ಬಾಗಲಕೋಟೆ: ‘ಕಮಲ’ ಕೋಟೆ ಭೇದಿಸಲು ‘ಕೈ’ ರಣತಂತ್ರ..!
2018ರ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಮತ್ತು ಎರಡರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆ ಪೈಕಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
ಈಶ್ವರ ಶೆಟ್ಟರ್
ಬಾಗಲಕೋಟೆ(ಮೇ.06): ಹಿಂದೊಮ್ಮೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಬಾಗಲಕೋಟೆ ಜಿಲ್ಲೆಯಲ್ಲಿ 2004ರ ನಂತರ ಬಿಜೆಪಿ, ಕಾಂಗ್ರೆಸ್‌ಗೆ ಪರ್ಯಾಯ ಪಕ್ಷವಾಗಿ ಹೊರಹೊಮ್ಮಿದೆ. ಬಾದಾಮಿ ಮತಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ಗೆ ಜೆಡಿಎಸ್ ಪ್ರಬಲ ಪೈಪೋಟಿ ನೀಡುವ ಸಾಧ್ಯತೆ ಇದೆ. ಉಳಿದಂತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಮಾತ್ರ ಪರಸ್ಪರ ಎದುರಾಳಿಗಳು. 2018ರ ಚುನಾವಣೆಯಲ್ಲಿ ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಬಿಜೆಪಿ ಮತ್ತು ಎರಡರಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿತ್ತು. ಆ ಪೈಕಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾದಾಮಿ ಕ್ಷೇತ್ರದಿಂದ ಆಯ್ಕೆಯಾಗುವ ಮೂಲಕ ರಾಜ್ಯದ ಗಮನ ಸೆಳೆದಿದ್ದರು.
ಬಾಗಲಕೋಟೆ:
ಕಾಂಗ್ರೆಸ್, ಕಮಲಕ್ಕೆ ಬಂಡಾಯದ ಭೀತಿ:
ಲಿಂಗಾಯತರ ಪ್ರಾಬಲ್ಯದ ಈ ಕ್ಷೇತ್ರದಲ್ಲಿ ಹಾಲಿ ಶಾಸಕ ವೀರಣ್ಣ ಚರಂತಿಮಠ ಅವರು ಮತ್ತೆ ಬಿಜೆಪಿಯಿಂದ ಸ್ಪರ್ಧೆಗೆ ಇಳಿದಿದ್ದಾರೆ. ಕಾಂಗ್ರೆಸ್‌ನಿಂದ ಎಚ್.ವೈ.ಮೇಟಿ ಸ್ಪರ್ಧೆ ಮಾಡುತ್ತಿದ್ದಾರೆ. ಕಾಂಗ್ರೆಸ್ ಟಿಕೆಟ್ ಸಿಗದಿದ್ದರಿಂದ ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ ದೇವರಾಜ್ ಪಾಟೀಲ್, ಜೆಡಿಎಸ್‌ನಿಂದ ಕಣದಲ್ಲಿದ್ದಾರೆ. ಶಾಸಕರಾದ ವೀರಣ್ಣ ಚರಂತಿಮಠ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿದ್ದು, ಚುನಾವಣಾ ಫಲಿತಾಂಶ ಕುತೂಹಲ ಮೂಡಿಸಿದೆ.
ಯತ್ನಾಳರೇ ಧಮ್ ಇದ್ರೆ ನನ್ನ ಮೇಲೆ ಗುಂಡು ಹಾಕಿ: ಅಸಾದುದ್ದಿನ್ ಒವೈಸಿ ಸವಾಲು
ಕ್ಷೇತ್ರದಲ್ಲಿ ಲಿಂಗಾಯತರು ಹೆಚ್ಚಿನ ಸಂಖ್ಯೆಯಲ್ಲಿದ್ದರೆ, ನಂತರದಲ್ಲಿ ಕುರುಬರು, ಅಲ್ಪಸಂಖ್ಯಾತರು, ಪರಿಶಿಷ್ಟಜಾತಿ, ಪಂಗಡದ ಮತದಾರರಿದ್ದಾರೆ. ಕ್ಷೇತ್ರದ ಕೆಲವು ಭಾಗದಲ್ಲಿ ನೇಕಾರರು ಸಹ ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮತಗಳ ಜೊತೆಗೆ ಲಿಂಗಾಯತ ಮತಗಳ ವಿಭಜನೆಯಾದರೆ ಅದು ಕಾಂಗ್ರೆಸ್‌ಗೆ ವರವಾಗುವ ಸಾಧ್ಯತೆ ಇದೆ. ಕಾಂಗ್ರೆಸ್‌ಗೆ ಜೆಡಿಎಸ್‌ನ ದೇವರಾಜ್ ಪಾಟೀಲ್ ತೊಡಕಾಗಿದ್ದಾರೆ. ಬಿಜೆಪಿ ಶಾಸಕ ವೀರಣ್ಣ ಚರಂತಿಮಠ ಅವರಿಗೆ ಅವರ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಪಕ್ಷೇತರರಾಗಿ ಸ್ಪರ್ಧೆ ಮಾಡುತ್ತಿರುವುದು ತೊಡಕಾಗಿದೆ.
ಬಾದಾಮಿ:
ಸಿದ್ದು ತ್ಯಜಿಸಿದ ಕ್ಷೇತ್ರದಲ್ಲಿ ದಳ ಪೈಪೋಟಿ
ಕಳೆದ ಬಾರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪರ್ಧೆಯಿಂದ ರಾಜ್ಯ ಹಾಗೂ ರಾಷ್ಟ್ರದ ಗಮನ ಸೆಳೆದಿದ್ದ ಬಾದಾಮಿ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಸಿದ್ದರಾಮಯ್ಯ ಸ್ಪರ್ಧಿಸುತ್ತಿಲ್ಲ. ಬಿಜೆಪಿಯಿಂದ ಹೊಸಮುಖವಾಗಿ ಜಿಲ್ಲಾಧ್ಯಕ್ಷ ಶಾಂತಗೌಡ ಪಾಟೀಲ, ಕಾಂಗ್ರೆಸ್‌ನಿಂದ ಮಾಜಿ ಸಚಿವ ಚಿಮ್ಮನಕಟ್ಟಿಪುತ್ರ ಭೀಮಸೇನ ಚಿಮ್ಮನಕಟ್ಟಿ, ಜೆಡಿಎಸ್‌ನಿಂದ ಹನುಮಂತ ಮಾವಿನಮರದ ಕಣದಲ್ಲಿದ್ದಾರೆ.
ಇಲ್ಲಿ ಮಾಜಿ ಶಾಸಕ ಎಂ.ಕೆ.ಪಟ್ಟಣಶೆಟ್ಟಿಮತ್ತು ಮಹಾಂತೇಶ ಮಮದಾಪುರ ಪೈಕಿ ಒಬ್ಬರಿಗೆ ಟಿಕೆಟ್ ಎನ್ನಲಾಗುತ್ತಿತ್ತು. ಆದರೆ, ಶಾಂತಗೌಡ ಪಾಟೀಲ ಅವರು ಕೊನೆಗಳಿಗೆಯಲ್ಲಿ ಅಚ್ಚರಿ ಎಂಬಂತೆ ಬಿಜೆಪಿಯಿಂದ ಟಿಕೆಟ್ ಪಡೆದಿದ್ದಾರೆ. ಮೇಲ್ನೋಟಕ್ಕೆ ಬಿಜೆಪಿಯಲ್ಲಿ ಎಲ್ಲವೂ ಸರಿಯಿದೆ ಎನಿಸಿದರೂ, ಆಂತರಿಕವಾಗಿ ಉಭಯ ನಾಯಕರ ಬೆಂಬಲಿಗರು ತೆಗೆದುಕೊಳ್ಳುವ ನಿರ್ಧಾರ ಬಿಜೆಪಿಗೆ ನಿರ್ಣಾಯಕವಾಗಲಿದೆ.
ಕಳೆದ ಬಾರಿ ಸಿದ್ದರಾಮಯ್ಯ ಸ್ಪರ್ಧೆ ನಡುವೆಯೂ ಜೆಡಿಎಸ್‌ನ ಹನುಮಂತ ಮಾವಿನಮರದ 27,000 ಮತಗಳನ್ನು ಪಡೆದು, ಕ್ಷೇತ್ರದಲ್ಲಿ ಜೆಡಿಎಸ್‌ಗೆ ಗಟ್ಟಿಸ್ಥಾನ ಒದಗಿಸಿದ್ದರು. ಈ ಬಾರಿಯೂ ಅವರೇ ಸ್ಪಧಿರ್ಸುತ್ತಿರುವುದರಿಂದ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ. ಬಿಜೆಪಿಯ ಶಾಂತಗೌಡ ಮತ್ತು ಜೆಡಿಎಸ್‌ನ ಮಾವಿನಮರದ, ಲಿಂಗಾಯತ ಸಮುದಾಯಕ್ಕೆ ಸೇರಿದವರಾಗಿದ್ದರೆ, ಭೀಮಸೇನ ಚಿಮ್ಮನಕಟ್ಟಿಅವರು ಕುರುಬ ಸಮುದಾಯಕ್ಕೆ ಸೇರಿದ್ದಾರೆ.
ಹುನಗುಂದ:
ಸಾಂಪ್ರದಾಯಿಕ ಎದುರಾಳಿಗಳ ಕಾದಾಟ:
ಬಿಜೆಪಿಯಿಂದ ಹಾಲಿ ಶಾಸಕ ದೊಡ್ಡನಗೌಡ ಪಾಟೀಲ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ವಿಜಯಾನಂದ ಕಾಶಪ್ಪನವರ ಕಣದಲ್ಲಿದ್ದಾರೆ. ಕಳೆದ ಬಾರಿ ಜೆಡಿಎಸ್‌ನಿಂದ ಸ್ಪರ್ಧಿಸಿ 25,000 ಮತಗಳನ್ನು ಪಡೆದಿದ್ದ ಎಸ್.ಆರ್.ನವಲಿಹಿರೇಮಠ, ಈ ಬಾರಿ ಜನಾರ್ಧನ ರೆಡ್ಡಿಯವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದಿಂದ ಸ್ಪರ್ಧಿಸಿದ್ದಾರೆ. ಹೀಗಾಗಿ, ಇಲ್ಲಿ ಈ ಬಾರಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಕ್ಷೇತ್ರದಲ್ಲಿ ಲಿಂಗಾಯತ ಮತಗಳು ನಿರ್ಣಾಯಕ. ಮೂವರು ಅಭ್ಯರ್ಥಿಗಳೂ ಲಿಂಗಾಯತರೆ. ಕಾಂಗ್ರೆಸ್ಸಿನ ವಿಜಯಾನಂದ ಕಾಶಪ್ಪನವರ ಪಂಚಮಸಾಲಿ ಲಿಂಗಾಯತರಾಗಿದ್ದು, ಮೀಸಲಾತಿ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದವರು. ಈ ಕ್ಷೇತ್ರದಲ್ಲಿ ಈ ಸಮುದಾಯ ಹೆಚ್ಚಿನ ಸಂಖ್ಯೆಯಲ್ಲಿದೆ. ಜೊತೆಗೆ, ಇನ್ನುಳಿದ ಲಿಂಗಾಯತ ಉಪಪಂಗಡಗಳಾದ ಜಂಗಮ, ಬಣಜಿಗ, ರೆಡ್ಡಿ ಲಿಂಗಾಯತ ಸಮುದಾಯಗಳು ಸಹ ಚುನಾವಣೆಯ ಫಲಿತಾಂಶವನ್ನು ಬದಲಿಸುವ ಸಾಮರ್ಥ್ಯ ಹೊಂದಿವೆ. ಜೊತೆಗೆ, ನೇಕಾರ, ಕುರುಬ, ದಲಿತ, ಅಲ್ಪಸಂಖ್ಯಾತ ಸಮುದಾಯದ ಮತದಾರರೂ ಕೂಡ ಸಾಕಷ್ಟುಸಂಖ್ಯೆಯಲ್ಲಿ ಇದ್ದಾರೆ.
ಮುಧೋಳ:
ಕಾರಜೋಳ ಗೆಲುವಿನ ಓಟಕ್ಕೆ ‘ಕೈ’ ಹಾಕುತ್ತಾ ಬ್ರೇಕ್?:
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಪ್ರತಿನಿಧಿಸುತ್ತಿರುವ ಮುಧೋಳ ಮೀಸಲು ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಸಮಬಲದ ಹೋರಾಟವಿದೆ. ಈವರೆಗೆ 6 ಬಾರಿ ಸ್ಪರ್ಧಿಸಿ, 5 ಬಾರಿ ಗೆಲುವು ಕಂಡಿರುವ ಕಾರಜೋಳರಿಗೆ ಎದುರಾಳಿಯಾಗಿ ಕಾಂಗ್ರೆಸ್‌ನಿಂದ ಆರ್.ಬಿ.ತಿಮ್ಮಾಪುರ ಕಣದಲ್ಲಿದ್ದಾರೆ. ಇವರೂ ಸಹ ಇದೇ ಕ್ಷೇತ್ರದಿಂದ ಎರಡು ಬಾರಿ ಗೆಲುವು ಕಂಡವರು. ಜೊತೆಗೆ ಇಬ್ಬರೂ ಅಭ್ಯರ್ಥಿಗಳು ದಲಿತ ಸಮುದಾಯದ ಮಾದಿಗ ಜನಾಂಗಕ್ಕೆ ಸೇರಿದವರು.
ಕಾಂಗ್ರೆಸ್‌ನಿಂದ ಟಿಕೆಟ್ ಆಕಾಂಕ್ಷಿಯಾಗಿದ್ದ ಸತೀಶ ಬಂಡಿವಡ್ಡರ ಪಕ್ಷೇತರರಾಗಿ ಸ್ಪರ್ಧಿಸಿದ್ದಾರೆ. ಹೀಗಾಗಿ, ಇಲ್ಲಿ ಲಿಂಗಾಯತ ಮತ್ತು ರೆಡ್ಡಿ ಸಮುದಾಯದ ಮತಗಳನ್ನು ಹೆಚ್ಚು ಪಡೆದವರು ಚುನಾವಣೆಯಲ್ಲಿ ಗೆಲ್ಲುವುದು ವಾಡಿಕೆ.
ಜಮಖಂಡಿ:
ಕಾಂಗ್ರೆಸ್‌ಗೆ ಬಂಡಾಯದ ಆತಂಕ:
ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಸೇರಿ ಬಿಜೆಪಿಯಿಂದ ಈ ಕ್ಷೇತ್ರದಲ್ಲಿ ಈ ಬಾರಿ 14 ಜನ ಆಕಾಂಕ್ಷಿಗಳಿದ್ದರು. ಆದರೆ, ಬಿಜೆಪಿ ಇಲ್ಲಿ ಹೊಸಮುಖ, ಸಕ್ಕರೆ ಉದ್ಯಮಿ ಜಗದೀಶ ಗುಡಗುಂಟಿಗೆ ಟಿಕೆಟ್ ನೀಡಿದೆ. ಹೀಗಾಗಿ, ಪ್ರಬಲ ಆಕಾಂಕ್ಷಿಯಾಗಿದ್ದ ಬಸವರಾಜ ಸಿಂಧೂರ ಬಿಜೆಪಿ ತೊರೆದು ಕಾಂಗ್ರೆಸ್‌ನ ಕೈ ಹಿಡಿದರು. ಕಾಂಗ್ರೆಸ್‌ನಿಂದ ಹಾಲಿ ಶಾಸಕ ಆನಂದ ನ್ಯಾಮಗೌಡ ಅವರೇ ಅಭ್ಯರ್ಥಿ. ಜಿ.ಪಂ. ಮಾಜಿ ಸದಸ್ಯ ಸುಶೀಲಕುಮಾರ ಬೆಳಗಲಿಯವರು ಕಾಂಗ್ರೆಸ್‌ನಿಂದ ಅಸಮಾಧಾನಗೊಂಡು ಪಕ್ಷೇತರರಾಗಿ ಸ್ಪರ್ಧಿಸಿದ್ದು, ಅವರಿಗೆ ರೈತರ ಸಂಘ ಸೇರಿದಂತೆ ಹಲವರು ಬೆಂಬಲ ಸೂಚಿಸಿರುವುದು ಕಾಂಗ್ರೆಸ್‌ನ ಆತಂಕಕ್ಕೆ ಕಾರಣವಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಅಭ್ಯರ್ಥಿಗಳು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಪಕ್ಷೇತರರಾಗಿ ಸ್ಪರ್ಧಿಸಿದ್ದ ಸುಶೀಲಕುಮಾರ ಬೆಳಗಲಿ ಜೈನ ಸಮುದಾಯಕ್ಕೆ ಸೇರಿದವರು. 2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯ ನಂತರ ನಡೆದ ಚುನಾವಣೆಗಳಲ್ಲಿ ಒಮ್ಮೆ ಬಿಜೆಪಿ, ಮೂರು ಬಾರಿ (ಉಪಚುನಾವಣೆ ಸೇರಿ) ಕಾಂಗ್ರೆಸ್ ಗೆಲುವು ಕಂಡಿದ್ದು, ಮೇಲ್ನೋಟಕ್ಕೆ ಈ ಬಾರಿ ಎರಡೂ ಪಕ್ಷಗಳಲ್ಲಿ ಸಮಬಲದ ಹೋರಾಟ ಕಾಣುತ್ತಿದೆ.
ತೇರದಾಳ:
ಸವದಿ ಎದುರು ಕಾಂಗ್ರೆಸ್ ಹೊಸಮುಖ ತಂತ್ರ:
2008ರಲ್ಲಿ ಹೊಸ ಕ್ಷೇತ್ರವಾಗಿ ಅಸ್ತಿತ್ವಕ್ಕೆ ಬಂದ ತೇರದಾಳ ಕ್ಷೇತ್ರದಲ್ಲಿ ನಡೆದ ಮೂರು ಚುನಾವಣೆಗಳಲ್ಲಿ ಒಮ್ಮೆ ಕಾಂಗ್ರೆಸ್, ಎರಡು ಬಾರಿ ಬಿಜೆಪಿ ಗೆಲುವು ಕಂಡಿವೆ. ಬಿಜೆಪಿಯಿಂದ ಹಾಲಿ ಶಾಸಕ ಸಿದ್ದು ಸವದಿ ಅವರು ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್‌ನಿಂದ ಹೊಸಮುಖ, ಸಿದ್ದು ಕೊಣ್ಣೂರಗೆ ಅವಕಾಶ ಸಿಕ್ಕಿದೆ. ಮೂರು ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಒಮ್ಮೆ ಗೆಲುವು ಕಂಡು ಸರ್ಕಾರದಲ್ಲಿ ಸಚಿವರಾಗಿದ್ದ ನಟಿ ಉಮಾಶ್ರೀಗೆ ಈ ಬಾರಿ ಕಾಂಗ್ರೆಸ್‌ನಿಂದ ಟಿಕೆಟ್ ಕೈತಪ್ಪಿದೆ. ಈ ಮಧ್ಯೆ, ಕಾಂಗ್ರೆಸ್ ಟಿಕೆಟ್ ವಂಚಿತ ಡಾ.ಪದ್ಮಜೀತ ನಾಡಗೌಡ, ಕಣದಲ್ಲಿದ್ದು, ಕಾಂಗ್ರೆಸ್‌ಗೆ ಬಿಸಿ ತುಪ್ಪವಾಗಿದೆ.
ಮುಧೋಳ ಕ್ಷೇತ್ರದಲ್ಲಿ ಕಾರಜೋಳ ಭರ್ಜರಿ ಪ್ರಚಾರ: ವಿಜಯೇಂದ್ರ ಸಾಥ್
ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ಇಬ್ಬರೂ ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಸೇರಿದವರು. ಕ್ಷೇತ್ರದಲ್ಲಿ 30 ಸಾವಿರಕ್ಕೂ ಹೆಚ್ಚಿರುವ ನೇಕಾರ ಸಮುದಾಯದವರು ಪ್ರತಿ ಚುನಾವಣೆಯಲ್ಲಿಯೂ ನಿರ್ಣಾಯಕರಾಗುತ್ತಿದ್ದಾರೆ.
ಬೀಳಗಿ:
ಮತ್ತೆ ನಿರಾಣಿ, ಪಾಟೀಲ ಕಾದಾಟ:
ಬಿಜೆಪಿಯಿಂದ ಸಚಿವ ಮುರುಗೇಶ ನಿರಾಣಿ ಸ್ಪರ್ಧಿಸುತ್ತಿದ್ದರೆ, ಕಾಂಗ್ರೆಸ್‌ನಿಂದ ಮಾಜಿ ಶಾಸಕ ಜೆ.ಟಿ.ಪಾಟೀಲ ಸ್ಪರ್ಧೆ ಮಾಡುತ್ತಿದ್ದಾರೆ. ಮುರುಗೇಶ ನಿರಾಣಿಯವರು ಲಿಂಗಾಯತ ಸಮುದಾಯಕ್ಕೆ ಸೇರಿದವರು. ಜೆ.ಟಿ.ಪಾಟೀಲರು ಪ್ರಬಲ ರೆಡ್ಡಿ ಸಮುದಾಯಕ್ಕೆ ಸೇರಿದವರು. ಇಲ್ಲಿ ಗಾಣಿಗ ಲಿಂಗಾಯತ, ಕುರುಬ ಸಮುದಾಯದ ಮತಗಳ ಮೇಲೆ ಚುನಾವಣೆಯ ಫಲಿತಾಂಶ ನಿರ್ಧಾರವಾಗುತ್ತದೆ. ಜೆಡಿಎಸ್‌ನಿಂದ ರುಕ್ಮುದ್ದೀನ್ ಸೌದಾಗರ್ ಕಣದಲ್ಲಿದ್ದಾರೆ. ನಿರಾಣಿ ಮತ್ತು ಪಾಟೀಲರ ನಡುವೆ ನೇರ ಹಣಾಹಣಿ.