ತೇಜಸ್ವಿ ಸೂರ‍್ಯಗೆ ಕಲ್ಲು, ಗುಲಾಬಿ ನೀಡಿ ಮೌನ ಪ್ರತಿಭಟನೆಗೆ ಮುಂದಾಗಿದ್ದ ಕಾಂಗ್ರೆಸ್‌ ಕಾರ‍್ಯಕರ್ತರ ವಶ.  ಕಾಂಗ್ರೆಸ್‌ ವಕ್ತಾರ ಶಂಕರ್‌ಗುಹಾ ದ್ವಾರಕನಾಥ್‌ ನೇತೃತ್ವದಲ್ಲಿ ಶನಿವಾರ ಗಿರಿನಗರ ವೃತ್ತದಿಂದ ರ್‍ಯಾಲಿ ಮೂಲಕ ತೇಜಸ್ವಿ ಸೂರ್ಯ ಗೃಹ ಕಚೇರಿಗೆ ತೆರಳಿ  ಪ್ರತಿಭಟಿಸಲು ನಿರ್ಧರಿಸಿದ್ದರು.

ಬೆಂಗಳೂರು (ಜು.31): ‘ಕಾಂಗ್ರೆಸ್‌ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು’ ಎಂಬ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿರುವ ಕಾಂಗ್ರೆಸ್‌, ಸಂಸದರಿಗೆ ‘ಕಲ್ಲು ಹಾಗೂ ಗುಲಾಬಿ ಹೂವು’ ನೀಡುವ ಮೂಲಕ ಮೌನ ಪ್ರತಿಭಟನೆ ನಡೆಸಲು ಮುಂದಾದಾಗ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದರು. ಕಾಂಗ್ರೆಸ್‌ ವಕ್ತಾರ ಶಂಕರ್‌ಗುಹಾ ದ್ವಾರಕನಾಥ್‌ ನೇತೃತ್ವದಲ್ಲಿ ಶನಿವಾರ ಗಿರಿನಗರ ವೃತ್ತದಿಂದ ರ್‍ಯಾಲಿ ಮೂಲಕ ತೇಜಸ್ವಿ ಸೂರ್ಯ ಗೃಹ ಕಚೇರಿಗೆ ತೆರಳಿ ಕಲ್ಲು ಹಾಗೂ ಗುಲಾಬಿ ಹೂವು ನೀಡುವ ಮೂಲಕ ಪ್ರತಿಭಟಿಸಲು ನಿರ್ಧರಿಸಿದ್ದರು. ಆದರೆ, ಪೊಲೀಸರು ಮುನ್ನೆಚ್ಚರಿಕಾ ಕ್ರಮವಾಗಿ ಗಿರಿನಗರ ವೃತ್ತದ ಬಳಿಯೇ ಕಾರ್ಯಕರ್ತರನ್ನು ಬಂಧಿಸಿ ವಶಕ್ಕೆ ಪಡೆದರು. ಈ ವೇಳೆ ಮಾತನಾಡಿದ ಕಾಂಗ್ರೆಸ್‌ ಶಂಕರ್‌ ಗುಹಾ ದ್ವಾರಕನಾಥ್‌, ನಾವು ಶಾಂತಿಯುತವಾಗಿ ಪ್ರತಿಭಟನೆ ಮಾಡಲು ಆಗಮಿಸಿದ್ದೆವು. ನಮ್ಮ ಸಂಸದರಿಗೆ ಹೂವು ಕೊಟ್ಟು ಈ ರೀತಿ ಹೇಳಿಕೆ ನೀಡದಂತೆ ಮನವಿ ಮಾಡಲು ಹೋಗುತ್ತಿದ್ದೆವು. ಆದರೆ ಅವರ ಮನೆ ಬಳಿಗೆ ಹೋಗದಂತೆ ನಮ್ಮನ್ನು ಹಾಗೂ ಕಾರ್ಯಕರ್ತರನ್ನು ಮಾರ್ಗಮಧ್ಯದಲ್ಲೇ ಬಂಧಿಸಿದ್ದಾರೆ. ಇಲ್ಲಿ ನಮ್ಮನ್ನು ನಿಯಂತ್ರಿಸುವ ಬದಲು ಮಂಗಳೂರಿನಲ್ಲಿ ದಕ್ಷತೆಯಿಂದ ಕೆಲಸ ಮಾಡಿದ್ದರೆ ಹತ್ಯೆಗಳೇ ಆಗುತ್ತಿರಲಿಲ್ಲ ಎಂದು ಕಿಡಿ ಕಾರಿದರು.

ಪೊಲೀಸ್‌ ಭದ್ರತೆ ತಪ್ಪಿಸಿ ತೇಜಸ್ವಿ ಮನೆಗೆ ನುಗ್ಗಿದ ಕಾರ್ಯಕರ್ತೆ: ಇದರ ನಡುವೆ ಪೊಲೀಸ್‌ ಬಿಗಿ ಬಂದೊಬಸ್‌್ತ ನಡುವೆಯೇ ಕಾಂಗ್ರೆಸ್‌ನ ಮೀನಾ ಎಂಬ ಕಾರ್ಯಕರ್ತೆ ತೇಜಸ್ವಿ ಸೂರ್ಯ ಅವರ ಗೃಹ ಕಚೇರಿಗೆ ಹೂವು ತೆಗೆದುಕೊಂಡು ಹೋಗಿದ್ದಾರೆ. ಮುಖ್ಯ ದ್ವಾರದ ಬಳಿ ಎಚ್ಚೆತ್ತ ಪೊಲೀಸರು ಮಹಿಳಾ ಪೇದೆಗಳ ಸಹಾಯದಿಂದ ಹೊರಗೆ ಎಳೆದುಕೊಂಡು ಬಂದರು. ಇದು ಹೈಡ್ರಾಮಾಗೆ ಕಾರಣವಾಯಿತು. ಯುವತಿ ಆಗಮಿಸಿದ್ದ ದ್ವಿಚಕ್ರ ವಾಹನಕ್ಕೆ ಪ್ರೆಸ್‌ ಎಂಬ ಸ್ಟಿಕ್ಕರ್‌ ಅಂಟಿಸಲಾಗಿತ್ತು. ಯುವತಿ ಪತ್ರಕರ್ತೆಯ ಸೋಗಿನಲ್ಲಿ ಸಂಸದರ ಮನೆಗೆ ಬಂದಿದ್ದರು ಎಂದು ಆರೋಪಿಸಿ ದ್ವಿಚಕ್ರ ವಾಹನವನ್ನೂ ಪೊಲೀಶರು ವಶಕ್ಕೆ ಪಡೆದರು ಎಂದು ತಿಳಿದುಬಂದಿದೆ.

ನಾವೇನು ಭಯೋತ್ಪಾದಕರಾ?: ಮೀನಾ
ಈ ವೇಳೆ ಮಾತನಾಡಿದ ಮೀನಾ, ಸಂಸದರಾಗಿ ತೇಜಸ್ವಿ ಸೂರ್ಯ ಅವರು ಕಾಂಗ್ರೆಸ್‌ ಸರ್ಕಾರ ಇದ್ದಿದ್ದರೆ ಕಲ್ಲು ಹೊಡೆಯಬಹುದಿತ್ತು ಎನ್ನುವ ಹೇಳಿಕೆ ನೀಡಿರುವುದು ಖಂಡನೀಯ. ಹೀಗಾಗಿ ಅವರ ಮನೆಗೆ ಬಂದು ಶಾಂತಿಯುತವಾಗಿ ಗುಲಾಬಿ ಹೂವು ನೀಡಿ ಮೌನ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಕಲ್ಲು ಹೊಡೆಯುವುದು ಅವರ ಸಿದ್ಧಾಂತವಾದರೆ ಹೂವು ಕೊಡುವುದು ನಮ್ಮ ಸಿದ್ಧಾಂತ ಎಂಬುದನ್ನು ಹೇಳಬೇಕಿತ್ತು. ಆದರೆ ಪೊಲೀಸರು ನಮ್ಮನ್ನು ಟೆರರಿಸ್ಟ್‌ಗಳ ಮಾದರಿಯಲ್ಲಿ ಎಳೆದೊಯ್ಯುತ್ತಿದ್ದಾರೆ. ನಾವೇನು ಭಯೋತ್ಪಾದಕರೇ? ಎಂದು ಕಿಡಿ ಕಾರಿದರು.

ಪ್ರವೀಣ್‌ ಹತ್ಯೆ; ತೇಜಸ್ವಿ ಸೂರ್ಯ ಪ್ರಚೋದನಕಾರಿ ಹೇಳಿಕೆ ಆಡಿ​ಯೋ ವೈರಲ್‌ 
ಚಿಕ್ಕಮಗಳೂರು: ಕಾಂಗ್ರೆಸ್‌ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು. ನಮ್ಮದೇ ಸರ್ಕಾರ ಇದೆ, ಏನು ಮಾಡುವುದು? ಇದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಆಡಿರುವ ಮಾತು.

ದಕ್ಷಿಣ ಕನ್ನಡ ಜಿಲ್ಲೆಯ ಪ್ರವೀಣ್‌ ನೆಟ್ಟಾರ್‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ತೇಜಸ್ವಿ ಸೂರ್ಯ ಅವರದ್ದು ಎನ್ನಲಾದ ಆಡಿಯೋ ಇದೀಗ ವೈರಲ್‌ ಆಗಿದೆ. ಚಿಕ್ಕಮಗಳೂರು ಜಿಲ್ಲಾ ಯುವ ಮೋರ್ಚಾ ಅಧ್ಯಕ್ಷ ಸಂದೀಪ್‌ ಅರವಿನಗಂಡಿ ಜೊತೆ ತೇಜಸ್ವಿ ಸೂರ್ಯ ಮಾತನಾಡಿರುವ ಆಡಿಯೋ ಇದಾ​ಗಿ​ದೆ.

ದೂರವಾಣಿ ಕರೆಯಲ್ಲಿ ಮಾತನಾಡುವಾಗ ‘ಕಾರ್ಯಕರ್ತರ ಸಾವು ಜಾಸ್ತಿಯಾಗಿದೆ. ಇದರ ಬಗ್ಗೆ ನಾಯಕರು ಯಾರೂ ಗಮನಹರಿಸುತ್ತಿಲ್ಲ ಎಂದ ಸಂದೀಪ್‌ಗೆ ಉತ್ತರಿಸಿದ ತೇಜಸ್ವಿ ಸೂರ್ಯ, ‘ಹೌದು ನಿಮ್ಗೆ ಎಷ್ಟುಆಕ್ರೋಶವಿದೆಯೋ ನಮಗೂ ಅಷ್ಟೇ ಆಕ್ರೋಶವಿದೆ. ಕಾಂಗ್ರೆಸ್‌ ಸರ್ಕಾರವಾಗಿದ್ದರೆ ಕಲ್ಲು ಹೊಡೆಯಬಹುದಿತ್ತು. ನಮ್ಮದೇ ಸರ್ಕಾರ ಇದೇ, ಏನು ಮಾಡುವುದು’ ಎಂದಿದ್ದಾರೆ.

ಗೃಹ ಸಚಿವರ ಮನೆಗೆ ಮುತ್ತಿಗೆ ಪ್ರಕರಣ; ಜೆ.ಸಿ.ನಗರ ಠಾಣೆಯ ಇಬ್ಬರು ಸಸ್ಪೆಂಡ್

ಸಾಮೂಹಿಕ ರಾಜಿನಾಮೆ ನೀಡಿರುವ ಕುರಿತು ಮಾತುಕತೆ ನಡೆಸಿರುವ ತೇಜಸ್ವಿ ಸೂರ್ಯ, ನನ್ನದು ಚಿಕ್ಕಮಗಳೂರು ಜಿಲ್ಲೆ. ಇಲ್ಲಿನ ಯುವ ಘಟಕದ ಅಧ್ಯಕ್ಷರು ಸೇರಿದಂತೆ ಪದಾಧಿಕಾರಿಗಳು ರಾಜಿನಾಮೆ ನೀಡಿರುವುದು ಬೇಸರದ ಸಂಗತಿ ಎಂದು ಹೇಳಿದ್ದಾರೆ.

ಬೊಮ್ಮಾಯಿ ಅವರೇ ಯಾವಾಗ ತೇಜಸ್ವಿ ಸೂರ್ಯನ ಮನೆಗೆ ಬುಲ್ಡೋಸರ್ ನುಗ್ಗಿಸುವಿರಿ? ಕೈ ಟ್ವೀಟ್ ಅಸ್ತ್ರ

ಎಲ್ಲ ಜಿಲ್ಲಾಧ್ಯಕ್ಷರು ಸೇರಿ ಸಿಎಂ ಭೇಟಿ ಮಾಡೋಣ. ಇದಕ್ಕಾಗಿ ಒಂದು ಗಂಟೆ ಸಮಯ ತೆಗೆದುಕೊಳ್ಳುತ್ತೇನೆ. ನಾಡಿದ್ದು ಮಂಗಳೂರಿಗೆ ಹೋಗೋಣ, ಪ್ರವೀಣ್‌ ಅವರ ತಂದೆ- ತಾಯಿಯನ್ನು ಭೇಟಿ ಮಾಡೋಣ. ಅವರಿಗೆ ಆರ್ಥಿಕ ನೆರವು ನೀಡೋಣ. ನನ್ನ ಮೇಲೆ ವಿಶ್ವಾಸ ಇದೆ ಅಂದ್ರೆ ನೀವುಗಳು ರಾಜಿನಾಮೆ ವಾಪಸ್‌ ತೆಗೆದುಕೊಳ್ಳಿ ಎಂದು ಹೇಳಿದ್ದಾರೆ.