ಬೆಂಗಳೂರು, (ಆ.02): ನಾನು ಬಹಿರಂಗವಾಗಿ ಕೊರೋನಾ ಉಪಕರಣ ಖರೀದಿ ಅಕ್ರಮಗಳನ್ನು ಪ್ರಶ್ನಿಸಿದ ನಂತರ ಲೂಟಿ ಸ್ವಲ್ಪ ನಿಯಂತ್ರಣಕ್ಕೆ ಬಂದಿದೆ. ಕೋಟ್ಯಂತರ ರೂಪಾಯಿ ಖರೀದಿ ಆದೇಶಗಳನ್ನು ಸರ್ಕಾರ ತಡೆಹಿಡಿದಿದೆ. ಹೊಟ್ಟೆಗೆ ಕಲ್ಲು ಹಾಕಿದನಲ್ಲ ಎಂದು ಅವರಿಗೆಲ್ಲ ನನ್ನ ಮೇಲೆ ಕೋಪ. ಅದಕ್ಕಾಗಿ ನನ್ನ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.

ಸರಣಿ ಟ್ವೀಟ್‌ ಮಾಡಿ ಸರ್ಕಾರವನ್ನು ತರಾಟೆಗೆ ತೆದುಕೊಮಡಿರುವ ಸಿದ್ದರಾಮಯ್ಯ, ಅಕ್ರಮ ಪ್ರಶ್ನಿಸಿದ ನಮಗೆ ವಕೀಲರ ಮೂಲಕ ನೋಟೀಸ್ ಕೊಟ್ಟು  ನಮ್ಮ‌ ಕೆಲಸವನ್ನು ಸುಲಭ‌ ಮಾಡಿದೆ.  ನಾವೇ ನ್ಯಾಯಾಲಯದ ಮೆಟ್ಟಿಲು ಹತ್ತಬೇಕೆಂದಿದ್ದೆವು. ನಮಗೆ ನೀಡದ ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಲೇ ಬೇಕಲ್ಲಾ? ಕೋರ್ಟ್ ನಲ್ಲಿಯಾದರೂ ನಮ್ಮನ್ನು ಎದುರಿಸಲೇ ಬೇಕಲ್ಲಾ? ಟಾಂಗ್ ಕೊಟ್ಟರು.

ನಾನು ಯಡಿಯೂರಪ್ಪನವರ ಹಳೇ ಕೇಸ್‌ ಬಗ್ಗೆ ಮಾತಾಡ್ಲಾ? ಸಿದ್ದು ತಿರುಗೇಟು

24 ಗಂಟೆಯೊಳಗೆ ಸಿದ್ದರಾಮಯ್ಯನವರ ಮನೆಬಾಗಿಲಿಗೆ ಮಾಹಿತಿ ಕಳುಹಿಸಿ ಕೊಡುತ್ತೇನೆ ಎಂದು ಮುಖ್ಯಮಂತ್ರಿ ಹೇಳಿ 24 ದಿನ ಕಳೆದು ಹೋಗಿದೆ. ಇಲ್ಲಿಯವರೆಗೂ ರಾಜ್ಯ ಸರ್ಕಾರದಿಂದ ಒಂದು ಹಾಳೆ ಮಾಹಿತಿ ನನಗೆ ಬಂದಿಲ್ಲ. ಸತ್ಯ ಹೇಳಲು ನಿಮಗೆ ಭಯವೇಕೆ ಎಂದು ಅಕ್ರಮದ ಬಗ್ಗೆ ಮುಖ್ಯಮಂತ್ರಿಯವರನ್ನು ಪ್ರಶ್ನಿಸಿದರೆ ಮಾಹಿತಿ ಕೊಡಿ ಎನ್ನುತ್ತಾರೆ. ದಾಖಲೆ ಬಿಡುಗಡೆ ಮಾಡಿದರೆ ಅದೆಲ್ಲ ಸುಳ್ಳು ಎನ್ನುತ್ತಾರೆ. ತನಿಖೆ ಮಾಡಿಸಿ ಎಂದರೆ ಸುಳ್ಳಿನ ಬಗ್ಗೆ ತನಿಖೆ ಯಾಕೆ ಎಂದು ಕೇಳುತ್ತಾರೆ. ಜನರ ಬಳಿಗೆ ಹೋಗದೆ ನಮಗೆ ಬೇರೆ ದಾರಿ ಏನಿದೆ ಎಂದಿದ್ದಾರೆ.

ರಾಜ್ಯದಲ್ಲಿ ವೆಂಟಿಲೇಟರ್ ಇಲ್ಲ, ಬೆಡ್ ಕೊರತೆ ಇದೆ. ಆಕ್ಸಿಜನ್ ಪೂರೈಕೆ ಯಂತ್ರಗಳಿಲ್ಲ. ಊಟ ತಿಂಡಿ ಇಲ್ಲ, ಉದ್ಯೋಗವಿಲ್ಲ ಎಂದು ಜನ ಗೋಳಾಡುತ್ತಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನರ ಕಷ್ಟ ಕಾಣಲಿಲ್ಲ. ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಗಳಿಸಬಹುದಾದ ದುಡ್ಡು ಕಾಣುತ್ತಿದೆ ಎಂದು ಕಿಡಿಕಾರಿದ್ದಾರೆ.

ರಾಜ್ಯದಲ್ಲಿ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ ಏರಿಕೆಯಾಗುತ್ತಿದೆ. ವೈದ್ಯಕೀಯ ಸೌಲಭ್ಯ ಸಿಗದೇ ಜನ ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಸತ್ತ ಮೇಲೆಯೂ ಸರಿಯಾಗಿ ಅಂತ್ಯಕ್ರಿಯೆ ನಡೆಸುತ್ತಿಲ್ಲ. ನಾವು ಸುಮ್ಮನಿರಬೇಕೆ ಎಂದು ಪ್ರಶ್ನಿಸಿದ್ದಾರೆ.

ನಾನೇನು ಹೆದರಿಕೊಳ್ತಿನಾ? ನೋಟಿಸ್ ಬಂಡವಾಳ ಏನು ನನಗೆ ಗೊತ್ತಿಲ್ವಾ..? ಗುಡುಗಿದ ಸಿದ್ದು

ಉಳಿದ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದಲ್ಲಿ ಕೊರೋನಾ ನಿಯಂತ್ರಣದಲ್ಲಿತ್ತು ಎನ್ನುವ ಕಾರಣಕ್ಕೆ ಸಹಿಸಿಕೊಂಡು ಸುಮ್ಮನಿದ್ದೆವು. ಈಗ ಅನೇಕ ರಾಜ್ಯಗಳನ್ನು ಹಿಂದಿಕ್ಕಿ ಕರ್ನಾಟಕ ನಂಬರ್ ಒಂದಾಗಲು ಹೊರಟಿದೆ. ಈಗಲೂ ಸುಮ್ಮನಿದ್ದರೆ ಜನದ್ರೋಹ ಆಗಲಾರದೇ ಎಂದು ಕೇಳಿದ್ದಾರೆ.

ನಮ್ಮಿಂದ ಸಹಕಾರ ನಿರೀಕ್ಷಿಸುವ ಬಿಜೆಪಿ ಸರ್ಕಾರ ಕೊರೋನಾ ಕಾಲದಲ್ಲಿ ಮಧ್ಯಪ್ರದೇಶದಲ್ಲಿ ನಮ್ಮ ಸರ್ಕಾರಕ್ಕೆ ಯಾಕೆ ಸಹಕಾರ ಕೊಡಲಿಲ್ಲ. ರಾಜಸ್ಥಾನದ ನಮ್ಮ ಸರ್ಕಾರವನ್ನು ಉರುಳಿಸಲು ಹೊರಟಿದ್ದೇಕೆ ಎಂದು ಚಾಟಿ ಬೀಸಿದರು