*  ಸಿದ್ದರಾಮಯ್ಯ ಅವರೇ, ನೀವು ಈ ರೀತಿ ಮಾತನಾಡಿ ಕರ್ನಾಟಕದ ಮರ್ಯಾದೆ ಕಳೆಯೋ ಕೆಲಸ ಮಾಡಬೇಡಿ  *  ನೀವು ಇದೇ ರೀತಿ ಮಾತನಾಡಿದರೆ ಮೆಂಟಲ್‌ ಗಿರಾಕಿ ಎಂದು ಜನ ಹೇಳುತ್ತಾರೆ*  ನಿಮ್ಮ ಹೇಳಿಕೆಗಳಿಗೆ ಆಧಾರ ಪ್ರಬುದ್ಧತೆ ಇರಬೇಕು

ನವದೆಹಲಿ(ಮೇ.31): ಆರೆಸ್ಸೆಸ್‌ನವರು ಭಾರತೀಯ ಮೂಲದವರಲ್ಲ ಎಂಬ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ತೀವ್ರ ಕಿಡಿಕಾರಿದ್ದಾರೆ. 

‘ಸಿದ್ದರಾಮಯ್ಯ ಅವರೇ ನಿಮಗೆ ಸೋನಿಯಾ ಗಾಂಧಿ ಅವರದ್ದು ಯಾವ ಮೂಲ ಅಂಥ ಹೇಳೋ ಧೈರ್ಯ ಇದೆಯಾ? ಎಂದು ತಿರುಗೇಟು ನೀಡಿದ್ದಾರೆ. ಸತ್ತು ಹೋಗಿದ್ದ ಆರ್ಯ-ದ್ರಾವಿಡ ವಿಷಯಕ್ಕೆ ಸಿದ್ದರಾಮಯ್ಯ ಮತ್ತೆ ಜೀವ ತುಂಬಿದ್ದಾರೆ. ಐರಿಷ್‌ ಪಾದ್ರಿ ಇಂಥದ್ದೊಂದು ವಾದ ಮಂಡಿಸಿದ್ದರು. ಉತ್ತರ ಹಾಗೂ ದಕ್ಷಿಣದವರ ಡಿಎನ್‌ಎ ಒಂದೇ. ಬಣ್ಣ, ಜಾತಿ ಇಟ್ಟುಕೊಂಡು ವಾದ ಮಾಡಲು ಆಗುತ್ತದೆಯೇ? ಯಾವ ಆಧಾರ ಇಟ್ಟುಕೊಂಡು ಆರ್ಯ, ದ್ರಾವಿಡ ಎಂದು ವಾದಿಸುತ್ತಿದ್ದಾರೆ? ನಿಮ್ಮ ದೃಷ್ಟಿಯಲ್ಲಿ ವಾಲ್ಮೀಕಿ ಯಾರು? ಮಹಾಭಾರತ ರಚಿಸಿದ ವ್ಯಾಸ ಯಾರು? ಚಂದ್ರಗುಪ್ತ ಮೌರ್ಯನನ್ನು ಯಾರಿಗೆ ಹೋಲಿಸ್ತೀರಿ? ಎಂದು ಪ್ರಶ್ನಿಸಿದ್ದಾರೆ.

ಕಾಳಿದಾಸ, ಅಹಲ್ಯಬಾಯಿ ಹೋಳ್ಕರ್‌ರನ್ನು ಯಾರಿಗೆ ಸೇರಿಸ್ತೀರಿ? ನಿಮ್ಮದು ಅರೆಬರೆ ತಿಳಿವಳಿಕೆ, ಎಡಬಿಡಗಿಂತನ. ಆರ್ಯ ಎನ್ನುವುದು ಜನಾಂಗ ಸೂಚಕವಲ್ಲ. ಸೀತೆ ರಾಮನನ್ನು ಆರ್ಯ ಎಂದು ಕರೆದಿದ್ದರು. ಆರ್ಯ ಅಂದ್ರೆ ಶ್ರೇಷ್ಠ ಅಂಥ ಅರ್ಥ ಎಂದು ಕಿಡಿಕಾರಿದರು. ಇದೇ ವೇಳೆ, ನೀವೇಕೆ ನಿಮ್ಮ ಹೆಸರಲ್ಲಿ ಸಿದ್ದ’ರಾಮ’ಯ್ಯ ಅಂತ ಇಟ್ಟುಕೊಂಡಿದ್ದೀರಿ? ಎಂದು ಪ್ರಶ್ನಿಸಿದರು.

ಪಠ್ಯ ಹೊರ ಬರುವುದಕ್ಕೆ ಮುಂಚೆ ಜನಿವಾರವೋ, ಉಡುದಾರವೋ, ಶಿವದಾರವೋ‌ ಎಂದು ನೋಡುವುದು ತಪ್ಪು: ಸಿ.ಟಿ.ರವಿ

ಮೆಂಟಲ್‌ ಗಿರಾಕಿ: 

ಆರೆಸ್ಸೆಸ್‌ಗೆ ನೆಹರು ಅವರೇ ಸರ್ಟಿಫಿಕೇಟ್‌ ಕೊಟ್ಟಿದ್ದಾರೆ, ಚೀನಾ ಯುದ್ಧದಲ್ಲಿ ಮಾಡಿದ ನೆರವಿಗೆ ಆರೆಸ್ಸೆಸ್‌ಗೆ ಗಣರಾಜ್ಯೋತ್ಸವ ಪರೇಡ್‌ನಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿತ್ತು. ನೂರಾರು ವಿದ್ಯಾಸಂಸ್ಥೆಗಳನ್ನು ಕಟ್ಟಿಆರೆಸ್ಸೆಸ್‌ನವರು ವಿದ್ಯೆ ನೀಡುತ್ತಿದ್ದಾರೆ. ದೇಶದ ಪ್ರಧಾನಿ, ರಾಷ್ಟ್ರಪತಿ ಆರೆಸ್ಸೆಸ್‌ನಿಂದ ಬಂದವರು ಎಂದರು.

‘ಸಿದ್ದರಾಮಯ್ಯ ಅವರೇ, ನೀವು ಈ ರೀತಿ ಮಾತನಾಡಿ ಕರ್ನಾಟಕದ ಮರ್ಯಾದೆ ಕಳೆಯೋ ಕೆಲಸ ಮಾಡಬೇಡಿ. ನೀವು ಇದೇ ರೀತಿ ಮಾತನಾಡಿದರೆ ಮೆಂಟಲ್‌ ಗಿರಾಕಿ ಎಂದು ಜನ ಹೇಳುತ್ತಾರೆ. ಯಾರೋ ಹೇಳಿಕೊಟ್ಟಿದ್ದನ್ನು ನೀವು ಹೇಳಬೇಡಿ. ನಿಮ್ಮ ಹೇಳಿಕೆಗಳಿಗೆ ಆಧಾರ ಪ್ರಬುದ್ಧತೆ ಇರಬೇಕು. ಆರೆಸ್ಸೆಸ್‌ ಸಂಸ್ಕಾರ ಕೊಡೋ ಕೆಲಸ ಮಾಡುತ್ತದೆ. ಮಹಮದ್‌ ಅಲಿ ಜಿನ್ನಾ ಕೂಡ ಕಾಂಗ್ರೆಸ್‌ ಮೂಲದವರು. ಆದರೂ ದೇಶ ಇಬ್ಭಾಗ ಮಾಡಿದ್ರಲ್ಲ’ ಎಂದು ಕಿಡಿಕಾರಿದರು ಸಿ.ಟಿ.ರವಿ.