ಬಾಂಬೆ ಬಾಯ್ಸ್‌ ಮರಳಿ ಕಾಂಗ್ರೆಸ್‌ ಸೇರುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಹೆಸರೂ ಮುನ್ನೆಲೆಗೆ ಬಂದಿದೆ. ಹೆಬ್ಬಾರ್‌ ನಡೆಯ ಬಗ್ಗೆ ಈಗ ಜಿಲ್ಲೆಯಾದ್ಯಂತ ಭಾರಿ ಕುತೂಹಲ ಉಂಟಾಗಿದೆ. 

ವಸಂತಕುಮಾರ ಕತಗಾಲ

ಕಾರವಾರ (ಆ.18): ಬಾಂಬೆ ಬಾಯ್ಸ್‌ ಮರಳಿ ಕಾಂಗ್ರೆಸ್‌ ಸೇರುವ ವಿಚಾರ ಪ್ರಸ್ತಾಪವಾಗುತ್ತಿದ್ದಂತೆ ಯಲ್ಲಾಪುರ ಬಿಜೆಪಿ ಶಾಸಕ ಶಿವರಾಮ ಹೆಬ್ಬಾರ್‌ ಹೆಸರೂ ಮುನ್ನೆಲೆಗೆ ಬಂದಿದೆ. ಹೆಬ್ಬಾರ್‌ ನಡೆಯ ಬಗ್ಗೆ ಈಗ ಜಿಲ್ಲೆಯಾದ್ಯಂತ ಭಾರಿ ಕುತೂಹಲ ಉಂಟಾಗಿದೆ. ಹಾಗಂತ ಸ್ವತಃ ಶಿವರಾಮ ಹೆಬ್ಬಾರ್‌ ಈ ಸುದ್ದಿಯನ್ನು ಸ್ಪಷ್ಟವಾಗಿ ನಿರಾಕರಿಸುವುದೂ ಇಲ್ಲ. ಯಾವುದೇ ಕಾರಣಕ್ಕೆ ಬಿಜೆಪಿ ತೊರೆಯುವುದಿಲ್ಲ ಎಂದು ಖಡಕ್‌ ಆಗಿ ಹೇಳುವುದೂ ಇಲ್ಲ. ಇದು ಶಿವರಾಮ ಹೆಬ್ಬಾರ್‌ ಅವರ ಮೇಲೆ ಇನ್ನಷ್ಟು ಅನುಮಾನಗಳು ಮೂಡಲು ಕಾರಣವಾಗಿದೆ.

ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸಮ್ಮಿಶ್ರ ಸರ್ಕಾರವನ್ನು ಕೆಡವಿ ಬಿಜೆಪಿಗೆ ಬಂದ 17 ಶಾಸಕರು ಭಾರಿ ಮಹತ್ವಾಕಾಂಕ್ಷೆ ಹೊಂದಿರುವುದೂ ಸುಳ್ಳಲ್ಲ. ಬಿಜೆಪಿ ಅಧಿಕಾರಕ್ಕೆ ಬಂದಾಗ ಬಾಂಬೆ ಬಾಯ್ಸ್‌ನ ಬಹುತೇಕ ಶಾಸಕರು ಸಚಿವರಾಗಿದ್ದು ಇದಕ್ಕೆ ಪುಷ್ಟಿನೀಡುತ್ತದೆ. ಬಿಜೆಪಿ ಸರ್ಕಾರದಲ್ಲಿ ಸಚಿವರಾಗಿದ್ದ ಇವರು ಈಗ ಮಾಜಿ ಸಚಿವರಾಗಿದ್ದಾರೆ. ಕೆಲವರು ಮಾಜಿ ಶಾಸಕರೂ ಆಗಿದ್ದಾರೆ. ಈಗ ಅಧಿಕಾರ ಇಲ್ಲದೆ ಇರುವುದರಿಂದ ಇವರಲ್ಲಿ ಚಡಪಡಿಕೆ ಆರಂಭವಾಗಿರುವುದಂತೂ ಹೌದು. ಆಡಳಿತ ಪಕ್ಷಕ್ಕೆ ಹೋದರೆ ಕ್ಷೇತ್ರದ ಅಭಿವೃದ್ಧಿಗೆ ಹಣವನ್ನಾದರೂ ತರಬಹುದು ಎಂಬ ನಿರೀಕ್ಷೆಯೂ ಇವರಲ್ಲಿ ಇರಬಹುದು.

ಆನ್‌ಲೈನ್‌ ಮೋಸದ ಜಾಲ: ಕಾರಿನ ಆಸೆಗೆ 11 ಲಕ್ಷ ಹಣ ಕಳೆದುಕೊಂಡ ಕಾಫಿನಾಡಿನ ಯುವಕ

ಕಾಂಗ್ರೆಸ್‌ಗೆ ಯಾರೇ ಬಂದರೂ ಹಿಂದಿನ ಬೇಂಚ್‌ನಲ್ಲಿ ಕುಳಿತುಕೊಳ್ಳಬೇಕು ಎಂದು ಗೃಹ ಸಚಿವ ಪರಮೇಶ್ವರ ಹೇಳಿಕೆ ನೀಡಿದ್ದಾರೆ. ಹೀಗಾಗಿ ಬಿಜೆಪಿಯಲ್ಲಿ ಮುಂದಿನ ಸಾಲಿನಲ್ಲಿದ್ದ ಇವರು ಕಾಂಗ್ರೆಸ್‌ ಗೆ ಹೋಗಿ ಹಿಂದಿನ ಸಾಲಿನಲ್ಲಿ ಕುಳಿತುಕೊಳ್ಳಲು ಮನಸ್ಸು ಮಾಡಿಯಾರೆ ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.

ಜೊತೆಗೆ ಹೆಬ್ಬಾರ್‌ ಈ ಬಾರಿ ಕಡಿಮೆ ಮತಗಳ ಅಂತರದಿಂದ ಗೆದ್ದಿದ್ದಾರೆ. ಮತ್ತೆ ಕಾಂಗ್ರೆಸ್‌ ಸೇರಿ ಚುನಾವಣೆ ಎದುರಿಸುವುದು ಸುಲಭವಲ್ಲ. ಕಾಂಗ್ರೆಸ್‌ ನ ಗ್ಯಾರಂಟಿಯೂ ಈಗ ಕೆಲಸ ಮಾಡಲಾರದು. ಏಕೆಂದರೆ ಯಾವುದೇ ಪಕ್ಷದ ಶಾಸಕರಿದ್ದರೂ ಗ್ಯಾರಂಟಿಯ ಲಾಭ ಜನತೆಗೆ ಸಿಕ್ಕೇ ಸಿಗುತ್ತದೆ. ಸದ್ಯಕ್ಕೆ ಶಿವರಾಮ ಹೆಬ್ಬಾರ್‌ ಅವರು ಸ್ಪಷ್ಟವಾಗಿ ಏನನ್ನೂ ಹೇಳುತ್ತಿಲ್ಲ. ಹಾರಿಕೆಯ ಉತ್ತರ ಕೊಡುತ್ತಿದ್ದಾರೆ. ಮುಂದಿನ ಬೆಳವಣಿಗೆಯ ಬಗ್ಗೆ ಭಾರಿ ಕುತೂಹಲ ಉಂಟಾಗಿದೆ.

ಸೌಹಾರ್ದ ಸಂಬಂಧ: ಕಾಂಗ್ರೆಸ್‌ ಸರ್ಕಾರ ಬರುತ್ತಿದ್ದಂತೆ ಬೇರೆ ಎಲ್ಲ ಕ್ಷೇತ್ರಗಳಲ್ಲಿ ಅಧಿಕಾರಿಗಳು ಬದಲಾಗಿದ್ದಾರೆ. ಆದರೆ ಯಲ್ಲಾಪುರ ಕ್ಷೇತ್ರದಲ್ಲಿ ಮಾತ್ರ ಹಿಂದೆ ಇದ್ದ ಅಧಿಕಾರಿಗಳೇ ಮುಂದುವರಿದಿದ್ದಾರೆ. ಇದು ಶಿವರಾಮ ಹೆಬ್ಬಾರ್‌ ಹಾಗೂ ಕಾಂಗ್ರೆಸ್‌ ಮುಖಂಡರ ನಡುವೆ ಇರುವ ಸೌಹಾರ್ದ ಸಂಬಂಧಕ್ಕೆ ನಿದರ್ಶನ ಎಂದೇ ಹೇಳಲಾಗುತ್ತಿದೆ.

ಹುಬ್ಬಳ್ಳಿಯಲ್ಲಿ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಿ: ಜಗದೀಶ್‌ ಶೆಟ್ಟರ್‌

ಈಗ ಕಾಂಗ್ರೆಸ್‌ಗೆ ಹೋಗುವಂತಹ ಯಾವುದೇ ಸಂದರ್ಭ ಎದುರಾಗಿಲ್ಲ. ನಾನು ಏನೇ ಮಾಡುವುದಿದ್ದರೂ ಜನರನ್ನು ಕೇಳದೇ ಮಾಡುವುದಿಲ್ಲ.
-ಶಿವರಾಮ ಹೆಬ್ಬಾರ್‌ ಯಲ್ಲಾಪುರ ಶಾಸಕ