ಬೆಂಗಳೂರು, [ಡಿ.10]: 15 ಕ್ಷೇತ್ರಗಳ ಉಪಚುನಾವಣೆಯಲ್ಲಿ  ಕಾಂಗ್ರೆಸ್ ಕೇವಲ 2ರಲ್ಲಿ ಗೆದ್ದು ಮುಖಭಂಗ ಅನುಭವಿಸಿದೆ. ಈ ಸೋಲಿನ ಹೊಣೆಹೊತ್ತು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡೂರಾವ್ ಅವರು ರಾಜೀನಾಮೆ ನೀಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಸಾರಥ್ಯ ಯಾರಿಗೆ ಒಲಿಯಲಿದೆ ಎಂಬ ಕುತೂಹಲ ಕೈ ಕಾರ್ಯಕರ್ತರಲ್ಲಿ ಜೋರಾಗಿದೆ. ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕಾಗಿ ಡಿ.ಕೆ ಶಿವಕುಮಾರ್, ಎಂ.ಬಿ ಪಾಟೀಲ್ ಹಾಗೂ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಅವರ ಹೆಸರು ಪ್ರಬಲವಾಗಿ ಕೇಳಿ ಬರುತ್ತಿವೆ.

ಕೆಪಿಸಿಸಿ ಅಧ್ಯಕ್ಷ ಗಾದಿಗೆ ಟ್ರಬಲ್ ಶೂಟರ್?  ವಿಪಕ್ಷ ಸ್ಥಾನಕ್ಕೆ ಅಚ್ಚರಿ ಆಯ್ಕೆ!

 ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸ್ಥಾನದ ಮೇಲೆ ಜಿ. ಪರಮರೇಶ್ವರ್ ಕಣ್ಣಿಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಆದ್ರೆ, ಇವರ ಮಧ್ಯೆ ಕಾಂಗ್ರೆಸ್ ಹಿರಿಯ ನಾಯಕ ಕೆ.ಎಚ್.ಮುನಿಯಪ್ಪ, ಕೆಪಿಸಿಸಿ ಕುರ್ಚಿ ಮೇಲೆ ಟವೆಲ್ ಹಾಕಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಜವಾಬ್ದಾರಿ ಹೊರಲು ಸಿದ್ಧ ಎಂದ ಮುನಿಯಪ್ಪ
ಕಾಂಗ್ರೆಸ್ ಅಭ್ಯರ್ಥಿಗಳ ಸೋಲಿನ ಕುರಿತು ಪಕ್ಷದ ವೇದಿಕೆಯಲ್ಲಿ ಆತ್ಮಾವಲೋಕನ ಆಗಬೇಕಾಗಿದೆ, ಸೋಲಿನಿಂದ ಧೃತಿಗೆಡದೆ ಪಕ್ಷವನ್ನು ಬುಡಮಟ್ಟದಿಂದ ಸಂಘಟಿಸಲು ಪರಿಶ್ರಮ ಹಾಕಬೇಕಾಗಿದೆ ಎಂದರು.

ಪಕ್ಷದ ಸೋಲಿನ ನೈತಿಕ ಜವಾಬ್ದಾರಿ ಹೊತ್ತು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ದಾರೆ. ಇವರ ರಾಜೀನಾಮೆಯನ್ನು ಅಂಗೀಕರಿಸುವುದು, ಬಿಡುವುದು ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಅವರ ನಿರ್ಧಾರಕ್ಕೆ ಬಿಟ್ಟ ವಿಚಾರ ಎಂದು ಹೇಳಿದರು. 

ಒಂದು ವೇಳೆ ಹೈಕಮಾಂಡ್ ಕರ್ನಾಟಕದಲ್ಲಿ ಪಕ್ಷ ಸಂಘಟನೆ ವಿಚಾರವಾಗಿ ತಮ್ಮ ಅಭಿಪ್ರಾಯ ಮತ್ತು ಸಲಹೆ ಕೇಳಿದಲ್ಲಿ ಪಕ್ಷದ ವರ್ಚಸ್ಸು ಉಳಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ತಿಳಿಸುತ್ತೇನೆ. ಹಾಗೆಯೇ ಸಂಘಟನೆಯ ಜವಾಬ್ದಾರಿ ವಹಿಸಿದಲ್ಲಿ ಸಮರ್ಥವಾಗಿ ನಿಭಾಯಿಸಲು ಸಿದ್ಧ ಎನ್ನುವ ಮೂಲಕ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಾವೂ ಸಹ ಆಕಾಂಕ್ಷಿ ಎಂಬುವುದನ್ನು ತೇಲಿಬಿಟ್ಟರು.