ಭಾರತ ದೇಶದಲ್ಲಿ ಸಂವಿಧಾನವೇ ಸಾರ್ವಭೌಮ: ಸಚಿವ ಚಲುವರಾಯಸ್ವಾಮಿ
ದೇಶದಲ್ಲಿ ಸಂವಿಧಾನವೇ ಸಾರ್ವಭೌಮ. ಪ್ರತಿಯೊಬ್ಬರೂ ಅದನ್ನು ಗೌರವಿಸಬೇಕು. ಸಂವಿಧಾನ ವಿರೋಧಿ ಚಟುವಟಿಕೆ ನಡೆಸುವವರು ದೇಶ ಹಾಗೂ ರಾಜ್ಯಕ್ಕೆ ಮಾರಕ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು.
ಮಂಡ್ಯ (ಸೆ.16): ದೇಶದಲ್ಲಿ ಸಂವಿಧಾನವೇ ಸಾರ್ವಭೌಮ. ಪ್ರತಿಯೊಬ್ಬರೂ ಅದನ್ನು ಗೌರವಿಸಬೇಕು. ಸಂವಿಧಾನ ವಿರೋಧಿ ಚಟುವಟಿಕೆ ನಡೆಸುವವರು ದೇಶ ಹಾಗೂ ರಾಜ್ಯಕ್ಕೆ ಮಾರಕ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಮಂಡ್ಯದ ವಿಶ್ವವಿದ್ಯಾಲಯದಲ್ಲಿ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಪ್ರಯುಕ್ತ ಸಾಮೂಹಿಕವಾಗಿ ಸಾವಿರಾರು ವಿದ್ಯಾರ್ಥಿಗಳೊಂದಿಗೆ ಸಂವಿಧಾನ ಪೀಠಿಕೆ ಓದು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂವಿಧಾನ ವಿರುದ್ಧವಾಗಿ ಮಾತನಾಡುವುದು ಹಾಗೂ ಅದರ ವಿರುದ್ಧ ನಡೆದುಕೊಳ್ಳುವುದನ್ನು ಸರ್ಕಾರ ಯಾವುದೇ ಕಾರಣಕ್ಕೂ ಕ್ಷಮಿಸುವುದಿಲ್ಲ. ಸಂವಿಧಾನದ ಪರಿಕಲ್ಪನೆ ಇಲ್ಲದೆ ಇದ್ದಿದ್ದರೆ ನಮ್ಮ ಸಮಾಜದ ಸ್ಥಿತಿ ಈಗಿರುತ್ತಿರಲಿಲ್ಲ. ಬಡವರು ಹಾಗೂ ಶ್ರಮಿಕರು ಬಂಡವಾಳ ಶಾಹಿಗಳ ಬಳಿ ಕೈಕಟ್ಟಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗುತ್ತಿತ್ತು ಎಂದರು. ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನವಾದ ಅವಕಾಶ ಸಂವಿಧಾನದಲ್ಲಿ ಇದೆ. ಯಾರು ಬೇಕಾದರೂ ರಾಷ್ಟ್ರಪತಿ, ಪ್ರಧಾನಿ ಹಾಗೂ ಇನ್ನಿತರ ಗೌರವದ ಹುದ್ದೆಗಳನ್ನು ಪಡೆಯಬಹುದು.
ಬಿಜೆಪಿಯವರ ತಟ್ಟೆಯಲ್ಲಿ ಹೆಗ್ಗಣ ಬಿದ್ದಿದೆ: ಸಚಿವ ಭೈರತಿ ಸುರೇಶ್ ಹೀಗೆ ಹೇಳಿದ್ಯಾಕೆ?
ಸಂವಿಧಾನ ಕೊಟ್ಟ ಮತದಾನದ ಅವಕಾಶದಿಂದಲೇ ನಾವಿಂದು ಚುನಾಯಿತ ಪ್ರತಿನಿಧಿಗಳಾಗಿ ಜನಸೇವೆ ಮಾಡುತಿದ್ದೇವೆ ಎಂದರು. ಇಂದು ನಾವೆಲ್ಲಾ ನಮಗೆ ಹಕ್ಕಿದೆ. ನಮಗೂ ಅವಕಾಶ ಕೊಡಿ ಎಂದು ಕೇಳುವುದಕ್ಕೂ ಅಂಬೇಡ್ಕರ್ ಕೊಟ್ಟ ಸಂವಿಧಾನವೇ ಕಾರಣ. ಹಾಗಾಗಿ, ಸಂವಿಧಾನದ ಮೇಲೆ ಎಲ್ಲರಿಗೂ ಗೌರವ ಮನೋಭಾವವಿರಬೇಕು ಎಂದು ಹೇಳಿದರು. ಶಾಲಾ ಹಾಗೂ ಕಾಲೇಜುಗಳಲ್ಲಿ ಇಂದಿನಿಂದ ಸಂವಿಧಾನ ಪೀಠಿಕೆ ಓದುವುದು ಕಡ್ಡಾಯವಾಗಿದ್ದು, ಎಲ್ಲಾ ಶಾಲಾ ಕಾಲೇಜುಗಳು ಬೆಳಗಿನ ಪ್ರಾರ್ಥನೆಯ ನಂತರ ಸಂವಿಧಾನದ ಪೀಠಿಕೆ ಓದಬೇಕಾಗಿ ತಿಳಿಸಿದರು.
ಐದು ಸಾವಿರ ವಿದ್ಯಾರ್ಥಿಗಳು ಭಾಗಿ: ಐದು ಸಾವಿರ ವಿದ್ಯಾರ್ಥಿಗಳೊಂದಿಗೆ ಸಾಮೂಹಿಕವಾಗಿ ಸಂವಿಧಾನ ಪೀಠಿಕೆ ಓದಲಾಯಿತು. ಮಕ್ಕಳು ಬೆಳಿಗ್ಗೆಯಿಂದಲೇ ಸಂವಿಧಾನ ಪೀಠಿಕೆ ಓದಲು ನಿಗದಿಪಡಿಸಿದ್ದ ಸ್ಥಳದಲ್ಲಿ ಇದ್ದರು. ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಸಂವಿಧಾನ ಪೀಠಿಕೆಯ ಒಂದು ಪ್ರತಿಯನ್ನು ನೀಡಲಾಯಿತು. ಜಿಲ್ಲೆಯಲ್ಲಿ ಒಟ್ಟು ೭ಲಕ್ಷ ಜನರು ಸಂವಿಧಾನ ಪೀಠಿಕೆ ಓದಲು ನೊಂದಣಿ ಮಾಡಿಕೊಂಡಿದ್ದಾರೆ.
ನರೇಂದ್ರ ಮೋದಿ ಮತ್ತೊಮ್ಮೆ ಪ್ರಧಾನಿ: ಸಂಸದ ಮುನಿಸ್ವಾಮಿ ಭವಿಷ್ಯ
ಕಾರ್ಯಕ್ರಮದಲ್ಲಿ ಶಾಸಕರಾದ ಪಿ.ರವಿಕುಮಾರ್, ಎಂ.ಉದಯ್, ವಿಧಾನಪರಿಷತ್ ಸದಸ್ಯ ದಿನೇಶ್ ಗೂಳಿಗೌಡ, ಜಿಲ್ಲಾಧಿಕಾರಿ ಡಾ. ಕುಮಾರ್, ಮಂಡ್ಯ ವಿವಿ ಕುಲಪತಿ ಡಾ. ಪುಟ್ಟರಾಜು, ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್, ಅಪರ ಜಿಲ್ಲಾಧಿಕಾರಿ ಡಾ. ಹೆಚ್.ಎಲ್ ನಾಗರಾಜು, ಅಪರ ಪೊಲೀಸ್ ವರಿಷ್ಠಾಧಿಕಾರಿ ತಿಮ್ಮಯ್ಯ, ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿ ಸಿದ್ದಲಿಂಗೇಶ್, ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಶ್ರೀನಿವಾಸ್ ಇತರರಿದ್ದರು.