ಬಿಜೆಪಿ-ಜೆಡಿಎಸ್ ಮೈತ್ರಿ ಪಕ್ಷದ ನಡೆಯಿಂದ ಬೇಸರ: ಯೋಗೇಶ್ವರ್
ಎನ್‌ಡಿಎ ಮೈತ್ರಿಕೂಟದಲ್ಲಿನ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ಮನಗಂಡು ಸ್ವಯಂ ಪ್ರೇರಿತವಾಗಿ ಹಾಗೂ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದ ಮಾಜಿ ಸಚಿವ ಸಿ.ಪಿ.ಯೋಗೇಶ್ವರ್
ಬೆಂಗಳೂರು(ಅ.24): 'ನಾನಿದ್ದ ಬಿಜೆಪಿ ಪಕ್ಷ ಹಾಗೂ ಮೈತ್ರಿಕೂಟದಲ್ಲಿನ ಕಳೆದ 3 ತಿಂಗಳ ಬೆಳವಣಿಗೆಗಳು ಬೇಸರ ತರಿಸಿವೆ. ನಮಗಾಗಿ ಕಟ್ಟಿದ ಮನೆಯಲ್ಲಿ ನಾವು ವಾಸ ಮಾಡಲಾಗದ ಸಂದರ್ಭ ಬಂದಿದೆ. ಹೀಗಾಗಿ ನಾನು ಬಿಟ್ಟಿದ್ದ ಕಾಂಗ್ರೆಸ್‌ಗೆ ಮತ್ತೆ ಬಂದಿದ್ದೇನೆ. ನನ್ನ ಮುಂದಿನ ರಾಜಕೀಯ ಭಾಗ ಕಾಂಗ್ರೆಸ್‌ನಲ್ಲಿ ಮುಂದುವರಿಯಲಿದೆ' ಎಂದು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಹೇಳಿದ್ದಾರೆ.
ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾದ ಅವರು, ಎನ್‌ಡಿಎ ಮೈತ್ರಿಕೂಟದಲ್ಲಿನ ವಾತಾವರಣ ನನ್ನ ರಾಜಕೀಯ ಬೆಳವಣಿಗೆಗೆ ಪೂರಕವಾಗಿಲ್ಲ ಎಂದು ಮನಗಂಡು ಸ್ವಯಂ ಪ್ರೇರಿತವಾಗಿ ಹಾಗೂ ಬೇಷರತ್ತಾಗಿ ಕಾಂಗ್ರೆಸ್ ಪಕ್ಷ ಸೇರುತ್ತಿದ್ದೇನೆ ಎಂದು ಹೇಳಿದರು.
ಜಂಪಿಂಗ್ ಸ್ಟಾರ್ ಸಿ.ಪಿ.ಯೋಗೇಶ್ವರ್: 25 ವರ್ಷಗಳ ರಾಜಕಾರಣದಲ್ಲಿ 5 ಬಾರಿ ಪಕ್ಷಾಂತರ ಮಾಡಿದ ಸೈನಿಕ
ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನನ್ನ ರಾಜಕೀಯ ಜೀವನದ ಆರಂಭದ ದಿನಗಳಿಂದಲೂ ಕಾಂಗ್ರೆಸ್‌ನಲ್ಲಿ ಕೆಲಸ ಮಾಡಿದ್ದೇನೆ. ಬಳಿಕ ಬೇರೆ ಕಾರಣಗಳಿಂದ ಪಕ್ಷ ಬಿಟ್ಟು ಹೋಗಿದ್ದೆ. ಈಗ ಮರಳಿ ಬಂದಿದ್ದೇನೆ. ಈಗಿನ ಪರಿಸ್ಥಿತಿಯಲ್ಲಿ ನನ್ನ ರಾಜಕೀಯ ಜೀವನದ ಉಳಿದ ಭಾಗ ಇದೇ ಪಕ್ಷದಲ್ಲಿ ಕಳೆಯುತ್ತೇನೆ ಎಂದು ಎನಿಸುತ್ತಿದೆ ಎಂದು ಅಭಿಪ್ರಾಯಪಟ್ಟರು.
ಶಿವಕುಮಾರ್, ರಾಮಲಿಂಗಾರೆಡ್ಡಿ ಅವರು ಕಳೆದ 3-4 ತಿಂಗಳಲ್ಲಿ ಚನ್ನಪಟ್ಟಣ ದಲ್ಲಿ ನಡೆಸಿರುವ ಅಭಿವೃದ್ಧಿ ಯೋಜನೆ ಗಳನ್ನು ಮೆಚ್ಚಿದ್ದೇನೆ. ನಮ್ಮ ಜಿಲ್ಲೆ ಅಭಿವೃದ್ಧಿ ಯಲ್ಲಿ ನಾನು ಪಾಲುದಾರನಾಗಬೇಕು. ಸರ್ಕಾರದ ಜತೆ ಕೈಜೋಡಿಸಿ ಕಾಂಗ್ರೆಸ್ ಪಕ್ಷದಲ್ಲಿ ಕೆಲಸ ಮಾಡಲು ಈ ತೀರ್ಮಾನ ಮಾಡಿದ್ದೇನೆ ಎಂದರು.
ಕಾಂಗ್ರೆಸ್‌ಗೆ ಸೇರಿ ಯೋಗೇಶ್ವರ್ ಭವಿಷ್ಯ ಹಾಳು: ಆರ್.ಅಶೋಕ್
ಡಿಕೆಸು ಸೋಲು-ಗೆಲುವಲ್ಲಿ ಪಾತ್ರವಿದೆ:
ಡಿ.ಕೆ.ಸುರೇಶ್ ಅವರ ಗೆಲುವಿನಲ್ಲಿಯೂ ನನ್ನ ಪಾತ್ರವಿದೆ. ಒಂದು ಬಾರಿ ಅವರ ಸೋಲಿನಲ್ಲೂ ನನ್ನ ಪಾತ್ರವಿದೆ. ಮುಂದಿನ ದಿನಗಳಲ್ಲಿ ಸುರೇಶ್ ಅವರ ಗೆಲುವಿಗೆ ನಾನು ಶ್ರಮಿಸುತ್ತೇನೆ ಎಂದು ಹೇಳಿದರು.
ಡಿಕೆಶಿಯನ್ನು ರಾತ್ರಿ ಭೇಟಿಯಾಗಿಲ್ಲ: ಮಾಧ್ಯಮಗಳಲ್ಲಿ ರಾತ್ರಿ 12 ಗಂಟೆಗೆ ಭೇಟಿ ಮಾಡಿದ್ದಾರೆ, 2 ಗಂಟೆಗೆ ಭೇಟಿ ಮಾಡಿದ್ದಾರೆ ಎಂದು ವರದಿಯಾಗಿರುವುದನ್ನು ನೋಡಿದೆ. ನನಗೆ ಅಂತಹ ಅವಶ್ಯಕತೆ ಇಲ್ಲ. ನಾನು ಬೆಳಗ್ಗೆ 8 ಗಂಟೆಗೆ ಶಿವಕುಮಾರ್ ಅವರ ಮನೆಗೆ ಹೋಗಿ ನನ್ನ ವಿಚಾರ ಚರ್ಚೆ ಮಾಡಿದೆ. ನಂತರ ಶಿವಕುಮಾರ್ ಅವರು ನನ್ನನ್ನು ಸಿಎಂ ಸಿದ್ದರಾಮಯ್ಯ ಅವರ ಮನೆಗೆ ಕರೆದುಕೊಂಡು ಹೋದರು. ಅಲ್ಲಿಯೂ ಮಾತನಾಡಿದೆವು. ನಂತರ ಸುರೇಶ್ ಅವರು ಖರ್ಗೆ ಜೊತೆ ಮಾತನಾಡಿಸಿದರು. ಅವರ ಆಶೀರ್ವಾದ ಪಡೆದು ನನ್ನ ಮೂಲ ಪಕ್ಷಕ್ಕೆ ಸೇರಿದ್ದೇನೆ. ಇದರಲ್ಲಿ ವಿಶೇಷವಿಲ್ಲ ಎಂದರು.