ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದ ಬಿಜೆಪಿ: ಪುರಂದೇಶ್ವರಿಗೆ ಸ್ಪೀಕರ್ ಹುದ್ದೆ?
ಸ್ಪೀಕರ್ ಹುದ್ದೆ ನೀಡುವಂತೆ ಟಿಡಿಪಿ, ಜೆಡಿಯು ಬೇಡಿಕೆ ಇಟ್ಟಿದ್ದವಾದರೂ ಅದನ್ನು ಬಿಡಲು ಬಿಜೆಪಿ ಸಿದ್ಧವಿರಲಿಲ್ಲ. ಹೀಗಾಗಿಯೇ ಕೌಟುಂಬಿಕ ಬಾಣ ಪ್ರಯೋಗಿಸುವ ಮೂಲಕ ಹುದ್ದೆಯನ್ನು ತನ್ನಲ್ಲೇ ಉಳಿಸಿಕೊಂಡು, ಟಿಡಿಪಿಯನ್ನೂ ಓಲೈಸುವ ಕೆಲಸ ಮಾಡಿದೆ. ಈ ಕಾರಣಕ್ಕಾಗಿಯೇ ಪುರಂದೇಶ್ವರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿಲ್ಲ ಎನ್ನಲಾಗಿದೆ.
ನವದೆಹಲಿ(ಜೂ.11): ಸಚಿವ ಸಂಪುಟದ ಪ್ರಮುಖ ಖಾತೆಗಳನ್ನು ತನ್ನಲ್ಲೇ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಬಿಜೆಪಿ, ಇದೀಗ ಭಾರೀ ಬೇಡಿಕೆಯಲ್ಲಿರುವ ಲೋಕಸಭೆಯ ಸ್ಪೀಕರ್ ಹುದ್ದೆಯನ್ನೂ ತನ್ನಲ್ಲೇ ಉಳಿಸಿಕೊಳ್ಳಲು ಭರ್ಜರಿ ಬಾಣ ಪ್ರಯೋಗಿಸಿದ್ದು, ಅದು ಯಶಸ್ವಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಎಲ್ಲವೂ ಅಂದುಕೊಂಡಂತೆ ನಡೆದರೆ ಲೋಕಸಭೆಯ ನೂತನ ಸ್ಪೀಕರ್ ಹುದ್ದೆಯನ್ನು ಹಾಲಿ ರಾಜಮಂಡಿ ಕ್ಷೇತ್ರದ ಸಂಸದೆ ಮತ್ತು ಆಂಧ್ರಪ್ರದೇಶ ಬಿಜೆಪಿ ರಾಜ್ಯಾಧ್ಯಕ್ಷೆ ಡಿ.ಪುರಂದೇಶ್ವರಿಗೆ ನೀಡುವ ಸಾಧ್ಯತೆ ಇದೆ.
ಇಂಥದ್ದೊಂದು ಯೋಜನೆ ಮೂಲಕ ಬಿಜೆಪಿ ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆದಿದೆ ಎಂದು ವಿಶ್ಲೇಷಿಸಲಾಗಿದೆ. ಕಾರಣ, ಸ್ಪೀಕರ್ ಹುದ್ದೆ ನೀಡುವಂತೆ ಟಿಡಿಪಿ, ಜೆಡಿಯು ಬೇಡಿಕೆ ಇಟ್ಟಿದ್ದವಾದರೂ ಅದನ್ನು ಬಿಡಲು ಬಿಜೆಪಿ ಸಿದ್ಧವಿರಲಿಲ್ಲ. ಹೀಗಾಗಿಯೇ ಕೌಟುಂಬಿಕ ಬಾಣ ಪ್ರಯೋಗಿಸುವ ಮೂಲಕ ಹುದ್ದೆಯನ್ನು ತನ್ನಲ್ಲೇ ಉಳಿಸಿಕೊಂಡು, ಟಿಡಿಪಿಯನ್ನೂ ಓಲೈಸುವ ಕೆಲಸ ಮಾಡಿದೆ. ಈ ಕಾರಣಕ್ಕಾಗಿಯೇ ಪುರಂದೇಶ್ವರಿ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಲಾಗಿಲ್ಲ ಎನ್ನಲಾಗಿದೆ.
ಮೊದಲ ದಿನವೇ ಮೋದಿ ಬಂಪರ್ ಕೊಡುಗೆ ಘೋಷಣೆ..!
ಪುರಂದೇಶ್ವರಿ ಟಿಡಿಪಿ ಸಂಸ್ಥಾಪಕ ಎನ್.ಟಿ.ರಾಮರಾವ್ ಅವರ ಪುತ್ರಿ. ಪುರಂದೇಶ್ವರಿ ಅವರ ಸೋದರಿಯನ್ನೇ ಚಂದ್ರಬಾಬು ನಾಯ್ಡು ಮದುವೆಯಾಗಿರುವುದು. ಹೀಗಾಗಿ ಪುರಂದೇಶ್ವರಿ ಆಯ್ಕೆಯನ್ನು ನಾಯ್ಡು ಕೂಡಾ ವಿರೋಧಿಸುವುದಿಲ್ಲ. ಜೊತೆಗೆ ಹುದ್ದೆಯೂ ಬಿಜೆಪಿಯಲ್ಲೇ ಉಳಿಯುತ್ತದೆ ಎನ್ನುವುದು ಬಿಜೆಪಿ ತಂತ್ರ ಎನ್ನಲಾಗಿದೆ.
ಪುರಂದೇಶ್ವರಿ ಆಂಧ್ರಪ್ರದೇಶದಲ್ಲಿ ಬಿಜೆಪಿ, ಟಿಡಿಪಿ ಮತ್ತು ಜನಸೇನಾ ಪಕ್ಷದ ನಡುವೆ ಸಮನ್ವಯ ಸಾಧಿಸಿ ಅಭೂತಪೂರ್ವ ಗೆಲುವು ಸಾಧಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪುರಂದೇಶ್ವರಿ ನಾಯಕತ್ವದಲ್ಲಿ ಬಿಜೆಪಿ ಆಂಧ್ರಪ್ರದೇಶದಲ್ಲಿ ವಿಧಾನಸಭೆಯಲ್ಲಿ ಸ್ಪರ್ಧಿಸಿದ್ದ 10 ಸ್ಥಾನಗಳಲ್ಲಿ 8 ಗೆಲುವು ಕಂಡರೆ, ಲೋಕಸಭೆಯಲ್ಲಿ ಸ್ಪರ್ಧಿಸಿದ್ದ 6 ಸ್ಥಾನಗಳ ಪೈಕಿ ಮೂರರಲ್ಲಿ ಗೆಲುವು ಕಂಡಿದೆ.