ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಅಧಿವೇಶನ ಮುಗಿಯುವುದರೊಳಗೆ ಮುಂದಿನ ನಡೆ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. 

ಬೆಂಗಳೂರು (ಫೆ.11): ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿರುವ ಅರಸೀಕೆರೆ ಶಾಸಕ ಶಿವಲಿಂಗೇಗೌಡ, ಅಧಿವೇಶನ ಮುಗಿಯುವುದರೊಳಗೆ ಮುಂದಿನ ನಡೆ ಬಗ್ಗೆ ಒಂದು ತೀರ್ಮಾನ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ನನಗೆ ಹೇಳದೆ ಕಾರ್ಯಕರ್ತರ ಸಭೆ ನಡೆಸಲಾಗಿದೆ. ಫೆ.12ರಂದು ಸಮಾವೇಶ ಮಾಡಲಾಗುತ್ತಿದೆ. ಆ ಸಭೆಯಲ್ಲಿ ಏನಾಗಲಿದೆಯೋ ಅದರ ಆಧಾರದ ಮೇಲೆ ನಾನು ಕಾರ್ಯಕರ್ತರ ಸಭೆ ನಡೆಸಿ ಒಂದು ನಿರ್ಧಾರಕ್ಕೆ ಬರುತ್ತೇನೆ. ನಾನು ಬಿಜೆಪಿಗೆ ಸೇರುವುದಿಲ್ಲ. ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದೇನೆ ಎಂದರು.

ಅರಸೀಕೆರೆ ಕ್ಷೇತ್ರದಲ್ಲಿ ಸಮಾವೇಶ ನಡೆಸಲಾಗುತ್ತಿದೆ. ನಾನು ಆ ಕ್ಷೇತ್ರದ ಶಾಸಕನಾಗಿದ್ದು, ನನಗೂ ಮಾಹಿತಿ ನೀಡಬೇಕಿತ್ತು. ಒಬ್ಬ ವ್ಯಕ್ತಿ ನನಗೇ ಟಿಕೆಟ್‌ ಎಂದು ಹೇಳುತ್ತಾ ಓಡಾಡುತ್ತಿದ್ದಾರೆ. ಇದನ್ನು ಗಮನಿಸಿದರೆ ನಾಮ್‌ಕೇವಾಸ್ತೆಗೆ ನನ್ನನ್ನು ಕರೆಯುತ್ತಿದ್ದಾರೆ ಎನ್ನಿಸುತ್ತದೆ. ಮಾತಿಗೆ ಮಾತ್ರ ಜೆಡಿಎಸ್‌ನಲ್ಲಿಯೇ ಉಳಿಯಿರಿ ಎನ್ನುತ್ತಾರೆ. ಕೊನೆ ಗಳಿಗೆಯಲ್ಲಿ ಏನಾದರೂ ಎಡವಟ್ಟಾದರೆ ಹೇಗೆ ಎಂದು ಪ್ರಶ್ನಿಸಿದ ಅವರು, ನಾನು ಬಿಜೆಪಿಗೆ ಸೇರುವುದಿಲ್ಲ. ಇನ್ನೂ ಜೆಡಿಎಸ್‌ನಲ್ಲಿಯೇ ಇದ್ದೇನೆ. ಯಾವುದೋ ಒಂದು ಘಟನೆ ನಡೆದ ಕಾರಣ ಸುಮ್ಮನಾಗಿದ್ದೇನೆ. ಈ ಬಗ್ಗೆ ಪಕ್ಷದ ವರಿಷ್ಠರಿಗೂ ಗೊತ್ತಿದೆ ಎಂದು ಹೇಳಿದರು.

ನಾನು ಕಾಂಗ್ರೆಸ್‌ನಲ್ಲಿ 50 ಸಾವಿರ ಲೀಡಲ್ಲಿ ಗೆಲ್ತೀನಿ: ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ದಿನಕ್ಕೊಂದು ರಾಜಕೀಯ ಬೆಳವಣಿಗೆಗಳಾಗುತ್ತಿದ್ದು, ಕಳೆದ ಹದಿನೈದು ವರ್ಷಗಳಿಂದ ಜೆಡಿಎಸ್‌ನಲ್ಲಿದ್ದುಕೊಂಡು ಶಾಸಕರಾಗಿರುವ ಶಿವಲಿಂಗೇಗೌಡರು, ಈಗ ಕಾಂಗ್ರೆಸ್‌ ಸೇರಲು ಹೊಸ್ತಿಲಲ್ಲಿ ನಿಂತಿರುವ ಸಂದರ್ಭದಲ್ಲೇ ಶಿವಲಿಂಗೇಗೌಡರದ್ದು ಎನ್ನಲಾದ ಆಡಿಯೋವೊಂದು ಲೀಕ್‌ ಆಗಿದೆ.

ಬಿಜೆಪಿ, ಕಾಂಗ್ರೆಸ್‌ ಆಡಳಿತದಲ್ಲಿ ಜನರ ಬದುಕಿನ ಜೊತೆ ಚೆಲ್ಲಾಟ: ಎಚ್‌ಡಿಕೆ

ಶಿವಲಿಂಗೇಗೌಡರು ಜೆಡಿಎಸ್‌ ಬಿಡುತ್ತಾರಂತೆ, ಕಾಂಗ್ರೆಸ್‌ ಸೇರುತ್ತಾರಂತೆ ಎನ್ನುವ ಅಂತೆ ಕಂತೆಗಳಿಗೆ ಪುಷ್ಠಿ ನೀಡುವ ಆಡಿಯೋ ಇದಾಗಿದೆ. ಆ ಆಡಿಯೋದಲ್ಲಿ ಮಾತನಾಡಿರುವ ಶಿವಲಿಂಗೇಗೌಡರು ‘ಯಾವ ನನ್‌ ಮಗ ಅಡ್ಡ ಬಂದ್ರೂ ನಾನು ಕಾಂಗ್ರೆಸ್‌ನಲ್ಲಿ 50 ಸಾವಿರ ಲೀಡಲ್ಲಿ ಗೆಲ್ತೀನಿ. ಜೆಡಿಎಸ್‌ನಿಂದ ಯಾರೇ ನಿಂತರೂ ನನ್ನ ಗೆಲುವಿಗೆ ಅಡ್ಡಿಯಿಲ್ಲ. ಜನ ದೊಡ್ಡವರ ಮುಖ ನೋಡಿ ಓಟು ಹಾಕಲ್ಲ’ ಎಂದು ಹೇಳಿದ್ದಾರೆ. ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.