ಬೆಂಗಳೂರು(ಮಾ.01): ‘ಮುಂಬರುವ ಚುನಾವಣೆಯಲ್ಲಿ ಪುಲಿಕೇಶಿನಗರ ಶಾಸಕ ಅಖಂಡ ಶ್ರೀನಿವಾಸ ಮೂರ್ತಿಗೆ ಶೇ.200ರಷ್ಟು ಕಾಂಗ್ರೆಸ್‌ ಟಿಕೆಟ್‌ ಸಿಗುವುದಿಲ್ಲ. ಈ ಬಗ್ಗೆ ಎಲ್ಲಾ ಯೋಜನೆಗಳಾಗಿದೆ’ ಎಂದು ಇತ್ತೀಚೆಗಷ್ಟೆ ಕಾಂಗ್ರೆಸ್‌ ಸೇರಿರುವ ಅದೇ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಹೇಳಿದ್ದಾರೆ ಎನ್ನಲಾದ ಆಡಿಯೋ ಇದೀಗ ವೈರಲ್‌ ಆಗಿದೆ.

ಕಾಂಗ್ರೆಸ್‌ ಸೇರ್ಪಡೆ ಬಗ್ಗೆ ಕೆಪಿಸಿಸಿ ಅಧ್ಯಕ್ಷರೊಂದಿಗೆ ನಡೆದ ತಮ್ಮ ಮಾತುಕತೆಯನ್ನು ಕಾರ್ಯಕರ್ತರೊಂದಿಗೆ ಹಂಚಿಕೊಂಡಿದ್ದಾರೆ ಎನ್ನಲಾದ ಆಡಿಯೋ ಈಗ ಬಹಿರಂಗವಾಗಿದೆ. ಆಡಿಯೋದಲ್ಲಿನ ಮಾತುಗಳು ಅಖಂಡ ಶ್ರೀನಿವಾಸ ಮೂರ್ತಿ ಹಣಿಯಲು ಕಾಂಗ್ರೆಸ್‌ನಲ್ಲೇ ತಂತ್ರ ನಡೆದಿದೆಯಾ ಎಂಬ ಚರ್ಚೆಗೆ ಗ್ರಾಸವಾಗಿದೆ.

ಬೆಂಗಳೂರು ಗಲಭೆ ಆರೋಪಿ ಕಾಂಗ್ರೆಸ್ ಸೇರ್ಪಡೆಗೆ ಡಿಕೆಶಿ ರೆಡಿ; ಅಖಂಡ ಶ್ರೀನಿವಾಸ್ ಕಿಡಿ!

ಆಡಿಯೋದಲ್ಲಿ ಏನಿದೆ?

ಕಾರ್ಯಕರ್ತನೊಬ್ಬನೊಂದಿಗೆ ಮಾತನಾಡಿದ್ದಾರೆ ಎನ್ನಲಾದ ಪ್ರಸನ್ನ ಕುಮಾರ್‌, ‘ಡಿ.ಜೆ.ಹಳ್ಳಿ ಘಟನೆ ವೇಳೆ ಅಖಂಡ ಶ್ರೀನಿವಾಸ ಮೂರ್ತಿಗೆ ಮೊದಲು ಅಶೋಕ್‌ ಸೇರಿದಂತೆ ಬಿಜೆಪಿಯವರು ಬೇಕಾಗಿತ್ತು. ಈಗೇಕೆ ನಮ್ಮ ಹತ್ತಿರ ಬಂದಿದ್ದಾನೆ ಎಂದು ಅವರು (ಡಿ.ಕೆ.ಶಿವಕುಮಾರ್‌) ಹೇಳಿದರು. ಅದಕ್ಕೆ, ನಾನು, ಅವನು (ಅಖಂಡ ಶ್ರೀನಿವಾಸಮೂರ್ತಿ) ಪುಲಿಕೇಶಿನಗರದಲ್ಲಿ ತನ್ನನ್ನು ಬಿಟ್ಟರೆ ಇನ್ಯಾರೂ ಇಲ್ಲ ಎಂದು ತಿಳಿದುಕೊಂಡಿದ್ದಾನೆ. ಮೊದಲು ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಅಂದೆ. ಅದಕ್ಕೆ ಅವರು (ಡಿಕೆಶಿ) ಪಕ್ಷದ ಕಚೇರಿಗೆ ನನ್ನನ್ನು ಕರೆಸಿ ನನ್ನ ಪಕ್ಷ ಸೇರ್ಪಡೆಗೆ ದಿನಾಂಕ ನಿಗದಿಪಡಿಸಲು ಸಲೀಂ (ಕೆಪಿಸಿಸಿ ಕಾಯಾಧ್ಯಕ್ಷ ಸಲೀಂ ಅಹಮ್ಮದ್‌)ರನ್ನು ಕರೆಸಿ ಹೇಳಿದರು...’ ಎಂದು ಡಿ.ಕೆ.ಶಿವಕುಮಾರ್‌ ಅವರೊಂದಿಗೆ ನಡೆದ ಮಾತುಕತೆ ಬಗ್ಗೆ ತಿಳಿಸಿದ್ದಾರೆ.

ನೀವು ಕಾಂಗ್ರೆಸ್‌ ಸೇರಿದರೆ ಟಿಕೆಟ್‌ ಕೊಡಬೇಕಲ್ಲ ಎಂದು ಆ ಕಾರ್ಯಕರ್ತರ ಪ್ರಶ್ನಿಸಿದಾಗ, ‘ಅದು ಆಮೇಲೆ ನೋಡಿಕೊಳ್ಳೋಣ. ಆದರೆ, ಅವನಿಗಂತೂ (ಅಖಂಡ) ಟಿಕೆಟ್‌ 200 ಪರ್ಸೆಂಟ್‌ ಕೊಡೋದಿಲ್ಲ. ಎಲ್ಲಾ ಪ್ಲಾನ್‌ ಮಾಡಿಕೊಂಡಿದ್ದಾರೆ. ನನಗೆ ಮೊದಲೇ ಹೇಳಿದ್ದಾರೆ. ಬೇರೆ ಯಾರಾದರೂ ಕ್ಷೇತ್ರಕ್ಕೆ ಎಂಟ್ರಿ ಆಗಲಿ. ಅವನಿಗಂತೂ ಕೊಡೋಕೆ ನಾನು ಬಿಡೋದಿಲ್ಲ’ ಎಂದು ಪ್ರಸನ್ನ ಕುಮಾರ್‌ ಎನ್ನಲಾದ ವ್ಯಕ್ತಿ ಹೇಳಿದ್ದಾರೆ.

ಅಲ್ಲದೆ, ಚಾಮುಂಡೇಶ್ವರಿಯಲ್ಲಿ ಸಿದ್ದರಾಮಯ್ಯ ಅವರ ಸೋಲಿನಲ್ಲಿ ಅಖಂಡ ಶ್ರೀನಿವಾಸ್‌ ಮೂರ್ತಿ ಪಾತ್ರ ಕೂಡ ಇದೆ ಎಂದು ಕೂಡ ಹೇಳಿದ್ದಾರೆ. ಜತೆಗೆ ಮಾಜಿ ಸಚಿವ ಡಾ.ಜಿ.ಪರಮೇಶ್ವರ್‌ ಅವರ ಬಗ್ಗೆ ‘ಅವನೊಬ್ಬ.. ಎಲ್ಲಾ ಅಷ್ಟೆರೀ’ ಎಂದು, ಜೆಡಿಎಸ್‌ನ ಶರವಣ ಚಿಲ್ಲರೆಯಲ್ಲಿ ಚಿಲ್ಲರೆ ಮನುಷ್ಯ ಎಂದು ಜರಿದಿರುವುದು ಆಡಿಯೋದಲ್ಲಿದೆ.