* ಬಿ.ವೈ.ವಿಜಯೇಂದ್ರ ಮುಖ್ಯಮಂತ್ರಿ ಆಗಬೇಕು ಎಂಬ ಕೂಗು* ಪ್ರಜಾಪ್ರಭುತ್ವದಲ್ಲಿ ಮತದಾರನೇ ಅಂತಿಮ ತೀರ್ಪು ನೀಡ್ತಾನೆ* ಯೋಗ್ಯತೆ ಇದ್ದವರು ಮೇಲೆ ಬಂದರೂ ಯೋಗ ಇರಬೇಕಲ್ಲ
ಬೆಂಗಳೂರು(ಜೂ.09): ಯೋಗ್ಯತೆ ಇರುವವರು ಅನೇಕರು ಇದ್ದಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಾರ್ಮಿಕವಾಗಿ ಹೇಳಿದ್ದಾರೆ.
ಪಕ್ಷದ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪುತ್ರ ಬಿ.ವೈ.ವಿಜಯೇಂದ್ರ ಅವರು ಮುಖ್ಯಮಂತ್ರಿ ಆಗಬೇಕು ಎಂಬ ಕೂಗಿನ ಬಗ್ಗೆ ಪ್ರತಿಕ್ರಿಯಿಸಿರುವ ರವಿ, ‘ಪ್ರಜಾಪ್ರಭುತ್ವದಲ್ಲಿ ಮತದಾರನೇ ಅಂತಿಮ ತೀರ್ಪು ನೀಡುತ್ತಾನೆ. ಯಾರಾರಯರ ಹಣೆಯಲ್ಲಿ ಏನು ಬರೆದಿದೆಯೋ ಎಂಬುದು ಗೊತ್ತಿರಲ್ಲ. ರಾಜಕಾರಣದಲ್ಲಿ ಅನೇಕರು ಗದ್ದುಗೆ ಏರಿರುವ ಉದಾಹರಣೆಗಳಿವೆ. ಕೆಲವರು ಅನಿರೀಕ್ಷಿತವಾಗಿ ಗದ್ದುಗೆ ಏರಿರುವುದೂ ಇದೆ’ ಎಂದರು.
ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಯೋಗ್ಯತೆ ಇರುವವರು ಅನೇಕರು ಇದ್ದಾರೆ. ಯೋಗ್ಯತೆ ಇದ್ದವರು ಮೇಲೆ ಬಂದರೂ ಯೋಗ ಇರಬೇಕಲ್ಲ. ಯೋಗ ಇದ್ದವರು ಕೆಲವೊಮ್ಮೆ ಮುಖ್ಯಮಂತ್ರಿಯಾಗುತ್ತಾರೆ’ ಎಂದು ತಿಳಿಸಿದರು.
ಬಿಜೆಪಿಯಲ್ಲೀಗ ವಿಜಯೇಂದ್ರ ಸಿಎಂ ಕೂಗು, ಪ್ರಮುಖ ನಾಯಕರಿಂದ ಬ್ಯಾಟಿಂಗ್!
ಸಿಎಂ ಸೇರಿ ಯಾವುದೇ ಹುದ್ದೆ ಬಗ್ಗೆ ತಲೆಕೆಡಿಸಿಕೊಂಡಿಲ್ಲ: ವಿಜಯೇಂದ್ರ
ಹಾಸನ: ನನಗೆ ಪಕ್ಷ ನೀಡಿದ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವ ಮೂಲಕ ಉತ್ತಮ ಕೆಲಸ ಮಾಡುತ್ತಿದ್ದೇನೆ. ಮುಂದಿನ ಮುಖ್ಯಮಂತ್ರಿ ಹಾಗೂ ಇತರ ಯಾವುದೇ ಹುದ್ದೆಗಳ ಬಗ್ಗೆ ತಲೆಕೆಡಿಸಿಕೊಂಡಿಲ್ಲ. ಇನ್ನೂ ಸಹ ನಾನು ಶಾಸಕನಲ್ಲವಾದ್ದರಿಂದ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಬಿ.ವೈ ವಿಜಯೇಂದ್ರ ಸ್ಪಷ್ಟಪಡಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಚಿವರಾದ ನಾರಾಯಣಗೌಡ ಹಾಗೂ ಮುರುಗೇಶ್ ನಿರಾಣಿ ಅವರು ‘ವಿಜಯೇಂದ್ರ ರಾಜ್ಯದ ಮುಂದಿನ ಮುಖ್ಯಮಂತ್ರಿ ಆಗಲಿದ್ದಾರೆ’ ಎಂಬ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ’’ನಾನು ಪ್ರಾಮಾಣಿಕವಾಗಿ ಹೇಳುತ್ತಿದ್ದೇನೆ’’ ನಿರಾಣಿ ಹಾಗೂ ನಾರಾಯಣಗೌಡ ಅವರು ಹಿರಿಯರಿದ್ದಾರೆ. ಅವರ ಪ್ರೀತಿ ವಿಶ್ವಾಸಕ್ಕೆ ನಾನು ಋುಣಿಯಾಗಿದ್ದೇನೆ. ಆದರೆ ನಾನು ಇನ್ನೂ ರಾಜಕೀಯದಲ್ಲಿ ಅಂಬೆಗಾಲಿಡುತ್ತಿದ್ದೇನೆ. ಪಕ್ಷ ಕಟ್ಟುವ ಕೆಲಸ ಮಾಡಲು ಶ್ರಮಿಸುತ್ತಿದ್ದೇನೆ ಎಂದು ಹೇಳಿದರು.
ನಾನು ಪಕ್ಷದ ಕಾರ್ಯದರ್ಶಿಯಾಗಿ ಹಾಗೂ ಇದೀಗ ನಿರ್ವಹಿಸುತ್ತಿರುವ ಉಪಾಧ್ಯಕ್ಷ ಸ್ಥಾನವನ್ನು ಹಾಗೂ ಪಕ್ಷದ ಸಂಘಟನೆ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತಿದ್ದೇನೆ. ಇನ್ನೂ ಸಹ ನಾನು ಶಾಸಕನಲ್ಲ ಆದ್ದರಿಂದ ಇಂತಹ ಹೇಳಿಕೆಗಳನ್ನು ಒಪ್ಪುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ನಾನು ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಸ್ಪರ್ಧಿಸಬೇಕು ಎಂಬ ಎಲ್ಲಾ ವಿಚಾರದ ಕುರಿತು ಪಕ್ಷ ತೀರ್ಮಾನ ಮಾಡಲಿದೆ. ಅದರಂತೆ ನಾನು ನಡೆದುಕೊಳ್ಳುತ್ತೇನೆ ಎಂದು ವಿಜಯೇಂದ್ರ ತಿಳಿಸಿದರು.
