ಬೆಂಗಳೂರು(ಅ.12): ಕನ್ನಡ ಸೇರಿ ಬಹುಭಾಷಾ ತಾರೆ ಹಾಗೂ ಕಾಂಗ್ರೆಸ್‌ ವಕ್ತಾರೆ ಖುಷ್ಬೂ ಪಕ್ಷದ ನಾಯಕಿ ಸೋನಿಯಾ ಗಾಂಧಿಗೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಜೆಪಿ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಗೊಂಡಿದ್ದಾರೆ. ಈ ಮೂಲಕ ಎಲ್ಲಾ ಅನುಮಾನಗಳಿಗೆ ತೆರೆ ಎಳೆದಿದ್ದಾರೆ.

ಹೌದು ಕಾಂಗ್ರೆಸ್‌ಗೆ ಸೇರ್ಪಡೆಯಾಗುವುದಕ್ಕೂ ಮೊದಲು ಸೋನಿಯಾ ಗಾಂಧಿಗೆ ರಾಜೀನಾಮೆ ಪತ್ರ ಬರೆದಿರುವ ಖುಷ್ಬೂ ತಮಗೆ ರಾಷ್ಟ್ರೀಯ ವಕ್ತಾರೆಯಾಗಿ ಸೇವೆ ಸಲ್ಲಿಸಲು ಅವಕಾಶ ನಿಡಿದ್ದಕ್ಕೆ ಧನ್ಯವಾದಗಳು ಎಂದಿದ್ದಾರೆ. ರಾಜೀನಾಮೆ ಕೊಟ್ಟ ಬೆನ್ನಲ್ಲೇ ಖುಷ್ಬೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಹಾಗೂ ಹಿರಿಯ ನಾಯಕರ ಸಮ್ಮುಖದಲ್ಲಿ ಸೇರ್ಪಡೆಗೊಂಡಿದ್ದಾರೆ.

ಟ್ವೀಟ್ ಮೂಲಕ ಸುಳಿವು ಕೊಟ್ಟಿದ್ದ ಖುಷ್ಬೂ

ತಮ್ಮ ಟ್ವೀಟರ್‌ ಖಾತೆಯಲ್ಲಿ ಹಿಂದೂ ಸಂಪ್ರದಾಯದಂತೆ ಹಣೆಗೆ ತಿಲಕವಿಟ್ಟಿದ್ದನ್ನು ಎದ್ದುಕಾಣುವಂತಿರುವ ಹೊಸ ಫೋಟೋವೊಂದನ್ನು ಟ್ವೀಟ್‌ ಮಾಡಿದ್ದು, ಹಲವರು ನನ್ನಲ್ಲಿ ಬದಲಾವಣೆಗಳನ್ನು ಗುರುತಿಸುತ್ತಿದ್ದಾರೆ. ನಾವೆಲ್ಲರೂ ಕಲಿಯುತ್ತಾ ಬೆಳೆಯುತ್ತೇವೆ. ಇಷ್ಟ-ಅನಿಷ್ಟ, ಯೋಚನೆ ಮತ್ತು ಸಿದ್ಧಾಂತಗಳು ಹೊಸ ಕನಸಿನೊಂದಿಗೆ ಹೊಸ ರೂಪ ಪಡೆಯುತ್ತಿವೆ. ನೀವು ಇಷ್ಟಮತ್ತು ಪ್ರೀತಿಯ ಜೊತೆಗಿನ ವ್ಯತ್ಯಾಸ ಹಾಗೂ ತಪ್ಪು ಮತ್ತು ಸರಿಗಳ ಮಧ್ಯೆಯ ವ್ಯತ್ಯಾಸವನ್ನು ಅರ್ಥ ಮಾಡಿಕೊಳ್ಳಿ. ಜೀವನದಲ್ಲಿ ಬದಲಾವಣೆ ಅನಿವಾರ್ಯ ಎಂದು ಬರೆದುಕೊಂಡಿದ್ದಾರೆ.

ಅಲ್ಲದೆ, ಕಾಂಗ್ರೆಸ್‌ ವಿರೋಧ ನಿಲುವು ಅನುಸರಿಸಿದ್ದ ಕೇಂದ್ರದ ನೂತನ ಶಿಕ್ಷಣ ನೀತಿಯನ್ನು ಖುಷ್ಬು ಸುಂದರ್‌ ಬಹಿರಂಗವಾಗಿಯೇ ಸಮರ್ಥಿಸಿದ್ದರು. ಆದರೆ, ನೂತನ ಶಿಕ್ಷಣ ಕುರಿತಾಗಿ ಪ್ರಧಾನಿ ಮೋದಿಯನ್ನು ಪ್ರಶಂಸಿಸಿ, ಎನ್‌ಇಪಿ ಕುರಿತಾಗಿ ಪಕ್ಷದ ವಿರೋಧಿ ನಿಲುವು ಅನುಸರಿಸಿದ್ದಕ್ಕಾಗಿ ರಾಹುಲ್‌ ಗಾಂಧಿ ಅವರಲ್ಲಿ ಕ್ಷಮೆ ಕೋರಿದ್ದರು.