ಬೆಂಗಳೂರು (ಆ.17):  ‘ಪುಲಿಕೇಶಿನಗರ ಮಾಜಿ ಶಾಸಕ ಪ್ರಸನ್ನಕುಮಾರ್‌ ಯಾವುದೇ ಷರತ್ತು ಇಲ್ಲದೆ ಕಾಂಗ್ರೆಸ್‌ ಸೇರ್ಪಡೆಗೆ ಒಪ್ಪಿಕೊಂಡಿದ್ದಾರೆ. 80 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಅಲ್ಲಿನ ಶಾಸಕ ಅಖಂಡ ಶ್ರೀನಿವಾಸ್‌ ಮೂರ್ತಿ ಬಿಟ್ಟು ಬೇರೆಯವರಿಗೆ ಟಿಕೆಟ್‌ ನೀಡುವ ಪ್ರಶ್ನೆಯೇ ಇಲ್ಲ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್‌ನಿಂದ ಜೆಡಿಎಸ್‌ಗೆ ಸೇರ್ಪಡೆಯಾಗಿದ್ದ ಮಾಜಿ ಶಾಸಕ ಪ್ರಸನ್ನ ಕುಮಾರ್‌ ಅವರು ಕಾಂಗ್ರೆಸ್‌ ವಾಪಸಾಗುತ್ತಿರುವ ಹಿನ್ನೆಲೆಯಲ್ಲಿ ಮುಂದಿನ ಚುನಾವಣೆಯಲ್ಲಿ ಪುಲಿಕೇಶಿನಗರ ಕಾಂಗ್ರೆಸ್‌ ಟಿಕೆಟ್‌ಗೆ ಸ್ಪರ್ಧೆ ಏರ್ಪಡುವ ಮುನ್ಸೂಚನೆ ಲಭಿಸಿತ್ತು. ಅಲ್ಲದೆ, ಹಲವು ರೀತಿಯ ರಾಜಕೀಯ ವ್ಯಾಖ್ಯಾನಗಳು ಹೊರ ಬಿದ್ದಿತ್ತು.

ಬೆಂಗ್ಳೂರು ಗಲಭೆ: ಕಾಂಗ್ರೆಸ್ ಶಾಸಕ ಅಖಂಡ ಮನೆಗೆ ಬಿಜೆಪಿ ನಿಯೋಗ....!...

ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಡಿ.ಕೆ. ಶಿವಕುಮಾರ್‌, ಪುಲಿಕೇಶಿನಗರ ಕಾಂಗ್ರೆಸ್‌ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಪ್ರಸನ್ನ ಕುಮಾರ್‌ ಮೊದಲಿನಿಂದಲೂ ನಮ್ಮ ಪಕ್ಷಕ್ಕೆ ಬರುವುದಾಗಿ ಅರ್ಜಿ ಹಾಕಿಕೊಂಡಿದ್ದರು. ಈ ಬಗ್ಗೆ ಅಲ್ಲಂ ವೀರಭದ್ರಪ್ಪ ನೇತೃತ್ವದ ಸಮಿತಿಯು ಸಹ ಅವರ ಅರ್ಜಿ ಪರಿಶೀಲಿಸಿದೆ. ಅವರು ಯಾವ ಷರತ್ತೂ ಇಲ್ಲದೆ ಪಕ್ಷಕ್ಕೆ ಆಗಮಿಸುತ್ತಿದ್ದಾರೆ. ಅಖಂಡ ಶ್ರೀನಿವಾಸ ಮೂರ್ತಿ ಅವರನ್ನು ಬಿಟ್ಟು ಬೇರೆಯವರಿಗೆ ಟಿಕೆಟ್‌ ಕೊಡುವ ಪ್ರಶ್ನೆಯೇ ಇಲ್ಲ . ಅಲ್ಲದೆ ಪ್ರಸನ್ನ ಕುಮಾರ್‌ ಅವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳಲು ಅಖಂಡ ಶ್ರೀನಿವಾಸ್‌ ಅವರೇ ಒಪ್ಪಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಶಾಸಕ ಅಖಂಡ ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರ್ತಾರೆ ಸುದ್ದಿಗೆ ಸಿಕ್ತು ಸ್ಪಷ್ಟನೆ..

‘ಗಲಭೆಗೆ ಕಾಂಗ್ರೆಸ್‌ ಪಕ್ಷಕ್ಕೂ ಯಾವುದೇ ಸಂಬಂಧವಿಲ್ಲ. ನವೀನ್‌ ಕುಮಾರ್‌ ಪೋಸ್ಟ್‌ನಿಂದ ಪ್ರಚೋದನೆಯಾಗಿ ಗಲಭೆ ಆಗಿದೆ. ಆದರೆ ಬಿಜೆಪಿಯವರು ತಮ್ಮ ವೈಫಲ್ಯವನ್ನು ಮುಚ್ಚಿ ಹಾಕಿಕೊಳ್ಳಲು ಕಾಂಗ್ರೆಸ್‌ ಮೇಲೆ ಆರೋಪ ಮಾಡುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸುಖಾಸುಮ್ಮನೆ ರಾಜಕೀಯ ಮಾತು, ಊಹಾಪೋಹಗಳು ಹರಿದಾಡುತ್ತಿವೆ. ಮಲಗಿರುವ ಪ್ರಸನ್ನ ಕುಮಾರ್‌ ಅವರನ್ನು ಏಕೆ ಎಬ್ಬಿಸಲು ಹೋಗುತ್ತಿದ್ದೀರಿ’ ಎಂದು ಪ್ರಶ್ನಿಸಿದರು.