Asianet Suvarna News Asianet Suvarna News

ಗ್ರಾಮೀಣ ಭಾಗದ ಜನರ ಕಷ್ಟ ಎಚ್‌ಡಿಕೆಗೇನು ಗೊತ್ತು?: ಸಿ.ಪಿ.ಯೋಗೇಶ್ವರ್‌

ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಗ್ರಾಮೀಣ ಭಾಗದ ಕಷ್ಟ ಏನು ಗೊತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪ್ರಶ್ನಿಸಿದರು. 

CP Yogeshwar slams to HD Kumaraswamy in Channapatna gvd
Author
First Published Sep 13, 2022, 1:35 AM IST

ಚನ್ನಪಟ್ಟಣ (ಸೆ.13): ರಾಷ್ಟ್ರ ರಾಜಕಾರಣದಲ್ಲಿ ಬ್ಯುಸಿಯಾಗಿರುವ ಮಾಜಿ ಸಿಎಂ ಕುಮಾರಸ್ವಾಮಿಗೆ ಗ್ರಾಮೀಣ ಭಾಗದ ಕಷ್ಟ ಏನು ಗೊತ್ತಿದೆ ಎಂದು ವಿಧಾನಪರಿಷತ್‌ ಸದಸ್ಯ ಸಿ.ಪಿ.ಯೋಗೇಶ್ವರ್‌ ಪ್ರಶ್ನಿಸಿದರು. ತಾಲೂಕಿನ ಹುಣಸನಹಳ್ಳಿಯ ಬಿಸಿಲಮ್ಮ ದೇವಸ್ಥಾನದ ಆವರಣದಲ್ಲಿ ಮಳೆ ಸಂತ್ರಸ್ತರಿಗೆ ದಿನಸಿ ಕಿಟ್‌ ವಿತರಿಸಿ ಮಾತನಾಡಿದ ಅವರು, ಕುಮಾರಸ್ವಾಮಿ ಈಗ ರಾಷ್ಟ್ರಮಟ್ಟದಲ್ಲಿ ಪಕ್ಷ ಬಲವರ್ಧನೆ ಮಾಡುತ್ತಿದ್ದಾರೆ. ತೆಲಂಗಾಣ ಸಿಎಂ ಚಂದ್ರಶೇಖರ್‌ ರಾವ್‌ ಜತೆ ಉಪಹಾರ ಸೇವಿಸಿದ್ದಾರೆ. ಅವರು ದೆಹಲಿಯಲ್ಲಿ ಘಟಬಂಧನ್‌ ಮಾಡಲು ಹೋಗಿದ್ದರು. 

ಈಗ ರಾಷ್ಟ್ರದಲ್ಲಿ ತೃತೀಯ ಶಕ್ತಿಯನ್ನು ಬಲಪಡಿಸುತ್ತಿದ್ದಾರೆ. ಹಾಗಾಗಿ ಅವರಿಗೆ ಚನ್ನಪಟ್ಟಣದಲ್ಲಿ ಆಗಿರುವ ನೆರೆ ಹಾವಳಿ ಕಾಣಿಸುತ್ತಿಲ್ಲ. ಬಿಡುವಿದ್ದಾಗ ಚನ್ನಪಟ್ಟಣಕ್ಕೆ ಬನ್ನಿ ಎನ್ನುತ್ತಿದ್ದೇನೆ ಎಂದು ವ್ಯಂಗ್ಯವಾಡಿದರು. ನಾವು ತಾಲೂಕಿನಲ್ಲಿ ಕೆಲಸ ಮಾಡುತ್ತಿದ್ದೇವೆ. ನನಗೆ ಅವರ ಬಗ್ಗೆ ಯಾವ ಸಾಫ್ಟ್‌ ಕಾರ್ನರ್‌ ಸಹ ಇಲ್ಲ. ಅವರ ಅಧಿಕಾರಿದಲ್ಲಿ ಆದ ಕಳಪೆ ಕಾಮಗಾರಿಯಿಂದ ರಸ್ತೆಗಳು ಗುಂಡಿ ಬಿದ್ದಿದೆ. ತಾಲೂಕು ಅದ್ವಾನ ಆಗಿದೆ. ಇನ್ನಾದರೂ ತಾಲೂಕಿನ ಬಗ್ಗೆ ಗಮನ ಕೊಡಲಿ ಎಂದು ವಾಗ್ದಾಳಿ ನಡೆಸಿದರು.

Ramanagara: ಜನ ನೋವಿನಲ್ಲಿದ್ದರೆ ಬಿಜೆಪಿ ಸಂಭ್ರಮಾಚರಣೆ ವಿಕೃತಿ: ಸಂಸದ ಡಿ.ಕೆ.​ಸು​ರೇಶ್‌

ಹೆದ್ದಾರಿಯಿಂದ ಅನುಕೂಲ: ದಶಪಥ ಹೆದ್ದಾರಿ ಅವೈಜ್ಞಾನಿಕ ಎಂಬ ಕಾಂಗ್ರೆಸ್‌ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಬೆಂಗಳೂರು-ಮೈಸೂರು ದಶಪಥ ಹೆದ್ದಾರಿ ಉತ್ತಮ ಹೆದ್ದಾರಿ. ಯಾರು ಏನೇ ಆಪಾದನೆ ಮಾಡಲಿ. ಅವರ ಉದ್ದೇಶ ನನಗೆ ಗೊತ್ತಿಲ್ಲ. ಅದರೆ, ಇನ್ನೂ ಕಾಮಗಾರಿ ನಡೆಯುತ್ತಿದ್ದು, ಅದು ಇನ್ನೂ ಮುಗಿದಿಲ್ಲ. ಅದಕ್ಕೆ ಏನೇನೋ ಹೇಳುವುದು ಸರಿಯಲ್ಲ. ಕಳೆದ ಒಂದೆರಡು ತಿಂಗಳಿಂದ ನಿರಂತರ ಮಳೆ ಸುರಿಯುತ್ತಿರುವ ಹಿನ್ನೆಲೆ ತೊಂದರೆಯಾಗಿದೆ. ಆದರೆ, ಹೆದ್ದಾರಿ ಬಹಳ ಅನುಕೂಲಕರವಾಗಿದೆ ಎಂದರು.

ಕಾಮಗಾರಿ ನಡೆಸುವ ವೇಳೆ ಏನಾದರೂ ಸಣ್ಣಪುಟ್ಟ ಲೋಪದೋಷವಾಗಿದ್ದರೆ, ಅದನ್ನು ಅಧಿಕಾರಿಗಳು ಸರಿಪಡಿಸುತ್ತಾರೆ. ಬೆಂಗಳೂರು-ಮೈಸೂರು ಪ್ರಯಾಣಿಕರಿಗೆ ಈ ರಸ್ತೆಯಿಂದ ಮುಂದಿನ ದಿನಗಳಲ್ಲಿ ಬಹಳ ಪ್ರಯೋಜನವಾಗಲಿದೆ ಎಂದು ಕಾಂಗ್ರೆಸ್‌ ಟೀಕೆಗೆ ಯೋಗೇಶ್ವರ್‌ ತಿರುಗೇಟು ನೀಡಿದರು. ಸರ್ಕಾರದ ಸಾಧನೆ ತಿಳಿಸಲು ಜನಸ್ಪಂದನ: ಬಿಜೆಪಿಯ ಜನಸ್ಪಂದನ ಕಾರ್ಯಕ್ರಮದ ವಿಚಾರವಾಗಿ ಕಾಂಗ್ರೆಸ್‌ ನಾಯಕರ ಟೀಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಿಪಿವೈ, ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷ ಪೂರೈಸಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಕ್ರಮ ಮಾಡಿದ್ದೇವೆ. ಸರ್ಕಾರದ ಸಾಧನೆ ಹೇಳಲು ವೇದಿಕೆ ಬೇಕಾಗಿತ್ತು. ಆದ್ದರಿಂದ ಕಾರ್ಯಕ್ರಮ ಮಾಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ತಾಲೂಕಿನ ಹುಣಸನಹಳ್ಳಿಯ ಬಿಸಿಲಮ್ಮ ದೇವಸ್ಥಾನದ ಆವರಣದಲ್ಲಿ ಕೊಂಡಾಪುರ ಮತ್ತು ಹುಣಸನಹಳ್ಳಿಯಲ್ಲಿ ಮಳೆಯಿಂದ ಹಾನಿಗೊಳಗಾದ ಸುಮಾರು 300ಕ್ಕೂ ಹೆಚ್ಚು ಸಂತ್ರಸ್ತರಿಗೆ ದಿನಸಿ ಕಿಟ್‌ಗಳನ್ನು ವಿತರಿಸಲಾಯಿತು. ಇದಕ್ಕೂ ಮೊದಲು ಹುಣಸನಹಳ್ಳಿಯ ಬಿಸಿಲಮ್ಮ ದೇವಸ್ಥಾನಕ್ಕೆ ತೆರಳಿದ ಯೋಗೇಶ್ವರ್‌ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭದಲ್ಲಿ ಬಮೂಲ್‌ ಮಾಜಿ ನಿರ್ದೇಶಕ ಎಸ್‌.ಲಿಂಗೇಶ್‌ ಕುಮಾರ್‌, ಯೋಜನಾ ಪ್ರಾಧಿಕಾರದ ಅಧ್ಯಕ್ಷ ಮಲುವೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಹುಲುವಾಡಿ ದೇವರಾಜು, ತಾಲೂಕು ಅಧ್ಯಕ್ಷ ಕೆ.ಟಿ.ಜಯರಾಮು, ಮುಖಂಡರಾದ ಕೃಷ್ಣಪ್ಪ, ಕೊಂಡಾಪುರ ಪ್ರಸನ್ನ, ಮುದುಗೆರೆ ಸುರೇಶ್‌ ಮುಂತಾದವರು ಇದ್ದರು.

Kanakapura; ತಾಯಿ ಆನೆ ನಿಧ​ನ, ದನದ ಹಿಂಡಿನ ಜೊತೆ ಬಂದ ಅನಾ​ಥ​ವಾದ ಮರಿ ಆನೆ ರಕ್ಷಣೆ

ಟೀಕೆ ಮಾಡುವುದು ವಿರೋಧ ಪಕ್ಷದವರ ಕರ್ತವ್ಯ: ವಿರೋಧ ಪಕ್ಷದವರ ಟೀಕೆಯ ಕುರಿತು ಜನ ತೀರ್ಮಾನ ಮಾಡುತ್ತಾರೆ. ಇನ್ನೂ ಹತ್ತಾರು ಕಡೆ ಕಾರ್ಯಕ್ರಮ ಮಾಡುತ್ತೇವೆ ಎಂದು ಮುಖ್ಯಮಂತ್ರಿಯವರು ಘೋಷಣೆ ಮಾಡಿದ್ದು, ಆ ರೀತಿ ಕಾರ್ಯಕ್ರಮ ನಡೆಸಲಾಗುವುದು. ರಾಮನಗರದಲ್ಲಿ ಜನಸ್ಪಂದನ ಕಾರ್ಯಕ್ರಮ ಮಾಡುವುದು ಪಕ್ಷದ ವರಿಷ್ಟರು ನಿರ್ಧರಿಸುತ್ತಾರೆ ಎಂದರು. ಬಹಳ ಮಂದಿ ಬಿಜೆಪಿ ಸೇರ್ಪಡೆ: ಮುಂದಿನ ದಿನಗಳಲ್ಲಿ ಬಹಳಷ್ಟುಮಂದಿ ಚನ್ನಪಟ್ಟಣದಲ್ಲಿ ಬಿಜೆಪಿ ಸೇರಲಿದ್ದಾರೆ. ಈ ತಿಂಗಳ ಕೊನೆಯಲ್ಲಿ ತಾಲೂಕುಮಟ್ಟದಲ್ಲಿ ಸಮಾವೇಶ ಮಾಡುತ್ತೇವೆ. ಬೇರೆ ಬೇರೆ ಪಕ್ಷದ ನೂರಾರು ಮುಖಂಡರು ಮತ್ತು ಕಾರ್ಯಕರ್ತರು ಬಿಜೆಪಿ ಸೇರಬಯಸಿದ್ದು, ಎಲ್ಲರನ್ನು ಒಟ್ಟಿಗೆ ಸೇರಿಸಿ ಒಂದು ಸಮಾವೇಶ ಮಾಡಿ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ. ಸಮಾವೇಶದಲ್ಲಿ ಸುಮಾರು 500ಕ್ಕೂ ಹೆಚ್ಚು ಮಂದಿ ಬಿಜೆಪಿಗೆ ಸೇರ್ಪಡೆಯಾಗಲಿದ್ದಾರೆ ಎಂದರು.

Follow Us:
Download App:
  • android
  • ios