ಬೆಂಗಳೂರು, (ಜುಲೈ.18): ಕೊರೋನಾ ನಿಯಂತ್ರಣಕ್ಕೆ ರಾಜ್ಯ ಸರ್ಕಾರದ ಖರ್ಚುವೆಚ್ಚಗಳ ಕುರಿತು ಟ್ವಿಟರ್ ನಲ್ಲಿ ಸಿಎಂ ಲೆಕ್ಕಕೊಡಿ ಎಂಬ ಹ್ಯಾಶ್'ಟ್ಯಾಗ್ ಮೂಲಕ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಭಿಯಾನ ಆರಂಭಿಸಿದ್ದಾರೆ. ಇದರ ಬೆನ್ನಲೇ ಇದೀಗ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಸಾಕ್ಷಿ ಸಮೇತ ಅಖಾಡಕ್ಕಿಳಿದಿದ್ದಾರೆ. 

ಕೊರೋನಾ ನಿರ್ವಹಣೆ ನೆಪದಲ್ಲಿ ಸರ್ಕಾರ ಕೋಟ್ಯಂತರ ರೂ. ಅವ್ಯವಹಾರ ನಡೆಸಿದೆ ಎಂದು ಆರೋಪಿಸುತ್ತಲೇ ಇದ್ದ ವಿರೋಧ ಪಕ್ಷ, ಇಂದು(ಶನಿವಾರ)  'ಉತ್ತರ ಕೊಡಿ ಬಿಜೆಪಿ' ಎಂದು ಡಿಕೆಶಿ ರಾಜ್ಯ ಸರ್ಕಾರಕ್ಕೆ ಚಾಟಿ ಬೀಸಿದ್ದಾರೆ.

ಸರ್ಕಾರದ ವಿರುದ್ಧ ‘ಲೆಕ್ಕ ಕೊಡಿ’ ಅಭಿಯಾನ: ಸಿದ್ದರಾಮಯ್ಯರಿಂದ 100 ಸೆಕೆಂಡಲ್ಲಿ 6 ಪ್ರಶ್ನೆ! 

ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಇಲ್ಲಿ ಜಗಜ್ಜಾಹಿರಾಗಿದೆ , ಈ ಬಗ್ಗೆ ಸಿಎಂ ಬಿಎಸ್ ಯಡಿಯೂರಪ್ಪ ಉತ್ತರ ನೀಡಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟ್ವಿಟ್ಟರ್ ನಲ್ಲಿ ಆಗ್ರಹಿಸಿದ್ದಾರೆ.

ಈ ಕುರಿತು ಟ್ವಿಟ್ಟರ್ ನಲ್ಲಿ ಟ್ವೀಟ್ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್, ವೆಂಟಿಲೇಟರ್ ಖರೀದಿಯಲ್ಲಿ ಬಿಜೆಪಿ ಸರಕಾರದ ಬ್ರಹ್ಮಾಂಡ ಭ್ರಷ್ಟಾಚಾರ ಇಲ್ಲಿ ಜಗಜ್ಜಾಹಿರಾಗಿದೆ. ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರು.ಗೆ ಖರೀದಿಸಿದ ವೆಂಟಿಲೇಟರ್ ಗೆ ಕರ್ನಾಟಕ ಸರಕಾರ 18.20 ಲಕ್ಷ ರುಪಾಯಿ ಕೊಟ್ಟಿದೆ.ಈ ‘CORONA CORRUPTION’ ಬಗ್ಗೆ ಸಿಎಂ ಯಡಿಯೂರಪ್ಪ ಉತ್ತರ ಕೊಡಬೇಕಿದೆ ಎಂದು ಆಗ್ರಹಿಸಿದ್ದಾರೆ.

ವೆಂಟಿಲೇಟರ್ ಸಿಗದೆ ಕರ್ನಾಟಕದ ಕೊರೋನಾ ಸೋಂಕಿತರು ಸಾಯ್ತಾ ಇದ್ದರೆ, ಬಿಜೆಪಿ ಮಂತ್ರಿಗಳು ಪಿಪಿಇ ಕಿಟ್ ಗಳಿಂದ ಹಿಡಿದು ಬೆಡ್ ಗಳವರೆಗೂ ಎಲ್ಲ ಕೊರೋನಾ ಚಿಕಿತ್ಸೆ ಸಲಕರಣೆಗಳ ಖರೀದಿ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದಾರೆ. ಬಿಜೆಪಿ ಸರಕಾರ ಕೊರೋನಾ ಸಂಕಷ್ಟ ಸಂದರ್ಭವನ್ನೂ ಲೂಟಿ ಮಾಡಲು ಬಳಸಿಕೊಂಡಿದೆ. #ಉತ್ತರಕೊಡಿಬಿಜೆಪಿ ಎಂದು ಒತ್ತಯಿಸಿದ್ದಾರೆ.