Asianet Suvarna News Asianet Suvarna News

Election Result: ಕೈ ಮುಂದೆ, ಕಮಲ ಹಿಂದೆ ಜೆಡಿಎಸ್‌ ಹಿಂದೆ ಹಿಂದೆ: ಬಿಜೆಪಿ ಬುಡ ಗಡಗಡ..!

*   ರಾಜ್ಯದ 58 ನಗರ ಸ್ಥಳೀಯ ಸಂಸ್ಥೆಗಳ ಚುನಾವಣಾ ಫಲಿತಾಂಶ ಪ್ರಕಟ
*   ಆಡಳಿತಾರೂಢ ಬಿಜೆಪಿಯನ್ನು ಹಿಂದಿಕ್ಕಿ ಪ್ರತಿಪಕ್ಷ ಕಾಂಗ್ರೆಸ್‌ಗೆ ಅಗ್ರಸ್ಥಾನ
*   ಪ್ರಾದೇಶಿಕ ಪಕ್ಷ ಜೆಡಿಎಸ್‌ಗಿಂತ ಪಕ್ಷೇತರರ ಗಳಿಕೆ ನಾಲ್ಕು ಪಟ್ಟು ಹೆಚ್ಚು
 

Congress Won Most of Wards in Karnataka Local Body Elections grg
Author
Bengaluru, First Published Dec 31, 2021, 4:37 AM IST

ಬೆಂಗಳೂರು(ಡಿ.31): ರಾಜ್ಯದ 20 ಜಿಲ್ಲೆಗಳಲ್ಲಿ ನಡೆದ 58 ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ(Local Body Elections) ಅಧಿಕಾರಾರೂಢ ಬಿಜೆಪಿಗೆ(BJP) ಹಿನ್ನಡೆ ಉಂಟಾಗಿದ್ದು, ಪ್ರತಿಪಕ್ಷ ಕಾಂಗ್ರೆಸ್‌(Congress) ಹೆಚ್ಚಿನ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಮುಂಬರುವ ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ ಚುನಾವಣೆಗೆ ಕಾಂಗ್ರೆಸ್‌ನಲ್ಲಿ ಹೊಸ ಹುರುಪು ಮೂಡಿದೆ. ಇನ್ನು, ಜೆಡಿಎಸ್‌(JDS) ಹೀನಾಯವಾಗಿ ಸೋಲು ಕಂಡಿದ್ದು, ಪಕ್ಷೇತರರು ಪ್ರಾಬಲ್ಯ ಮೆರೆದಿದ್ದಾರೆ.

34 ಪಟ್ಟಣ ಪಂಚಾಯಿತಿ, 19 ಪುರಸಭೆ ಮತ್ತು 5 ನಗರಸಭೆಯ 1185 ವಾರ್ಡ್‌ಗಳಿಗೆ ನಡೆದ ಚುನಾವಣೆ ಪೈಕಿ 1184 ವಾರ್ಡ್‌ಗಳ ಫಲಿತಾಂಶ ಗುರುವಾರ ಹೊರಬಿದ್ದಿದೆ. ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಒಂದು ವಾರ್ಡ್‌ನಲ್ಲಿ ಅಭ್ಯರ್ಥಿಯೊಬ್ಬರು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಚುನಾವಣೆ ಕೈಬಿಡಲಾಗಿದೆ. ಈ ಪೈಕಿ ಕಾಂಗ್ರೆಸ್‌ 501 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದರೆ, ಬಿಜೆಪಿ 433 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಮೂರನೇ ಶಕ್ತಿಯಾಗಿ ಪಕ್ಷೇತರರು ಹೊರಹೊಮ್ಮಿದ್ದು, 195 ವಾರ್ಡ್‌ಗಳಲ್ಲಿ ಜಯಭೇರಿ ಬಾರಿಸಿದ್ದಾರೆ. ರಾಜ್ಯದ ಪ್ರಾದೇಶಿಕ ಪಕ್ಷ ಜೆಡಿಎಸ್‌ ನಾಲ್ಕನೆ ಸ್ಥಾನಕ್ಕೆ ಕುಸಿದಿದ್ದು, 45 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ.

Local Body Election: 'ಕಾಂಗ್ರೆಸ್‌ ಗೆ 25 ವರ್ಷ ಆದ್ಮೇಲೆ ಗಂಡು ಮಗು ಹುಟ್ಟಿದ ಸಂಭ್ರಮ'

ಖಾತೆ ತೆರೆದ ಆಮ್‌ ಆದ್ಮಿ ಪಕ್ಷ:

ವಿಜಯನಗರ ಜಿಲ್ಲೆಯ ಹೊಸಪೇಟೆ ನಗರಸಭೆಯಲ್ಲಿ ಆಮ್‌ ಆದ್ಮಿ(Aam Aadmi Party) ಪಕ್ಷವು ಖಾತೆ ತೆರೆದಿದೆ. ಒಂದು ವಾರ್ಡ್‌ನಲ್ಲಿ ಆಪ್‌ ಗೆದ್ದಿದೆ. ಜನತಾ ಪಕ್ಷ 1, ಎಐಎಂಐಎಂ 1 ಮತ್ತು ಎಸ್‌ಡಿಪಿಐ 6 ವಾರ್ಡ್‌ಗಳಲ್ಲಿ ಜಯ ಗಳಿಸಿದೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಕಾಂಗ್ರೆಸ್‌ ಕಡೆ ಮತದಾರರು(Voters) ಹೆಚ್ಚಿನ ಒಲವು ತೋರಿರುವುದು ಸ್ಪಷ್ಟವಾಗಿ ಗೊತ್ತಾಗಿದೆ. ಹಲವೆಡೆ ಬಿಜೆಪಿ ನಾಯಕರು ಹಾಕಿದ್ದ ಲೆಕ್ಕಾಚಾರ ಉಲ್ಟಾಅಗಿ ತೀವ್ರ ಮುಖಭಂಗ ಅನುಭವಿಸಿದಂತಾಗಿದೆ.

ಸಿಎಂ ತವರಲ್ಲಿ ಬಿಜೆಪಿಗೆ ಹಿನ್ನಡೆ:

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ(Basavaraj Bommain) ಅವರ ತವರು ಜಿಲ್ಲೆಯಾದ ಹಾವೇರಿಯಲ್ಲಿ(Haveri) ಒಂದು ಪುರಸಭೆ ಮತ್ತು ಒಂದು ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ ಮೇಲುಗೈಯಾಗಿದೆ. ಬಂಕಾಪುರ ಪುರಸಭೆಯಲ್ಲಿ ಕಾಂಗ್ರೆಸ್‌ 14 ವಾರ್ಡ್‌ಗಳಲ್ಲಿ ಜಯ ಗಳಿಸಿದರೆ, ಬಿಜೆಪಿ ಕೇವಲ 7 ಸ್ಥಾನ ಪಡೆದುಕೊಂಡಿದೆ. ಅಂತೆಯೇ ಗುತ್ತಲ ಪಟ್ಟಣ ಪಂಚಾಯಿತಿಯಲ್ಲಿ ಕಾಂಗ್ರೆಸ್‌ 11 ಮತ್ತು ಬಿಜೆಪಿ 6 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿದೆ. ಇದು ಮುಖ್ಯಮಂತ್ರಿಗೆ ಆದ ಹಿನ್ನಡೆ ಎಂಬ ಮಾತುಗಳು ಕೇಳಿಬಂದಿವೆ.

ಕಾಂಗ್ರೆಸ್‌ಗೆ 28, ಬಿಜೆಪಿಗೆ 14 ಕಡೆ ಅಧಿಕಾರ:

58 ನಗರ ಸ್ಥಳೀಯ ಸಂಸ್ಥೆಯ ಚುನಾವಣೆಯಲ್ಲಿ ಅಧಿಕ ಸ್ಥಾನಗಳನ್ನು ಗೆದ್ದು ಬೀಗುತ್ತಿರುವ ಕಾಂಗ್ರೆಸ್‌ 28 ಕಡೆ, ಬಿಜೆಪಿ 14 ಮತ್ತು ಜೆಡಿಎಸ್‌ ಒಂದು ಕಡೆ ಅಧಿಕಾರ ಹಿಡಿಯುವುದು ಬಹುತೇಕ ಖಚಿತವಾಗಿದೆ. 9 ಕಡೆ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, 6 ಕಡೆ ಪಕ್ಷೇತರರು ಅತ್ಯಧಿಕ ಮತಗಳನ್ನು ಪಡೆದು ಮುಂಚೂಣಿಯಲ್ಲಿದ್ದಾರೆ. ಪಕ್ಷೇತರರು ಗೆಲುವು ಸಾಧಿಸಿರುವ ವಾರ್ಡ್‌ಗಳಲ್ಲಿ ಬಿಜೆಪಿಯು ಪಕ್ಷೇತರರೊಂದಿಗೆ ಹೊಂದಾಣಿಕೆ ಮಾಡಿಕೊಂಡು ಅಧಿಕಾರ ಗದ್ದುಗೆ ಹಿಡಿಯುವ ಪ್ರಯತ್ನ ನಡೆಸಿದೆ. ಹೀಗಾಗಿ ಮೂರನೇ ಶಕ್ತಿಯಾಗಿ ಹೊರಹೊಮ್ಮಿರುವ ಪಕ್ಷೇತರರಿಗೆ ಗಾಳ ಹಾಕಲು ಪ್ರಾರಂಭಿಸಿದೆ ಎಂದು ತಿಳಿದುಬಂದಿದೆ.

195 ವಾರ್ಡ್‌ಗಳಲ್ಲಿ ಗೆಲುವು ಸಾಧಿಸಿರುವ ಪಕ್ಷೇತರರ ಪೈಕಿ ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಎಂ.ಕೆ.ಹುಬ್ಬಳ್ಳಿ ಪಟ್ಟಣ ಪಂಚಾಯಿತಿಯಲ್ಲಿನ 14 ವಾರ್ಡ್‌ಗಳಲ್ಲಿ ಎಲ್ಲವೂ ಪಕ್ಷೇತರರ ಪಾಲಾಗಿವೆ. ಇನ್ನು, ಮೂಡಲಗಿ ತಾಲೂಕಿನ ನಾಗನೂರ ಪಟ್ಟಣ ಪಂಚಾಯಿತಿಯ 17 ವಾರ್ಡ್‌ಗಳಲ್ಲಿ ಜಯಗಳಿಸಿದವರೆಲ್ಲರೂ ಪಕ್ಷೇತರರಾಗಿದ್ದಾರೆ. ಇಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಒಂದೂ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗದಿರುವುದು ಆಶ್ಚರ್ಯವನ್ನುಂಟು ಮಾಡಿದೆ.

ಉಪಚುನಾವಣೆಯಲ್ಲೂ ಬಿಜೆಪಿ ಸೋಲು:

ನಗರ ಸ್ಥಳೀಯ ಸಂಸ್ಥೆಯ ಎಂಟು ವಾರ್ಡ್‌ಗಳಿಗೆ ನಡೆದ ಉಪಚುನಾವಣೆಯಲ್ಲಿಯೂ(Byelection) ಆಡಳಿತಾರೂಢ ಬಿಜೆಪಿ ಸೋಲು ಅನುಭವಿಸಿದೆ. ಎಂಟು ವಾರ್ಡ್‌ಗಳ ಪೈಕಿ 4 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆಲುವು ಸಾಧಿಸಿದರೆ, ಬಿಜೆಪಿ ಕೇವಲ ಒಂದು ವಾರ್ಡ್‌ನಲ್ಲಿ ಮಾತ್ರ ಜಯ ಗಳಿಸಿದೆ. ಒಂದು ಎಸ್‌ಡಿಪಿಐ ಮತ್ತು ಎರಡು ವಾರ್ಡ್‌ನಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ. ವಿವಿಧ ಕಾರಣಗಳಿಂದಾಗಿ ತೆರವಾಗಿದ್ದ ಐದು ಪುರಸಭೆ ಮತ್ತು ಮೂರು ನಗರಸಭೆಗಳಿಗೆ ಉಪಚುನಾವಣೆ ನಡೆಸಲಾಗಿದೆ.

3 ಮಹತ್ವದ ಜಿಲ್ಲೆಗಳಲ್ಲಿ ಬಿಜೆಪಿಗೆ ತೀವ್ರ ಹಿನ್ನಡೆ

ಮುಖ್ಯಮಂತ್ರಿಗಳ ತವರು ಜಿಲ್ಲೆ ಹಾವೇರಿ, ಪಕ್ಷದ 13 ಶಾಸಕರಿರುವ ಬೆಳಗಾವಿ ಜಿಲ್ಲೆ ಹಾಗೂ ಪಕ್ಷ ಪ್ರಬಲವಾಗಿರುವ ಬಾಗಲಕೋಟೆ ಜಿಲ್ಲೆಗಳಲ್ಲಿ ಬಿಜೆಪಿ ತೀವ್ರ ಹಿನ್ನಡೆ ಅನುಭವಿಸಿದೆ. ಹಾವೇರಿಯ 1 ಪುರಸಭೆ, 1 ಪ.ಪಂ. ಕಾಂಗ್ರೆಸ್‌ ಪಾಲಾಗಿದ್ದರೆ, ಬೆಳಗಾವಿಯ 11 ಪ.ಪಂ.ಗಳಲ್ಲಿ 5 ಪಕ್ಷೇತರರು ಪ್ರಾಬಲ್ಯ ಮೆರೆದಿದ್ದಾರೆ. ತಲಾ 1 ಬಿಜೆಪಿ, ಕಾಂಗ್ರೆಸ್‌ ಪಾಲಾಗಿದ್ದರೆ, 4 ಕಡೆ ಅತಂತ್ರ ಸ್ಥಿತಿ ಇದೆ. ಪುರಸಭೆಗಳ ಪೈಕಿ 3 ಕಾಂಗ್ರೆಸ್‌, 2 ಬಿಜೆಪಿ ಪಾಲಾಗಿವೆ. ಬಾಗಲಕೋಟೆಯಲ್ಲಿ ಬಿಜೆಪಿ 3 ಪ.ಪಂ.ಗಳ ಅಧಿಕಾರ ಕಳೆದುಕೊಂಡಿದೆ.

501 ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ವಿಜಯ
433 ವಾರ್ಡ್‌ಗಳಲ್ಲಿ ಬಿಜೆಪಿ ಗೆಲುವು
195 ವಾರ್ಡ್‌ಗಳಲ್ಲಿ ಪಕ್ಷೇತರರ ಜಯ
45 ವಾರ್ಡ್‌ಗಳು ಜೆಡಿಎಸ್‌ ಪಾಲು
ಅಧಿಕಾರ ಲೆಕ್ಕಾಚಾರ
ಒಟ್ಟು ಸಂಸ್ಥೆ 58

ಕಾಂಗ್ರೆಸ್‌ 21
ಬಿಜೆಪಿ 14
ಜೆಡಿಎಸ್‌ 01
ಅತಂತ್ರ 22

Election Result: ಗೆದ್ದ ಗಂಡ-ಹೆಂಡ್ತಿ, ಅಕ್ಕ-ತಂಗಿ, ಅತ್ತೆಯನ್ನು ಸೋಲಿಸಿದ ಸೊಸೆ, ಇಲ್ಲಿವೆ ಅಚ್ಚರಿ ರಿಸಲ್ಟ್

ಬಿಜೆಪಿ ಬುಡ ಗಡಗಡ

ಈ ಫಲಿತಾಂಶವನ್ನು ಮುಂದಿನ ಚುನಾವಣೆಗಳ ದಿಕ್ಸೂಚಿ ಎನ್ನುವುದಿಲ್ಲ. ಆದರೆ, ಜನರ ಒಲವು ಯಾರ ಕಡೆಗಿದೆ ಎಂಬುದನ್ನು ಈ ಫಲಿತಾಂಶ ತೋರಿಸಿಕೊಟ್ಟಿದೆ. ಆಡಳಿತ ಪಕ್ಷಕ್ಕೆ ಹಿನ್ನಡೆಯಾಗಿದೆ. ಬಿಜೆಪಿ ಬುಡ ಅಲುಗಾಡುತ್ತಿದೆ. ಕಾಂಗ್ರೆಸ್‌ ಪರವಾದ ಗಾಳಿ ಬೀಸುತ್ತಿರುವುದು ಸ್ಪಷ್ಟವಾಗಿದೆ ಅಂತ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah) ತಿಳಿಸಿದ್ದಾರೆ.  

ಮುಸ್ಲಿಂ ಕ್ಷೇತ್ರ ಗೆದ್ದಿದ್ದಾರೆ

ಅಲ್ಪಸಂಖ್ಯಾತರು (ಮುಸ್ಲಿಂ) ಹೆಚ್ಚಿರುವ ವಾರ್ಡ್‌ಗಳಲ್ಲಿ ಕಾಂಗ್ರೆಸ್‌ ಗೆದ್ದಿದೆ. ಇದನ್ನೇ ದೊಡ್ಡ ಗೆಲುವೆಂದು ಕಾಂಗ್ರೆಸ್‌ ನಾಯಕರು ಬೀಗುತ್ತಿದ್ದಾರೆ. ಕಾಂಗ್ರೆಸ್‌ಗೆ ಬುಡವೇ ಇಲ್ಲದಿದ್ದರೂ ಸಿದ್ದರಾಮಯ್ಯ ಮಾತಾಡುತ್ತಿದ್ದಾರೆ. ಅವರ ಕನಸು ನನಸಾಗುವುದಿಲ್ಲ, 2023ರಲ್ಲಿ ಬಿಜೆಪಿ ಗೆಲ್ಲಲಿದೆ ಅಂತ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.  

ಕಾಂಗ್ರೆಸ್‌ ಪರ ಒಲವು

ಪಟ್ಟಣ, ನಗರವಾಸಿಗಳ ಒಲವು ಕಾಂಗ್ರೆಸ್‌ ಪರ ವಾಲುತ್ತಿರುವುದು ಈ ಫಲಿತಾಂಶದಿಂದ ಸ್ಪಷ್ಟವಾಗಿದೆ. ಆಡಳಿತ ಪಕ್ಷದ ಶಾಸಕರು ಇರುವ ಕಡೆ ಅದೇ ಪಕ್ಷದವರು ಗೆಲ್ಲುವುದು ಸಾಮಾನ್ಯ. ಆದರೆ, ಈ ಬಾರಿ ಅಂಥ ಕಡೆಯೂ ಕಾಂಗ್ರೆಸ್‌ ಗೆದ್ದಿರುವುದು ಜನರ ಭಾವನೆ ಹೇಗಿದೆ ಎಂಬುದಕ್ಕೆ ಸಾಕ್ಷಿ ಅಂತ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ತಿಳಿಸಿದ್ದಾರೆ. 

ಕಾಂಗ್ರೆಸ್‌ ಹುನ್ನಾರ ಠುಸ್‌

ಕುಮಾರಸ್ವಾಮಿ ಕೇತಗಾನಹಳ್ಳಿಯಲ್ಲಿದ್ದಾರೆ. ಅವರನ್ನು ಅಲ್ಲಿಗೇ ನೂಕುತ್ತೇವೆ ಎಂದಿದ್ದ ಕಾಂಗ್ರೆಸ್ಸಿಗರಿಗೆ ಬಿಡದಿ ಫಲಿತಾಂಶ ಉತ್ತರ ನೀಡಿದೆ. ವಿಜಯಪುರ, ರಾಯಚೂರು, ಶಿರಾ ಸೇರಿ ಅನೇಕ ಕಡೆ ನಮ್ಮವರು ಗೆದ್ದಿದ್ದಾರೆ. 2023ರಲ್ಲಿ ಜೆಡಿಎಸ್‌ ಶಕ್ತಿ ಏನೆಂದು ಕಾಂಗ್ರೆಸ್‌ಗೆ ಗೊತ್ತಾಗಲಿದೆ ಅಂತ ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ(HD Kumaraswamy) ಹೇಳಿದ್ದಾರೆ.  
 

Follow Us:
Download App:
  • android
  • ios