ಪ್ರಸ್ತುತ ದಿನಗಳಲ್ಲಿ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಿದೆ. ಜನರ ಸಮಸ್ಯೆಗಳ ಕುರಿತು ಬಿಜೆಪಿಗೆ ಕಾಳಜಿ ಇಲ್ಲವಾಗಿದೆ. ಬಿಜೆಪಿ ಶೇ. 40 ಕಮಿಷನ್‌ ಸರ್ಕಾರ ಎಲ್ಲೆಡೆ ಹಣ ಆಮಿಷವೊಡ್ಡಿ ರಾಜಕಾರಣ ಕ್ಷೇತ್ರವನ್ನು ಹಾಳು ಮಾಡಿದೆ: ಪರಂ

ಧಾರವಾಡ(ಆ.29):  ಸ್ವಾತಂತ್ರ್ಯ ಅಮೃತ ಮಹೋತ್ಸವದ ನಿಮಿತ್ತ ಹು-ಧಾ ಪಶ್ಚಿಮ ವಿಧಾನಸಭಾ ಕ್ಷೇತ್ರದ ರಾಣಿ ಚೆನ್ನಮ್ಮ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರ್ಯ ನಡಿಗೆ ಕಾರ್ಯಕ್ರಮಕ್ಕೆ ಮಾಜಿ ಉಪ ಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಭಾನುವಾರ ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, ಸ್ವಾತಂತ್ರ್ಯಾನಂತರದ 75 ವರ್ಷದ ಅವಧಿಯೊಳಗೆ ದೇಶದಲ್ಲಿ ಹೆಚ್ಚು ಆಡಳಿತ ನಡೆಸಿದ ಕಾಂಗ್ರೆಸ್‌ ಶಾಂತಿ, ಸುವ್ಯವಸ್ಥೆ ಕಾಪಾಡುವ ಜತೆಗೆ ದೇಶದ ಆರ್ಥಿಕ ಕ್ಷೇತ್ರವನ್ನು ಸದೃಢಗೊಳಿಸಿದೆ. ಆದರೆ ಇಂದು ದೇಶವನ್ನು ಧರ್ಮದ ಆಧಾರದಲ್ಲಿ ವಿಭಜನೆ ಮಾಡುವ ಷಡ್ಯಂತ್ರ ನಡೆಯುತ್ತಿದೆ. ಇದಕ್ಕೆ ಕಾಂಗ್ರೆಸ್‌ ಎಂದಿಗೂ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.

ಭಾರತ ಸ್ವಾತಂತ್ರ್ಯ ಪಡೆದ ಸಂದರ್ಭ ಇಸ್ಲಾಂ ಧರ್ಮದ ದೇಶವಾಗಿ ಪಾಕಿಸ್ತಾನ ಉದಯವಾಯಿತು. ಅಲ್ಲಿ ಬೇರ ಧರ್ಮದವರು ದ್ವಿತೀಯ ದರ್ಜೆಯ ಪ್ರಜೆಗಳಾಗಿದ್ದಾರೆ. ಆದರೆ ಭಾರತ ಹಿಂದೂ ರಾಷ್ಟ್ರ ಎಂದು ಸ್ಥಾಪನೆಯಾಗಲಿಲ್ಲ. ಏಕೆಂದರೆ ಇದು ಸರ್ವಧರ್ಮೀಯರ ನೆಲೆಬೀಡಾಗಿದೆ. ಹಾಗಾಗಿ ಭಾರತ ಸರ್ವಧರ್ಮದ ರಾಷ್ಟ್ರವಾಗಿದೆ ಎಂದರು. ಪ್ರಸ್ತುತ ದಿನಗಳಲ್ಲಿ ಬೆಲೆ ಏರಿಕೆ, ನಿರುದ್ಯೋಗ ಹೆಚ್ಚಿದೆ. ಜನರ ಸಮಸ್ಯೆಗಳ ಕುರಿತು ಬಿಜೆಪಿಗೆ ಕಾಳಜಿ ಇಲ್ಲವಾಗಿದೆ. ಬಿಜೆಪಿ ಶೇ. 40 ಕಮಿಷನ್‌ ಸರ್ಕಾರ ಎಲ್ಲೆಡೆ ಹಣ ಆಮಿಷವೊಡ್ಡಿ ರಾಜಕಾರಣ ಕ್ಷೇತ್ರವನ್ನು ಹಾಳು ಮಾಡಿದೆ ಎಂದು ಆರೋಪಿಸಿದರು.

ಪ್ರಧಾನಿ ಮೋದಿ ಮನ್ ಕಿ ಬಾತ್: ಮುಗದ ಗ್ರಾಮಸ್ಥರಿಂದ ಅಹವಾಲು ಸ್ವೀಕರಿಸಿದ ಜೋಶಿ

ದೇಶದ ಪ್ರತಿಯೊಬ್ಬ ಭಾರತೀಯನ್ನು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರಿಗೆ ಗೌರವ ಸಲ್ಲಿಸಲೇಬೇಕು. ದೇಶದ ಸಾಧನೆ ಜಗತ್ತಿಗೆ ತಿಳಿಸಲು ಸ್ವಾತಂತ್ರ್ಯ ನಡಿಗೆ ಮಾಡಲಾಗುತ್ತಿದೆ. ಸ್ವಾತಂತ್ರ್ಯ ಹೋರಾಟದಲ್ಲಿ ವಿಶೇಷವಾಗಿ ಕರ್ನಾಟಕದ ಪಾತ್ರ ಪ್ರಮುಖವಾದುದು. ಸಿಪಾಯಿದಂಗೆಗೂ ಮುನ್ನ ಬ್ರಿಟಿಷರ ವಿರುದ್ಧ ರಾಣಿ ಚೆನ್ನಮ್ಮ ಕೆಚ್ಚೆದೆಯಿಂದ ಹೋರಾಡುವ ಮೂಲಕ ದೇಶದ ಸ್ವಾತಂತ್ರ್ಯಕ್ಕಾಗಿ ಮೊದಲ ಹೆಜ್ಜೆ ಇಟ್ಟಿದ್ದರು ಎಂದರು.

ಪಾದಯಾತ್ರೆ ಎಲ್ಲೆಲ್ಲಿ?

ಕೆಸಿಸಿ ಬ್ಯಾಂಕ್‌ ಸಮೀಪದ ಸುಭಾಸ್‌ ರೋಡ್‌ನಿಂದ ವಿವೇಕಾನಂದ ವೃತ್ತ, ಟಿಕಾರೆ ರೋಡ್‌, ಸಂಗಮ ಸರ್ಕಲ್‌, ಟೋಲ್‌ ನಾಕಾ ಮೂಲಕ ಸತ್ತೂರವರೆಗೆ ಜಗ್ಗಲಗಿ, ಡೊಳ್ಳು ಸೇರಿ ವಾದ್ಯಮೇಳದೊಂದಿಗೆ ಸ್ವಾತಂತ್ರ್ಯ ನಡಿಗೆಯ ಬೃಹತ್‌ ಜನಜಾಗೃತಿ ಪಾದಯಾತ್ರೆ ನಡೆಯಿತು. ತೃತೀಯ ಲಿಂಗಿಗಳು ತ್ರಿವರ್ಣಧ್ವಜದ ಬಾವುಟ ಹಿಡಿದು ನಡಿಗೆಯಲ್ಲಿ ಭಾಗವಹಿಸಿ ದೇಶಪ್ರೇಮ ಮೆರೆದರು.

ಈ ಸಂದರ್ಭ ತಡಕೊಡ ಗ್ರಾಮದ ಸ್ವಾತಂತ್ರ್ಯ ಹೋರಾಟಗಾರ ಮಲ್ಲಯ್ಯ ಹಿರೇಮಠ, ಶಾಸಕ ಪ್ರಸಾದ ಅಬ್ಬಯ್ಯ, ಧಾರವಾಡ ಮುರಾಘಾಮಠದ ಡಾ. ಮಲ್ಲಿಕಾರ್ಜುನ ಸ್ವಾಮೀಜಿ, ವಿಧಾನಪರಿಷತ್‌ ಮಾಜಿ ಸಭಾಪತಿ ವೀರಣ್ಣ ಮತ್ತಕಟ್ಟಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರ, ಅನಿಲಕುಮಾರ ಪಾಟೀಲ, ಕೆಪಿಸಿಸಿ ಮಾಧ್ಯಮ ವಿಶ್ಲೇಷಕ ಪಿ.ಎಚ್‌. ನೀರಲಕೇರಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ನಾಗರಾಜ ಗೌರಿ, ಬಸವರಾಜ ಕಿತ್ತೂರ, ಮಾಜಿ ಶಾಸಕ ಎನ್‌.ಎಚ್‌. ಕೋನರಡ್ಡಿ, ಮುಖಂಡರಾದ ಪ್ರಕಾಶ ಕ್ಯಾರಕಟ್ಟಿ, ಸದಾನಂದ ಡಂಗನವರ, ದೀಪಕ ಚಿಂಚೊರೆ, ರಾಬರ್ಚ್‌ ದದ್ದಾಪುರಿ, ಬಸವರಾಜ ಗುರಿಕಾರ ಪಾಲ್ಗೊಂಡಿದ್ದರು.