ರಾಜ್ಯದಲ್ಲಿ ಈಗಾಗಲೇ ನಿಗಮ-ಮಂಡಳಿ ನೇಮಕ ಆಗಿದ್ದರೂ ಇನ್ನೂ 40 ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ 30ಕ್ಕೂ ಹೆಚ್ಚು ಹುದ್ದೆಗಳ ನೇಮಕ ಬಾಕಿ ಇತ್ತು.
ಬೆಂಗಳೂರು (ಜು.17): ರಾಜ್ಯದಲ್ಲಿನ ಖಾಲಿ ಇರುವ ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಸದಸ್ಯರ ನೇಮಕ ಕುರಿತು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್‌ಸಿಂಗ್ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳೊಂದಿಗೆ ಬುಧವಾರ ಮಹತ್ವದ ಸಭೆ ನಡೆಸಿದ್ದು, ಮೂರ್ನಾಲ್ಕು ದಿನಗಳಲ್ಲಿ ಖಾಲಿ ಸ್ಥಾನಗಳಿಗೆ ನೇಮಕಾತಿ ಆದೇಶ ಹೊರಬೀಳುವ ಸಾಧ್ಯತೆಯಿದೆ. ರಾಜ್ಯದಲ್ಲಿ ಈಗಾಗಲೇ ನಿಗಮ-ಮಂಡಳಿ ನೇಮಕ ಆಗಿದ್ದರೂ ಇನ್ನೂ 40 ನಿಗಮ-ಮಂಡಳಿಗಳ ಅಧ್ಯಕ್ಷ, ಉಪಾಧ್ಯಕ್ಷರ 30ಕ್ಕೂ ಹೆಚ್ಚು ಹುದ್ದೆಗಳ ನೇಮಕ ಬಾಕಿ ಇತ್ತು. ಅಲ್ಲದೆ ಸಾವಿರಕ್ಕೂ ಹೆಚ್ಚು ಸದಸ್ಯರ ನೇಮಕವೂ ಆಗಿರಲಿಲ್ಲ.
ಈ ಬಗ್ಗೆ ನಿಗಮ-ಮಂಡಳಿ ಸದಸ್ಯರು ಹಾಗೂ ನಿರ್ದೇಶಕರನ್ನಾಗಿ ಕಾರ್ಯಕರ್ತರನ್ನು ನೇಮಿಸುವ ಕುರಿತು ಪಟ್ಟಿ ಸಿದ್ಧಪಡಿಸುವಂತೆ ಡಾ.ಜಿ.ಪರಮೇಶ್ವರ್ ನೇತೃತೃತ್ವದಲ್ಲಿ 2024ರ ಜೂನ್‌ನಲ್ಲೇ ಸಮಿತಿ ರಚಿಸಲಾಗಿತ್ತು. ಸಮಿತಿ ವರದಿ ನೀಡಿದ್ದರೂ ಈವರೆಗೆ ನೇಮಕಾತಿ ನಡೆದಿರಲಿಲ್ಲ. ಇದೀಗ ಪಟ್ಟಿ ಬಹುತೇಕ ಅಂತಿಮವಾಗಿದ್ದು ಬುಧವಾರ ಸಂಜೆ ಸಚಿವರೊಂದಿಗಿನ ಸಭೆ ಬಳಿಕ ಸುರ್ಜೇವಾಲಾ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರೊಂದಿಗೆ ನಿಗಮ-ಮಂಡಳಿ ಬಗ್ಗೆ ಚರ್ಚಿಸಿದ್ದಾರೆ. ಇದಕ್ಕೂ ಮೊದಲು ಸಮಿತಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಅವರೊಂದಿಗೂ ವಿವರಣೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಪಟ್ಟಿ ಬಹುತೇಕ ಅಂತಿಮಗೊಂಡಿದೆ. ಪಕ್ಷದ ಶಾಸಕರು, ಮೇಲ್ಮನೆ ಸದಸ್ಯರು, ಸಂಸದರು, ಪರಾಜಿತ ಅಭ್ಯರ್ಥಿಗಳು ಹಾಗೂ ಡಿಸಿಸಿ ಅಧ್ಯಕ್ಷರ ಶಿಫಾರಸು ಆಧರಿಸಿ ಅರ್ಹರಾದವರ ಪಟ್ಟಿಯನ್ನು ಪುನಃ ಪರಿಶೀಲನೆಗೆ ಒಳಪಡಿಸಿ ಅಂತಿಮ ಪಟ್ಟಿ ಸಿದ್ಧಪಡಿಸಲಾಗಿದೆ. ಮುಖ್ಯಮಂತ್ರಿಗಳು ಸದ್ಯದಲ್ಲೇ ಅನುಮೋದನೆ ನೀಡಲಲಿದ್ದು, 3-4 ದಿನಗಳಲ್ಲಿ ಇಲಾಖಾವಾರು ನೇಮಕ ಆದೇಶಗಳು ಹೊರಬೀಳುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನಿಗಮ-ಮಂಡಳಿಗೆ ಸದಸ್ಯರ ನೇಮಿಸಲು ಕಾರ್ಯಕರ್ತರ ಪಟ್ಟಿ ಸಿದ್ಧಪಡಿಸಲು ನನಗೆ ಜವಾಬ್ದಾರಿ ನೀಡಿದ್ದರು. ವರದಿಯನ್ನು ಮುಖ್ಯಮಂತ್ರಿಗಳಿಗೆ ಸಲ್ಲಿಸಿದ್ದೆ. ಇದೀಗ ಮುಖ್ಯಮಂತ್ರಿಗಳು, ಕೆಪಿಸಿಸಿ ಅಧ್ಯಕ್ಷರು ಹಾಗೂ ಸುರ್ಜೇವಾಲ ಅವರು ವರದಿ ಪರಿಶೀಲಿಸಿ ಕಾರ್ಯಕರ್ತರಿಗೆ ಜವಾಬ್ದಾರಿ ನೀಡಲು ತೀರ್ಮಾನ ಮಾಡಿದ್ದಾರೆ
-ಡಾ.ಜಿ.ಪರಮೇಶ್ವರ, ಗೃಹ ಸಚಿವ
