ಬೆಂಗಳೂರು(ಡಿ.21): ಬಿಜೆಪಿಗೆ ಕಾಂಗ್ರೆಸ್‌ ಶತ್ರು. ನಿದ್ದೆಗಣ್ಣಿನಲ್ಲೂ ಎಬ್ಬಿಸಿ ಕೇಳಿದರೂ ನಾವು ಕಾಂಗ್ರೆಸ್‌ ನಮ್ಮ ವಿರೋಧಿ ಎಂದೇ ಹೇಳುತ್ತೇವೆ. ಆದರೆ, ರಾಜಕೀಯದಲ್ಲಿ ಶತ್ರುವಿನ ಶತ್ರು ಮಿತ್ರ ಎಂಬ ಪರಿಭಾಷೆಯಿದೆ. ಅದರಂತೆ ಜೆಡಿಎಸ್‌ ಆಗಾಗ ನಮಗೆ ಹತ್ತಿರ ಬರುತ್ತದೆ ಮತ್ತೆ ದೂರ ಹೋಗುತ್ತದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದ್ದಾರೆ. ಬಿಜೆಪಿಗೆ ಎಂದಿಗೂ ಕಾಂಗ್ರೆಸ್‌ ಹತ್ತಿರವಾಗಿಲ್ಲ. ಅದು ನಮ್ಮ ಶತ್ರುಪಕ್ಷ. ಅದನ್ನು ಮಣಿಸಲು ಬೇಕಾದ ತಂತ್ರಗಾರಿಕೆ ನಾವು ಆಗಾಗ ಮಾಡುತ್ತೇವೆ ಎಂದಿದ್ದಾರೆ.

ಕಾಂಗ್ರೆಸ್‌ನ ಹಿರಿಯ ನಾಯಕರೆಲ್ಲಾ ತಮ್ಮ ಸೋಲಿಗೆ ತಮ್ಮದೇ ಪಕ್ಷದ ಕಾರ್ಯಕರ್ತರು, ಮುಖಂಡರನ್ನೇ ಹೊಣೆ ಎನ್ನತೊಡಗಿದ್ದಾರೆ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಒಳೇಟಿನಿಂದ ಸೋಲುಂಟಾಯಿತು ಎಂದಿದ್ದಾರೆ. ಇದಕ್ಕೂ ಮೊದಲು ಡಾ.ಜಿ.ಪರಮೇಶ್ವರ್‌, ಮಲ್ಲಿಕಾರ್ಜುನ ಖರ್ಗೆ ಅವರಂತಹ ನಾಯಕರು ಇದೇ ಆರೋಪ ಮಾಡಿದ್ದರು. ವಿಚಿತ್ರವೆಂದರೆ, ಇಂತಹ ಆರೋಪ ಮಾಡುತ್ತಿರುವ ನಾಯಕರೆಲ್ಲರೂ ಅಧಿಕಾರಕ್ಕೆ ಅಂಟಿಕೊಂಡವರೇ ಆಗಿದ್ದಾರೆ ಎಂದರು.

ಸಿದ್ದರಾಮಯ್ಯ ಸಮಾಜವಾದಿಯಲ್ಲ, ಮಜವಾದಿ: ಸಿ ಟಿ ರವಿ ಲೇವಡಿ

ಗ್ರಾಮ ಪಂಚಾಯತ್‌ ಚುನಾವಣೆ ವೇಳೆ ಹಿರಿಯ ನಾಯಕರಿಂದ ಇಂತಹ ಹೇಳಿಕೆ ಅಗತ್ಯವಿರಲಿಲ್ಲ. ತಮ್ಮ ಸೋಲಿಗೆ ಪಕ್ಷವೇ ಕಾರಣ ಎಂದು ಹೇಳುವುದರಿಂದ ಅವರ ಪಕ್ಷದ ಕಾರ್ಯಕರ್ತರ ಉತ್ಸಾಹ ಮತ್ತಷ್ಟುಕುಗ್ಗಲಿದೆ ಎಂದು ಹೇಳಿದರು.
ತಮಿಳುನಾಡು ರಾಜ್ಯ ಒಬ್ಬ ಪ್ರಧಾನಿಯನ್ನು ಸೃಷ್ಟಿಸಲಿ ಎಂಬ ಹೇಳಿಕೆಯನ್ನು ನಾನು ಸಂಕುಚಿತ ಮನೋಭಾವದಿಂದ ಹೇಳಿಕೆ ನೀಡಿಲ್ಲ. ಆ ರಾಜ್ಯದಿಂದಲೂ ರಾಷ್ಟ್ರೀಯ ನಾಯಕತ್ವ ಬರಲೆಂಬ ದೃಷ್ಟಿಯಿಂದ ಹೇಳಿದ್ದೇನೆ. ರಾಜಾಜಿ, ಕಾಮರಾಜ್‌, ಸರ್ವಪಲ್ಲಿ ರಾಧಾಕೃಷ್ಣರಂತಹ ವ್ಯಕ್ತಿಗಳನ್ನು ತಮಿಳುನಾಡು ನೀಡಿದೆ. ಸ್ವಾತಂತ್ರ್ಯ ಬಳಿಕ ತಮಿಳುನಾಡು ಸಚಿವರನ್ನು ನೀಡಿದೆಯೇ ಹೊರತು ರಾಷ್ಟ್ರೀಯ ನಾಯಕರನ್ನು ಕೊಡಲಿಲ್ಲ. ರಾಷ್ಟ್ರೀಯ ನಾಯಕತ್ವ ಬರಲಿ ಎಂಬ ಉದ್ದೇಶದಿಂದ ಹೇಳಿದ್ದೇನೆ ಎಂದು ಸಮರ್ಥಿಸಿಕೊಂಡರು.

ಹಿಂಸಾಚಾರ ಘಟನೆ ಷಡ್ಯಂತ್ರ:

ಐಫೋನ್‌ ಘಟಕದಲ್ಲಿ ನಡೆದಿರುವ ಘಟನೆಯಿಂದಾಗಿ 470 ಕೋಟಿ ರು. ಸಾಮಗ್ರಿಗಳು ಹಾನಿಯಾಗಿವೆ. ಇದು ಸಹಜವಾದ ಘಟನೆಯಲ್ಲ, ಉದ್ದೇಶಪೂರ್ವಕವಾಗಿ ನಡೆದಿರಬಹುದು. ನೌಕರರು ದೂರು ಕೊಡದೆ, ಧರಣಿ ನಡೆಸದೇ ದಿಢೀರ್‌ ಹಾನಿ ಮಾಡುತ್ತಾರೆ ಎಂದರೆ ಏನನ್ನು ಸೂಚಿಸುತ್ತದೆ. ನೌಕರರ ಹಿಂಸಾಚಾರ ಅರ್ಥ ಮಾಡಿಕೊಳ್ಳುವುದಕ್ಕೆ ಮಾನಸಿಕ ತಜ್ಞರ ಅಗತ್ಯ ಇಲ್ಲ. ಇದರ ಹಿಂದೆ ಷಡ್ಯಂತ್ರ ಇದೆ. ವೇತನ ಕೇಳಲು ಬೇರೆ ದಾರಿಗಳಿದ್ದವು ಎಂದರು.