ಹೊಸ ಕಾರ್ಖಾನೆ ಹೆಸರಿನಲ್ಲಿ ಭ್ರಷ್ಟಾಚಾರ: ಸಂಸದೆ ಸುಮಲತಾ ಆತಂಕ
ಮೈಷುಗರ್ ಕಾರ್ಖಾನೆ ಪುನಶ್ಚೇತನದ ಹೆಸರಿನಲ್ಲಿ ನೂರಾರು ಕೋಟಿ ರು. ಭ್ರಷ್ಟಾಚಾರ ನಡೆಸಿದ್ದಾಗಿದೆ. ಇದೀಗ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣದ ಹೆಸರಿನಲ್ಲಿ ಮತ್ತೊಂದು ರೀತಿಯ ಭ್ರಷ್ಟಾಚಾರ ನಡೆಸಲು ಮುಂದಾಗಿರುವಂತೆ ಕಂಡುಬರುತ್ತಿದೆ ಎಂದು ಸಂಸದೆ ಸುಮಲತಾ ಆತಂಕ ವ್ಯಕ್ತಪಡಿಸಿದರು.
ಮಂಡ್ಯ/ಮದ್ದೂರು (ಮಾ.01): ಮೈಷುಗರ್ ಕಾರ್ಖಾನೆ ಪುನಶ್ಚೇತನದ ಹೆಸರಿನಲ್ಲಿ ನೂರಾರು ಕೋಟಿ ರು. ಭ್ರಷ್ಟಾಚಾರ ನಡೆಸಿದ್ದಾಗಿದೆ. ಇದೀಗ ಹೊಸ ಸಕ್ಕರೆ ಕಾರ್ಖಾನೆ ನಿರ್ಮಾಣದ ಹೆಸರಿನಲ್ಲಿ ಮತ್ತೊಂದು ರೀತಿಯ ಭ್ರಷ್ಟಾಚಾರ ನಡೆಸಲು ಮುಂದಾಗಿರುವಂತೆ ಕಂಡುಬರುತ್ತಿದೆ ಎಂದು ಸಂಸದೆ ಸುಮಲತಾ ಆತಂಕ ವ್ಯಕ್ತಪಡಿಸಿದರು. ಈಗಿರುವ ಮೈಷುಗರ್ ಕಾರ್ಖಾನೆ ಯಂತ್ರೋಪಕರಣಗಳು ಸರಿಯಾಗಿಲ್ಲ. ಹೊಸ ಯಂತ್ರೋಪಕರಣಗಳನ್ನು ತರಲು ಹಣ ಬೇಕಿದೆ. ಇನ್ನೂ ಕಾರ್ಮಿಕರಿಗೆ ವಿಆರ್‌ಎಸ್ ಹಣ ಬಾಕಿ ಕೊಟ್ಟಿಲ್ಲ. ಪರಿಸ್ಥಿತಿ ಹೀಗಿರುವಾಗ ಇದೆಲ್ಲವನ್ನೂ ಸರಿಪಡಿಸುವ ಬಗ್ಗೆ ಆಲೋಚನೆ ಮಾಡದೆ ಹೊಸ ಕಾರ್ಖಾನೆ ನಿರ್ಮಿಸಲು ಹೊರಟಿರುವುದರ ಹಿಂದೆ ಏನೇನು ನಡೆಯಬಹುದು ಎಂಬುದನ್ನು ಊಹಿಸಿಕೊಳ್ಳಿ ಎಂದು ಮದ್ದೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದರು.
ಹೊಸ ಕಾರ್ಖಾನೆ ಆರಂಭಿಸಿದ ಮೇಲೆ ಈ ಕಾರ್ಖಾನೆಯನ್ನು ಏನು ಮಾಡುತ್ತಾರೆ. ಮಹಾರಾಜರ ಕೊಡುಗೆ ಎಂದು ಬೀಗ ಹಾಕಿ ಇಟ್ಟುಕೊಳ್ಳುತ್ತಾರಾ ಎಂದು ಪ್ರಶ್ನಿಸಿದ ಸುಮಲತಾ, ರಸ್ತೆ, ಸೇತುವೆ, ಕುಡಿಯುವ ನೀರು ಸೇರಿದಂತೆ ಅಭಿವೃದ್ಧಿ ಕೆಲಸಗಳಿಗೆ ಹಣವಿಲ್ಲ ಎಂದು ಶಾಸಕರು ಪೇಚಾಡುತ್ತಿದ್ದಾರೆ. ಆ ಸಮಸ್ಯೆಗಳಿಗೆ ಪರಿಹಾರ ಕೊಡದೆ ೫೦೦ ಕೋಟಿ ರು. ಹಣದಲ್ಲಿ ಹೊಸ ಕಾರ್ಖಾನೆ ಮಾಡುತ್ತೇವೆ ಎಂದು ಹೇಳುವುದರಲ್ಲಿ ಅರ್ಥವಿದೆಯೇ ಎಂದು ಪ್ರಶ್ನಿಸಿದರು. ಮೊದಲು ಈಗಿರುವ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿಪಡಿಸಿ ಅಥವಾ ಬದಲಾಯಿಸಿ ಕಾರ್ಖಾನೆ ಸುಗಮವಾಗಿ ಕಾರ್ಯಾಚರಣೆ ಮಾಡುವಂತೆ ಮಾಡಲಿ. ಕಾರ್ಖಾನೆಗಿರುವ ಸಾಲ, ಕಾರ್ಮಿಕರ ವಿಆರ್‌ಎಸ್ ಹಣವನ್ನೆಲ್ಲಾ ತೀರಿಸಲಿ. ಆನಂತರ ಹೊಸ ಕಾರ್ಖಾನೆ ಬಗ್ಗೆ ಆಲೋಚಿಸಲಿ ಎಂದರು.
ಕಾಂಗ್ರೆಸ್ ಗ್ಯಾರಂಟಿಗಳನ್ನು ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲ: ಸಚಿವೆ ಲಕ್ಷ್ಮೀ ಹೆಬ್ಬಾಳಕರ್
ಸಂಘಟನೆಗಳಿಂದ ಸ್ವಾರ್ಥ ಹೋರಾಟ: ಚಾಲನೆಗೊಳ್ಳದೆ ನಿಂತಿದ್ದ ಮೈಷುಗರ್ ಕಾರ್ಖಾನೆ ಆರಂಭಿಸಲು ಕರ್ನಾಟಕದಿಂದ ದೆಹಲಿವರೆಗೆ ಹೋರಾಟ ಮಾಡಿದೆ. ಅವರ ಸ್ವಾರ್ಥ ಹಾಗೂ ದೂರದೃಷ್ಟಿಯ ಲೋಪದಿಂದ ಕಾರ್ಖಾನೆಗೆ ಈ ದುರ್ಗತಿ ಒದಗಿಬಂದಿದೆ. ಕಾರ್ಖಾನೆ ಉಳಿಸಲು ನನ್ನ ಐದು ವರ್ಷಗಳ ಹೋರಾಟಕ್ಕೆ ಬೆಲೆಯೇ ಇಲ್ಲದಂತೆ ಮಾಡಿದರು. ಅವರು ಮಾಡಿದ ಸ್ವಾರ್ಥ ರಾಜಕಾರಣದಿಂದ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಟೀಕಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಕಾರ್ಖಾನೆ ಪುನಶ್ಚೇತನಕ್ಕೆ ನೂರಾರು ಕೋಟಿ ಹಣ ಕೊಟ್ಟರು. ಅದೆಲ್ಲಾ ಏನಾಯಿತು. ಆರ್ಥಿಕ ಶಿಸ್ತಿಇಲ್ಲದೆ ದುರುಪಯೋಗವಾಯಿತು.
ಇದಕ್ಕೆ ಜವಾಬ್ದಾರರು ಯಾರು ಎಂದು ಪ್ರಶ್ನಿಸಿದ ಸುಮಲತಾ, ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ನಾನು ಅವರನ್ನು ಭೇಟಿಯಾಗಿ ಕಾರ್ಖಾನೆ ಪುನಶ್ಚೇತನದ ಬಗ್ಗೆ ಚರ್ಚಿಸಿದಾಗ ಸರ್ಕಾರದಿಂದ ಹಣ ಕೊಡುವುದು ಬೇಡ. ಅದು ಸ್ವಾರ್ಥ ಮತ್ತು ಭ್ರಷ್ಟಾಚಾರಕ್ಕೆ ಬಳಕೆಯಾಗುತ್ತದೆ. ಒ ಅಂಡ್ ಎಂ ಮೂಲಕ ಆರಂಭಿಸೋಣ ಎಂದಾಗ ಸ್ಥಳೀಯ ಸಂಘಟನೆಗಳು ವಿರೋಧ ವ್ಯಕ್ತಪಡಿಸಿ ಸರ್ಕಾರವೇ ನಡೆಸಬೇಕು. ಸರ್ಕಾರವೇ ಉಳಿಸಬೇಕು ಎಂದು ಸ್ವಾರ್ಥ ಉದ್ದೇಶದಿಂದ ಪ್ರತಿಭಟನೆ ನಡೆಸಿದರು. ಆ ಪ್ರತಿಭಟನೆಯ ಹಿಂದೆ ಅವರಿಗೆ ಏನೇನು ಲಾಭಗಳಿತ್ತೋ ನನಗೆ ಗೊತ್ತಿಲ್ಲ. ನಾನು ಪ್ರತಿ ಹೆಜ್ಜೆ ಇಟ್ಟಾಗಲೆಲ್ಲಾ ಅಡ್ಡಗಾಲು ಹಾಕುತ್ತಿದ್ದರು. ಈಗ ಅವರೆಲ್ಲಾ ಎಲ್ಲಿದ್ದಾರೆ. ಬಂದು ಉತ್ತರ ಕೊಡಲಿ ಎಂದು ಖಾರವಾಗಿ ಹೇಳಿದರು. ಯಡಿಯೂರಪ್ಪನವರು ಅಧಿಕಾರದಲ್ಲಿದ್ದಾಗಲೇ ಒ ಅಂಡ್ ಎಂಗೆ ಒಪ್ಪಿಗೆ ಸೂಚಿಸಿದ್ದರೆ ನಾಲ್ಕು ವರ್ಷಗಳಲ್ಲಿ ಎಷ್ಟು ಸುಧಾರಣೆಯಾಗುತ್ತಿತ್ತು. ಇದರಿಂದ ನಿಜವಾಗಿಯೂ ಸಂಕಷ್ಟ ಅನುಭವಿಸಿದವರು ರೈತರು ಎಂದು ಬೇಸರದಿಂದ ನುಡಿದರು.
ಅರ್ಹ ವ್ಯಕ್ತಿಗಳಿಗೆ ಸರ್ಕಾರದ ಯೋಜನೆಗಳು ದೊರಕಬೇಕು: ಶಾಸಕ ವಿ.ಸುನಿಲ್ ಕುಮಾರ್
ಸಚ್ಚಿದಾನಂದ ಜೊತೆ ಅಸಮಾಧಾನವಿಲ್ಲ: ಸಚ್ಚಿದಾನಂದ ಆಗಿರಲಿ, ಬೇರೆ ಯಾರೇ ಆಗಿರಲಿ ನನ್ನೊಂದಿಗೆ ವಿಶ್ವಾಸದಿಂದ ಇದ್ದಾರೆ. ಅವರ ಮತ್ತು ನನ್ನ ನಡುವೆ ಯಾವುದೇ ಅಸಮಾಧಾನವಿಲ್ಲ. ನಮ್ಮ ಮನೆಗೆ ಬರುವವರೆಲ್ಲರೂ ಅಂಬರೀಶ್ ಮೇಲಿನ ಪ್ರೀತಿ-ಗೌರವದಿಂದಲೇ ಬರುತ್ತಾರೆ. ಎಲ್ಲರೂ ನನ್ನಲ್ಲಿ ಆತ್ಮವಿಶ್ವಾಸ ತುಂಬಿ ಮಂಡ್ಯದಿಂದ ನೀವೇ ಕಣಕ್ಕಿಳಿಯಬೇಕೆಂದು ಒತ್ತಡ ಹೇರುತ್ತಿದ್ದಾರೆ ಎಂದರು. ಎಪಿಎಂಸಿ ಮಾಜಿ ಅಧ್ಯಕ್ಷ ಕುದರಗುಂಡಿ ನಾಗೇಶ, ಮುಖಂಡರಾದ ನೀಲಕಂಠನಹಳ್ಳಿ ರಾಜು, ಜಿ.ಬಿ.ಕೃಷ್ಣ, ಕೆ.ಪಿ.ಕೃಷ್ಣಪ್ಪ, ಸತೀಶ್, ಕೋಣಸಾಲೆ ಜಯರಾಂ, ಮುಟ್ಟನಹಳ್ಳಿ ಮಹೇಂದ್ರ ಇದ್ದರು.