ಬೆಂಗಳೂರು, (ಜೂನ್.01): ಇದೇ ಜೂನ್ 7ರಂದು ನಡೆಯಬೇಕಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ‌‌.ಶಿವಕುಮಾರ್ ಅಧಿಕೃತವಾಗಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಮತ್ತೆ ಮುಂದೂಡಲಾಗಿದೆ.

ಕಳೆದ ಭಾನುವಾರ ಲಾಕ್‌ ಡೌನ್ ಕರ್ಪ್ಯೂನಿಂದಾಗಿ ಮುಂದೂಡಿಕೆಯಾಗಿದ್ದ ಕೆಪಿಸಿಸಿ ಅಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಈಗ ಜೂನ್ 7ಕ್ಕೆ ಮುಂದೂಡಿಕೆಯಾಗಿತ್ತು. ಆದ್ರೆ, ಇದೀಗ ಲಾಕ್ ಡೌನ್ 5.0 ನಿಂದಾಗಿ ರಾಜಕೀಯ ಕಾರ್ಯಕ್ರಮಗಳನ್ನು ನಡೆಸದಂತೆ ಕೇಂದ್ರ ಸರ್ಕಾರ ಸೂಚಿಸಿದ್ದರಿಂದ ಪ್ರಮಾಣವಚನ ಮತ್ತೆ ಮುಂದೂಡಿಕೆಯಾಗಿದೆ.

ಡಿ.ಕೆ. ಶಿವಕುಮಾರ ಅಧಿ​ಕಾರ ಸ್ವೀಕ​ರಿ​ಸುವ ಕಾರ್ಯ​ಕ್ರಮ ಅನ್‌ಲೈನ್‌ನಲ್ಲಿ ನೇರ ಪ್ರಸಾ​ರ

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆಶಿ, ಮಾರ್ಚ್ 11ರಂದು ಕೆಪಿಸಿಸಿ ಅಧ್ಯಕ್ಷನಾಗಿ ನೇಮಕೊಂಡಿದ್ದೇನೆ. ಈಗ ಜೂನ್ 7ರಂದು ನಾನು ಕೆಪಿಸಿಸಿ ಅಧಿಕಾರ ಸ್ವೀಕರಿಸುವ ಕಾರ್ಯಕ್ರಮ ಮಾಡಬೇಡಿ ಎಂದು ಸರ್ಕಾರದವರು ಹೇಳಿದ್ದಾರೆ. ಆದ್ದರಿಂದ ನಾವು ಮಾಡಿಕೊಂಡಿದ್ದ ಎಲ್ಲಾ ಸಿದ್ಧತೆಗಳು ಹಾಳಾಗಿವೆ. ಇದರ ಹಿಂದೆ ರಾಜಕೀಯ ಹುನ್ನಾರವಿದೆ ಎಂದು ಆರೋಪಿಸಿದರು.

ಸಂವಿಧಾನದ ಪ್ರಿಯಾಂಬಲ್ ಓದಿ, ಗಾಮ ಪಂಚಾಯಿತಿ ಮಟ್ಟದಲ್ಲಿ 7800 ಕಡೆ ವಂದೇ ಮಾತರಂ ಹಾಡುವ ಮೂಲಕ ಅಧಿಕಾರ ಸ್ವೀಕರಿಸಲು ಸಿದ್ಧತೆಗಳು ಮಾಡಿಕೊಂಡಿದ್ದೆವು, ಇದಕ್ಕೆ ಸರ್ಕಾರ ಕಮೀಷನರ್ ಒಪ್ಪಿಗೆಯನ್ನೂ ಸಹ ಕೇಳಿದ್ದೆವು. ಆದ್ರೆ, ಇದೀಗ ರಾಜಕೀಯ ಕಾರ್ಯಕ್ರಮ ಮಾಡುವಂತಿಲ್ಲ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. ಆದ್ದರಿಂದ ಜೂನ್ 7ರಂದು ನಡೆಯಬೇಕಿದ್ದ ಪದಗ್ರಹಣ ಕಾರ್ಯಕ್ರಮ ಮುಂದೂಡಲಾಗಿದೆ ಎಂದು ಸ್ಪಷ್ಟಪಡಿಸಿದರು.

ಯಾವುದೇ ಕಾರಣಕ್ಕೂ ಪದಗ್ರಹಣ ಕಾರ್ಯಕ್ರಮ ರದ್ದಾಗುವುದಿಲ್ಲ. ಆದರೆ ದಿನಾಂಕ ಬದಲಾಗುತ್ತದೆ. ಕಾನೂನು , ಸರ್ಕಾರದ ತೀರ್ಮಾನಕ್ಕೆ ಗೌರವ ಕೊಟ್ಟು ಮತ್ತೊಂದು ದಿನಾಂಕವನ್ನು ಗೊತ್ತುಪಡಿಸಿ ಅಧಿಕಾರ ಸ್ವೀಕಾರ ಮಾಡುವುದಾಗಿ ಶಿವಕುಮಾರ್ ಹೇಳಿದರು.