ಕಾಂಗ್ರೆಸ್‌ನ ಯಾತ್ರೆಗೆ ಸ್ಪಂದನೆ ಸಿಗುತ್ತಿಲ್ಲ ಸಿಎಂ  ಕಷ್ಟಪಟ್ಟು ಜನರನ್ನು ಕರೆತಂದು ಪ್ರದರ್ಶನ ಅಸ್ತಿತ್ವಕ್ಕಾಗಿ ಯಾತ್ರೆ

ಬೆಂಗಳೂರು (ಅ.2) : ಕಾಂಗ್ರೆಸ್‌ ನಡೆಸುತ್ತಿರುವ ಭಾರತ್‌ ಜೋಡೋ ಯಾತ್ರೆಗೆ ಜನಸಾಮಾನ್ಯರಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿಲ್ಲ. ಕಷ್ಟಪಟ್ಟು ಬೇರೆ ಬೇರೆ ತಾಲೂಕಿನಿಂದ ಜನರನ್ನು ಕರೆತಂದು ಪ್ರದರ್ಶನ ಮಾಡುತ್ತಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವ್ಯಂಗ್ಯವಾಡಿದ್ದಾರೆ. ಶನಿವಾರ ರೇಸ್‌ಕೋರ್ಸ್‌ ರಸ್ತೆಯಲ್ಲಿನ ನಿವಾಸದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಪಾದಯಾತ್ರೆಗೆ ಬರುವವರ ಸಂಖ್ಯೆ ಕಡಿಮೆ ಇದೆ. ಇದು ಒಂದು ರೀತಿಯಲ್ಲಿ ಶೋ ಇದ್ದಂತೆ. ರಾಜಕೀಯ ಅಸ್ತಿತ್ವ ಉಳಿಸಿಕೊಳ್ಳಲು ಕಾಂಗ್ರೆಸ್ಸಿಗರು ಯಾತ್ರೆ ಮಾಡುತ್ತಿದ್ದಾರೆ. ರಾಜ್ಯದ ಬಗ್ಗೆ ಕೇವಲವಾಗಿ ಮಾತನಾಡುತ್ತಿದ್ದು, ನಾವು ಅವರಂತೆ ಸಣ್ಣಮಟ್ಟದ ರಾಜಕಾರಣ ಮಾಡುವುದಿಲ್ಲ. ಪಾದಯಾತ್ರೆ ಮಾಡಿಕೊಳ್ಳಲಿ, ಜನರು ಮುಂದೆ ತೀರ್ಮಾನ ಮಾಡುತ್ತಾರೆ ಎಂದು ಟೀಕಾಪ್ರಹಾರ ನಡೆಸಿದರು.

Bharat Jodo Yatra: ಮೋದಿ ಶ್ರೀಮಂತರ ಪರ: ರಾಹುಲ್‌ ವಾಗ್ದಾಳಿ

ಕೀಳುಮಟ್ಟದ ಮಾತುಗಳಿಂದ ಅಧಿಕಾರಿಗಳನ್ನು ಹೆದರಿಸುವಂತಹದ್ದು ನಡೆಯುವುದಿಲ್ಲ. ಅಧಿಕಾರಿಗಳು ತಮ್ಮ ಕರ್ತವ್ಯ ಮಾಡುತ್ತಿದ್ದಾರೆ. ಭ್ರಷ್ಟಾಚಾರ ಕುರಿತು ಮಾತನಾಡುತ್ತಾರೆ. ಕಾಂಗ್ರೆಸ್‌ನ ಅಧಿನಾಯಕರಾದ ಸೋನಿಯಾಗಾಂಧಿ, ರಾಹುಲ್‌ಗಾಂಧಿ ಜಾಮೀನಿನ ಮೇಲೆ ಇದ್ದಾರೆ. ಅಲ್ಲದೇ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಸಹ ಜಾಮೀನಿನಲ್ಲಿದ್ದಾರೆ. ಜಾಮೀನಿನಲ್ಲಿರುವವರ ಪಕ್ಷದಿಂದ ನಾವು ಪಾಠ ಕಲಿಯಬೇಕಿಲ್ಲ. ಬರುವಂತಹ ಚುನಾವಣೆಯಲ್ಲಿ ಸೋಲು ಖಚಿತ. ನಾವು ಅಧಿಕಾರಕ್ಕೆ ಬರುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಆದರೆ, ಅದು ಕನಸು ಅಷ್ಟೇ ಎಂದು ಹೇಳಿದರು.

Bharat Jodo Yatra: ಕರ್ನಾಟಕದ್ದು ದೇಶದಲ್ಲೇ ಭ್ರಷ್ಟ ಸರ್ಕಾರ: ರಾಹುಲ್‌ ಗಾಂಧಿ

ಕಂದಾಯ ಸಚಿವ ಆರ್‌.ಅಶೋಕ್‌ ಮಾತನಾಡಿ, ಕಾಂಗ್ರೆಸ್‌ನ ರಾಷ್ಟ್ರೀಯ ಮುಖಂಡ ರಾಹುಲ್‌ಗಾಂಧಿ ರಾಜ್ಯವನ್ನು ಎಟಿಎಂ ಮಾಡಿಕೊಳ್ಳಲು ಬಂದಿದ್ದಾರೆ. ಹೀಗಾಗಿ ಜನರು ಬಹಳ ಎಚ್ಚರಿಕೆಯಿಂದ ಇರಬೇಕು. ಭಾರತವನ್ನು ಚೂರು ಚೂರು ಮಾಡುವ ಪ್ರವೃತ್ತಿ ಕಾಂಗ್ರೆಸ್‌ ರಕ್ತದಲ್ಲಿಯೇ ಇದೆ. ಕಾಂಗ್ರೆಸ್‌ ಯಾತ್ರೆಯು ಭಾರತ್‌ ಜೋಡೋ ಅಲ್ಲ, ಭಾರತ್‌ ತೋಡೋ ಆಗಿದೆ. ಪಿಎಫ್‌ಐ ನಿಷೇಧವನ್ನು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಮರ್ಥಿಸಿಕೊಳ್ಳಲಿಲ್ಲ. ಬದಲಿಗೆ ಆರ್‌ಎಸ್‌ಎಸ್‌ ಬಗ್ಗೆ ಮಾತನಾಡುತ್ತಾರೆ. ಮುಸ್ಲಿಂ ಲೀಗ್‌ನ ಬಿ ಟೀಂ ಕಾಂಗ್ರೆಸ್‌ ಆಗಿದೆ ಎಂದು ಟೀಕಾಪ್ರಹಾರ ನಡೆಸಿದರು.