮುಖಂಡ ಯು.ಎಂ. ಮನ್ಸೂರ್ ಅಲಿ ಹೇಳಿದ್ದಾರೆ.
ನಗರದ ಪಾಲಿಕೆ ಕಚೇರಿಗೆ ಶುಕ್ರವಾರ ತಮ್ಮ ಚಿಹ್ನೆ ಪಡೆಯಲು ಆಗಮಿಸಿದ್ದ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವೆಲ್ಲರೂ ಸಾದಿಕ್ ಪೈಲ್ವಾನರಿಗೆ ಬೆಂಬಲ ಸೂಚಿಸಿದ್ದೆವು. ಗುರುವಾರ ಮಧ್ಯರಾತ್ರಿ 1 ಗಂಟೆವರೆಗೂ ಸಾದಿಕ್ ಪೈಲ್ವಾನ್ ನನ್ನ ಜೊತೆಗೆ ಇದ್ದರು ಎಂದರು.
ನಾವೆಲ್ಲರೂ ಶುಕ್ರವಾರ ಬೆಳಗ್ಗೆಯಿಂದಲೇ ಪ್ರಚಾರ ಶುರು ಮಾಡೋಣವೆಂದು ಮಾತನಾಡಿಕೊಂಡು, ಪ್ಲ್ಯಾನ್ ಮಾಡಿದ್ದೆವು. ಅಲ್ಪಸಂಖ್ಯಾತ ಸಮುದಾಯದ ಪಕ್ಷೇತರ ಅಭ್ಯರ್ಥಿಗಳು, ಎಸ್‌ಡಿಪಿಐ ಅಭ್ಯರ್ಥಿ ಜೊತೆಗೆ ಮಾತನಾಡಿದ್ದೆವು. ಎಲ್ಲರೂ ಸಾದಿಕ್ ಪೈಲ್ವಾನರನ್ನು ಬೆಂಬಲಿಸೋಣ ಅಂತಾ ಅಂದುಕೊಂಡಿದ್ದೆವು ಎಂದು ತಿಳಿಸಿದರು.
ಸಾದಿಕ್ ಪೈಲ್ವಾನರು ಶುಕ್ರವಾರ ಮಧ್ಯಾಹ್ನ ಮುಖ್ಯಮಂತ್ರಿ ಜೊತೆಗೆ ಕುಳಿತಿರುವ ಫೋಟೋ ನೋಡಿದಾಗಲೇ ಬೆಂಗಳೂರಿಗೆ ಹೋಗಿದ್ದಾರೆಂಬ ವಿಚಾರ ಗೊತ್ತಾಯಿತು. ಸಾದಿಕ್ ಪೈಲ್ವಾನರು ಬೆಂಗಳೂರಿಗೆ ಹೋಗಿ, ಸಿಎಂ, ಡಿಸಿಎಂಗೆ ಭೇಟಿ ಮಾಡಿದರೂ ನಮ್ಮ ಸಮಾಜ ಒಂದಾಗಿದೆ. ನಾವೆಲ್ಲರೂ ಒಂದಾಗಿದ್ದೇವೆ. ಇವತ್ತೇ (ಶುಕ್ರವಾರ) ನಾವು ಸಭೆ ಮಾಡಿ, ನಾವೆಲ್ಲಾ ನಿರ್ಧಾರ ಮಾಡುತ್ತೇವೆ. ಪಕ್ಷದಲ್ಲಿರುವ ನಾಯಕರು, ರಾಜ್ಯದ ನಾಯಕರಿಂದ ಕರೆ ಬಂದಿತ್ತು. ನಾನು ಸಮಾಜದ ಪರವಾಗಿದ್ದು, ಕಡೇ ಕ್ಷಣದವರೆಗೂ ಇರುತ್ತೇನೆ. ನನ್ನ ಚಿಹ್ನೆ ಬೆಂಕಿ ಪೊಟ್ಟಣವಾಗಿದೆ ಎಂದು ಸ್ಪಷ್ಟಪಡಿಸಿದರು.
ಸಮಾಜ ಸೋತಿಲ್ಲ, 2 ವರ್ಷದಿಂದ ಕಾಂಗ್ರೆಸ್ ಪಕ್ಷದ ಟಿಕೆಟ್‌ಗಾಗಿ ಕೂಗಿದ್ದೆವು. ಯಾವುದೇ ರಾಜ್ಯ ನಾಯಕರು ಬಂದರೂ ಗೋ ಬ್ಯಾಕ್ ಅಂತಿತ್ತು. ಈಗಲೂ ಸಿಎಂ, ಡಿಸಿಎಂ ಬಂದರೂ ಗೋ ಬ್ಯಾಂಕ್ ಅನ್ನುತ್ತೆ ಸಮಾಜ. ನಾವಲ್ಲ, ನಮ್ಮ ಸಮಾಜದ್ದು ನೋಡುತ್ತೀರಿ. ಸಾದಿಕ್ ಪೈಲ್ವಾನವರು ಹೋಗಿದ್ದು ಸಮಾಜಕ್ಕೆ ಪ್ಲಸ್ ಪಾಯಿಂಟ್. ನಾವು 22 ಅಭ್ಯರ್ಥಿಗಳಿದ್ದರೂ ಸಾದಿಕ್‌ರ ಬೆಂಬಲಕ್ಕೆ ನಿಂತಿದ್ದೆವು. ಎಲ್ಲವನ್ನೂ ಈಗಲೇ ಹೇಳಿದರೆ ನಮ್ಮ ತಂತ್ರಕ್ಕೆ ಪ್ರತಿತಂತ್ರ ಹೆಣೆಯುತ್ತಾರೆ. ಮುಂದೆ ಗೊತ್ತಾಗಲಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ ಮತ ಹಾಕದೆ, ಬೇರೆ ಅಭ್ಯರ್ಥಿಗಳಿಗೆ ಮತ ಹಾಕುವುದು ನಿಶ್ಚಿತ. ರಾಜಕೀಯವೆಂದಾಗ ತಂತ್ರ, ಕುತಂತ್ರ ಸಹಜ. ಈಗ ಅವರು ಮಾಡಿದ್ದಾರೆಂದರೆ, ನಾವೂ ಸಹ ಮುಂದೆ ಏನು ಮಾಡಬೇಕೋ ಮಾಡುತ್ತೇವೆ. ಸಾದಿಕ್ ಪೈಲ್ವಾನರ ನಡೆಯಿಂದ ಯುವಕರು ಬೇಜಾರಾಗಿದ್ದಾರೆ. ಈ ಜ್ವಾಲೆ ಕಡಿಮೆ ಆಗುವುದಿಲ್ಲ. ಇನ್ನೂ ಹೆಚ್ಚುತ್ತದೆ. ಯಾವುದೇ ಕಾರಣಕ್ಕೂ ಪಕ್ಷಕ್ಕೆ ಮತದಾನ ಮಾಡುವುದಿಲ್ಲ ಎಂದಿದ್ದಾರೆ. ಏ.9ಕ್ಕೆ ಗೊತ್ತಾಗುತ್ತದೆ.
- ಯು.ಎಂ. ಮನ್ಸೂರ್ ಅಲಿ, ಪಕ್ಷೇತರ ಅಭ್ಯರ್ಥಿ, ಮುಸ್ಲಿಂ ಮುಖಂಡ.


