ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆಗೆ 5-6 ತಿಂಗಳು ಬಾಕಿಯಿರುವಾಗಲೇ ಅಭ್ಯರ್ಥಿಗಳನ್ನು ಘೋಷಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ವೀಕ್ಷಕರನ್ನು ನೇಮಿಸಲಾಗುವುದು. ಪ್ರತಿಕ್ಷೇತ್ರಕ್ಕೂ ಒಬ್ಬ ಮಂತ್ರಿ ಹಾಗೂ ಒಬ್ಬ ಹಿರಿಯ ಮುಖಂಡರನ್ನು ನೇಮಿಸಲಾಗುವುದು: ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂಅಹ್ಮದ 

ಹುಬ್ಬಳ್ಳಿ(ಆ.06):  ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಪ್ರತಿ ಲೋಕಸಭಾ ಕ್ಷೇತ್ರವಾರು ಒಬ್ಬ ಮಂತ್ರಿ ಹಾಗೂ ಹಿರಿಯ ಮುಖಂಡರೊಬ್ಬರನ್ನು ಸೇರಿಕೊಂಡು ವೀಕ್ಷಕರನ್ನಾಗಿ ನೇಮಕ ಮಾಡಲಾಗುವುದು ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷರೂ ಆಗಿರುವ ವಿಪ ಮುಖ್ಯ ಸಚೇತಕ ಸಲೀಂಅಹ್ಮದ ತಿಳಿಸಿದರು. ಜತೆಗೆ ಕರ್ನಾಟಕದಲ್ಲಿ ಕನಿಷ್ಠ 20 ಸ್ಥಾನಗಳಲ್ಲಿ ಗೆಲ್ಲುವ ಟಾರ್ಗೆಟ್‌ ಅನ್ನು ಎಐಸಿಸಿ ನೀಡಿದೆ ಎಂದು ಇದೇ ವೇಳೆ ತಿಳಿಸಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಅವರು ಈ ಕುರಿತು ಮಾತನಾಡಿದರು. ಇತ್ತೀಚಿಗೆ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಈ ಕುರಿತು ಚರ್ಚೆ ನಡೆದಿದೆ. ಲೋಕಸಭೆ ಚುನಾವಣೆಗೆ 5-6 ತಿಂಗಳು ಬಾಕಿಯಿರುವಾಗಲೇ ಅಭ್ಯರ್ಥಿಗಳನ್ನು ಘೋಷಿಸಲು ನಿರ್ಧರಿಸಲಾಗಿದೆ. ಇದಕ್ಕಾಗಿ ಶೀಘ್ರದಲ್ಲೇ ವೀಕ್ಷಕರನ್ನು ನೇಮಿಸಲಾಗುವುದು. ಪ್ರತಿಕ್ಷೇತ್ರಕ್ಕೂ ಒಬ್ಬ ಮಂತ್ರಿ ಹಾಗೂ ಒಬ್ಬ ಹಿರಿಯ ಮುಖಂಡರನ್ನು ನೇಮಿಸಲಾಗುವುದು ಎಂದು ತಿಳಿಸಿದರು.

ಬಿಜೆಪಿ ವಿರುದ್ಧ ಹೋರಾಡಿ: ಯುವ ಕಾಂಗ್ರೆಸ್ಸಿಗೆ ಸಲೀಂ ಕರೆ

ಜತೆಗೆ ಸ್ಥಳೀಯವಾಗಿಯೂ ಸಾಕಷ್ಟುಸಮಿತಿಗಳನ್ನು ರಚಿಸಲಾಗುವುದು. ಪ್ರತಿಕ್ಷೇತ್ರದಲ್ಲೂ ಸಮೀಕ್ಷೆ ನಡೆಸಿ ಯಾರನ್ನು ಅಭ್ಯರ್ಥಿಯನ್ನಾಗಿ ಮಾಡಿದರೆ ಒಳಿತು ಎಂಬುದನ್ನು ನಿರ್ಧರಿಸಲಾಗುವುದು. ಬಳಿಕವಷ್ಟೇ ಅಭ್ಯರ್ಥಿ ಘೋಷಿಸಲಾಗುವುದು. ಜನ ಮೆಚ್ಚುವಂತವರನ್ನೇ ಅಭ್ಯರ್ಥಿಯನ್ನಾಗಿ ಮಾಡುತ್ತೇವೆ ಎಂದರು.

ಇತ್ತೀಚಿಗೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್‌ ಮುಖಂಡರಾದ ರಾಹುಲ್‌ ಗಾಂಧಿ, ಸುರ್ಜೇವಾಲಾ ನೇತೃತ್ವದಲ್ಲಿ ಎರಡು ದಿನಗಳ ಕಾಲ ನಡೆದ ಸಭೆಯಲ್ಲಿ ಲೋಕಸಭಾ ಚುನಾವಣೆಯ ಬಗ್ಗೆಯೇ ಸುದೀರ್ಘ ಚರ್ಚೆ ನಡೆದಿದೆ. ಈ ಬಾರಿ ಚುನಾವಣೆಯಲ್ಲಿ 20ಕ್ಕೂ ಹೆಚ್ಚು ಸ್ಥಾನ ಗೆಲ್ಲಿಸುವ ಟಾರ್ಗೆಟ್‌ ನೀಡಿದ್ದು, ಅದಕ್ಕಿಂತ ಹೆಚ್ಚು ಸ್ಥಾನದಲ್ಲಿ ಕಾಂಗ್ರೆಸ್‌ ಗೆಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೇಂದ್ರ ಸರ್ಕಾರ ಈ ಹಿಂದೆ ತನ್ನ ಪ್ರಣಾಳಿಕೆಯಲ್ಲಿ ಹೇಳಿದ್ದ ವಿಚಾರಗಳನ್ನು ಅನುಷ್ಠಾನಕ್ಕೆ ತರುವಲ್ಲಿ ಸಂಪೂರ್ಣ ವಿಫಲವಾಗಿದೆ. ಸಾಕಷ್ಟುಸುಳ್ಳು ಭರವಸೆಗಳನ್ನು ನೀಡಿ ಈಡೇರಿಸದೇ ವಂಚಿಸಿದೆ. ಹೀಗಾಗಿ, ಇವುಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುವ ಜತೆ ಜತೆಗೆ ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನೆ ಮನೆಗೆ ತಲುಪಿಸಲು ಸಭೆಯಲ್ಲಿ ಚರ್ಚಿಸಲಾಗಿದೆ. ಅಲ್ಲದೇ, ಪಕ್ಷ ಸಂಘಟನೆ ಹಾಗೂ ಚುನಾವಣೆಗೆ ಪೂರಕ ತಯಾರಿ ಬಗ್ಗೆ ಸುದೀರ್ಘ ಚರ್ಚೆಗಳು ನಡೆದಿವೆ ಎಂದರು.

ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ ಎರಡು ತಿಂಗಳು ಕಳೆದಿದೆ. ಈಗಾಗಲೇ ನಾಲ್ಕು ಗ್ಯಾರಂಟಿ ಯೋಜನೆಗಳಿಗೆ ಸರ್ಕಾರ ಚಾಲನೆ ನೀಡಿದ್ದು, ಇನ್ನುಳಿದಿರುವ ಯುವ ನಿಧಿ ಗ್ಯಾರಂಟಿಯನ್ನು ಡಿಸೆಂಬರ್‌ನಲ್ಲಿ ಜಾರಿಗೊಳಿಸುತ್ತೇವೆ. ಗ್ಯಾರಂಟಿ ಯೋಜನೆಯಿಂದ ಕಾಂಗ್ರೆಸ್‌ನ ವರ್ಚಸ್ಸು ಹೆಚ್ಚಾಗಿದೆ ಎಂದು ವಿವರಿಸಿದರು.

ನಿಗಮ ಮಂಡಳಿಗೆ ಅಧ್ಯಕ್ಷರ ನೇಮಕಕ್ಕೆ ಸಂಬಂಧಿಸಿದಂತೆ ಸಿಎಂ ಹಾಗೂ ಡಿಸಿಎಂ ಜಿಲ್ಲಾವಾರು ವರದಿ ತರಿಸಿಕೊಳ್ಳುತ್ತಿದ್ದಾರೆ. ವರದಿ ಬಂದ ನಂತರದಲ್ಲಿ ಚರ್ಚಿಸಿ ಒಂದ ತಿಂಗಳಲ್ಲಿ ಅಧ್ಯಕ್ಷರ ನೇಮಕಗೊಳಿಸುವ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ಉಡುಪಿ ಮತ್ತು ಹುಬ್ಬಳ್ಳಿ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಫೋಟೋಗಳನ್ನು ಅಶ್ಲೀಲಗೊಳಿಸಿ ವೈರಲ್‌ಗೊಳಿಸಿರುವ ಪ್ರಕರಣ ತನಿಖೆ ಮುಂದುವರಿದೆ. ಯಾರೇ ತಪ್ಪು ಮಾಡಿದ್ದರೂ ಅವರ ಮೇಲೆ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುತ್ತೇವೆ. ನಾವು ಜಾತಿ ಧರ್ಮ ಏನನ್ನು ನೋಡುವುದಿಲ್ಲ. ಎಲ್ಲರನ್ನು ಒಂದೇ ಸಮನಾಗಿ ನೋಡುತ್ತೇವೆ ಎಂದು ನುಡಿದರು.

ಹುಬ್ಬಳ್ಳಿಯಲ್ಲಿನ ಕಾಲೇಜ್‌ನ ಪ್ರಕರಣಕ್ಕೆ ಸಂಬಂಧಪಟ್ಟಂತೆ ನಾನೇ ಖುದ್ದಾಗಿ ಕಮಿಷನರರೊಂದಿಗೆ ಚರ್ಚೆ ನಡೆಸಿದ್ದೇನೆ. ಎಫ್‌ಐಆರ್‌ ದಾಖಲಿಸಿ ತನಿಖೆ ನಡೆಸುತ್ತಾರೆ.

ವರ್ಗಾವಣೆ ದಂಧೆಯಲ್ಲಿ ತೊಡಗಿದೆ ಎಂಬ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹಾಗೂ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಟೀಕೆಗೆ ಪ್ರತಿಕ್ರಿಯೆ ನೀಡಿದ ಅವರು, ಅವರದು ಹಿಟ್‌ ಆ್ಯಂಡ್‌ ರನ್‌ ಹೇಳಿಕೆ ಅಷ್ಟೇ. ಒಂದು ವೇಳೆ ಪೂರಕ ದಾಖಲೆ ಇದ್ದರೆ ಬಿಡುಗಡೆ ಮಾಡಲಿ. ಸರ್ಕಾರ ಭ್ರಷ್ಟಾಚಾರ ನಡೆಸುತ್ತಿರುವ ದಾಖಲೆ ಇದ್ದರೆ ಸದನದಲ್ಲೇ ಚರ್ಚಿಸಬಹುದಿತ್ತು. ಅವರ ಹೇಳಿಕೆ ರಾಜಕೀಯ ಗಿಮಿಕ್‌ ಆಗಿದ್ದು, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.

ಗ್ಯಾರಂಟಿ ಯೋಜನೆಗಳಿಗೆ ಬೆಚ್ಚಿ ವಿಪಕ್ಷಗಳ ಪಲಾಯನ: ಸಲೀಂ ಅಹ್ಮದ್ ವ್ಯಂಗ್ಯ

ಸುದ್ದಿಗೋಷ್ಠಿಯಲ್ಲಿ ಶಾಸಕ ಪ್ರಸಾದ ಅಬ್ಬಯ್ಯ, ಮಾಜಿ ಶಾಸಕ ಎಂ.ಎಸ್‌.ಅಕ್ಕಿ, ಜಿಲ್ಲಾಧ್ಯಕ್ಷರಾದ ಅಲ್ತಾಫ್‌ ಹಳ್ಳೂರ, ಅನಿಲಕುಮಾರ್‌ ಪಾಟೀಲ, ಮಾಜಿ ಸಂಸದ ಐ.ಜಿ.ಸನದಿ, ಪ್ರಕಾಶಗೌಡ ಪಾಟೀಲ, ಎಫ್‌.ಎಚ್‌.ಜಕ್ಕಪ್ಪನವರ, ಸದಾನಂದ ಡಂಗನವರ ಸೇರಿದಂತೆ ಇತರರು ಇದ್ದರು.

ರಾಹುಲ್‌ ಗಾಂಧಿ ವಿಚಾರವಾಗಿ ಬಿಜೆಪಿ ಸೇಡಿನ ರಾಜಕಾರಣ ಮಾಡಿತ್ತು. ಆದರೆ ಸುಪ್ರೀಂಕೋರ್ಚ್‌ ತೀರ್ಪು ಬಿಜೆಪಿಗೆ ಕಪಾಳ ಮೋಕ್ಷವಾದಂತಾಗಿದೆ. ಸತ್ಯಕ್ಕೆ ಜಯ ಸಿಕ್ಕಿದೆ. ಇಂತಹ ವಿಚಾರಗಳನ್ನು ಜನತೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಈ ಬಾರಿ ಎನ್‌ಡಿಎ ಸರ್ಕಾರ ಕಳುಹಿಸಿ, ಇಂಡಿಯಾವನ್ನು ಗೆಲ್ಲಿಸುತ್ತಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂಅಹ್ಮದ ತಿಳಿಸಿದ್ದಾರೆ.