Karnataka Politics: 2023ರಲ್ಲಿ ಕಾಂಗ್ರೆಸ್ ಅಧಿಕಾರಕ್ಕೇರೋದು ಫಿಕ್ಸ್: ಮಧು ಬಂಗಾರಪ್ಪ
* ವಿಧಾನಸಭೆ ಟಿಕೆಟ್ ಪಕ್ಷ ನಿರ್ಧಾರ-ಮಧು ಬಂಗಾರಪ್ಪ
* ಅರಣ್ಯ ಅತಿಕ್ರಮಣ ಸಕ್ರಮಕ್ಕೆ ಕಾನೂನು ಬದಲಾವಣೆ ಅಗತ್ಯ
* ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿಯವರು ಏಳು ವರ್ಷದಲ್ಲಿ ಹರಾಜು ಹಾಕಿದರು
ಶಿರಸಿ(ಮಾ.04): ರಾಜ್ಯದ ಜನರ ಹಿತದೃಷ್ಟಿಯಿಂದ ಕಾಂಗ್ರೆಸ್ ಪಕ್ಷ ಸೇರಿದ್ದೇವೆಯೇ ಹೊರತು ಟಿಕೆಟ್‌ಗಾಗಿ ಅಲ್ಲ. ಪಕ್ಷಕ್ಕೆ ದುಡಿಯುತ್ತೇವೆ ಟಿಕೆಟ್ ಪಕ್ಷ ನಿರ್ಧರಿಸುತ್ತದೆ ಎಂದು ಕಾಂಗ್ರೆಸ್(Congress) ಮುಖಂಡ ಮಧು ಬಂಗಾರಪ್ಪ(Madhu Bangarappa) ಹೇಳಿದರು. ಗುರುವಾರ ನಗರಕ್ಕೆ ಆಗಮಿಸಿದ್ದ ಅವರು, ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದರು. ಮುಂದೆ ಬರುವ ವಿಧಾನಸಭಾ ಚುನಾವಣೆಯಲ್ಲಿ(Assembly Elections) ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಬಿಜೆಪಿ(BJP) ಆಡಳಿತ ವೈಖರಿ, ಬೆಲೆ ಏರಿಕೆಯಿಂದ ಜನ ಬೇಸತ್ತು ಬದಲಾವಣೆ ಬಯಸಿದ್ದಾರೆ. ಈಗಿನ ವಾತಾವರಣ ಗಮನಿಸಿದರೆ ರಾಜ್ಯದಲ್ಲಿ(Karnataka) ಕಾಂಗ್ರೆಸ್ ಅಧಿಕಾರಕ್ಕೆ ಬರುವುದು ನಿಶ್ಚಿತ. ಬಿಜೆಪಿಯ ವಿರುದ್ಧ ಜನಸಾಮಾನ್ಯರೇ ಮಾತನಾಡುತ್ತಿದ್ದಾರೆ. ಕಾಂಗ್ರೆಸ್ 60 ವರ್ಷದಲ್ಲಿ ಮಾಡಿದ್ದನ್ನು ಬಿಜೆಪಿಯವರು ಏಳು ವರ್ಷದಲ್ಲಿ ಹರಾಜು ಹಾಕಿದರು ಎಂದು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ ಎಂದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಪಕ್ಷ ಸದೃಢವಾಗಿದೆ. ಕಾಂಗ್ರೆಸ್ ಹೋರಾಟದ ಮೂಲಕ ಅಧಿಕಾರಕ್ಕೆ ಬರಲಿದೆ. ಅದಕ್ಕೆ ಪಕ್ಷವನ್ನು ಸಂಘಟನೆಯನ್ನು ಮಾಡುತ್ತಿದ್ದೇವೆ. ಇದರ ಜತೆಯಲ್ಲಿ ಜನರ ಭಾವನೆಯೂ ಬದಲಾವಣೆಯಾಗಿರುವುದು ಗಮನಾರ್ಹ ಎಂದರು.
Council Election Karnataka : 'ಬಿಜೆಪಿ ಬೆಂಬಲಿತರ ಮತವೂ ಕಾಂಗ್ರೆಸ್‌ಗೆ'
ಕಾಂಗ್ರೆಸ್ ಯಾವುದೇ ಕಾರ್ಯಕ್ರಮ ಕೊಟ್ಟರೂ ಸಾರ್ವಜನಿಕರ ಅನುಕೂಲಕ್ಕೆ ಕೊಡುತ್ತಾ ಬಂದಿದೆ. ಯಾವುದೇ ವ್ಯಕ್ತಿಗೆ, ಯಾವುದೇ ಧರ್ಮಕ್ಕೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ನೀಡಿಲ್ಲ. ಆದರೀಗ ಧರ್ಮ ಒಡೆಯುವ, ಜಾತಿಜಾತಿ ಒಡೆಯುವ ಕೆಲಸ ಆಗುತ್ತಿದೆ. ಇದು ಯಾವುದೇ ಕಾರಣಕ್ಕೂ ಶೋಭೆ ತರುವುದಿಲ್ಲ ಎಂದರು.
ಅತಿಕ್ರಮಣ ಸಕ್ರಮ:
ಹಲವರು ಅರಣ್ಯ ಭೂಮಿ ಅತಿಕ್ರಮಣ ಮಾಡಿಕೊಂಡು ಸಾಗುವಳಿ ಮಾಡಿ ಜೀವನ ಮಾಡುತ್ತಿದ್ದಾರೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಸಾಕಷ್ಟುಅರ್ಜಿ ಇದೆ. ಆದರೆ, ಅತಿಕ್ರಮಣದಾರರಿಗೆ ರಕ್ಷಣೆ ಕೊಡುತ್ತಿಲ್ಲ. ಅತಿಕ್ರಮಣ ಸಕ್ರಮ ಮಾಡುವುದಕ್ಕೆ ಮೀನಮೇಷ ಮಾಡುತ್ತಿದ್ದಾರೆ. ರಾಜ್ಯದಲ್ಲಿರುವ ಬಿಜೆಪಿ ಸಂಸದರಿಗೆ ಮಾತನಾಡುವ ಬಾಯಿಯಿಲ್ಲ. ಅವರು ಸ್ವಂತ ಶಕ್ತಿಯಿಂದ ಗೆದ್ದವರಲ್ಲ. ಅವರೆಲ್ಲಾ ಮೋದಿ ಹೆಸರಿನಲ್ಲಿ ಗೆದ್ದಿದ್ದರಿಂದ ಅವರ ಮುಂದೆ ಹೋಗಿ ಮಾತನಾಡುತ್ತಿಲ್ಲ. ಕಾನೂನು ಬದಲಾವಣೆ ಆಗಬೇಕು. ಅನಗತ್ಯವಾದ ಕೆಲವು ದಾಖಲೆಗಳನ್ನು ಕೈಬಿಡಬೇಕು. ಮೂರು ತಲೆಮಾರು ಅಂದರೆ ಅಂಥ ದಾಖಲೆ ನೀಡುವುದು ಕಷ್ಟಎಂದರು.
ಹೋರಾಟ ನಡೆಸಿ ಕಾಂಗ್ರೆಸ್ ಬಲವರ್ಧನೆ: ಮಧು ಬಂಗಾರಪ್ಪ
ಶಿವಮೊಗ್ಗ: ಹೋರಾಟದ ಮೂಲಕವೇ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆ ಮತ್ತು ರಾಜ್ಯದಲ್ಲಿ ಸಂಘಟಿಸಲಾಗುವುದು ಎಂದು ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಹೇಳಿದ್ದರು.
ಮಂಗಳವಾರ ಶಿವಮೊಗ್ಗದ ತಮ್ಮ ನಿವಾಸದಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು. ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಮಾತ್ರ ರಾಜ್ಯದ ಜನಹಿತವನ್ನು ಕಾಪಾಡಬಲ್ಲದು. ಪಕ್ಷಕ್ಕೆ ಹೆಚ್ಚಿನ ಶಕ್ತಿ ನೀಡಲಾಗುವುದು. ಪÜಕ್ಷದ ಎಲ್ಲ ಹಿರಿಯರ ಆಶಯವೂ ಇದೇ ಆಗಿದೆ. ಅಭಿವೃದ್ಧಿಯತ್ತ ಸಾಗುವುದೇ ನಮ್ಮ ಗುರಿಯಾಗಿದೆ ಎಂದರು.
ಸೊರಬ ಸೇರಿದಂತೆ ಜಿಲ್ಲೆ ಮತ್ತು ರಾಜ್ಯದಲ್ಲಿ ಬಗರ್‌ಹುಕುಂ ಸಮಸ್ಯೆ ತೀವ್ರವಾಗಿದೆ. ಬಗರ್‌ಹುಕುಂ ಸಮಸ್ಯೆಯನ್ನು ಜ್ವಲಂತ ಸಮಸ್ಯೆಯಾಗಲು ಬಿಡುವುದಿಲ್ಲ. ಈ ಸಮಸ್ಯೆ ಕುರಿತು ಇರುವಂತಹ ಕಾಯ್ದೆಗೆ ಕೆಲವು ತಿದ್ದುಪಡಿ ತರುವ ಅಗತ್ಯವಿದೆ. ಇದನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಾಡಬೇಕು. ಹಂತ ಹಂತವಾಗಿ ಸೊರಬದಿಂದಲೇ ಈ ಹೋರಾಟ ಆರಂಭವಾಗಿ ಇಡೀ ರಾಜ್ಯಾದ್ಯಂತ ವಿಸ್ತಾರಗೊಳ್ಳುತ್ತದೆ ಎಂದರು.
MLC Election: ಬಿಜೆಪಿ ಬ್ಯುಸಿನೆಸ್ ಜನತಾ ಪಾರ್ಟಿಯಾಗಿದೆ: ಮಧು ಬಂಗಾರಪ್ಪ
ಸೊರಬ ಒಂದರಲ್ಲಿಯೇ ಸುಮಾರು 7200 ಅರ್ಜಿಗಳಿವೆ. ಸಾವಿರಾರು ಅರ್ಜಿಗಳು ತಿರಸ್ಕರಿಸಲ್ಪಟ್ಟಿವೆ. ಬಿಜೆಪಿ ಸರ್ಕಾರ ಕಾಯ್ದೆಗೆ ತಿದ್ದುಪಡಿ ತಂದು ಸಾಗುವಳಿದಾರರ ಹಿತ ಕಾಪಾಡಬಹುದಿತ್ತು. ಆದರೆ, ಹಾಗೇ ಮಾಡದೇ ಕಾನೂನನ್ನು ಮತ್ತಷ್ಟುಬಿಗಿಗೊಳಿಸಿದೆ. 2006ರ ನಂತರ ಯಾರೇ ಸಾಗುವಳಿ ಮಾಡಿದ್ದರೂ ಹಕ್ಕುಪತ್ರ ಕೊಡಿ ಎಂದು ನಾನು ಒತ್ತಾಯಿಸುವುದಿಲ್ಲ. ಆದರೆ, ಅದಕ್ಕಿಂತ ಮೊದಲು ಸಾಗುವಳಿ ಮಾಡಿದವರಿಗೆ ಕಾನೂನು ಬದ್ಧವಾಗಿಯೇ ಹಕ್ಕುಪತ್ರ ನೀಡಬೇಕು. ಹಕ್ಕುಪತ್ರ ನೀಡದಿದ್ದಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ದಿನಗಳಲ್ಲಿ ಬೃಹತ್ ಹೋರಾಟವನ್ನೇ ನಡೆಸಲಿದೆ. ಮುಂದಿನ ದಿನಗಳಲ್ಲಿ ಶಿವಮೊಗ್ಗ ಜಿಲ್ಲಾಧಿಕಾರಿಗಳ ಕಚೇರಿ ಎದುರು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು. ರಾಜ್ಯದ ನಾಯಕರು ಈ ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಜಿಲ್ಲಾಧ್ಯಕ್ಷ ಹೆಚ್.ಎಸ್. ಸುಂದರೇಶ್, ಮಾಜಿ ವಿಧಾನ ಪರಿಷತ್ ಸದಸ್ಯ ಆರ್. ಪ್ರಸನ್ನಕುಮಾರ್, ಪ್ರಮುಖರಾದ ಇಕ್ಕೇರಿ ರಮೇಶ್, ಜಿ.ಡಿ. ಮಂಜುನಾಥ್, ಹುಲ್ತಿಕೊಪ್ಪ ಶ್ರೀಧರ್, ಶ್ವೇತಾ, ಬಂಡಿ ರಾಮಚಂದ್ರ ಇತರರು ಉಪಸ್ಥಿತರಿದ್ದರು.