ಕಾಂಗ್ರೆಸ್‌ನಲ್ಲಿ ಮಾತ್ರ ದಲಿತರು ಸಿಎಂ, ಪಿಎಂ ಆಗಲು ಸಾಧ್ಯ: ಮಾಜಿ ಶಾಸಕ ಬಾಲಕೃಷ್ಣ
ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ದಲಿತರೊಬ್ಬರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಲು ಅವಕಾಶವಿದ್ದು, ಉಳಿದ ರಾಜಕೀಯ ಪಕ್ಷಗಳದ್ದು ಕೇವಲ ಬೂಟಾಟಿಕೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು.
ರಾಮನಗರ (ಜ.04): ಕಾಂಗ್ರೆಸ್ ಪಕ್ಷದಲ್ಲಿ ಮಾತ್ರ ದಲಿತರೊಬ್ಬರು ಮುಖ್ಯಮಂತ್ರಿ ಹಾಗೂ ಪ್ರಧಾನ ಮಂತ್ರಿ ಹುದ್ದೆ ಅಲಂಕರಿಸಲು ಅವಕಾಶವಿದ್ದು, ಉಳಿದ ರಾಜಕೀಯ ಪಕ್ಷಗಳದ್ದು ಕೇವಲ ಬೂಟಾಟಿಕೆ ಎಂದು ಮಾಜಿ ಶಾಸಕ ಎಚ್.ಸಿ.ಬಾಲಕೃಷ್ಣ ವ್ಯಂಗ್ಯವಾಡಿದರು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ನಡೆದ ಬಿಡದಿ - ಕೂಟಗಲ್ ಬ್ಲಾಕ್ ಕಾಂಗ್ರೆಸ್ ಪರಿಶಿಷ್ಟಜಾತಿ ವಿಭಾಗದ ಪದಾಧಿಕಾರಿಗಳ ನೇಮಕಾತಿ ಪತ್ರ ವಿತರಣಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಎಂದೆಂದಿಗೂ ದಲಿತರ ಪರವಾಗಿರುವ ಪಕ್ಷ. ಆದ್ದರಿಂದ ದಲಿತರು ಪಕ್ಷಕ್ಕೆ ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದರು.
ಸತತ 50 ವರ್ಷಗಳ ಕಾಲ ಕಾಂಗ್ರೆಸ್ ಪಕ್ಷಕ್ಕೆ ಸೇವೆ ಸಲ್ಲಿಸಿದ ಪ್ರತಿಫಲವಾಗಿ ಮಲ್ಲಿಕಾರ್ಜುನ ಖರ್ಗೆಯವರು ಎಐಸಿಸಿ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಇದು ನಮ್ಮೆಲ್ಲರಿಗೂ ಹೆಮ್ಮೆ ತರುವ ವಿಷಯ. ಖರ್ಗೆ ಅವರಿಗೆ ಪ್ರಧಾನಿಯಾಗುವ ಅವಕಾಶವೂ ಇದೆ ಎಂದು ಹೇಳಿದರು. ದೇಶದಲ್ಲಿ ಕಾಂಗ್ರೆಸ್ ಪಕ್ಷ ಗಟ್ಟಿಯಾಗಿದೆ ಎಂಬುದನ್ನು ರಾಹುಲ್ ಗಾಂಧಿಯವರ ಭಾರತ್ ಜೋಡೋ ಯಾತ್ರೆಯೇ ಸಾಕ್ಷಿಯಾಗಿದೆ. ಕಾಂಗ್ರೆಸ್ ಪಕ್ಷದ ನಾಯಕತ್ವ ವಹಿಸಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಶಕ್ತಿ ತುಂಬುವ ಅಗತ್ಯವಿದೆ. ಇದಕ್ಕಾಗಿ ರಾಜ್ಯದಲ್ಲಿಯೂ ಕಾಂಗ್ರೆಸ್ ಬಲಿಷ್ಠವಾಗಿ ಸಂಘಟನೆಗೊಳ್ಳಬೇಕಿದೆ ಎಂದರು.
ಎಚ್‌ಡಿಕೆ ನಡವಳಿಕೆಗೆ ಬೇಸತ್ತು ಜೆಡಿಎಸ್ ಬಿಟ್ಟೆ: ಬಾಲಕೃಷ್ಣ
ಮಾಗಡಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿ ಸಮುದಾಯದವರು ನನ್ನ ಜೊತೆಯಿದ್ದಾರೆ. ತಾವೆಲ್ಲರೂ ಹೃದಯ ಶ್ರೀಮಂತಿಕೆ ಬೆಳಸಿಕೊಂಡು ನಿಮ್ಮ ವಿರೋಧಿಗಳನ್ನೂ ಒಟ್ಟುಗೂಡಿಸಿಕೊಂಡು ಹೋದಾಗ ಮಾತ್ರ ಕಾಂಗ್ರೆಸ್ ಪಕ್ಷದ ಸಂಘಟನೆ ಸದೃಢವಾಗಲಿದೆ ಎಂದು ತಿಳಿಸಿದರು. ಕೆಪಿಸಿಸಿ ಸದಸ್ಯ ಕೆ. ರಮೇಶ್ ಮಾತನಾಡಿ, ರಾಜ್ಯದಲ್ಲಿ ಡಿ.ಕೆ. ಶಿವಕುಮಾರ್ ಅವರಿಗೆ ಮುಖ್ಯಮಂತ್ರಿಯಾಗುವ ಅವಕಾಶ ಇದೆ. ಅವರ ಕೈ ಬಲಪಡಿಸಬೇಕಾದರೆ ಮಾಗಡಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿ ಬಾಲಕೃಷ್ಣ ಅವರು ಗೆಲುವು ಸಾಧಿಸಬೇಕು. ಇದಕ್ಕಾಗಿ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರು ಒಟ್ಟುಗೂಡಿ ಪಕ್ಷ ಸಂಘಟನೆ ಮಾಡಬೇಕು ಎಂದರು.
ಬಿಡದಿ-ಕೂಟಲ್ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಾಣಕಲ್ ನಟರಾಜು ಮಾತನಾಡಿ, ಚುನಾವಣೆಗಳಲ್ಲಿ ಮುಖಂಡರು ತಮ್ಮ ತಮ್ಮ ಬೂತ್‌ಗಳಲ್ಲಿ ಬಹುಮತ ಪಡೆದರೆ ಮಾತ್ರ ಪಕ್ಷದಲ್ಲಿ ನೀವು ಗುರುತಿಸಿಕೊಳ್ಳಲು ಸಾಧ್ಯ. ಹಾಗಾಗಿ ಪ್ರತಿ ಮನೆಮನೆಗಳಿಗೆ ತೆರಳಿ ಪಕ್ಷದ ಸಂಘಟನೆ ಮಾಡಬೇಕು ಎಂದು ಸಲಹೆ ನೀಡಿದರು. ಬಿಡದಿ ಪುರಸಭೆ ಸದಸ್ಯ ಇಟ್ಟಮಡು ರಾಮಚಂದ್ರಯ್ಯ ಮಾತನಾಡಿ, ಮಾಜಿ ಪ್ರಧಾನಿ ಇಂದಿರಾಗಾಂಧಿಯವರು ನಮ್ಮ ಜನಾಂಗಕ್ಕೆ ಕೊಟ್ಟಯೋಜನೆಗಳನ್ನು ನಾವು ಮರೆಯುವಂತಿಲ್ಲ, ಹರಿಜನರು ಒಗ್ಗಟ್ಟಿನಿಂದ ನಮ್ಮ ಪಕ್ಷ ಇಂದಿರಾಗಾಂದಿ ಪಕ್ಷ ಎಂಬ ಮನೋಭಾವವನ್ನು ಬೆಳೆಸುವ ಕೆಲಸ ಮಾಡಬೇಕು. ನಮ್ಮ ನಮ್ಮಲ್ಲಿ ಗೊಂದಲಗಳು ಮಾಡಿಕೊಳ್ಳದೆ ಮುಂದಿನ ಚುನಾವಣೆಯಲ್ಲಿ ಬಾಲಕೃಷ್ಣ ಅವರ ಗೆಲುವಿಗೆ ಒಟ್ಟಾಗಿ ಶ್ರಮಿಸಿ ಎಂದು ಮನವಿ ಮಾಡಿದರು.
ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಡಾ. ದೀಪಾ ಮುನಿರಾಜು ಮಾತನಾಡಿದರು. ಜಿಲ್ಲಾ ಎಸ್ಸಿ ವಿಭಾಗದ ಅಧ್ಯಕ್ಷ ನರಸಿಂಹಯ್ಯ, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಚ್.ಎನ್.ಅಶೋಕ್ (ತಮ್ಮಾಜಿ), ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ಯರೇಹಳ್ಳಿ ಮಂಜು, ತಾಪಂ ಮಾಜಿ ಅಧ್ಯಕ್ಷ ಜಯಚಂದ್ರ, ಕೆಡಿಪಿ ಸದಸ್ಯೆ ಕಾವ್ಯ, ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಅನಿಲ್ ಜೋಗಿಂದರ್, ಬಿಡದಿ ಹೋಬಳಿ ಘಟಕದ ಅಧ್ಯಕ್ಷ ಶೇಖರ್, ಮುಖಂಡರಾದ ಮಾಡಬಾಳ್ ಜಯರಾಮ್, ಶಿವಶಂಕರ್, ಗೋಪಿ, ಕೆಂಚನಕುಪ್ಪೆ ರಾಮಣ್ಣ, ಸಿದ್ದರಾಜು, ಕ್ಯಾಸಾಪುರ ಶಿವಣ್ಣ ಮತ್ತಿತರರು ಹಾಜರಿದ್ದರು. ಕಾರ್ಯಕ್ರಮದಲ್ಲಿ ಸಿದ್ದೇಶ್ವರ ಶ್ರೀಗಳಿಗೆ ಶ್ರದ್ಧಾಂಜಲಿ ಅರ್ಪಿಸಲಾಯಿತು.
ಬೊಂಬೆ ಉದ್ಯಮದ ಬಗ್ಗೆ ಪ್ರಧಾನಿಗೆ ವಿಶೇಷ ಒಲವು: ಕೇಂದ್ರ ಸಚಿವ ಫಗ್ಗನ್ ಸಿಂಗ್
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಯೋಗದ ಮೇಲೆ ಅಧಿಕಾರ ನಡೆಸುತ್ತಿದ್ದು, ಅಂತ್ಯವಾಗುವ ದಿನಗಳು ಸನಿಹದಲ್ಲಿವೆ. ಪಕ್ಷದಲ್ಲಿ ನೀಡಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸಿ ಉತ್ತಮ ಸಂಘಟನೆ ಮಾಡಿ ಕಾಂಗ್ರೆಸನ್ನು ಅಧಿಕಾರಕ್ಕೆ ತರಬೇಕು. ಆಗ ನಿಮಗೂ ಉತ್ತಮ ಸ್ಥಾನಗಳು ಸಿಗಲಿವೆ.
- ಎಚ್.ಸಿ. ಬಾಲಕೃಷ್ಣ, ಮಾಜಿ ಶಾಸಕ