‘ಶೋಭಕ್ಕ ನಿಮ್ಮ ಪಕ್ಷದವರಂತೆ ನಾವು 40 ಪರ್ಸೆಂಟ್‌ ಕಮಿಷನ್‌ ಪಡೆದಿಲ್ಲ. ನಿಮ್ಮ ಕಮಿಷನ್‌ ಸರ್ಕಾರದ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌, ನೆಹರೂ ಓಲೇಕಾರ್‌, ಮಾಡಾಳ್‌ ವಿರೂಪಾಕ್ಷಪ್ಪ, ಎಚ್‌. ವಿಶ್ವನಾಥ್‌, ಗೂಳಿಹಟ್ಟಿ ಶೇಖರ್‌ ಅವರೇ ಸಾಕ್ಷಿ ನೀಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. 

ಬೆಂಗಳೂರು (ಏ.23): ‘ಶೋಭಕ್ಕ ನಿಮ್ಮ ಪಕ್ಷದವರಂತೆ ನಾವು 40 ಪರ್ಸೆಂಟ್‌ ಕಮಿಷನ್‌ ಪಡೆದಿಲ್ಲ. ನಿಮ್ಮ ಕಮಿಷನ್‌ ಸರ್ಕಾರದ ಬಗ್ಗೆ ಬಸನಗೌಡ ಪಾಟೀಲ್‌ ಯತ್ನಾಳ್‌, ನೆಹರೂ ಓಲೇಕಾರ್‌, ಮಾಡಾಳ್‌ ವಿರೂಪಾಕ್ಷಪ್ಪ, ಎಚ್‌. ವಿಶ್ವನಾಥ್‌, ಗೂಳಿಹಟ್ಟಿ ಶೇಖರ್‌ ಅವರೇ ಸಾಕ್ಷಿ ನೀಡಿದ್ದಾರೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ತಿರುಗೇಟು ನೀಡಿದ್ದಾರೆ. ಸದಾಶಿವನಗರ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ಟಿಕೆಟ್‌ ಅರ್ಜಿ ಜತೆಗೆ ಕಾಂಗ್ರೆಸ್‌ ಪಕ್ಷ 2 ಲಕ್ಷ ರು. ಸ್ವೀಕರಿಸಿದೆ. ಹೀಗಾಗಿ ಚುನಾವಣಾ ಆಯೋಗವು 223 ಕಾಂಗ್ರೆಸ್‌ ಅಭ್ಯರ್ಥಿಗಳ ನಾಮಪತ್ರಗಳನ್ನು ತಿರಸ್ಕಾರ ಮಾಡಬೇಕು ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು. ನಾವು ಅರ್ಜಿ ಶುಲ್ಕ 5 ಸಾವಿರ ರು. ಹಾಗೂ ಪಕ್ಷದ ಕಟ್ಟಡಕ್ಕೆ ದೇಣಿಗೆಯಾಗಿ ಅಧಿಕೃತವಾಗಿ 2 ಲಕ್ಷ ರು. ಸಂಗ್ರಹಿಸಿದ್ದೇವೆ. ಮೊದಲು ನಿಮ್ಮ ಸರ್ಕಾರದಲ್ಲಿನ 40 ಪರ್ಸೆಂಟ್‌ ಕಮಿಷನ್‌ ಬಗ್ಗೆ ಮಾತನಾಡಿ ಎಂದು ತಿರುಗೇಟು ನೀಡಿದರು.

ಅಮಿತ್‌ ಶಾ ಜತೆ ಚುನಾವಣೆ ತಂತ್ರ ಚರ್ಚೆ: ಬಿ.ಎಸ್‌.ಯಡಿಯೂರಪ್ಪ

ಬಿಎಸ್‌ವೈ ಮುಗಿಸಲು ಶೋಭಾ ಸಂಚು: ಮಾಜಿ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರನ್ನು ಮುಗಿಸಲು ಪಿತೂರಿ ನಡೆಸುತ್ತಿರುವವರ ಜತೆ ಶೋಭಾ ಕರಂದ್ಲಾಜೆ ಸೇರಿ ಸಂಚು ರೂಪಿಸಿದ್ದಾರೆ. ಇದು ಈಗ ಜಗಜ್ಜಾಹೀರಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ನಲ್ಲಿ ಡಿ.ಕೆ. ಶಿವಕುಮಾರ್‌, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಗಿಸಲು ಎಂ.ಬಿ. ಪಾಟೀಲ್‌ ಷಡ್ಯಂತ್ರ ರೂಪಿಸಿದ್ದಾರೆಂಬ ಶೋಭಾ ಕರಂದ್ಲಾಜೆ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದರು.

ಯಡಿಯೂರಪ್ಪ ಅವರನ್ನು ಮುಗಿಸಲು ಬಿಜೆಪಿಯಲ್ಲಿನ ಕೆಲವರು ಪಿತೂರಿ ನಡೆಸಿದರು. ಅವರ ಜತೆ ಸೇರಿ ಶೋಭಾ ಕರಂದ್ಲಾಜೆಯೂ ಸಂಚು ರೂಪಿಸಿದ್ದಾರೆ. ಯಾರು ಯಾರನ್ನು ಮುಗಿಸಲು ಯತ್ನಿಸಿದ್ದಾರೆ ಎಂದು ಜಗದೀಶ್‌ಶೆಟ್ಟರ್‌, ಲಕ್ಷ್ಮಣ ಸವದಿ ಹೇಳಿದ್ದಾರೆ ಎಂದರು. ಇನ್ನು ಕರ್ನಾಟಕದಲ್ಲಿ ಚುನಾವಣೆ ಹಿನ್ನೆಲೆ ಈಗಾಗಲೇ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿದ್ದು, ಪರಿಶೀಲನೆ ಕೂಡ ಮುಗಿದಿದೆ. ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ ಏಪ್ರಿಲ್‌ 24 ಆಗಿದೆ. ಮೇ 10ರಂದು ಒಂದೇ ಹಂತದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 13ರಂದು ಮತ ಎಣಿಕೆ ನಡೆಯಲಿದೆ.

ಡಿಕೆಶಿ ಟೆಂಪಲ್‌ರನ್‌: ಕನಕಪುರ ಕ್ಷೇತ್ರದಿಂದ ಸ್ಪರ್ಧೆ ಬಯಸಿ ಸಲ್ಲಿಸಿದ್ದ ನಾಮಪತ್ರ ಅಂಗೀಕಾರಗೊಂಡ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಶನಿವಾರ ಟೆಂಪಲ್‌ ರನ್‌ ಆರಂಭಿಸಿದ್ದಾರೆ. ಬೆಳಗ್ಗೆ ಕನಕಪುರ ತಾಲೂಕಿನ ಮಳಗಾಳು ಗ್ರಾಮದ ಈಶ್ವರ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಅವರು ನಂತರ ಕುಟುಂಬ ಸಮೇತ ಧರ್ಮಸ್ಥಳಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿದರು. ಆ ಬಳಿಕ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಆಶೀರ್ವಾದ ಪಡೆದರು. ಅಲ್ಲಿಂದ ನೇರವಾಗಿ ಬೆಳ್ತಂಗಡಿ ಕ್ಷೇತ್ರದ ಪಕ್ಷದ ಅಭ್ಯರ್ಥಿ ಪರ ಉಜಿರೆಯಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡ ಬಳಿಕ ಶೃಂಗೇರಿಗೆ ತೆರಳಿದರು.

ಅಲ್ಲಿ ಶಕ್ತಿದೇವತೆ, ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ನಡೆಯುತ್ತಿರುವ ಚಂಡಿಕಾ ಯಾಗದಲ್ಲಿ ಪತ್ನಿ ಉಷಾ ಜತೆಗೆ ಪಾಲ್ಗೊಂಡರು. ರಾಶಿಯಲ್ಲಿನ ದೋಷಗಳಿದ್ದರೆ ಅದರ ಪರಿಹಾರ, ಶತ್ರುಗಳ ನಿಗ್ರಹ ಹಾಗೂ ದೇಹದಲ್ಲಿ ಹೊಸ ಚೇತನ ಬರಲು ನಡೆಸುವ ಚಂಡಿಕಾಯಾಗವನ್ನು ಶ್ರೀ ಮಠದ ಯಾಗ ಮಂಟಪದಲ್ಲಿ 10 ಮಂದಿ ಪುರೋಹಿತರು ನಡೆಸುತ್ತಿದ್ದಾರೆ. ಮಧ್ಯಾಹ್ನ ಮಠಕ್ಕೆ ಆಗಮಿಸಿದ ಡಿ.ಕೆ.ಶಿವಕುಮಾರ್‌ ದಂಪತಿ ನರಸಿಂಹವನಕ್ಕೆ ತೆರಳಿ ಶ್ರೀ ಜಗದ್ಗುರುಗಳ ಆಶೀರ್ವಾದ ಪಡೆದರು. ತರುವಾಯ ಶ್ರೀ ಶಾರದಾಂಬ ದೇವಾಲಯಕ್ಕೆ ತೆರಳಿ, ದೇವಿ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.

ರಮ್ಯಾರನ್ನು ಬಿಜೆಪಿಗೆ ಆಹ್ವಾನಿಸುವಷ್ಟು ನಮ್ಮ ಪಾರ್ಟಿ ಬರಗೆಟ್ಟಿಲ್ಲ‌: ಸಚಿವ ಅಶೋಕ್

ಶ್ರೀ ಮಠದಲ್ಲಿರುವ ಯಾಗ ಮಂಟಪದಲ್ಲಿ ತಮಗಾಗಿ ನಡೆಸುತ್ತಿರುವ ಚಂಡಿಕಾಯಾಗದ ಪಾರಾಯಣದಲ್ಲಿ ಪತ್ನಿ ಜತೆಗೆ ಪಾಲ್ಗೊಂಡ ನಂತರ, ಶ್ರೀ ತೋರಣ ಗಣಪತಿ ದೇವಾಲಯಕ್ಕೆ ತೆರಳಿ ದರ್ಶನ ಪಡೆದರು. ಭಾನುವಾರ ಬೆಳಗ್ಗೆ 9ರಿಂದ ಮಧ್ಯಾಹ್ನ 12 ಗಂಟೆಯವರೆಗೆ ನಡೆಯಲಿರುವ ಚಂಡಿಕಾಯಾಗದ ಸಂಕಲ್ಪ ಮತ್ತು ಪೂರ್ಣಾಹುತಿಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.