ನಾನು ಬಹಿರಂಗವಾಗಿಯೇ ಹೇಳುವೆ. ನಾವೇನು ಹರಿಶ್ಚಂದ್ರರಲ್ಲ: ಸಂಸದ ಕರಡಿ ಸಂಗಣ್ಣ
ಕೇಂದ್ರದ ಮಹತ್ವಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಮರ್ಪಕವಾಗಿಲ್ಲ. ರಾಜಕಾರಣಿಗಳೇ ಈ ಯೋಜನೆಯಲ್ಲಿ ಲೂಟಿ ಹೊಡೆದು, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದ್ದಾರೆ.
ಕಾರಟಗಿ (ಡಿ.02): ಕೇಂದ್ರದ ಮಹತ್ವಕಾಂಕ್ಷಿ ಯೋಜನೆ ಜಲಜೀವನ್ ಮಿಷನ್ ಯೋಜನೆ ಅನುಷ್ಠಾನ ಸಮರ್ಪಕವಾಗಿಲ್ಲ. ರಾಜಕಾರಣಿಗಳೇ ಈ ಯೋಜನೆಯಲ್ಲಿ ಲೂಟಿ ಹೊಡೆದು, ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಸಂಸದ ಕರಡಿ ಸಂಗಣ್ಣ ಆರೋಪಿಸಿದ್ದಾರೆ. ಪಟ್ಟಣದಲ್ಲಿ ಶುಕ್ರವಾರ ಅಂಚೆ ಕಚೇರಿ ಕಟ್ಟಡಕ್ಕೆ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದರು. ನಮ್ಮಂಥ ರಾಜಕಾರಣಿಗಳು ಇದರಲ್ಲಿ ಶಾಮೀಲಾಗಿ ಈ ಯೋಜನೆಯನ್ನು ಹಾಳು ಮಾಡಿದ್ದಾರೆ. ಜಿಲ್ಲೆಯ ಯೋಜನೆಯಲ್ಲಿ ಪರಿಷ್ಕೃತ ಅಂದಾಜು ನಡೆದು ಹೊಸ ಡಿಪಿಆರ್ ಮಾಡಲಾಗಿದೆ. ಇದು ₹೧೨೩ ಕೋಟಿ ಯೋಜನೆ. ಸಂಸದರಿಂದ ಹಿಡಿದು ಎಲ್ಲರೂ ಲೂಟಿ ಮಾಡಿದ್ದಾರೆ.
ಇರಲಿ, ನನ್ನನ್ನೂ ಸೇರಿ ಹೇಳುವೆ. ಈ ಯೋಜನೆ ಬಗ್ಗೆ ನಾನು ಬಹಿರಂಗವಾಗಿಯೇ ಹೇಳುವೆ. ನಾವೇನು ಹರಿಶ್ಚಂದ್ರರಲ್ಲ. ನ್ಯಾಯ, ಅನ್ಯಾಯ ನೋಡಬೇಕು. ಅನ್ಯಾಯದ ಹಣ ಗಳಿಸಿದವರು ನೆಮ್ಮದಿಯಿಂದ ನಿದ್ದೆ ಕೂಡ ಮಾಡಲ್ಲ. ದುಡಿದು ತಿನ್ನೋರು ನೆಮ್ಮದಿಯಿಂದ ನಿದ್ದೆ ಮಾಡ್ತಾರೆ. ಇದೆಲ್ಲ ಬಿಟ್ಟು ಜನರ ಸೇವೆ ಮಾಡಬೇಕೆಂದರು. ಜನ್‌ಧನ್ ಯೋಜನೆ ಉಚಿತ ಖಾತೆ ತೆರೆಯುವಲ್ಲಿಯೂ ಭ್ರಷ್ಟಾಚಾರವಿತ್ತು. ಮುಂದಿನ ದಿನಗಳಲ್ಲಿ ಈ ಯೋಜನೆ ಬದಲಾಗುತ್ತದೆ. ಇನ್ನು ಕೇಂದ್ರ ಸರ್ಕಾರದ ಸುಕನ್ಯಾ ಸಮೃದ್ಧಿ ಯೋಜನೆ ದೇಶದಲ್ಲಿಯೇ ಕೊಪ್ಪಳ ಜಿಲ್ಲೆ ನಂ.೧ ಸ್ಥಾನದಲ್ಲಿದೆ. ಯೋಜನೆ ಜಾರಿಯಾಗಿ ಒಂದೇ ತಿಂಗಳಲ್ಲಿಯೇ ೫೩೫೦ ಖಾತೆಗಳು ಆಗಿದ್ದು, ಇದು ದೇಶದಲ್ಲಿಯೇ ಮೊದಲು ಎಂದು ಕರಡಿ ಹರ್ಷ ವ್ಯಕ್ತಪಡಿಸಿದರು. ಕೊಪ್ಪಳ ಲೋಕಸಭೆ ವ್ಯಾಪ್ತಿಯಲ್ಲಿ ಬಹಳಷ್ಟು ಕಡೆ ಹೊಸ ಅಂಚೆ ಕಚೇರಿಗಳು ತೆರೆದಿವೆ. ಇವುಗಳ ಜತೆ ತಳಕಲ್, ಸಿಂಧನೂರು ತಾಲೂಕಿನ ಗೊರೆಬಾಳ ಗ್ರಾಮಗಳಲ್ಲಿ ಇಷ್ಟರಲ್ಲಿಯೇ ಅಂಚೆ ಕಚೇರಿ ಆರಂಭವಾಗುತ್ತದೆ ಎಂದರು.
ಶಾಲೆಗಳಿಗೆ ಬಾಂಬ್ ಬೆದರಿಕೆ - ವೀಕ್ ಲೀಡರ್ ಶಿಪ್ ಕಾರಣ: ಗೋವಿಂದ ಕಾರಜೋಳ
ಕೈ ಜೋಡಿಸಿ: ಹುಬ್ಬಳ್ಳಿ-ಹೈದ್ರಾಬಾದ್ ಮುಖ್ಯರಸ್ತೆ ಮಧ್ಯದ ಗಂಗಾವತಿ, ಕಾರಟಗಿ, ಸಿಂಧನೂರು ಪಟ್ಟಣಗಳು ವೇಗವಾಗಿ ಬೆಳೆಯುತ್ತಿವೆ. ಇವುಗಳಿಗೆ ಬೈಪಾಸ್ ನಿರ್ಮಾಣದ ಯೋಜನೆ ಇದಾಗಿದೆ. ರಾಜ್ಯ ಸರ್ಕಾರ ಅಗತ್ಯ ಅನುದಾನ ನೀಡಿದ್ದರೆ ಈ ಯೋಜನೆ ಸಾಕಾರವಾಗುತ್ತದೆ. ಜತೆಗೆ ಗದಗ-ವಾಡಿ ರೈಲ್ವೆ ಯೋಜನೆಗೂ ರಾಜ್ಯದ ಪಾಲಿನ ಅನುದಾನ ಬೇಕಾಗಿದೆ. ಅಂಜನಾದ್ರಿ ಅಭಿವೃದ್ಧಿಗೂ ಹೆಚ್ಚಿನ ಅನುದಾನದ ಅಗತ್ಯವಿದೆ. ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಜಿಲ್ಲಾ ಉಸ್ತುವಾರಿ ಸಚಿವರು ಮುಖ್ಯಮಂತ್ರಿ ಸಿದ್ದರಾಮಯ್ಯಗೆ ಒತ್ತಡ ಹೇರಿ ಅನುದಾನ ತರಬೇಕು ಎಂದು ಕರಡಿ ಹೇಳಿದರು.
ಮುನಿರಾಬಾದ್-ಮೆಹಬೂಬ್‌ನಗರ ರೈಲ್ವೆ ಕಾಮಗಾರಿ, ಮುಂದಿನ ದಿನದಲ್ಲಿ ಸಿಂಧನೂರಿಗೆ ರೈಲು ತರುವ ಕೆಲಸ ಮಾಡುತ್ತೇವೆ ಎಂದರು. ಅಂಚೆ ಕಚೇರಿ ವಿಮೆ ವಿಭಾಗದ ಅಧಿಕಾರಿ ಜಿ.ಎನ್.ಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿ, ನಗರದಲ್ಲಿ ಅಂಚೆ ಇಲಾಖೆ ವಿಭಾಗೀಯ ಕಾರ್ಯಾಲಯ ಮಂಜೂರು ಮಾಡಿಸುವಂತೆ ಸಂಸದರಲ್ಲಿ ಮನವಿ ಮಾಡಿದರು. ಜಿಲ್ಲೆಯಲ್ಲಿ ೧೯೦ ಅಂಚೆ ಶಾಖಾ ಕಚೇರಿಗಳಿವೆ. ಪ್ರತಿಯೊಂದು ಕೆಲಸಕ್ಕೆ ಗದಗಗೆ ಹೋಗಬೇಕಾಗಿದ್ದು, ಕೂಡಲೇ ಕೇಂದ್ರ ಸರ್ಕಾರದ ಮೂಲಕ ಕೊಪ್ಪಳದಲ್ಲಿ ಒಂದು ವಿಭಾಗೀಯ ಕಚೇರಿ ಮಂಜೂರು ಮಾಡಿಸಿಕೊಡಿ ಎಂದರು.
ಸಚಿವ ಜೋಶಿಗೆ ಅವರಿಗೇನು ಅಂತರಾತ್ಮ ಇದೆಯಾ?: ಜಗದೀಶ್ ಶೆಟ್ಟರ್ ವ್ಯಂಗ್ಯ
ಗದಗ ವಿಭಾಗ ಅಂಚೆ ಅಧೀಕ್ಷಕ ಬಿ.ನಾರಾಯಣ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಶಾಸಕ ಬಸವರಾಜ ದಢೇಸ್ಗೂರು, ಉದ್ಯಮಿ ಎನ್.ಶ್ರೀನಿವಾಸ್‌ರಾವ್, ಜಿಪಂ ಮಾಜಿ ಅಧ್ಯಕ್ಷ ಅಮರೇಶ ಕುಳಗಿ, ಮಾಜಿ ಸದಸ್ಯ ವೀರೇಶ ಸಾಲೋಣಿ, ಪುರಸಭೆ ಸದಸ್ಯರಾದ ಸೋಮಶೇಖರ ಬೇರ್‍ಗಿ, ರಾಜಶೇಖರ ಸಿರಗೇರಿ, ಆನಂದ, ಬಸವರಾಜ ಕೊಪ್ಪದ, ಬಸವರಾಜ ಎತ್ತಿನಮನಿ, ಫಕ್ಕೀರಪ್ಪ, ಆನಂದ ಮತ್ತು ಮುಖಂಡರಾದ ಶಿವಶರಣೇಗೌಡ ಯರಡೋಣಾ, ಶರಣಪ್ಪ ಗದ್ದಿ, ಬೂದಿ ಪ್ರಭುರಾಜ್ ಇದ್ದರು.