ಅಶೋಕ್‍ಗೆ ಶಾಕ್: ಡಿಕೆಶಿ ಸಮ್ಮುಖದಲ್ಲಿ ಕಾಂಗ್ರೆಸ್ ಸೇರಿದ ಬಿಜೆಪಿ ಮಾಜಿ ಕಾರ್ಪೋರೇಟರ್‌ಗಳು
ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಪದ್ಮನಾಭಗರನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲಬೇಕು. ಅದಕ್ಕೆ ಈ ಶುಭ ಶುಕ್ರವಾರದ ದಿನದ ಪಕ್ಷ ಸೇರ್ಪಡೆ ಕಾರ್ಯಕ್ರಮ ಪೀಠಿಕೆಯಾಗಬೇಕು" ಎಂದು ಕರೆ ನೀಡಿದರು.

ಬೆಂಗಳೂರು (ಸೆ.16): ಆಪರೇಷನ್ ಹಸ್ತದ ಮುಂದುವರೆದ ಭಾಗವಾಗಿ ಬೆಂಗಳೂರಿನ ಪದ್ಮನಾಭನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಹಿರಿಯ ಮುಖಂಡ ಹಾಗೂ ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್ ಹಾಗೂ ಜೆಡಿಎಸ್ ನಾಯಕ ಪ್ರಸಾದ್‌ಬಾಬು (ಕಬ್ಬಡ್ಡಿ ಬಾಬು) ಸೇರಿದಂತೆ 15ಕ್ಕೂ ಹೆಚ್ಚು ಮಂದಿ ಜೆಡಿಎಸ್-ಬಿಜೆಪಿ ನಾಯಕರು ಹಾಗೂ ಬಿಬಿಎಂಪಿ ಮಾಜಿ ಸದಸ್ಯರು ಶುಕ್ರವಾರ ಕೆಪಿಸಿಸಿ ಕಚೇರಿಯ ಭಾರತ ಜೋಡೋ ಸಭಾಂಗಣದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡಿದ್ದಾರೆ.
ಪಕ್ಷದ ಬಾವುಟ ನೀಡಿ ಬರ ಮಾಡಿಕೊಂಡ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು, "ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಶತಾಯಗತಾಯ ಪದ್ಮನಾಭಗರನದಲ್ಲಿ ಕಾಂಗ್ರೆಸ್ ಅಭ್ಯರ್ಥಿಯೇ ಗೆಲ್ಲಬೇಕು. ಅದಕ್ಕೆ ಈ ಶುಭ ಶುಕ್ರವಾರದ ದಿನದ ಪಕ್ಷ ಸೇರ್ಪಡೆ ಕಾರ್ಯಕ್ರಮ ಪೀಠಿಕೆಯಾಗಬೇಕು" ಎಂದು ಕರೆ ನೀಡಿದರು. ಇದೇ ವೇಳೆ ಮತ್ತೆ ಮುಂದಿನ ತಿಂಗಳು 20,21 ರಂದು ಮತ್ತೊಂದು ಸರಣಿ ಪಕ್ಷ ಸೇರ್ಪಡೆ ನಡೆಯಲಿದೆ. ನಾನು ಮಾತನಾಡುವುದಿಲ್ಲ, ಮಾಡಿ ತೋರಿಸುತ್ತೇನೆ ಎಂದು ಹೇಳುವ ಮೂಲಕ ಮತ್ತೊಂದು ಆಪರೇಷನ್ ಹಸ್ತದ ಮುನ್ಸೂಚನೆ ನೀಡಿದರು.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ: ಸಂಸದ ಮುನಿಸ್ವಾಮಿ ಭವಿಷ್ಯ
ನಿಮ್ಮ ಸ್ವಾಭಿಮಾನಕ್ಕೆ ಧಕ್ಕೆಯಾಗದಂತೆ ನಡೆಸಿಕೊಳ್ಳುತ್ತೇವೆ. ಸಾಕಷ್ಟು ಸಮಿತಿಗಳು, ನಿಗಮ-ಮಂಡಳಿಗಳು ಇವೆ. ತಾಳ್ಮೆಯಿಂದ ಇದ್ದರೆ ನಿಮಗೂ ಸೂಕ್ತ ಸ್ಥಾನಮಾನ ದೊರೆಯುತ್ತದೆ. ಇಂದು ಪಕ್ಷ ಸೇರಿದವರು ಬೆಂಗಳೂರಿನಲ್ಲಿ ಹಾಗೂ ಪದ್ಮನಾಭನಗರದಲ್ಲಿ ದೊಡ್ಡ ಸಂಘಟನ ಶಕ್ತಿಗಳು. ಸೂಕ್ತ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಸೇರಿರುವ ನಿಮ್ಮ ನಿರ್ಧಾರ ಸರಿಯಾಗಿದೆ. ಪದ್ಮನಾಭನಗರದ ನಾಯಕರನ್ನು ಅಪ್ಪಿಕೊಳ್ಳುವ ಭಾಗ್ಯ ಸಿಕ್ಕಿದ್ದು ನಮ್ಮ ಪುಣ್ಯ ಎಂದು ಹಾಡಿ ಹೊಗಳಿದರು.
ರಾಮಲಿಂಗಾರೆಡ್ಡಿ ಅವರು ಹಾಗೂ ನಾವು ಪದ್ಮನಾಭನಗರದ ಪಕ್ಷದ ನಾಯಕರ ಜೊತೆಗಿದ್ದೇವೆ. ಪಕ್ಷದ ಹಳಬರನ್ನು ಜೊತೆಯಲ್ಲಿ ಕರೆದುಕೊಂಡು ಹೋಗಬೇಕು. ಅವರು ಪಕ್ಷದ ಬಾವುಟು ಹಿಡಿದು ಹೆಣ, ಪಲ್ಲಕ್ಕಿ ಹೊತ್ತಿದ್ದಾರೆ. ಅವರನ್ನು ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಈ ಹಿಂದೆ ಕಾಂಗ್ರೆಸ್ ಸೇರುವವರನ್ನು ತಡೆದು ಅಡ್ಡಿಪಡಿಸಿದರು. ಅಶೋಕಣ್ಣನಿಗೆ ಹಲವು ಕ್ಷೇತ್ರಗಳಿದ್ದರೂ ಪದ್ಮನಾಭನಗರದ ನಿಷ್ಠಾವಂತರ ಬೆಳವಣಿಗೆಗೆ ಅಡ್ಡಿಯಾಗಿ ನಿಂತರು. ಮುಂದಿನ ದಿನಗಳಲ್ಲಿ ಏನೇನಾಗುತ್ತದೆ ಎಂಬುದನ್ನು ನೋಡೋಣ ಎಂದರು.
15ಕ್ಕೂ ಹೆಚ್ಚು ಮಂದಿ ಪಕ್ಷ ಸೇರ್ಪಡೆ: ಮಾಜಿ ಉಪಮೇಯರ್ ಎಲ್. ಶ್ರೀನಿವಾಸ್, ಜೆಡಿಎಸ್ ಮುಖಂಡ ಪ್ರಸಾದ್ ಬಾಬು (ಕಬಡ್ಡಿ ಬಾಬು) ಜತೆಗೆ ಬಿಬಿಎಂಪಿ ಮಾಜಿ ಸದಸ್ಯರಾದ ಶೋಭಾ ಆಂಜಿನಪ್ಪ, ಎಚ್. ನಾರಾಯಣ್, ವಿ. ಬಾಲಕೃಷ್ಣ, ವೆಂಕಟಸ್ವಾಮಿ ನಾಯ್ಡು, ಸಿ.ಎಲ್. ಗೋವಿಂದರಾಜು, ಎಚ್.ಸುರೇಶ್, ಸುಗುಣ ಬಾಲಕೃಷ್ಣ, ಬಾಲಕೃಷ್ಣ, ಮಾಜಿ ತಾ.ಪಂ. ಸದಸ್ಯ ಆರಪ್ಪ, ಜೆಡಿಎಸ್ ಮುಖಂಡ ಅಕ್ಬರ್ ಖಾನ್, ಧಾರವಾಹಿ ನಟ ರವಿಕಿರಣ್ ಸೇರಿ 15ಕ್ಕೂ ಹೆಚ್ಚು ಮಂದಿಗೆ ಪಕ್ಷದ ಶಾಲು ಹೊದಿಸಿ ಬಾವುಟ ನೀಡಿ ಡಿ.ಕೆ. ಶಿವಕುಮಾರ್ ಸ್ವಾಗತಿಸಿದರು.
33 ವರ್ಷಗಳಿಂದ ಬಿಜೆಪಿಯಲ್ಲ ಸೇವೆ ಮಾಡಿದ್ದೇನೆ. ಮಾಜಿ ಪಾಲಿಕೆ ಸದಸ್ಯರಿಗೆ ಶಾಸಕರ ಕಚೇರಿಯಲ್ಲಿ ಕನಿಷ್ಠ ಗೌರವವನ್ನೂ ನೀಡುತ್ತಿರಲಿಲ್ಲ. ನಮ್ಮನ್ನು ಹೀನಾಯವಾಗಿ ನಡೆಸಿಕೊಂಡರು. ನಮ್ಮನ್ನು ಬಳಸಿಕೊಂಡು ಬೆಳೆದು ಕಾಲ ಕಸ ಮಾಡಿಕೊಂಡರು. ಮೇಯರ್ ಆಯ್ಕೆ ಸಂದರ್ಭದಲ್ಲಿ ಅರ್ಹತೆ ಇದ್ದರೂ ತಪ್ಪಿಸಿದರು. ಒಕ್ಕಲಿಗರ ಸಂಘದ ಚುನಾವಣೆಯಲ್ಲೂ ನನ್ನ ವಿರುದ್ಧ ಪಿತೂರಿ ಮಾಡಿದರು. ಆದರೆ ಡಿ.ಕೆ. ಶಿವಕುಮಾರ್, ಡಿ.ಕೆ. ಸುರೇಶ್ ಹಾಗೂ ರಾಮಲಿಂಗಾರೆಡ್ಡಿ ಅವರು ನಮಗೆ ಬೆಂಬಲ ನೀಡಿದರು. ಅ.15 ರಂದು ಪದ್ಮನಾಭನಗರದಲ್ಲಿ 20 ಸಾವಿರ ಮಂದಿಯನ್ನು ಸೇರಿಸಿ ಬೃಹತ್ ಕಾರ್ಯಕ್ರಮ ಮಾಡುತ್ತೇವೆ.
-ಎಲ್. ಶ್ರೀನಿವಾಸ್, ಬಿಬಿಎಂಪಿ ಮಾಜಿ ಉಪಮೇಯರ್.
2003ರಲ್ಲೇ ಡಿ.ಕೆ. ಶಿವಕುಮಾರ್ ಅವರು ನನಗೆ ಕಾಂಗ್ರೆಸ್ಸಿಗೆ ಆಹ್ವಾನ ನೀಡಿದ್ದರು. ಇದೀಗ ಕಾಲ ಕೂಡಿ ಬಂದಿದ್ದು ಮುಂದೆ ಇನ್ನೂ ದೊಡ್ಡ ಸಂಖ್ಯೆಯಲ್ಲಿ ಪಕ್ಷ ಸೇರ್ಪಡೆ ಆಗಲಿದೆ. ನನ್ನ ಜೀವನದಲ್ಲಿ ರಾಜಕೀಯದ ಕೊನೆ ದಿನಗಳಲ್ಲಿ ಶಿವಕುಮಾರ್ ಅವರ ಜತೆ ಕಳೆಯಲು ಬಯಸಿ ಪಕ್ಷ ಸೇರಿದ್ದೇನೆ. ಲೋಕಸಭೆ ಚುನಾವಣೆಯಲ್ಲಿ ಡಿ.ಕೆ. ಸುರೇಶ್ ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಕೆಲಸ ಮಾಡುತ್ತೇವೆ.
-ಪ್ರಸಾದ್ ಬಾಬು (ಕಬ್ಬಡ್ಡಿ ಬಾಬು), ಜೆಡಿಎಸ್ ನಾಯಕ
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?
ಬಹಳ ನೊಂದು ಈ ತೀರ್ಮಾನ ಮಾಡಿದ್ದೇವೆ. ಬಿಜೆಪಿಯಲ್ಲಿ ನಮಗೆ ಬೆನ್ನಿಗೆ ಚೂರಿ ಹಾಕಿದರು. ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಹೇಗೆ ಬಿಜೆಪಿ ಕಟ್ಟಿದೆನೋ ಅದೇ ರೀತಿ ಕಾಂಗ್ರೆಸ್ಸನ್ನು ಕಟ್ಟುತ್ತೇನೆ. ಹೆಚ್ಚೆಚ್ಚು ಮಂದಿಯನ್ನು ಕಾಂಗ್ರೆಸ್ಸಿಗೆ ಸೇರಿಸುತ್ತೇನೆ. ಇಲ್ಲದಿದ್ದರೆ ರಸ್ತೆಯಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ.
-ವಿ. ಬಾಲಕೃಷ್ಣ, ಬಿಬಿಎಂಪಿ ಮಾಜಿ ಸದಸ್ಯ