ಬೆಂಗಳೂರು: ಬಿಬಿಎಂಪಿ ಮೀಸಲು ವಿರುದ್ಧ ಕಾಂಗ್ರೆಸ್ ಹೋರಾಟ
ಮೀಸಲಾತಿ ಪಟ್ಟಿ ತನ್ನಿಷ್ಟದಂತೆ ಮಾಡಿದ ಬಿಜೆಪಿ: ಡಿ.ಕೆ.ಶಿವಕುಮಾರ್ ಟೀಕೆ
ಬೆಂಗಳೂರು(ಆ.09): ರಾಜ್ಯ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡುವ ಪ್ರಯತ್ನ ನಡೆಸುತ್ತಿದೆ. ಆದರೆ, ಸರ್ಕಾರ ಏನೇ ಮಾಡಲಿ ಚುನಾವಣೆಗೆ ಸಿದ್ಧವಾಗಿರಿ ಎಂದು ನಮ್ಮ ನಾಯಕರಿಗೆ ಸೂಚಿಸಲಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ. ಕೆಪಿಸಿಸಿ ಕಚೇರಿಯಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ಬಿಬಿಎಂಪಿ ಚುನಾವಣೆ ಮುಂದೂಡುವ ಪ್ರಯತ್ನದಲ್ಲಿದೆ. ಮೀಸಲಾತಿ ಪಟ್ಟಿಯನ್ನು ತನಗೆ ಬೇಕಾದ ರೀತಿಯಲ್ಲಿ ಮಾಡಿಕೊಂಡಿದೆ. ವಾರ್ಡ್ ಮರು ವಿಂಗಡಣೆ ವಿಚಾರವಾಗಿ 3 ಸಾವಿರಕ್ಕೂ ಹೆಚ್ಚು ಆಕ್ಷೇಪಗಳು ವ್ಯಕ್ತವಾಗಿದ್ದು, ಸರ್ಕಾರ ಯಾವುದೇ ಆಕ್ಷೇಪಕ್ಕೂ ಸ್ಪಂದಿಸುವ ಕೆಲಸ ಮಾಡಿಲ್ಲ. ಇದನ್ನು ಕಾಂಗ್ರೆಸ್ ಒಪ್ಪುವುದಿಲ್ಲ. ಜನರಿಗೆ ಅಧಿಕಾರ ಸಿಗಬೇಕು ಎಂಬುದು ನಮ್ಮ ಉದ್ದೇಶ. ಅವರು ಏನೇ ಮಾಡಲಿ, ನಾವು ಜನರ ಮೇಲೆ ವಿಶ್ವಾಸವಿಟ್ಟು ಅವರ ಮುಂದೆ ಹೋಗುತ್ತೇವೆ. ಬೆಲೆ ಏರಿಕೆ ಮೂಲಕ ದಿನನಿತ್ಯ ಜನರಿಗೆ ನೋವು ನೀಡುತ್ತಿರುವ ಸರ್ಕಾರ ಕಿತ್ತೊಗೆಯಲು ಹೋರಾಟ ಮಾಡುತ್ತೇವೆ ಎಂದರು.
ಬಿಬಿಎಂಪಿ ಚುನಾವಣೆ ಮೀಸಲಾತಿ ವಿಚಾರವಾಗಿ ಹೋರಾಟ ಮಾಡುತ್ತೀರಾ ಎಂಬ ಪ್ರಶ್ನೆಗೆ, ನಮ್ಮ ನಾಯಕರೆಲ್ಲರೂ ಸೇರಿ ನಗರಾಭಿವೃದ್ಧಿ ಕಚೇರಿಗೆ ಬಿಜೆಪಿ ಕಚೇರಿ ಎಂದು ನಾಮಫಲಕ ಹಾಕಿ ಪ್ರತಿಭಟನೆ ವ್ಯಕ್ತಪಡಿಸಿದ್ದಾರೆ. ಕೆಲವರು ನ್ಯಾಯಾಲಯದ ಮೋರೆ ಹೋಗಲಿದ್ದಾರೆ. ಈ ಮೀಸಲಾತಿ ಪಟ್ಟಿಹೇಗೇ ಇದ್ದರೂ ಚುನಾವಣೆಗೆ ಸಿದ್ಧವಾಗಿ ಎಂದು ನಮ್ಮ ನಾಯಕರಿಗೆ ಹೇಳಿದ್ದೇನೆ. ನಮ್ಮ ಹಲವು ಪ್ರಮುಖ ನಾಯಕರೆಲ್ಲರೂ ಸ್ಥಳೀಯ ಸಂಸ್ಥೆಗಳ ಸದಸ್ಯರಾಗಿದ್ದರು. ಇದು ಸಣ್ಣ ಚುನಾವಣೆ ಅಲ್ಲ, ದೊಡ್ಡ ಚುನಾವಣೆ. ನೀವು ಕೂಡ ನಾಯಕರಾಗಿ ಎಂದು ನಮ್ಮ ಪಕ್ಷದವರಿಗೆ ತಿಳಿಸಿದ್ದೇವೆ ಎಂದು ತಿಳಿಸಿದರು.
ಬಿಬಿಎಂಪಿ ವಾರ್ಡ್ ಮೀಸಲಾತಿ: ಸುಪ್ರೀಂ ಕೋರ್ಟ್ ಕದತಟ್ಟಿದವರಿಗೆ ಶಾಕ್!
100+ ವಾರ್ಡಲ್ಲಿ ಮನಸ್ಸೋ ಇಚ್ಛೆ ಮೀಸಲು ವಿರುದ್ಧ ‘ಕೈ’ ಹೋರಾಟ
ಬೆಂಗಳೂರು: ಬಿಬಿಎಂಪಿಯ 100ಕ್ಕೂ ಹೆಚ್ಚು ವಾರ್ಡುಗಳಿಗೆ ಮಾರ್ಗಸೂಚಿ ಅನುಸರಿಸದೆ ಮೀಸಲಾತಿ ನಿಗದಿ ಮಾಡಿದೆ. ಈ ಬಗ್ಗೆ ಆಕ್ಷೇಪಣೆ ಸಲ್ಲಿಸಲಾಗಿದ್ದು ಸರ್ಕಾರ ಸರಿಪಡಿಸಿದೇ ಹೋದರೆ ಕಾನೂನು ಹೋರಾಟ ನಡೆಸಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಬಿಎಂಪಿ ಚುನಾವಣೆಗೆ ಸರ್ಕಾರ ಪ್ರಕಟಿಸಿರುವ ಮೀಸಲಾತಿ ಸಂಬಂಧ ಆಕ್ಷೇಪಣೆಗಳನ್ನು ಸಲ್ಲಿಸಲು ಮಂಗಳವಾರ ಕೊನೆಯ ದಿನ. ಕಾಂಗ್ರೆಸ್ ಪಕ್ಷದಿಂದ ನಾವು ಕೂಡ ಸಾಕಷ್ಟುಆಕ್ಷೇಪಣೆಗಳನ್ನು ಸಲ್ಲಿಸಿದ್ದೇವೆ. ಮಾರ್ಗಸೂಚಿ ಅನುಸರಿಸದೆ ಅನೇಕ ವಾರ್ಡುಗಳ ಮೀಸಲಾತಿ ನಿಗದಿಪಡಿಸಲಾಗಿದೆ. ಸುಮಾರು 100ಕ್ಕಿಂತ ಹೆಚ್ಚು ವಾರ್ಡುಗಳಲ್ಲಿ ಈ ರೀತಿ ಆಗಿದೆ. ಈ ಸಂಬಂಧ ಬಂದಿರುವ ಆಕ್ಷೇಪಣೆಗಳನ್ನು ಪರಿಗಣಿಸಿ ಸರ್ಕಾರ ಸರಿಪಡಿಸಬಹುದು ಎಂದು ಎರಡು ದಿನ ಕಾಯುತ್ತೇವೆ. ಒಂದು ವೇಳೆ ಸರಿಪಡಿಸದೆ ಹೋದರೆ ಕಾನೂನು ಹೋರಾಟಕ್ಕೆ ಮುಂದಾಗುತ್ತೇವೆ. ಮುಖ್ಯಮಂತ್ರಿ ಅವರ ಮನೆಗೂ ಮುತ್ತಿಗೆ ಹಾಕಿ ಮೀಸಲಾತಿ ನಿಗದಿಯಲ್ಲಾಗಿರುವ ಲೋಪ ಸರಿಪಡಿಸಲು ಆಗ್ರಹಿಸುತ್ತೇವೆ ಎಂದು ಹೇಳಿದರು.
ರಾಜಕೀಯ ದುರುದ್ದೇಶದಿಂದ ಅತ್ಯಂತ ವ್ಯವಸ್ಥಿತವಾಗಿ ಈ ರೀತಿ ಮಾಡಲಾಗಿದೆ. ಇದರಿಂದ ಕಾಂಗ್ರೆಸ್‌ನವರಿಗೆ ಮಾತ್ರವಲ್ಲ ಬಿಜೆಪಿಯಲ್ಲಿ ನಾಯಕತ್ವ ಬೆಳೆಸಿಕೊಂಡವರಿಗೂ ಇದರಿಂದ ಸಮಸ್ಯೆಯಾಗಿದೆ. ಮುಖ್ಯಮಂತ್ರಿಗಳು ಇದನ್ನು ಸರಿಪಡಿಸಲು ಗಮನ ಹರಿಸಬೇಕು. ಸದ್ಯ ಮುಖ್ಯಮಂತ್ರಿ ಅವರಿಗೆ ಕೋವಿಡ್ ಇದೆ. ಹಾಗಾಗಿ ನಾವು ಕಾಯುತ್ತೇವೆ. ಅವರು ಗುಣಮುಖರಾದ ಕೂಡಲೇ ನಮ್ಮ ಹೋರಾಟ ಆರಂಭಿಸುತ್ತೇವೆ ಎಂದರು.
‘ಸಿಎಂ ಮಾತಿಗೆ ತೂಕ ಇರಬೇಕು’
ಬಿಬಿಎಂಪಿ ವಾರ್ಡು ಮರುವಿಂಗಡಣೆ ಹಾಗೂ ಮೀಸಲಾತಿ ಪ್ರಕಟಣೆಯಲ್ಲಾಗಿರುವ ಲೋಪಗಳನ್ನು ಸರಿಪಡಿಸುವಂತೆ ಆಗ್ರಹಿಸಿ ನಗರಾಭಿವೃದ್ಧಿ ಇಲಾಖೆಗೆ ಕಾಂಗ್ರೆಸ್ ಮುತ್ತಿಗೆ ಹಾಕಿದ್ದನ್ನೇ ಮುಖ್ಯಮಂತ್ರಿ ಅವರು ರೌಡಿಸಂ ಎನ್ನುವುದಾದರೆ ರಾಜ್ಯದಲ್ಲಿ ಇವರ ಸರ್ಕಾರ ಹಿಜಾಬ್, ಹಲಾಲ್, ಜಟ್ಕಾ ಕಟ್ ಹೆಸರಲ್ಲಿ ಸೃಷ್ಟಿಸಿದ ಗಲಾಟೆಗಳನ್ನು ಏನನ್ನಬೇಕು ಎಂದು ಇದೇ ವೇಳೆ ರಾಮಲಿಂಗಾರೆಡ್ಡಿ ಪ್ರಶ್ನಿಸಿದರು.
ಒಬ್ಬ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ಮಾತನಾಡಿದರೆ ಅರ್ಥ, ತೂಕ ಇರಬೇಕು. ಆಕ್ಷೇಪಗಳನ್ನು ಪರಿಗಣಿಸದೆ ನಗರಾಭಿವೃದ್ಧಿ ಇಲಾಖೆ ಅಧಿಕಾರಿಗಳು ಬಿಜೆಪಿ ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ. ಆರೆಸ್ಸೆಸ್ ನಾಯಕರು, ಬಿಜೆಪಿ ಶಾಸಕರು ಮತ್ತು ಸಂಸದರು ಹೇಳಿದಂತೆ ಅಧಿಕಾರಿಗಳು ಕೇಳಿದ್ದಾರೆ. ಇದನ್ನು ಖಂಡಿಸಿ ನಾವು ಇಲಾಖೆಯ ಕಚೇರಿಗೆ ಮುತ್ತಿಗೆ ಹಾಕಿ ಮಾರ್ಗಸೂಚಿ ಅನುಸರಿಸಿ ಮೀಸಲಾತಿ ಪ್ರಕಟಿಸಲು ಶಾಂತಿಯುತವಾಗಿ ಆಗ್ರಹಿಸಿದ್ದೇವೆ. ಆದರೂ ಇಂತಹ ಹೇಳಿಕೆ ನೀಡುವುದು ಎಷ್ಟು ಸೂಕ್ತ. ರಾಜ್ಯದಲ್ಲಿ ಹಿಜಾಬ್, ಹಲಾಲ್, ಜಟ್ಕಾ ಟಕ್ ಹೀಗೆ ಅನೇಕ ಗಲಾಟೆಗಳನ್ನು ಮಾಡಿದ್ದು ಯಾರು. ಸಂಘಪರಿವಾರದವರು ಮಾಡಿದ ಇಂತಹ ಗೂಡಾಗಿರಿ, ರೌಡಿಸಂ ಮಟ್ಟಹಾಕಿ ಎಂದು ಹೇಳಿದ್ದು ನಾವು ಎಂದರು.
ಬಿಬಿಎಂಪಿ ಮೀಸಲಾತಿಯಲ್ಲಿ ಎಸ್ಸಿ- ಎಸ್ಟಿಗೆ ಅನ್ಯಾಯ: ನಾಳೆ ಪ್ರತಿಭಟನೆ
ಬೆಂಗಳೂರು: ಬಿಬಿಎಂಪಿ ಚುನಾವಣೆಗೆ ಸರ್ಕಾರ ಪ್ರಕಟಿಸಿರುವ ಮೀಸಲಾತಿಗೆ ವಿರೋಧ ವ್ಯಕ್ತಪಡಿಸಿ ಆ.10ರಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ(ಆರ್‌ಪಿಐ) ತಿಳಿಸಿದೆ.
ನಗರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಪಕ್ಷದ ರಾಜ್ಯ ಉಪಾಧ್ಯಕ್ಷ ರಾಜು ಬೋಸಪ್ಪ, ಇತ್ತೀಚೆಗೆ ಬಿಬಿಎಂಪಿ ವ್ಯಾಪ್ತಿಯ 243 ವಾರ್ಡ್‌ಗಳಿಗೆ ಮೀಸಲಾತಿ ಸಂಬಂಧ ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಇದರಲ್ಲಿ ಪರಿಶಿಷ್ಟಜಾತಿ ಮತ್ತು ಪಂಗಡ ಜನಾಂಗಗಳನ್ನು ಪರಿಗಣಿಸದೆ ಅನ್ಯಾಯವೆಸಗಿದೆ. ಇದನ್ನು ಖಂಡಿಸಿ ಆರ್‌ಪಿಐ ಪಕ್ಷದಿಂದ ಆಗಸ್ಟ್ 11ರಂದು ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
ಅಧಿಸೂಚನೆ ಪ್ರಕಾರ 243 ವಾರ್ಡ್‌ಗಳ ಪೈಕಿ 11 ವಾರ್ಡ್‌ಗಳು ಪರಿಶಿಷ್ಟಜಾತಿಗೆ, 4 ವಾರ್ಡ್‌ಗಳು ಪರಿಶಿಷ್ಟಪಂಗಡಕ್ಕೆ ಮೀಸಲಿರಿಸಲಾಗಿದೆ. ಇದರಿಂದ ಈ ವರ್ಗವನ್ನು ಪಾಲಿಕೆಯ ಅಧಿಕಾರದಲ್ಲಿ ದೂರ ಇಡಲು ಸರ್ಕಾರ ಮುಂದಾಗಿದೆ. ಹೀಗಾಗಿ ಸರ್ಕಾರ ಈ ಬಗ್ಗೆ ಗಮನ ಹರಿಸಿ ಸರಿಪಡಿಸಬೇಕು ಎಂದು ಅವರು ಆಗ್ರಹಿಸಿದರು.
ಚಾಮರಾಜಪೇಟೆ ಕ್ಷೇತ್ರ ವಾರ್ಡ್ ಮರು ವಿಂಗಡಣೆ ಪ್ರಶ್ನಿಸಿ ಅರ್ಜಿ
ಬೆಂಗಳೂರು: ನಗರದ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಮರು ವಿಂಗಡಣೆ ಪ್ರಶ್ನಿಸಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆಯಾಗಿದೆ. ಈ ಕುರಿತು ವಕೀಲ ಎಸ್.ಇಸ್ಮಾಯಿಲ್ ಜಬಿವುಲ್ಲಾ ತಕರಾರು ಅರ್ಜಿ ಸಲ್ಲಿಸಿದ್ದಾರೆ. ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ಬಿಬಿಎಂಪಿ ವಾರ್ಡ್‌ಗಳನ್ನು ಪುನರ್ ರಚಿಸಿ 2022ರ ಜು.14ರಂದು ಸರ್ಕಾರ ಹೊರಡಿಸಿರುವ ಅಧಿಸೂಚನೆ ರದ್ದುಪಡಿಸಬೇಕು. ಹೊಸದಾಗಿ ವಾರ್ಡ್‌ಗಳನ್ನು ರಚಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು. ಐತಿಹಾಸಿಕ ಕೆ.ಆರ್.ಮಾರ್ಕೆಟ್ ವಾರ್ಡ್ ಮರು ರಚಿಸಬೇಕು. ಅರ್ಜಿ ಇತ್ಯರ್ಥಗೊಳ್ಳದ ತನಕ ಬಿಬಿಎಂಪಿ ಚುನಾವಣೆಗೆ ಅಧಿಸೂಚನೆ ಹೊರಡಿಸದಂತೆ ರಾಜ್ಯ ಚುನಾವಣಾ ಆಯೋಗಕ್ಕೆ ನಿರ್ದೇಶನ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.
ಕಾಂಗ್ರೆಸ್ಸಿಗರಿಗೆ ದುಬಾರಿಯಾದ ಹೊಸ ಮೀಸಲಾತಿ : ಬಿಬಿಎಂಪಿ ಮೀಸಲಾತಿಗೆ ಕೈ ಶಾಕ್
ಅಲ್ಲದೆ, ಅರ್ಜಿಯಲ್ಲಿ ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಬೆಂಗಳೂರು ನಗರ ಜಿಲ್ಲಾಧಿಕಾರಿ, ಸೀಮಾ ನಿರ್ಣಯ ಆಯೋಗದ ಅಧ್ಯಕ್ಷರು, ಬಿಬಿಎಂಪಿ ಮುಖ್ಯ ಆಯುಕ್ತರು ಹಾಗೂ ರಾಜ್ಯ ಚುನಾವಣಾ ಆಯೋಗವನ್ನು ಪ್ರತಿವಾದಿಯನ್ನಾಗಿ ಮಾಡಲಾಗಿದೆ. ಅರ್ಜಿ ವಿಚಾರಣೆಗೆ ಬರಬೇಕಿದೆ.
ಗೋವಿಂದರಾಜ ನಗರ, ಪದ್ಮನಾಭ ನಗರ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಪ್ರತಿ ವಾರ್ಡ್‌ಗೆ ಸರಾಸರಿ 30 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಅಲ್ಲದೆ, ವಾರ್ಡ್‌ಗಳ ಸಂಖ್ಯೆ ಸಹ ಹೆಚ್ಚಿಸಲಾಗಿದೆ. ಆದರೆ, ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ವಾರ್ಡ್‌ಗೆ ಸರಾಸರಿ 39 ಸಾವಿರ ಜನಸಂಖ್ಯೆ ನಿಗದಿಪಡಿಸಲಾಗಿದೆ. ಹಿಂದೆ ಏಳು ವಾರ್ಡ್‌ಗಳು ಇದ್ದವು. ಇದೀಗ ಪ್ರಸಿದ್ಧ ಕೆ.ಆರ್.ಮಾರ್ಕೆಟ್ ವಾರ್ಡ್ ಕೈಬಿಟ್ಟು ವಾರ್ಡ್‌ಗಳ ಸಂಖ್ಯೆಯನ್ನು 6ಕ್ಕೆ ಇಳಿಸಲಾಗಿದೆ. ಆ ಮೂಲಕ ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಿಬಿಎಂಪಿ ವಾರ್ಡ್‌ಗಳ ಪುನರ್ ರಚನೆಯಲ್ಲಿ ತಾರತಮ್ಯ ಮಾಡಲಾಗಿದೆ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ.