ರಾಮಮಂದಿರ ತಡೆಯಲು ಕೊನೇ ಕ್ಷಣದವರೆಗೂ ಕಾಂಗ್ರೆಸ್ ಪ್ರಯತ್ನ: ಪ್ರಧಾನಿ ಮೋದಿ
ಕಾಂಗ್ರೆಸ್ ರಾಮಮಂದಿರ ನಿರ್ಮಾಣವಾಗದಂತೆ ತಡೆಯಲು ಕೊನೇ ಕ್ಷಣದವರೆಗೂ ಪ್ರಯತ್ನಿಸಿತು. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನವನ್ನೂ ತಿರಸ್ಕರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು.
ಹೊಸಪೇಟೆ (ಏ.29): ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿರ್ಧಾರವನ್ನು ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನವೇ ತೆಗೆದುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ರಾಮಮಂದಿರ ನಿರ್ಮಾಣವಾಗದಂತೆ ತಡೆಯಲು ಕೊನೇ ಕ್ಷಣದವರೆಗೂ ಪ್ರಯತ್ನಿಸಿತು. ರಾಮಲಲ್ಲಾನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಆಹ್ವಾನವನ್ನೂ ತಿರಸ್ಕರಿಸಿತು ಎಂದು ಪ್ರಧಾನಿ ನರೇಂದ್ರ ಮೋದಿ ಕಿಡಿಕಾರಿದರು. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಹಾಗೂ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಭಾನುವಾರ ಆಯೋಜಿಸಿದ್ದ ಬಿಜೆಪಿ ಬೃಹತ್ ಸಮಾವೇಶದಲ್ಲಿ ಅಯೋಧ್ಯೆ ರಾಮ ಮಂದಿರದ ವಿಚಾರ ಪ್ರಸ್ತಾಪಿಸಿದ ಅವರು ಅಯೋಧ್ಯೆಯಲ್ಲಿನ ಬಾಲರಾಮನನ್ನು ತಿರಸ್ಕರಿಸಿದವರನ್ನು ಕರ್ನಾಟಕದ ಜನತೆ ಯಾವತ್ತಿಗೂ ಒಪ್ಪಿಕೊಳ್ಳಲಾರರು ಎಂದರು.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕಾಗಿ ನಮ್ಮ ಪೂರ್ವಜರು ಐನೂರು ವರ್ಷಗಳ ಕಾಲ ಹೋರಾಟ ಮಾಡಿದರು. 500 ವರ್ಷ ಎಂಬುದೇನು ಕಡಿಮೆ ಸಮಯ ಅಲ್ಲ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಮರುದಿನವೇ ರಾಮಮಂದಿರ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಳ್ಳಬೇಕಿತ್ತು. ಆದರೆ ಕಾಂಗ್ರೆಸ್ ಆ ಕೆಲಸ ಮಾಡಲಿಲ್ಲ. ಈ ಕೆಲಸ ಐವತ್ತನಾಲ್ಕು ಇಂಚಿನ ಎದೆಯಿಂದ ಸಾಕಾರವಾಯಿತು ಎಂದರು. ಹೇಳಿದರು. ಈಗ ಅಯೋಧ್ಯೆಯಲ್ಲಿ ಭವ್ಯ ರಾಮಮಂದಿರ ನಿರ್ಮಾಣವಾಗಿದೆ. ಆದರೂ ಕಾಂಗ್ರೆಸ್‌ನ ತುಷ್ಟೀಕರಣದ ರಾಜಕೀಯ ಮಾತ್ರ ಮುಗಿಲು ಮುಟ್ಟಿದೆ.
ಅವರಿಗೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಸಹಿಸಲು ಸಾಧ್ಯವಾಗುತ್ತಿಲ್ಲ. ರಾಮ ಮಂದಿರ ನಿರ್ಮಾಣವಾದರೆ ದೇಶದಲ್ಲಿ ಬೆಂಕಿ ಬೀಳುತ್ತದೆ ಎಂದು ಗುಲ್ಲೆಬ್ಬಿಸಿದರು. ಆದರೆ, ಭವ್ಯ ದಿವ್ಯ ರಾಮಮಂದಿರ ಅಯೋಧ್ಯೆಯಲ್ಲಿ ನಿರ್ಮಾಣವಾಗಿ ಪ್ರಾಣ ಪ್ರತಿಷ್ಠೆಯೂ ನಡೆಯಿತು. ಎಲ್ಲೂ ಬೆಂಕಿ ಬೀಳಲಿಲ್ಲ. ರಾಮಮಂದಿರ ನಿರ್ಮಾಣದಿಂದ ಅವರಿಗೆ ಮಿರ್ಚಿ (ಖಾರ) ಹತ್ತಿತ್ತು ಎಂದು ಮೋದಿ ವ್ಯಂಗ್ಯವಾಡಿದರು. ರಾಮಮಂದಿರದ ಟ್ರಸ್ಟಿಗಳು ಕಾಂಗ್ರೆಸ್ಸಿಗರ ಮನೆಗೆ ಹೋಗಿ ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಹ್ವಾನ ನೀಡಿದರು. ಆದರೆ ಕಾಂಗ್ರೆಸ್ಸಿಗರು ವೋಟ್ ಬ್ಯಾಂಕ್ ರಾಜಕೀಯಕ್ಕಾಗಿ ಅದನ್ನು ತಿರಸ್ಕರಿಸಿದರು.
ಕರ್ನಾಟಕ ಕಾಂಗ್ರೆಸ್ಸಿನ ಪಾಪಕ್ಕೆ ಈ ಬಾರಿ ಶಿಕ್ಷೆ ನೀಡಿ: ಪ್ರಧಾನಿ ಮೋದಿ
ಒಂದು ಕಡೆ ಇಕ್ಬಾಲ್ ಅನ್ಸಾರಿ ಮತ್ತು ಅವರ ಇಡೀ ಕುಟುಂಬದ ಮೂರು ತಲೆಮಾರು ರಾಮಮಂದಿರ ನಿರ್ಮಾಣದ ವಿರುದ್ಧ ನ್ಯಾಯಾಲಯದಲ್ಲಿ ಹೋರಾಟ ಮಾಡಿತು. ಆದರೆ ಸುಪ್ರೀಂ ಕೋರ್ಟ್ ತೀರ್ಪು ಬಂದ ಬಳಿಕ ಅವರು ಅದನ್ನು ಒಪ್ಪಿಕೊಂಡರು. ಟ್ರಸ್ಟಿಗಳು ಅನ್ಸಾರಿ ಅವರಿಗೂ ರಾಮನ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ್ದರು. ಅದರಂತೆ ಅವರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು ಎಂದರು. ರಾಮನ ಪ್ರಾಣಪ್ರತಿಷ್ಠೆಯ ಆಹ್ವಾನವನ್ನು ತಿರಸ್ಕರಿಸಿದ ಪಕ್ಷವನ್ನು ಕರ್ನಾಟಕದ ಜನ ಮತ್ತು ದೇಶದ ಜನ ತಿರಸ್ಕರಿಸಬೇಕು ಎಂದು ಇದೇ ವೇಳೆ ಮೋದಿ ಆಗ್ರಹಿಸಿದರು.