ರಾಜ್ಯಗಳ ಪೊಲೀಸರ ನಡುವೆ ಸಮನ್ವಯತೆ ಅಗತ್ಯ: ದಕ್ಷಿಣ ರಾಜ್ಯಗಳ ಡಿಜಿಪಿ ಸಮಾವೇಶದಲ್ಲಿ ಸಿಎಂ ಹೇಳಿದ್ದೇನು?
ಭಯೋತ್ಪಾದನೆ, ಮಾದಕ ವಸ್ತು ಮಾರಾಟ ಜಾಲ ಹಾಗೂ ಸೈಬರ್ ಅಪರಾಧಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳ ಪೊಲೀಸರು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

ಬೆಂಗಳೂರು (ಸೆ.14): ಭಯೋತ್ಪಾದನೆ, ಮಾದಕ ವಸ್ತು ಮಾರಾಟ ಜಾಲ ಹಾಗೂ ಸೈಬರ್ ಅಪರಾಧಗಳು ಸೇರಿದಂತೆ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣಕ್ಕೆ ರಾಜ್ಯ ಮತ್ತು ಹೊರ ರಾಜ್ಯಗಳ ಪೊಲೀಸರು ಸಮನ್ವಯತೆಯಿಂದ ಕಾರ್ಯನಿರ್ವಹಿಸುವುದು ಅಗತ್ಯವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.
ನಗರದಲ್ಲಿ ರಾಜ್ಯ ಪೊಲೀಸ್ ಇಲಾಖೆ ಬುಧವಾರ ಆಯೋಜಿಸಿದ್ದ ದಕ್ಷಿಣ ಭಾರತದ ರಾಜ್ಯಗಳ ಪೊಲೀಸ್ ಮಹಾನಿರ್ದೇಶಕರ (ಡಿಜಿಪಿ) ಒಂದು ದಿನದ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದು ಭಯೋತ್ಪಾದಕತೆಯು ಜಾಗತಿಕ ಮಟ್ಟದ ಬಹುಮುಖ್ಯ ಮೂಲಭೂತ ಸಮಸ್ಯೆಯಾಗಿ ಕಾಡುತ್ತಿದೆ. ಮಾದಕ ವಸ್ತು ಜಾಲವು ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದೆ. ಇವುಗಳು ರಾಜ್ಯಗಳ ಗಡಿದಾಟಿ ಜಾಲವನ್ನು ವಿಸ್ತರಿಸಿಕೊಂಡು ಚಟುವಟಿಕೆ ನಡೆಸುತ್ತಿವೆ. ಹೀಗಾಗಿ ಇಂಥಹ ಸಮಾಜಘಾತುಕ ಶಕ್ತಿಗಳನ್ನು ನಿರ್ಮೂಲನೆಗೊಳಿಸಲು ರಾಜ್ಯ ಹಾಗೂ ಹೊರ ರಾಜ್ಯಗಳ ಪೊಲೀಸರ ನಡುವೆ ಸಮನ್ವಯತೆ ಅಗತ್ಯವಾಗಿದೆ ಎಂದರು.
ತಮಿಳುನಾಡಿಗೆ ನೀರು ಹರಿಸಿದರೆ ರೈತರಿಗೆ ಅನ್ಯಾಯ ಮಾಡಿದಂತೆ: ಬೊಮ್ಮಾಯಿ ಕಿಡಿ
ಪ್ರಸುತ್ತ ಕೇರಳ, ತಮಿಳುನಾಡು, ಆಂಧ್ರಪ್ರದೇಶ ಸೇರಿದಂತೆ ದಕ್ಷಿಣ ಭಾರತದ ರಾಜ್ಯಗಳ ಪೊಲೀಸರ ಮಧ್ಯೆ ಸೌಹಾರ್ದಯುತ ಹೊಂದಾಣಿಕೆಯ ಸಂಬಂಧವಿದೆ. ಅಂತರ್ ರಾಜ್ಯ ಕ್ರಿಮಿನಲ್ ತಂಡಗಳನ್ನು ಹತ್ತಿಕ್ಕಲು ರಾಜ್ಯಗಳ ಪರಸ್ಪರ ಕೈ ಜೋಡಿಸಿ ಕಾರ್ಯಾಚರಣೆ ನಡೆಸಬೇಕು ಎಂದು ಮುಖ್ಯಮಂತ್ರಿಗಳು ಹೇಳಿದರು. ಸೈಬರ್ ಅಪರಾಧ ಕೃತ್ಯಗಳ ನಿಯಂತ್ರಣಕ್ಕೆ ಡಿಜಿಟಲ್ ಸಾಕ್ಷ್ಯ ಸಂಗ್ರಹ ಪರಿಣಾಮಕಾರಿಯಾಗಿ ಮಾಡಬೇಕಿದೆ. ಹೀಗಾಗಿ ದೇಶದಲ್ಲೇ ಮೊದಲ ಬಾರಿಗೆ ಕರ್ನಾಟಕ ರಾಜ್ಯ ಪ್ರತಿ ಜಿಲ್ಲೆಯಲ್ಲಿ ಸೈಬರ್, ಆರ್ಥಿಕ ಹಾಗೂ ಮಾದಕ ವಸ್ತು (ಸಿಇಎನ್) ಠಾಣೆಗಳನ್ನು ಸ್ಥಾಪಿಸಿದೆ.
ಸಿಇಎನ್ ಠಾಣೆಗಳ ಪೊಲೀಸರಿಗೆ ಸೈಬರ್ ತಜ್ಞರಿಂದ ತರಬೇತಿ ಸಹ ನೀಡಲಾಗಿದೆ. ಸೈಬರ್ ಅಪರಾಧಿಗಳ ಮೇಲೆ ರಾಜ್ಯ ಪೊಲೀಸರು ಕಟ್ಟೆಚ್ಚರವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು. ರಾಜ್ಯ ಪೊಲೀಸ್ ಇಲಾಖೆಯ ಬಲವರ್ಧನೆಗೆ ಸರ್ಕಾರ ಪ್ರಾಮುಖ್ಯತೆ ನೀಡಿದ್ದು, ಬೆಂಗಳೂರಿನಲ್ಲಿ ಅತ್ಯಾಧುನಿಕ ಮಟ್ಟದ ವಿಧಿ ವಿಜ್ಞಾನ ಪ್ರಯೋಗಾಲಯವನ್ನು ಸ್ಥಾಪಿಸಲಾಗಿದೆ. ಅಲ್ಲದೆ ಬಳ್ಳಾರಿ, ಹುಬ್ಬಳ್ಳಿ-ಧಾರವಾಡ ಹಾಗೂ ಆಯುಕ್ತರ ಮಟ್ಟದಲ್ಲಿ ಕೂಡಾ ಉತ್ತಮ ಮಟ್ಟದ ಎಫ್‌ಎಸ್‌ಎಲ್ ಘಟಕಗಳನ್ನು ತೆರೆಯಲಾಗಿದೆ ಎಂದು ತಿಳಿಸಿದರು.
ಗ್ಯಾರಂಟಿ ಯೋಜನೆಗಾಗಿ ರೈತರ ಬದುಕು ಬಲಿ ಕೊಡಬೇಡಿ: ಕಾಂಗ್ರೆಸ್ ವಿರುದ್ಧ ರೇವಣ್ಣ ವಾಗ್ದಾಳಿ
ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಾತಾಡಿ, ಭಾಷೆ, ಸಂಸ್ಕೃತಿ ಹಾಗೂ ಭೌಗೋಳಿಕ ಹೀಗೆ ಯಾವುದೇ ಗಡಿಗಳಿಲ್ಲದೆ ರಾಜ್ಯಗಳ ಪೊಲೀಸರ ಸಹಕಾರದಿಂದ ಕೆಲಸ ಮಾಡಬೇಕು ಎಂದು ಕರೆ ನೀಡಿದರು. ಆಧುನಿಕ ಸಂವಹನಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ರಾಜ್ಯಗಳ ಪೊಲೀಸರು ಅಪರಾಧ ನಿಯಂತ್ರಣಕ್ಕೆ ಪರಸ್ಪರ ನೆರವು ನೀಡಬೇಕು ಎಂದು ಹೇಳಿದರು. ಕಾರ್ಯಕ್ರಮದಲ್ಲಿ ರಾಜ್ಯ ಪೊಲೀಸ್ ಮಹಾನಿರ್ದೇಶಕ ಅಲೋಕ್ ಮೋಹನ್ ಸೇರಿದಂತೆ ಇತರೆ ರಾಜ್ಯಗಳ ಡಿಜಿಪಿಗಳು ಹಾಗೂ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.