Asianet Suvarna News Asianet Suvarna News

ಒನ್ ನೇಷನ್ ಒನ್ ಎಲೆಕ್ಷನ್‌ನಿಂದ ದೇಶ ಸುಧಾರಣೆ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ

ವಿಪಕ್ಷ ಯಾಕೆ ಹೆದರಬೇಕು, ಯಾಕೆ ವಿರೋಧ ಮಾಡಬೇಕು, ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಾರೆ. ಮತಯಂತ್ರ ಬೇರೆ ಇರುತ್ತದೆ, ಜನ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಅರಿತಿದ್ದಾರೆ. ಜನರು ಸುಶಿಕ್ಷಿತರಾಗಿದ್ದಾರೆ ಹಾಗಾಗಿ ಸರಿಯಾಗಿ ಮತದಾನ ಮಾಡುತ್ತಾರೆ ಎಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ 

Country Reform by One Nation One Election Says Union Minister Shobha Karandlaje grg
Author
First Published Sep 2, 2023, 12:24 PM IST

ಉಡುಪಿ(ಸೆ.02):  ಪ್ರಮುಖ ವಿಚಾರಗಳ ಬಗ್ಗೆ ಚರ್ಚಿಸಲು ಕಾಲಕಾಲಕ್ಕೆ, ಸರಕಾರ ತೀರ್ಮಾನ ಮಾಡಿ ಅಧಿವೇಶನ ಕರೆಯಬಹುದು. ಮುಂಗಾರು ಅಧಿವೇಶನದಲ್ಲಿ ವಿಪಕ್ಷವು ಇಡೀ ಅಧಿವೇಶನ ನಡೆಯದಂತೆ ಮಾಡಿದವು. ಜನರ ಕಷ್ಟ ಚರ್ಚಿಸಲು ನಮ್ಮನ್ನು ಆಯ್ಕೆ ಮಾಡಿ ಕಳಿಸುತ್ತಾರೆ. ಕಳೆದ ಅಧಿವೇಶನದಲ್ಲಿ ಮಹತ್ವದ ಪಾಲಿಸಿ ಮ್ಯಾಟರ್ ಚರ್ಚೆಗೆ ಬರಲಿಲ್ಲ. ಸೆ. 17 ರಂದು ನಡೆಯುವ ಅಧಿವೇಶನ ಖಂಡಿತವಾಗಿಯೂ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ. 

ನಿನ್ನೆ(ಶುಕ್ರವಾರ) ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರಕ್ಕೆ ಬಹುಮತ ಇದ್ದರೂ ಏಕಪಕ್ಷೀಯ ನಿರ್ಧಾರ ಮಾಡಿಲ್ಲ, ರಾಜ್ಯ, ದೇಶ ಎಲ್ಲೂ ನಾವು ಪಕ್ಷೀಯವಾಗಿ ನಡೆದುಕೊಂಡಿಲ್ಲ. ವಿರೋಧ ಪಕ್ಷಗಳನ್ನು ವಿಶ್ವಾಸಕ್ಕೆ ಪಡೆದು ಕೆಲಸ ಮಾಡುವುದು ನಮ್ಮ ತೀರ್ಮಾನವಾಗಿದ್ದು, ಎಲ್ಲಾ ಪಕ್ಷಗಳು ಅಧಿವೇಶನದಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯ ತಿಳಿಸಬೇಕು. ತಮ್ಮ ಕ್ಷೇತ್ರದ ಜನರ ಅಭಿಪ್ರಾಯವನ್ನು ಮಂಡಿಸಬೇಕು ಎಂದರು. 

ಉಡುಪಿಯಲ್ಲಿ ಇಸ್ರೋ ಘಟಕ ಸ್ಥಾಪಿಸುವಂತೆ ಪ್ರಧಾನಿ ಮೋದಿಗೆ ಕ್ಯಾಂಪ್ಕೊ ಪತ್ರ; ಯಾಕೆ ಗೊತ್ತಾ?

ಒನ್ ನೇಷನ್ ಒನ್ ಎಲೆಕ್ಷನ್

ಭಾರತದಲ್ಲಿ ವರ್ಷದ ಮೂರ್ನಾಲ್ಕು ತಿಂಗಳು ಚುನಾವಣೆ ನಡೆಯುತ್ತಿದೆ. ಇದರಿಂದ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದ್ದು, ಟೆಂಡರ್ ಕರೆಯಲು ಆಗಲ್ಲ. ಏಕಕಾಲದಲ್ಲಿ ಎಲ್ಲ ಚುನಾವಣೆಗಳು ಆಗಬೇಕು ಅನ್ನೋದು ನಮ್ಮ ಅಪೇಕ್ಷೆಯಾಗಿದೆ. ಕೇರಳದಲ್ಲಿ ಜಿಲ್ಲಾ ಪಂಚಾಯತ್, ಗ್ರಾಮ ಪಂಚಾಯತ್, ನಗರಸಭೆ ಚುನಾವಣೆಗಳು ಒಟ್ಟಿಗೆ ನಡೆಯುತ್ತವೆ. ಇದೇ ರೀತಿ ಲೋಕಸಭೆ ಮತ್ತು ವಿಧಾನಸಭೆ ಚುನಾವಣೆಗಳು ಒಟ್ಟಿಗೆ ನಡೆಯಬಹುದು. ಚಿಹ್ನೆಯಲ್ಲಿ ನಡೆಯುವ ಚುನಾವಣೆ ಒಟ್ಟಿಗೆ ನಡೆಸಬಹುದು, ದೇಶದಲ್ಲಿ ಸಮಯ ಶ್ರಮ ಹಣ ಉಳಿಸಬಹುದು. ಪ್ರಚಾರದ ಖರ್ಚು ಕೂಡ ಉಳಿಯುತ್ತದೆ, ಅಭಿವೃದ್ಧಿ ಕೆಲಸಗಳು ವೇಗ ಪಡೆಯುತ್ತವೆ ಎಂದರು. 

ವಿಪಕ್ಷ ಯಾಕೆ ಹೆದರಬೇಕು, ಯಾಕೆ ವಿರೋಧ ಮಾಡಬೇಕು, ಚುನಾವಣೆಯಲ್ಲಿ ಎಲ್ಲಾ ಪಕ್ಷಗಳು ಕೆಲಸ ಮಾಡುತ್ತಾರೆ. ಮತಯಂತ್ರ ಬೇರೆ ಇರುತ್ತದೆ, ಜನ ಯಾರಿಗೆ ಮತ ಹಾಕಬೇಕು ಅನ್ನೋದನ್ನ ಅರಿತಿದ್ದಾರೆ. ಜನರು ಸುಶಿಕ್ಷಿತರಾಗಿದ್ದಾರೆ ಹಾಗಾಗಿ ಸರಿಯಾಗಿ ಮತದಾನ ಮಾಡುತ್ತಾರೆ ಎಂದರು. 

ಗ್ಯಾರೆಂಟಿ ಯೋಜನೆಗಳಿಂದ ಖಾಸಗಿ ವಲಯಕ್ಕೆ ಹೊಡೆತ

ಕಾಂಗ್ರೆಸ್ಸಿನ ಉಚಿತ ಯೋಜನೆಗಳಿಂದ ಹಲವಾರು ಅವಾಂತರವಾಗಿದೆ. ಕಳೆದ ತಿಂಗಳು ಈ ರಾಜ್ಯದ ನ್ಯಾಯಾಧೀಶರಿಗೆ, ಶಿಕ್ಷಕರಿಗೆ ಮತ್ತೆಲ್ಲರಿಗೂ ಒಂದು ವಾರ ತಡವಾಗಿ ಸಂಬಳವಾಗಿದೆ. ಹಲವಾರು ಯೋಜನೆಗಳಿಗೆ ಸರಿಯಾಗಿ ಹಣ ಸಿಗುತ್ತಿಲ್ಲ. ಸಾಮಾಜಿಕ ಭದ್ರತಾ ಯೋಜನೆಗೆ ಹಣ ಇಲ್ಲ, ಗ್ಯಾರಂಟಿ ಕೊಟ್ಟರೆ ಸಾಕು, ಬೇರೆಲ್ಲ ಬಿದ್ದು ಹೋಗಲಿ ಅಂತ ಕಾಂಗ್ರೆಸ್ ಯೋಚಿಸುತ್ತಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರಕಾರದ ಕೊಡುಗೆ ನಿಲ್ಲಿಸಲಾಗಿದ್ದು, ವಿಧವಾ, ವೃದ್ಧಾಪ್ಯ ವೇತನ ತಡವಾಗುತ್ತಿದೆ, ಸರ್ಕಾರಿ ನೌಕರರ ಸಂಬಳ ತಡವಾಗುತ್ತಿದೆ. ಖಾಸಗಿಯವರಿಗೆ ಏನು ಪರ್ಯಾಯ ವ್ಯವಸ್ಥೆ ಮಾಡಿದ್ದೀರಿ? ಎಂದು ಪ್ರಶ್ನಿಸಿದರು. 

ನಮ್ಮ ಹೆಣ್ಣು ಮಕ್ಕಳು ಖುಷಿಯಾಗಿ ಇವತ್ತು ಬಸ್ಸಿನಲ್ಲಿ ಓಡಾಡುತ್ತಿದ್ದಾರೆ ಸಂತೋಷ, ಉಚಿತ ಪಡೆದ ಜನ ಖುಷಿಯಲ್ಲಿದ್ದಾರೆ, ಇರಲಿ. ಸರ್ಕಾರ ಇವತ್ತು ಸರಿಯಾಗಿ ವಿದ್ಯುತ್ ನೀಡ್ತಾ ಇಲ್ಲ, ರೂಟ್ ಬಸ್ 50% ಕಡಿತ ಮಾಡಿದ್ದು ಯಾಕೆ?ಸಾರಿಗೆ ಇಲಾಖೆಯ ಸಂಸ್ಥೆಗಳು ನಷ್ಟಕ್ಕೆ ಹೋಗುತ್ತಿವೆ. ಎಲ್ಲದಕ್ಕೂ ಮುಖ್ಯಮಂತ್ರಿಗಳು ಉತ್ತರ ನೀಡಬೇಕು, ಚೀಪ್ ರಾಜಕಾರಣದಿಂದ ಅವಾಂತರ ಮಾಡಲಾಗಿದ್ದು, ಫ್ರೀ ಅಂತ ಇನ್ನೊಬ್ಬರಿಂದ ಕಿತ್ಕೋತಿದ್ದೀರಿ, ದರೋಡೆ ಮಾಡುತ್ತಿದ್ದೀರಿ. ಖಾಸಗಿಯವನು ಸಾಲ ಹೇಗೆ ಕಟ್ಟಬೇಕು..!? ಜೀವನ ಹೇಗೆ ಮಾಡಬೇಕು, ಖಾಸಗಿ ಅವರಿಗೂ ಹೇಗೆ ಸಹಾಯ ಮಾಡಬಹುದು ಎಂದು ಆಲೋಚಿಸಿ ಎಂದವರು ಹೇಳಿದರು.

ನನಗೆ ಅಮಿತ್ ಶಾ ಅಥವಾ ಯಾರೂ ಕರೆ ಮಾಡಿಲ್ಲ: ಜಗದೀಶ್ ಶೆಟ್ಟರ್

ಕಾಂಗ್ರೆಸ್ ನಾಯಕರು ಬಿಜೆಪಿಗೆ -ಬಿಜೆಪಿ ನಾಯಕರು ಕಾಂಗ್ರೆಸ್‌ಗೆ 

ಕಾಂಗ್ರೆಸ್ ನಾಯಕರನ್ನು ಬಿಜೆಪಿಗೆ ಕರೆತರುವ ಯಾವುದೇ ಯೋಚನೆ ಆಗಿಲ್ಲ, ರಾಜ್ಯ ಸರ್ಕಾರ ಈಗಷ್ಟೇ ನೂರು ದಿನ ಪೂರೈಸಿದೆ. ಸರಕಾರದಲ್ಲಿ ಅಸಮಾಧಾನ ಇದ್ದು, ಬಿಜೆಪಿ ಎಂದೂ ಶಾಸಕರನ್ನು ಸೆಳೆಯುವ ಯೋಚನೆ ಮಾಡಿಲ್ಲ. ಆದರೆ ಕಾಂಗ್ರೆಸ್ ಈ ಪ್ರಯತ್ನ ಮಾಡುತ್ತಿದೆ. ಕಾಂಗ್ರೆಸ್ ನೊಳಗೆ ಆಪರೇಷನ್ ಸ್ಪರ್ಧೆ ಮಾಡುತ್ತಿದೆ, ಶಿವಕುಮಾರ್ ಮತ್ತು ಸಿದ್ದರಾಮಯ್ಯ ನಡುವೆ ಪೈಪೋಟಿ ಶುರುವಾಗಿದೆ. ಯಾರು ಹೆಚ್ಚು ಜನರನ್ನು ತಮ್ಮ ಪಕ್ಷಕ್ಕೆ ಕರೆತಂದರು ಎಂದು ಪೈಪೋಟಿ ಶುರು ಮಾಡಿದ್ದಾರೆ. ಬಿಜೆಪಿ ಜನಾದೇಶವನ್ನು ಯಥಾವತ್ ಪಾಲನೆ ಮಾಡುದೆ. ಒಂದು ವಿರೋಧ ಪಕ್ಷವಾಗಿ ಕೆಲಸ ಮಾಡಲು ಬಿಜೆಪಿ ತಯಾರಿದೆ. ಈ ಭಾವನೆ ಬಂದದ್ದು ಯಾಕೆ ಗೊತ್ತಿಲ್ಲ, ಕಾಂಗ್ರೆಸ್ ಸರಕಾರಕ್ಕೆ 100 ದಿನ ಆಗಿದೆ. ಒಳ್ಳೆ ಆಡಳಿತ ಕೊಡಲಿ ಬಿಜೆಪಿ ಇವತ್ತು ಕರ್ನಾಟಕದಲ್ಲಿ ಸಂಕಷ್ಟದಲ್ಲಿ ಇರಬಹುದು. ಅಧಿಕಾರ ಅನುಭವಿಸುವ ಸಂದರ್ಭದಲ್ಲಿ ಎಲ್ಲರೂ ಬಂದಿದ್ದೀರಿ, ನಿಮಗೆ ಒಳ್ಳೆಯ ಅಧಿಕಾರ ಕೊಟ್ಟು ಒಳ್ಳೆಯ ಮಂತ್ರಿಗಿರಿ ಕೊಟ್ಟಿದ್ದೇವೆ. ಇಲ್ಲಿ ಬಂದರು ಅಧಿಕಾರ ಇಲ್ಲದಾಗ ಹೋದ್ರು ಅನ್ನೋ ಕೆಟ್ಟ ಹೆಸರು ಬೇಡ, ಇದೇ ಕಾರಣಕ್ಕೆ ಯಾರು ಕೂಡ ಬಿಜೆಪಿ ಬಿಡಲ್ಲ ಬಿಡಲು ಬಾರದು ಎಂದು ಪ್ರಾರ್ಥನೆ ಮಾಡುತ್ತೇನೆ. ಅಧಿಕಾರದಲ್ಲಿದ್ದಾಗ ಬಂದವರು ಅಧಿಕಾರ ಇಲ್ಲದಿದ್ದಾಗ ಹೋದರೆ ಸರಿ ಅನ್ಸುತ್ತಾ ? ಎಂದು ಪ್ರಶ್ನಿಸಿದರು. 

ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆ

ರಾಜ್ಯದಲ್ಲಿ ಈ ವರ್ಷ ಮಳೆಯ ಪ್ರಮಾಣ ಕಡಿಮೆಯಾಗಿದೆ. ರಾಜ್ಯದ ಯಾವುದೇ ಡ್ಯಾಂಗಳು ತುಂಬಿಲ್ಲ, ಕೆ.ಆರ್‌.ಎಸ್‌ ಕರ್ನಾಟಕದ ದಕ್ಷಿಣ ಭಾಗಕ್ಕೆ ನೀರು ಕೊಡುವ ಡ್ಯಾಂ. ಕಾವೇರಿ‌ ನದಿ ಬೆಂಗಳೂರು, ಕೋಲಾರ ,ಮೈಸೂರಿಗೆ, ಮಂಡ್ಯ, ತುಮಕೂರಿಗೆ ನೀರು ಕೊಡುತ್ತದೆ. ಕಳೆದ ಬಾರಿ ನಿಗದಿತ ಪ್ರಮಾಣಕ್ಕಿಂತ ಹೆಚ್ಚು ನೀರು ಬಿಡುಗಡೆ ಮಾಡಿದ್ದೇವೆ. ರಾಜ್ಯ ಸರಕಾರ ತಮಿಳುನಾಡು ಸರಕಾರದ ಮನ ವೊಲಿಸಲು, ಈ ಬಾರಿ ತಪ್ಪು ಮಾಡುತ್ತಿದೆ. ನಮ್ಮ ಡ್ಯಾಂನ ನೀರು ಬಿಟ್ಟರೆ ಬೇಸಿಗೆಯಲ್ಲಿ ಕುಡಿಯುವ ನೀರಿಗೆ ಎಲ್ಲಿ ಹೋಗೋದು. ಇಂಡಿಯಾ ತಂಡವನ್ನು ಅನ್ನು ಖುಷಿ ಪಡಿಸಲು ನೀರು ಬಿಡುತ್ತಿದ್ದಾರೆ. ಹೆಚ್ಚುವರಿ ಮಳೆ ಬಂದರೆ ನೀರು ಬಿಡಬಹುದು, ಕರ್ನಾಟಕ ತಮಿಳುನಾಡು ಭಾರತ-ಪಾಕಿಸ್ತಾನ ಅಲ್ಲ. ಅವರು ನಮ್ಮ ನೆರೆಹೊರೆಯವರು ಹೆಚ್ಚುವರಿ ನೀರಿದ್ದಾಗ ಬಿಡುತ್ತೇವೆ, ಸಿಎಂ ಕೆ.ಆರ್.ಎಸ್ ಡ್ಯಾಂನ ಪರಿಸ್ಥಿತಿಯ ಶ್ವೇತಪತ್ರ ಹೊರಡಿಸಬೇಕು ಎಂದು ಆಗ್ರಹಿಸಿದರು.

Follow Us:
Download App:
  • android
  • ios